ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುವುದು ಅಪರಾಧವಲ್ಲ. ಆದರೆ ಅದು ಅತಿರಂಜಿತ ರಾಜಕೀಯ ಪ್ರದರ್ಶನವಾಗಬಾರದು. ಪಾರದರ್ಶಕ ವರದಿ, ಸಾರ್ವಜನಿಕ ಸಂವಾದ ಮತ್ತು ಸಮಸ್ಯೆಗಳ ಪರಿಹಾರ ಬದ್ಧತೆಯ ರೂಪದಲ್ಲಿದ್ದರೆ ಮಾತ್ರ ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ. ಬದಲಿಗೆ ಜನರ ಸಮಸ್ಯೆಗಳನ್ನು ಮರೆಮಾಚುವ ರಾಜಕೀಯ ಪ್ರದರ್ಶನವಾದರೆ- ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತದೆ.
ಮೇ 20ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 3 ವರ್ಷಗಳನ್ನು ಪೂರೈಸಲಿದೆ. 19ರಂದೇ ತುಮಕೂರಿನಲ್ಲಿ ಸಾಧನಾ ಸಮಾವೇಶ ಜರುಗಿದೆ. ಇದು ಸರ್ಕಾರದ ಕಾರ್ಯಕ್ರಮ, ಪಕ್ಷದ ಕಾರ್ಯಕ್ರಮವಲ್ಲ ಎಂದು ಹೇಳಲಾಗಿದೆ.
ರಾಜಕೀಯ ಪಕ್ಷಗಳು ಅಧಿಕಾರಕ್ಕೇರಿದಾಗ, ವರ್ಷಗಳು ಉರುಳಿದಾಗ ‘ವಿಜಯೋತ್ಸವ’ಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಹೊಸದಲ್ಲ. ಈಗ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಸಾಧನಾ ಸಮಾವೇಶವೂ ಅದೇ ರಾಜಕೀಯ ಸಂಸ್ಕೃತಿಯ ಭಾಗ. ಆದರೆ, ಇಂತಹ ಸಮಾವೇಶಗಳು ನಿಜವಾಗಿಯೂ ಜನರ ಅಗತ್ಯವೇ ಅಥವಾ ರಾಜಕೀಯ ಶಕ್ತಿಪ್ರದರ್ಶನವೇ ಎಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಸಮಾವೇಶದ ಉಸ್ತುವಾರಿ ಹೊತ್ತ ಗೃಹ ಸಚಿವ ಡಾ. ಜಿ. ಪರಮೇಶ್ವರ್, ‘ಇಲ್ಲಿ ಯಾರ ಶಕ್ತಿಪ್ರದರ್ಶನವೂ ಇಲ್ಲ, ಇದು ಸರ್ಕಾರಿ ಕಾರ್ಯಕ್ರಮಗಳ ಜಾರಿ ಕುರಿತು, ನುಡಿದಂತೆ ನಡೆದಿದ್ದೇವೆ ಎಂಬುದನ್ನು ತಿಳಿಸಲು ಆಯೋಜಿಸಿರುವ ಸಮಾವೇಶ’ ಎಂದಿದ್ದಾರೆ.
ಒಂದು ಸರ್ಕಾರ ತನ್ನ ಯೋಜನೆಗಳು, ಗ್ಯಾರಂಟಿಗಳು, ಅಭಿವೃದ್ಧಿ ಕಾಮಗಾರಿಗಳನ್ನು ಜನರಿಗೆ ವಿವರಿಸುವ ಹಕ್ಕು ಹೊಂದಿದೆ. ವಿಶೇಷವಾಗಿ ಸಿದ್ದರಾಮಯ್ಯನವರ ಸರ್ಕಾರವು ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ ಮೊದಲಾದ ಯೋಜನೆಗಳನ್ನು ತನ್ನ ಪ್ರಮುಖ ಸಾಧನೆಗಳೆಂದು ಪ್ರಚಾರ ಮಾಡುತ್ತಿದೆ. ಸರ್ಕಾರ ಅದನ್ನು ಜನರಿಗೆ ತಿಳಿಸುವುದು ಪ್ರಜಾಪ್ರಭುತ್ವದ ಭಾಗವೂ ಆಗಿದೆ.
ಇದನ್ನು ಓದಿದ್ದೀರಾ?: ಕೊಪ್ಪಳದ ಸುತ್ತಮುತ್ತ ನಡೆದಿರುವ ‘ಕಪ್ಪು ಕೊಲೆ’ಗಳನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು!
ಆದರೆ ಸಮಸ್ಯೆ ಇರುವುದು, ಕಾರ್ಯಕ್ರಮದ ಉದ್ದೇಶಕ್ಕಿಂತ ಅದರ ಶೈಲಿಯಲ್ಲಿ. ಮೆರೆದಾಟ ಮತ್ತು ಮೆರವಣಿಗೆಯಲ್ಲಿ. ಸಾವಿರಾರು ಜನರನ್ನು ಕರೆದೊಯ್ಯುವುದು, ಭಾರೀ ವೇದಿಕೆ ನಿರ್ಮಿಸುವುದು, ಕೋಟಿಗಟ್ಟಲೆ ಹಣವನ್ನು ಜಾಹೀರಾತಿಗಾಗಿ ವಿನಿಯೋಗಿಸುವುದು, ಬ್ಯಾನರ್-ಕಟೌಟ್‌ಗಳನ್ನು ಕಟ್ಟುವುದು, ಭೀಕರ ಭಾಷಣಗಳನ್ನು ಕುಟ್ಟುವುದು- ಇವೆಲ್ಲವೂ ಆಡಳಿತದ ಆತ್ಮಾವಲೋಕನಕ್ಕಿಂತ ಹೆಚ್ಚಾಗಿ ರಾಜಕೀಯ ಮೆರೆದಾಟವಾಗಿ ಕಾಣುತ್ತವೆ. ಸರ್ಕಾರದ ಹಣ, ಆಡಳಿತ ಯಂತ್ರ ಮತ್ತು ಪೊಲೀಸ್ ವ್ಯವಸ್ಥೆಯನ್ನು ಇಂತಹ ಕಾರ್ಯಕ್ರಮಗಳಿಗೆ ಬಳಸುವುದರಿಂದ ಅಧಿಕಾರ ದುರುಪಯೋಗವಾಗುತ್ತದೆ. ಇದು ಸಹಜವಾಗಿಯೇ ಸರ್ಕಾರದ ಮೇಲಿಟ್ಟ ವಿಶ್ವಾಸಕ್ಕೆ ಧಕ್ಕೆ ತರುತ್ತದೆ. ಅಸಹ್ಯ ಮೂಡಿಸುತ್ತದೆ.
ಇಂತಹ ಸಮಾವೇಶಗಳು ಕೆಲವು ಸಲ ರಾಜಕೀಯ ಸಂದೇಶ ರವಾನಿಸುವ ಸಲುವಾಗಿಯೂ ಬಳಕೆಯಾಗುತ್ತವೆ. ವಿಶೇಷವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಅಧಿಕಾರ ಹಂಚಿಕೆ ವಿಷಯದಲ್ಲಿ ಇಂತಹ ವೇದಿಕೆಗಳು ಪಕ್ಷದ ಒಳರಾಜಕೀಯಕ್ಕೂ, ಬಲಾಬಲ ಪ್ರದರ್ಶನಕ್ಕೂ ಬಳಕೆಯಾದರೆ ಅಚ್ಚರಿ ಇಲ್ಲ.
2023ರಲ್ಲಿ ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದಾಗ, ಹಿರಿಯ ಅನುಭವಿ ನಾಯಕ ಎಂಬ ಕಾರಣಕ್ಕೆ ನಾಡಿನ ಜನ ಭಾರೀ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಆದರೆ, ಆರಂಭದಲ್ಲಿಯೇ ಕಾಂಗ್ರೆಸ್ಸಿಗರು ಹಸಿದು ಕೂತವರಂತೆ ವರ್ಗಾವಣೆ ದಂಧೆಯಲ್ಲಿ ನಿರತರಾದರು. ಭ್ರಷ್ಟಾಚಾರವಿಲ್ಲದೆ ಸರ್ಕಾರ ನಡೆಸುವುದು ಸಾಧ್ಯವೇ ಇಲ್ಲ ಎಂದು ಸಾಬೀತುಪಡಿಸಿದರು.
ಎರಡನೇ ವರ್ಷ ಮುಡಾ ಹಗರಣ- ಮುಖ್ಯಮಂತ್ರಿಯವರನ್ನೇ ಕಟಕಟೆಗೆ ಎಳೆಯಿತು. ಆನಂತರ ವಾಲ್ಮೀಕಿ ಹಗರಣ- ಸಚಿವರು ರಾಜೀನಾಮೆ ಕೊಡುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಇವುಗಳಿಂದ ಬಿಡಿಸಿಕೊಳ್ಳುವಷ್ಟರಲ್ಲಿ ಸಿಎಂ-ಡಿಸಿಎಂಗಳ ಅಧಿಕಾರ ಹಂಚಿಕೆ ಮುನ್ನಲೆಗೆ ಬಂದಿತ್ತು. ಬಿಜೆಪಿ ಪ್ರಣೀತ ಗೋದಿ ಮೀಡಿಯಾಗಳು ಅಧಿಕಾರ ಕಿತ್ತಾಟವನ್ನೇ ಮುಖ್ಯ ಸುದ್ದಿಯನ್ನಾಗಿಸಿದವು. ಅದಕ್ಕೆ ತಕ್ಕಂತೆ ಗುಂಪುಗಳು ರಾಜಕೀಯ ರಾಡಿ ಎಬ್ಬಿಸಿದವು. ಆ ರಾಡಿಗೆ ಕೆ.ಎನ್. ರಾಜಣ್ಣನವರು ಬಲಿಯಾದರು. ಇಷ್ಟಾದರೂ ಹೈಕಮಾಂಡ್ ಮೌನ ಮುರಿಯಲಿಲ್ಲ.
