ಬೆಂಗಳೂರು ನಗರ ಜಿಲ್ಲೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ದರ್ಪ ತಾರಕಕ್ಕೇರಿದೆ. ಕೆಂಗೇರಿ ಬಳಿಯ ಗಂಗಸಂದ್ರ ಗ್ರಾಮದಲ್ಲಿನ ದಲಿತರ ಭೂಮಿಯನ್ನು ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ದಲಿತ ನಿವಾಸಿಗಳ ಮೇಲೆ ದಾಂಧಲೆ-ದೌರ್ಜನ್ಯ ನಡೆಸಿದ್ದಾರೆ.
ಗಂಗಸಂದ್ರ ಗ್ರಾಮದ ಬಿ.ಎಂ ಕಾವಲ್ ಸರ್ವೇ ನಂ.24ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಾದಿಗ ಸಮುದಾಯದ ಹಲವು ಕುಟುಂಬಗಳ ಭೂಮಿ ಇದೆ. ಸುಮಾರು 60-70 ವರ್ಷಗಳ ಹಿಂದೆಯೇ ಸರ್ಕಾರ ಈ ಭೂಮಿಯನ್ನು ದಲಿತ ಕುಟುಂಬಗಳ ಹೆಸರಿಗೆ ನೋಂದಣಿ ಮಾಡಿಕೊಟ್ಟಿದೆ. ಗ್ರಾಮದ ದಲಿತ ಕುಟುಂಬಗಳು ಮೂರು ತಲೆ ಮಾರುಗಳಿಂದ ಆ ಭೂಮಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಆದರೆ, ಈಗ ಏಕಾಏಕಿ ಆ ಭೂಮಿಗೆ ಕಗ್ಗಲೀಪುರ ವಲಯ ಅರಣ್ಯಾಧಿಕಾರಿ ಮತ್ತು ಅವರ ಮೇಲಧಿಕಾರಿ ಎಸಿಎಫ್ ಹಾಗೂ ಪೊಲೀಸರು ದಾಳಿ ಮಾಡಿದ್ದಾರೆ. ಭೂಮಿ ಅರಣ್ಯ ಇಲಾಖೆಗೆ ಸೇರಿದ್ದೆಂದು ವಾದಿಸಿದ್ದಾರೆ.
ಮಾತ್ರವಲ್ಲದೆ, ಸುಮಾರು 50 ಮಂದಿ ಗೂಂಡಾಗಳಿಗೆ ಅರಣ್ಯ ಗಾರ್ಡ್‌ಗಳ ವೇಷ ತೊಡಿಸಿ, ಅರಣ್ಯ ಸಿಬ್ಬಂದಿಗಳೆಂದು ಬಿಂಬಿಸಿ, ದಲಿತ ನಿವಾಸಿಗಳ ಮೇಲೆ ದರ್ಪ ಮೆರೆದಿದ್ದಾರೆ ಎಂದು ಭೂಒಡೆತನ ಹೊಂದಿರುವ ದಲಿತರು ಆರೋಪಿಸಿದ್ದಾರೆ.
ದಲಿತ ಕುಟುಂಬಗಳ ಬಳಿ ಭೂಮಿಗೆ ಸಂಬಂಧಿಸಿದ ಆರ್‌ಟಿಸಿ, ಎಂಆರ್ ಕಾಪಿಗಳಿವೆ. ಆದರೆ, ದುರಸ್ತಿಯಾಗಿಲ್ಲ ಎಂಬ ಏಕೈಕ ನೆಪ ಇಟ್ಟುಕೊಂಡು ಈ ಭೂಮಿ ಮೀಸಲು ಅರಣ್ಯದ ಬಫರ್ ವಲಯವೆಂದು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ದಾಖಲಾತಿಗಳನ್ನು ಅಧಿಕಾರಿಗಳಿಗೆ ತೋರಿಸಿದರೆ, ಇವು ಸ್ವಾತಂತ್ರ್ಯ ನಂತರ ಕೊಟ್ಟಿರುವ ದಾಖಲೆಗಳು. ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಕಾಲದಲ್ಲೇ ಇದು ಅರಣ್ಯ ಭೂಮಿ ಅಂತ ಆಗಿದೆ. ಇದು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಮೊಂಡುತನದ ವಾದ ಮಾಡುತ್ತಿರುವ ಅಧಿಕಾರಿಗಳು, ದಲಿತ ಕುಟುಂಬಗಳ ಮೇಲೆ ಗೂಂಡಾವರ್ತನೆ ತೋರಿದ್ದಾರೆ.
ಅಲ್ಲಿನ ನಿವಾಸಿಗಳು ತಮ್ಮ ಭೂಮಿಯ ರಕ್ಷಣೆಗಾಗಿ ಹಾಕಿದ್ದ ಡಾ. ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವಿದ್ದ ಬೋರ್ಡ್ಅನ್ನೂ ಅಧಿಕಾರಿಗಳು ಕಿತ್ತು ಎಸೆದಿದ್ದಾರೆ. ದಲಿತ ಭೂಮಿಗೆ ಕಾಂಪೌಂಡ್ ನಿರ್ಮಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
“ಭೂಮಿ ನಮ್ಮದು ಎಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಸರ್ಕಾರವೇ ನಮ್ಮ ಪೂರ್ವಜರ ಹೆಸರಿಗೆ ಭೂಮಿಯನ್ನು ವರ್ಗಾಯಿಸಿ, ಕಂದಾಯ ಇಲಾಖೆಯಡಿ ದಾಖಲೆಗಳನ್ನು ಕೊಟ್ಟಿದೆ. ನಮ್ಮ ಜೀವನಕ್ಕೆ ಈ ಭೂಮಿಯೇ ಆಧಾರವಾಗಿದೆ. ಹಲವು ವರ್ಷಗಳಿಂದ ಈ ಭೂಮಿಯನ್ನು ಉಳಿಸಿಕೊಂಡು ಬಂದಿದ್ದೇವೆ. ಆದರೆ, ಅರಣ್ಯ ಅಧಿಕಾರಿಗಳು ನಮ್ಮ ಭೂಮಿಯನ್ನು ಕಸಿಕೊಳ್ಳುತ್ತಿದ್ದಾರೆ” ಎಂದು ದಲಿತ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿವೆ.
ಅಧಿಕಾರಿಗಳ ದೌರ್ಜನ್ಯ ಮಾಹಿತಿ ತಿಳಿದ ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ ಅವರು ಸ್ಥಳಕ್ಕೆ ಧಾವಿಸಿದ್ದು, ಅಧಿಕಾರಿಗಳ ಕಿರುಕುಳವನ್ನು ಖಂಡಿಸಿದ್ದಾರೆ. ನಿವಾಸಿಗಳೊಂದಿಗೆ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
“ಸೋಮವಾರವಷ್ಟೇ ಇದೇ ಭೂಮಿ ವಿಚಾರವಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರನ್ನು ಭೇಟಿ ಮಾಡಿದ್ದೆವು. ಕಂದಾಯ ದಾಖಲಾತಿ ಸ್ಪಷ್ಟವಾಗಿದ್ದರೂ, ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಮಂಜೂರಾಗಿರುವ ಭೂಮಿಯನ್ನ ಅರಣ್ಯ ಇಲಾಖೆಯವರು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಕುಟುಂಬಗಳಿಗೆ ತೊಂದರೆ, ಕಿರುಕುಳ ನೀಡುತ್ತಿದ್ದಾರೆ ಎಂಬ ವಿಚಾರವನ್ನು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ” ಎಂದು ಯಶವಂತ್ ತಿಳಿಸಿದ್ದಾರೆ.
