ಕೆಪಿಎಸ್‌ಸಿ ಸ್ವಚ್ಛಗೊಳಿಸಿ, ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಿ 56,432 ಉದ್ಯೋಗಗಳಿಗೆ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ಎಐಡಿವೈಒ ವತಿಯಿಂದ ಇಂದು(ಜೂನ್ 23) ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಇದರ ಭಾಗವಾಗಿ ಬೆಂಗಳೂರು ಜಿಲ್ಲಾ ಸಮಿತಿ ಬೆಂಗಳೂರು ಡಿಸಿ ಕಚೇರಿ ಮೂಲಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿತು.
AIDYO ಜಿಲ್ಲಾ ಕಾರ್ಯದರ್ಶಿ ಜಯಣ್ಣ ಮಾತನಾಡಿ, “ಉದ್ಯೋಗದ ಆಕಾಂಕ್ಷಿಗಳಾಗಿರುವ ಯುವಜನರ ಸತತ ಹೋರಾಟಗಳ ಫಲವಾಗಿ ಕಳೆದ ಡಿಸೆಂಬರ್ ಚಳಿಗಾಲದ ಅಧಿವೇಶನದಲ್ಲಿ 56,432 ಹುದ್ದೆಗಳಿಗೆ ಅನುಮೋದನೆ ನೀಡಿದ್ದು, ಆರು ತಿಂಗಳುಗಳಾದರೂ ಕೇವಲ ಕೆಲವೇ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ನೆಪಗಳನ್ನು ನೀಡುತ್ತ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿದೆ. ಹೀಗೆ ಕುಂಟುನೆಪಗಳನ್ನು ಹೇಳದೆ, ರಾಜ್ಯ ಸರ್ಕಾರ ಸದನದಲ್ಲಿ ಹೇಳಿದಂತೆ ಈ ಕೂಡಲೇ 56,432 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಬೇಕು” ಎಂದು ಒತ್ತಾಯಿಸಿದರು.
ಜತೆಗೆ ವಿವಿಧ ಇಲಾಖೆಗಳ ಸಚಿವರು ಅತೀ ಶೀಘ್ರದಲ್ಲಿ ನೇಮಕಾತಿ ಮಾಡುತ್ತೇವೆಂದು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವುದು ಉದ್ಯೋಗಾಕಾಂಕ್ಷಿಗಳಲ್ಲಿ ಭ್ರಮನಿರಸನ ಉಂಟುಮಾಡಿದೆ. ಎಷ್ಟೋ ಉದ್ಯೋಗಾಕಾಂಕ್ಷಿಗಳು ವಯೋಮಿತಿಯನ್ನು ಮೀರುತ್ತಿದ್ದು, ಇದೇ ರೀತಿ ಮುಂದುವರೆದರೆ ಹೋರಾಟಗಳ ಪ್ರತಿಫಲವಾಗಿ ರಾಜ್ಯ ಸರ್ಕಾರವು ನೇಮಕಾತಿಗಳಿಗೆ ನೀಡಿರುವ ಐದು ವರ್ಷಗಳ ವಯೋಮಿತಿ ಸಡಿಲಿಕೆಯು ಉಪಯೋಗಕ್ಕೆ ಬಾರದಂತಾಗುತ್ತದೆ. ಇದರಿಂದ ಉದ್ಯೋಗಾಕಾಂಕ್ಷಿಗಳು ಸರ್ಕಾರದ ಘೋಷಣೆಗಳನ್ನು ನಂಬದೆ, ವಿಶ್ವಾಸ ಕಳೆದುಕೊಂಡು ಮತ್ತೆ ಹೋರಾಟಕ್ಕಿಳಿಯಲಿದ್ದಾರೆ. ಹಾಗೆ ಆಗಬಾರದೆಂದರೆ ರಾಜ್ಯ ಸರ್ಕಾರ ತಾನು ನುಡಿದಂತೆ 56,432 ಹುದ್ದೆಗಳಿಗೆ ಈ ಕೂಡಲೇ ಅಧಿಸೂಚನೆ ಹೊರಡಿಸಬೇಕು” ಎಂದು AIDYO ಕಾರ್ಯಕರ್ತರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಳಪೆ ಕಾಮಗಾರಿ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಠಿಣ ಕ್ರಮ; ಅಧಿಕಾರಿ ಅಮಾನತು
“ರಾಜ್ಯ ಸರ್ಕಾರ ತೀರ್ಮಾನಿಸಿದಂತೆ 56,432 ಹುದ್ದೆಗಳಿಗೆ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಿ, ಎಲ್ಲ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಕ್ಯಾಲೆಂಡರ್ ಬಿಡುಗಡೆಗೊಳಿಸಬೇಕು. ಎಲ್ಲ ರೀತಿಯ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಿ ಪಾರದರ್ಶಕ ನೇಮಕಾತಿಗಾಗಿ ಕೆಪಿಎಸ್‌ಸಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಕೂಡಲೇ ಪಿ ಸಿ ಹೋಟಾ ಸಮಿತಿಯ ವರದಿಯನ್ನು ಜಾರಿಗೊಳಿಸಬೇಕು. ಪೊಲೀಸ್ ನೇಮಕಾತಿ ಸೇರಿದಂತೆ ಎಲ್ಲ ನೇಮಕಾತಿಗಳ ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು ಹಾಗೂ ನೇಮಕಾತಿ ಪರೀಕ್ಷೆ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ಒದಗಿಸಬೇಕು. ಈಗ ನಡೆಯುತ್ತಿರುವ ಪೊಲೀಸ್ ನೇಮಕಾತಿ ಅರ್ಜಿ ಸಲ್ಲಿಕೆಯ ಸರ್ವರ್ ಸಮಸ್ಯೆ ಮತ್ತು ಇತರ ತಾಂತ್ರಿಕ ಸಮಸ್ಯೆ ಬಗೆಹರಿಸಿ ಹಾಗೂ ಅರ್ಜಿ ಸಲ್ಲಿಕೆಯ ಗಡುವನ್ನು ವಿಸ್ತರಿಸಬೇಕು” ಎಂದು ಒತ್ತಾಯಿಸಿದರು.
ಈ ನಿಯೋಗದಲ್ಲಿ ಬೆಂಗಳೂರು ಜಿಲ್ಲಾಧ್ಯಕ್ಷ ವಿನಯ್ ಸಾರಥಿ, ಕಾರ್ಯದರ್ಶಿ ಜಯಣ್ಣ, ಭಾಗ್ಯರಾಜು, ಎಲ್ಧೋ, ಸೋಮಶೇಖರ್, ಪ್ರಜ್ವಲ್ ಇದ್ದರು.




