- ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
- ಜೂ. 6ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಯುವತಿಯ ಮೇಲೆ ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತ ಸೇರಿಕೊಂಡು ಅತ್ಯಾಚಾರ ಮಾಡಿರುವ ದುರ್ಘಟನೆ ನಡೆದಿದೆ.
ಈ ಘಟನೆ ಜೂನ್ 6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪುರುಷೋತ್ತಮ್ ಹಾಗೂ ಚೇತನ್ ಬಂಧಿತರು. ಪುರುಷೋತ್ತಮ್ ಹಾಗೂ ಯುವತಿ, ಇಬ್ಬರು ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆಯವರು. ಕಳೆದ ಒಂದು ವರ್ಷದಿಂದ ಇವರು ಪ್ರೀತಿಸುತ್ತಿದ್ದರು. ಕಳೆದ ಒಂದು ವಾರದ ಹಿಂದೆ ಯುವತಿಯನ್ನ ಭೇಟಿ ಮಾಡಿದ್ದ ಆರೋಪಿ ಪ್ರಿಯಕರ ಪುರುಷೋತ್ತಮ್ ಯುವತಿಯ ಮೊಬೈಲ್ ಕಿತ್ತುಕೊಂಡು ಬೆಂಗಳೂರಿಗೆ ಬಂದಿದ್ದನು.
ಯುವತಿ ಪ್ರಿಯಕರನಿಗೆ ಕರೆ ಮಾಡಿ ಮೊಬೈಲ್ ವಾಪಸ್ ನೀಡುವಂತೆ ಕೇಳಿದ್ದಳು. ಬೆಂಗಳೂರಿನ ಮೆಜೆಸ್ಟಿಕ್ ಬಳಿ ಬಂದರೆ ಮೊಬೈಲ್ ವಾಪಸ್ ಕೊಡುವುದಾಗಿ ಪ್ರಿಯಕರ ಹೇಳಿದ್ದನು. ಈ ಹಿನ್ನೆಲೆ, ಜೂನ್ 6ರಂದು ಯುವತಿಯೂ ಬೆಂಗಳೂರಿಗೆ ಬಂದಿದ್ದಾಳೆ. ಈ ವೇಳೆ ಪುರುಷೋತ್ತಮ್ ಮೊಬೈಲ್ ನೀಡದೆ ರೂಮ್‌ನಲ್ಲಿದೆ ಎಂದು ಹೇಳಿ ಯುವತಿಯನ್ನು ಗಿರಿನಗರದ ಈರಣ್ಣಗುಡ್ಡೆಯ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಹೋಗಿದ್ದಾನೆ.
ಬಳಿಕ ಯುವತಿ ನನ್ನ ಮೊಬೈಲ್ ಕೊಡು ಊರಿಗೆ ಹೋಗಬೇಕೆಂದು ಹೇಳಿದ್ದಾಳೆ. ಆದರೆ, ಪುರುಷೋತ್ತಮ್ ಮೊಬೈಲ್ ನೀಡದೆ ಸತಾಯಿಸಿ ಬಲವಂತವಾಗಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಳೆಗಾಲದಲ್ಲಿ ಬೀಳುವ ರಸ್ತೆಗುಂಡಿ ಮುಚ್ಚಲು ಕೋಲ್ಡ್ ಮಿಕ್ಸ್‌ನೊಂದಿಗೆ ಸಜ್ಜಾದ ಬಿಬಿಎಂಪಿ
ನಂತರ ರೂಮ್‌ಗೆ ಬಂದಿದ್ದ ಸ್ನೇಹಿತ್ ಚೇತನ್ ಸಹ ಯುವತಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಯುವತಿಯ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಜಮಾವಣೆಗೊಂಡು ಗಿರಿನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಸದ್ಯ ಯುವತಿಯನ್ನ ರಕ್ಷಣೆ ಮಾಡಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ನಂತರ ಪೋಷಕರ ಬಳಿ ಬಿಟ್ಟಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಪೊಲೀಸರು ತನಿಖೆ ನಡೆಸಿದ್ದಾರೆ.