- ನಂದಿನಿ ಉಳಿಸಿ ಮೈಸೂರಿನಲ್ಲಿ ಪ್ರತಿಭಟನೆಗೆ ಕರೆ
- ಗುಜರಾತಿನ ಅಮುಲ್ ವಿರುದ್ಧ ಹೋಟೆಲ್ ಸಂಘದ ಕರೆ
ಅಮುಲ್ ವಿರುದ್ಧ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಗುಜರಾತಿ ಕಂಪನಿಯ ಉತ್ಪನ್ನಗಳನ್ನು ಬಿಟ್ಟು ನಂದಿನಿ ಹಾಲಿನ ಉತ್ಪನ್ನಗಳನ್ನು ಬಳಸುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಕರೆ ಕೊಟ್ಟಿದೆ.
ಗುಜರಾತ್ ಮೂಲದ ಅಮುಲ್ ಕಂಪನಿ ರಾಜ್ಯದಲ್ಲಿ ತನ್ನ ವ್ಯಾಪಾರ ವಿಸ್ತರಣೆ ನಡೆಸಿದೆ. ರಾಜ್ಯದ ಜನತೆಯ ಜೀವನಾಡಿಯಾದ ನಂದಿನಿ ಸಂಸ್ಥೆಯನ್ನೂ ಮುಗಿಸುವ ಹುನ್ನಾರದಿಂದಲೇ ಅಮುಲ್ ರಾಜ್ಯಕ್ಕೆ ಬರುತ್ತಿದೆ ಎನ್ನುವ ಆರೋಪಗಳು ವ್ಯಾಪಕವಾಗಿವೆ.
ಅಮುಲ್ ರಾಜ್ಯದಲ್ಲಿ ವ್ಯಾಪಾರ ಆರಂಭಿಸಲಿದೆ ಎನ್ನುವುದು ಘೋಷಣೆಯಾದ ಬೆನ್ನಲ್ಲೇ ರಾಜ್ಯಾದ್ಯಂತ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸಬೇಕು. ಅಮುಲ್ ತಿರಸ್ಕರಿಸಬೇಕು ಎನ್ನುವ ಅಭಿಯಾನವೂ ಆರಂಭವಾಗಿವೆ.
ಅಮುಲ್‌ಗೆ ಹಿನ್ನಡೆಯಾಗಿ ರಾಜ್ಯದ ರೈತರನ್ನು ಬೆಂಬಲಿಸಲು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸಲು ಹೋಟೆಲ್ ಮಾಲೀಕರು ನಿರ್ಧಾರ ಕೈಗೊಂಡಿದ್ದಾರೆ. “ರಾಜ್ಯದ ರೈತರು ಉತ್ಪಾದಿಸುವ ನಮ್ಮ ಹೆಮ್ಮೆಯ ನಂದಿನಿ ಹಾಲನ್ನೇ ಬಳಸುವ ಮೂಲಕ ನಾವೆಲ್ಲರೂ ಕೆಎಂಎಫ್ ಅನ್ನು ಪ್ರೋತ್ಸಾಹಿಸಬೇಕು” ಎಂದು ಸಂಘ ಮನವಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಆರೋಪಿಗಳ ಖುಲಾಸೆ ನಮಗೆ ಮಾಡಿದ ಕಪಾಳಮೋಕ್ಷ: ಬುಡಕಟ್ಟು ಮಹಿಳೆಯರು
“ಇತ್ತೀಚೆಗೆ ಅನ್ಯ ರಾಜ್ಯದ ಹಾಲು ಕರ್ನಾಟಕಕ್ಕೆ ಲಗ್ಗೆ ಇಡುತ್ತಿರುವ ಬಗ್ಗೆ ಕೇಳಿ ಬರುತ್ತಿದೆ. ಆದರೆ ನಮ್ಮ ನಗರದಲ್ಲಿ ಶುಚಿ, ರುಚಿಯಾದ ಕಾಫಿ, ತಿಂಡಿಗಳು ಸಿಗಲು ಬಹುಕಾಲದಿಂದ ಬೆನ್ನೆಲುಬಾಗಿ ನಿಂತಿರುವುದು ನಮ್ಮ ನಂದಿನಿ ಹಾಲು” ಎಂದು ಸಂಘದ ಅಧ್ಯಕ್ಷ ಪಿ ಸಿ ರಾವ್ ಪ್ರಕಟಣೆ ಹೊರಡಿಸಿದ್ದಾರೆ.
“ಹೋಟೆಲ್ ಮಾಲೀಕರು ಪ್ರಮುಖವಾಗಿ ನಂದಿನಿ ಉತ್ಪನ್ನಗಳನ್ನೇ ಉಪಯೋಗಿಸುತ್ತಿದ್ದಾರೆ. ಇನ್ನು ಮುಂದೆಯೂ ನಮ್ಮ ನಂದಿನಿ ಹಾಲು ಮತ್ತು ಉತ್ಪನ್ನಗಳನ್ನೇ ಬಳಸಲಾಗುವುದು” ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಪ್ರತಿಭಟನೆಗೆ ಕರೆ
“ನಮ್ಮ ನೆಲದಲ್ಲಿ ನಮ್ಮನ್ನೇ ಹೊಸಕುವ ಪ್ರಕ್ರಿಯೆಗಳು ನಡೆಯುತ್ತಿವೆ. ಇದರ ಮುಂದುವರೆದ ಭಾಗವಾಗಿ ಕನ್ನಡಿಗರ ಹೆಮ್ಮೆಯ ನಂದಿನಿಯನ್ನು ಮುಗಿಸಿ, ಗುಜರಾತಿನ ವಸಾಹತನ್ನಾಗಿ ಮಾಡುವ ಷಡ್ಯಂತ್ರ ಆರಂಭಗೊಂಡಿದೆ. ಹಾಗಾಗಿ ನಂದಿನಿ ಉಳಿಸಲು ಮೈಸೂರಿನಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ” ಎಂದು ಪತ್ರಕರ್ತ ಟಿ ಗುರುರಾಜ್ ಹೇಳಿಕೆ ನೀಡಿದ್ದಾರೆ.
ಹೋರಾಟದ ಮೊದಲ ಹಂತವಾಗಿ ದಿನಾಂಕ 10ರ ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಮೈಸೂರು ನಗರದ ವಿವಿ ಪುರಂನ ಲಾಯಲ್ ವರ್ಲ್ಡ್ ಬದಿಯಲ್ಲಿರುವ ಅಮುಲ್ ಮಳಿಗೆಯ ಮುಂದೆ ಸಮಾನಮನಸ್ಕ ಕನ್ನಡಿಗರು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ಪತ್ರಕರ್ತರಾದ ಟಿ ಗುರುರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.