ಇನ್ನು ಮೂರನೇ ವರ್ಷದಲ್ಲಿ ದಲಿತರಿಗೆ ಒಳಮೀಸಲಾತಿ ನೀಡುವಲ್ಲಿ, ದಾವಣಗೆರೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಸರ್ಕಾರ ಭಾರೀ ಪ್ರಮಾದವೆಸಗಿತು. ಅಸಲಿಗೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದವರೇ ದಲಿತರು ಮತ್ತು ಮುಸ್ಲಿಮರು. ಆ ತಬ್ಬಲಿ ಸಮುದಾಯಗಳನ್ನು ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸಿತು. ಹೋಗಲಿ, ಗ್ಯಾರಂಟಿ ಮತ್ತು ಅಭಿವೃದ್ಧಿ ನಡುವೆ ಸಮತೋಲನ ಸಾಧಿಸಿತೇ, ಇಲ್ಲ. ನಗರ ಮತ್ತು ಗ್ರಾಮೀಣ ಅಸಮತೋಲನವನ್ನು ಸರಿಪಡಿಸಿತೇ, ಇಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನಾದರೂ ಸುಸ್ಥಿತಿಯಲ್ಲಿಟ್ಟಿತೇ, ಇಲ್ಲ. ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ನೀಡಿತೇ, ಇಲ್ಲ. ಬದಲಿಗೆ, ಮೂರು ವರ್ಷಗಳ ಕಾಲ ಸರ್ಕಾರ ವೃಥಾ ಕಾಲಹರಣ ಮಾಡಿತು.
ಸದ್ಯಕ್ಕೆ ರಾಜ್ಯದಲ್ಲಿ ಬಿರುಬೇಸಿಗೆ, ಉಷ್ಣ ಹವೆ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಕೆಲವು ಕಡೆ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ. ಸ್ವತಃ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆಯವರೇ, ರಾಜ್ಯದ 20 ಜಿಲ್ಲೆಗಳ 60 ತಾಲೂಕುಗಳ 324 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದಿದ್ದಾರೆ. ಅಂದರೆ, ರಾಜ್ಯದ ಬಹುದೊಡ್ಡ ಭಾಗ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದೆ, ಭಾರೀ ಬಿಕ್ಕಟ್ಟು ಎದುರಾಗಿದೆ.
ಏನತ್ಮಧ್ಯೆ, ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಬೇಸಿಗೆ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದರಲ್ಲೂ ಭಾರೀ ಮಳೆಗೆ ಹಾವೇರಿ ಜಿಲ್ಲೆಯಲ್ಲಿ 1,235 ಹೆಕ್ಟೇರ್, ಕೋಲಾರದಲ್ಲಿ 832 ಹೆಕ್ಟೇರ್, ಬೆಳಗಾವಿಯಲ್ಲಿ 324 ಹೆಕ್ಟೇರ್, ಕೊಪ್ಪಳದಲ್ಲಿ 100 ಹೆಕ್ಟೇರ್ ಸೇರಿದಂತೆ ಕಲಬುರಗಿ, ಚಿತ್ರದುರ್ಗ, ಬಾಗಲಕೋಟೆ, ದಾವಣಗೆರೆ, ಯಾದಗಿರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ದ್ರಾಕ್ಷಿ, ಬಾಳೆ, ಭತ್ತ, ಕಲ್ಲಂಗಡಿ, ತೆಂಗು, ಮಾವು, ಅಡಿಕೆ ಹಾಗೂ ಟೊಮ್ಯಾಟೊ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ರೈತರ ಬದುಕು ದುಸ್ತರವಾಗಿದೆ. ಆತ್ಮಹತ್ಯೆಗಳು ವರದಿಯಾಗುತ್ತಿವೆ.
