ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ ರೂ. 5,000 ದರ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ ಸಂಘದ ಬಾಗಲಕೋಟೆ ಜಿಲ್ಲಾ ಹಾಗೂ ಬೀಳಗಿ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ಬೀಳಗಿ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಹಶೀಲ್ದಾರರ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ, ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ ₹5,000 ದರ ನೀಡಬೇಕು. ರಾಜ್ಯ ಸರ್ಕಾರ ಪ್ರತಿ ಟನ್ಗೆ ₹1,200 ಎಸ್ಎಪಿ (SAP) ಘೋಷಿಸಬೇಕು. ಕೃಷಿ ಉತ್ಪಾದನಾ ವೆಚ್ಚವನ್ನು ಆಧಾರವಾಗಿಟ್ಟುಕೊಂಡು ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್ಆರ್ಪಿ (FRP) ದರವನ್ನು ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.
ಕಬ್ಬಿನಿಂದ ಸಕ್ಕರೆಯ ಜತೆಗೆ ಎಥನಾಲ್, ಮೊಲಾಸಿಸ್, ಬಗಾಸ್, ಪ್ರೆಸ್ಮಡ್ ಹಾಗೂ ಸಹ-ವಿದ್ಯುತ್ ಸೇರಿದಂತೆ ಹಲವು ಉಪ ಉತ್ಪನ್ನಗಳು ದೊರೆಯುತ್ತವೆ. ಈ ಉಪ ಉತ್ಪನ್ನಗಳಿಂದ ಸೃಷ್ಟಿಯಾಗುವ ಮೌಲ್ಯದಲ್ಲಿ ರೈತರಿಗೆ ನ್ಯಾಯಯುತ ಪಾಲು ದೊರೆಯಬೇಕು. ರಂಗರಾಜನ್ ಸಮಿತಿಯ ಶಿಫಾರಸುಗಳ ಆಶಯದಂತೆ ಉಪ ಉತ್ಪನ್ನಗಳ ಲಾಭದಲ್ಲಿ ಶೇ.70ರಷ್ಟು ಪಾಲು ರೈತರಿಗೆ ದೊರೆಯುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.
ರೈತರಿಗೆ ತೂಕದಲ್ಲಿ ಮೋಸವಾಗದಂತೆ ಕ್ರಮ
ಭಾರತೀಯ ಕಿಸಾನ ಸಂಘದ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ ಮಾತನಾಡಿ, ಕಬ್ಬಿನ ತೂಕದಲ್ಲಿ ರೈತರಿಗೆ ಯಾವುದೇ ರೀತಿಯ ಮೋಸವಾಗದಂತೆ ಪ್ರತಿಯೊಂದು ಸಕ್ಕರೆ ಕಾರ್ಖಾನೆ ಎದುರು ಸರ್ಕಾರಿ ತೂಕ ಮಾಪನ ಕೇಂದ್ರಗಳನ್ನು ತಕ್ಷಣ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಕಬ್ಬು ಪೂರೈಸಿದ 14 ದಿನಗಳೊಳಗೆ ರೈತರಿಗೆ ಬಿಲ್ ಪಾವತಿಸುವುದನ್ನು ಕಡ್ಡಾಯಗೊಳಿಸಬೇಕು. ನಿಗದಿತ ಅವಧಿಯಲ್ಲಿ ಹಣ ಪಾವತಿಸದ ಸಕ್ಕರೆ ಕಾರ್ಖಾನೆಗಳ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಬೇಕು. ಎಫ್ಆರ್ಪಿ ಹಾಗೂ ಎಸ್ಎಪಿ ದರ ನಿಗದಿಪಡಿಸುವ ಸಂದರ್ಭದಲ್ಲಿ ರೈತರ ಪ್ರತಿನಿಧಿಗಳನ್ನು ಒಳಗೊಂಡ ಕಬ್ಬು ಬೆಲೆ ನಿಗದಿ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
ರೈತರ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ ಭಾರತೀಯ ಕಿಸಾನ ಸಂಘದ ನೇತೃತ್ವದಲ್ಲಿ ಮುಂದಿನ ಹಂತದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ ಯಡಹಳ್ಳಿ, ಕಬ್ಬು ಬೆಳೆಗಾರರ ಜಿಲ್ಲಾ ಪ್ರಮುಖ ಅಶೋಕ ಮಂತ್ರಿ, ತಾಲೂಕು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಪ್ರಧಾನ ಕಾರ್ಯದರ್ಶಿ ಗುರು ಅನಗವಾಡಿ, ಯುವ ಪ್ರಮುಖ ಶಾಂತಯ್ಯ ಪಂಚಕಟ್ಟಿಮಠ, ನಗರ ಅಧ್ಯಕ್ಷ ಸಿದ್ದು ಗಾಣಿಗೇರ, ತಾಲೂಕು ಕಾರ್ಯದರ್ಶಿ ಮಂಜು ಬಾವಿ, ದುಂಡಪ್ಪ ಕೊರ್ತಿ, ಶಿವರಾಜ ಕಾಖಂಡಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