“ನಮ್ಮ ಮನವಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ‘ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನಡುವೆ ದಾಖಲಾತಿ ಮತ್ತು ಗಡಿ ವಿಚಾರದಲ್ಲಿ ಗೊಂದಲವಿದ್ದರೆ, ಅವುಗಳನ್ನ ನಿವಾರಿಸಲು ಎಸ್‌ಐಟಿ ರಚನೆ ಮಾಡಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ಆ ಎಸ್‌ಐಟಿಗೆ ಅಧ್ಯಕ್ಷ ನಾನೇ ಆಗಿದ್ದೇನೆ. ಬೆಂಗಳೂರು ಎಸ್‌ಐಟಿ ಅಥವಾ ರಾಜ್ಯ ಎಸ್‌ಐಟಿಯಲ್ಲಿ ಗಂಗಸಂದ್ರದ ಭೂಮಿ ವಿಚಾರ ಚರ್ಚೆಗೆ ಬಂದಿಲ್ಲ. ನಿಮ್ಮ ಕಂದಾಯ ದಾಖಲಾತಿಗಳು ಸ್ಪಷ್ಟವಾಗಿರುವ ಕಡೆಗೆ ಅರಣ್ಯ ಅಧಿಕಾರಿಗಳು ಹೋರಬಾರದೆಂದು ಡಿಸಿಎಫ್ ರವೀಂದ್ರ ಮೂಲಕ ಸ್ಪಷ್ಟ ಸೂಚನೆ ಕೊಡುತ್ತೇನೆ’ ಎಂಬುದಾಗಿ ಭರವಸೆ ನೀಡಿದ್ದರು. ಆದರೂ, ಇಂದು ಅರಣ್ಯ ಅಧಿಕಾರಿಗಳು ಏಕಾಏಕಿ ದಲಿತರ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ” ಎಂದು ಯಶವಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅರಣ್ಯ ಅಧಿಕಾರಿಗಳು ಕಾನೂನುಬಾಹಿರವಾಗಿ ದಲಿತರ ಭೂಮಿಯನ್ನು ಕಬ್ಜ ಮಾಡಲು ಬಂದಿದ್ದಾರೆ. 60/70 ವರ್ಷಗಳಿಂದ ಈ ಭೂಮಿಯನ್ನ ಉಳಿಸಿಕೊಂಡಿರುವ ಬಡವರನ್ನೇ ಅಪರಾಧಿಗಳನ್ನಾಗಿ ಮಾಡಲು ಮುಂದಾಗಿದ್ದಾರೆ. ವಿಧಾನಸಭೆಯಲ್ಲಿ ಭೂವಿವಾದದ ವಿಚಾರಗಳು ಚರ್ಚೆಗೆ ಬಂದಾಗ, ಅರಣ್ಯ ಇಲಾಖೆಯ ಸಚಿವರು, ‘ಯಾವುದೇ ಭೂಮಿಯಾಗಿದ್ದರೂ, 2-3 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸಬಾರದು’ ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಆದರೂ, ಇಲ್ಲಿ ಎಲ್ಲ ದಾಖಲೆಗಳು ಸ್ಪಷ್ಟವಾಗಿದ್ದರೂ, ಅಧಿಕಾರಿಗಳು ಭೂಮಿಯನ್ನು ಕಿತ್ತುಕೊಳ್ಳಲು ಹವಣಿಸುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯ ಪ್ರವೇಶ ಮಾಡಬೇಕು. ಇಲ್ಲಿ ಅಕ್ರಮವಾಗಿ ಕಾಂಪೌಂಡ್ ಹಾಕಿ ದಲಿತರ ಭೂಮಿಯನ್ನು ಕಬ್ಜ ಮಾಡಿ, ತೊಂದರೆ ಕೊಡುತ್ತಿರುವ ಅಧಿಕಾರಿಗಳನ್ನು ತಡೆಯಬೇಕು. ಮತ್ತೆ ಈ ಭೂಮಿಯನ್ನು ವಿವಾದಕ್ಕೆ ಸಿಲುಕಿಸಿ, ದಲಿತ ಕುಟುಂಬಗಳಿಗೆ ತೊಂದರೆ ಕೊಡದಂತೆ ಸ್ಪಷ್ಟ ನಿರ್ದೇಶನ ನೀಡಬೇಕು” ಎಂದು ಯಶವಂತ್ ಆಗ್ರಹಿಸಿದ್ದಾರೆ.



