”ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ, ಜಿಎಸ್‌ಟಿ ಕಟ್ಟದೇ ಸರ್ಕಾರಕ್ಕೆ ತೆರಿಗೆ ವಂಚನೆ ಹಾಗೂ ಅಧಿಕೃತದ ಬೆಟ್ಟಿಂಗ್ ಜತೆಗೆ ಅನಧಿಕೃತ ಬೆಟ್ಟಿಂಗ್ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ರೇಸ್‌ಕೋರ್ಸ್ ಬುಕ್ಕಿಂಗ್ ಕೌಂಟರ್‌ಗಳ ಮೇಲೆ ದಾಳಿ ನಡೆಸಿ, ₹3 ಕೋಟಿ 45 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.
“ಸಿಸಿಬಿ ತಂಡದ ವಿಶೇಷ ವಿಚಾರಣೆ ದಳ ಈ ದಾಳಿ ನಡೆಸಿದೆ. ಈ ರೇಸ್‌ಕೋರ್ಸ್‌ನಲ್ಲಿ ಟಿಕೆಟ್ ನೀಡಿದ ರಸೀದಿ ಇಟ್ಟುಕೊಳ್ಳದೇ, ವ್ಯವಹಾರ ನಡೆಸುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, 66 ಜನರನ್ನು ಠಾಣೆಗೆ ಕರೆಸಿ ಮಾಹಿತಿ ಪಡೆದು ಐಪಿಸಿ ಸೆಕ್ಷನ್ 41ರ ಅಡಿ ನೋಟಿಸ್ ನೀಡಲಾಗಿದೆ. ಅನಧಿಕೃತ ವ್ಯಕ್ತಿಗಳು ಕೌಂಟರ್ ನಡೆಸುತ್ತಿದ್ದ ಮಾಹಿತಿ ಸಿಕ್ಕಿದೆ. ಅಕ್ರಮ ಬೆಟ್ಟಿಂಗ್ ದಂಧೆಯಿಂದ ಸರ್ಕಾರಕ್ಕೆ ಜಿಎಸ್‌ಟಿ ವಂಚನೆ ಆಗಿದೆ. ಶೇ.28 ರಷ್ಟು ಜಿಎಸ್‌ಟಿ ಕಟ್ಟಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೇಸ್‌ಕೋರ್ಸ್ ಮೇಲೆ ಸಿಸಿಬಿ ದಾಳಿ; ₹3 ಕೋಟಿ 47 ಲಕ್ಷ ಹಣ ಜಪ್ತಿ
“ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ. ರೇಸ್‌ಕೋರ್ಸ್‌ನಲ್ಲಿ ನಡೆಸುತ್ತಿದ್ದ ಅನಧಿಕೃತ ಬೆಟ್ಟಿಂಗ್ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಸಿಸಿಬಿ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ” ಎಂದು ತಿಳಿಸಿದರು.