ಇದೇನು ಹೊಸದಲ್ಲ, ಕಳೆದ ಮೂರು ವರ್ಷಗಳೂ ಇದೇ ರೀತಿ ನೆರೆ-ಬರ ರಾಜ್ಯವನ್ನು ಕಾಡಿದೆ. ಪ್ರಾಕೃತಿಕ ವಿಕೋಪ ತಡೆಯುವುದು, ನಿಯಂತ್ರಿಸುವುದು ಕಷ್ಟ, ನಿಜ. ಆದರೆ, ಅದನ್ನು ಎದುರಿಸಲು ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ, ಸರ್ಕಾರವಾಗಲಿ ಸಿದ್ಧತೆ ಮಾಡಿಕೊಳ್ಳಬೇಕಲ್ಲ. ಸಮಸ್ಯೆ ಎದುರಾದಾಗ ಎಚ್ಚರಗೊಂಡು ಓಡಾಡುವುದು, ಒಂದಷ್ಟು ಕಾಳಜಿ ತೋರುವುದು, ಪರಿಹಾರದ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡುವುದು- ಕಣ್ಣೊರೆಸುವ ತಂತ್ರಕ್ಕೆ ಸರ್ಕಾರ ತಲೆಬಾಗಿದೆ. ಸರಕಾರಕ್ಕೆ ಬರವನ್ನು ಎದುರಿಸುವ ಸಾಮರ್ಥ್ಯವೂ ಇಲ್ಲ, ಮಳೆಯನ್ನು ನಿರ್ವಹಿಸುವ ಬುದ್ಧಿವಂತಿಕೆಯೂ ಇಲ್ಲ ಎನ್ನುವುದು ಸಾಬೀತಾಗಿದೆ.
ಇದನ್ನು ಓದಿದ್ದೀರಾ?: ಮಾತು ತಪ್ಪಿದ ಸರ್ಕಾರ; ಕಾಂಗ್ರೆಸ್‌ಗೆ ಬಿಸಿತುಪ್ಪವಾದ ಮುಸ್ಲಿಂ ಸಮುದಾಯದ ಪ್ರತಿಭಟನೆ
ಇವುಗಳ ನಡುವೆಯೇ ಮೂರು ವರ್ಷಗಳು ಮುಗಿದೇ ಹೋಗಿದೆ. ಮುಗಿಸಿದ್ದೇ ಮಹಾನ್ ಸಾಧನೆ ಎಂದು ಸರ್ಕಾರ ಸಾರುತ್ತಿದೆ. ಸಾಧನಾ ಸಮಾವೇಶ ಮಾಡುವುದು ತಪ್ಪಲ್ಲ. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುವುದು ಅಪರಾಧವಲ್ಲ. ಆದರೆ ಅದು ಅತಿರಂಜಿತ ರಾಜಕೀಯ ಪ್ರದರ್ಶನವಾಗಬಾರದು. ಪಾರದರ್ಶಕ ವರದಿ, ಸಾರ್ವಜನಿಕ ಸಂವಾದ ಮತ್ತು ಸಮಸ್ಯೆಗಳ ಪರಿಹಾರ ಬದ್ಧತೆಯ ರೂಪದಲ್ಲಿದ್ದರೆ ಮಾತ್ರ ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ. ಬದಲಿಗೆ ಜನರ ಸಮಸ್ಯೆಗಳನ್ನು ಮರೆಮಾಚುವ ರಾಜಕೀಯ ಪ್ರದರ್ಶನವಾದರೆ- ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತದೆ.
ಇನ್ನು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಅನುಭವಿ ನಾಯಕ ಸಿದ್ದರಾಮಯ್ಯನವರು, ತಮ್ಮ ಅನುಭವವನ್ನು ರಾಜ್ಯದ ಅಭಿವೃದ್ಧಿಗೆ ವಿನಿಯೋಗಿಸುವ ಬದಲು, ಕುರ್ಚಿ ಕಾಪಾಡಿಕೊಳ್ಳುವುದಕ್ಕೆ ಸೀಮಿತವಾಗಿದ್ದು, ಅವರ ಮೇಲಿನ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿಎಂ ಕುರ್ಚಿಯತ್ತ ಕಣ್ಣಿಟ್ಟು ಬೆಂಗಳೂರನ್ನು ನರಕವನ್ನಾಗಿಸಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ. ಇನ್ನು ಸಚಿವರು-ಶಾಸಕರು ಇದ್ದೂ ಇಲ್ಲದಂತಿದ್ದಾರೆ. ಉಳಿದಿರುವ ಎರಡು ವರ್ಷಗಳಲ್ಲಾದರೂ ಸರ್ಕಾರ ಜನಪರವಾಗಿರದಿದ್ದರೆ, ಮತ್ತೊಮ್ಮೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವುದು ಕನಸಾಗಲಿದೆ.




