- ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
- 8ನೇ ತರಗತಿ ವಿದ್ಯಾರ್ಥಿಗಳಿಂದ ಅಸಭ್ಯ ವರ್ತನೆ
ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿಗಳು ತಮ್ಮ ಖಾಸಗಿ ಭಾಗಗಳನ್ನು ತೋರಿಸಿ ಅಶ್ಲೀಲವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಕಾರ್ಮೆಲ್ ಶಾಲೆಯಲ್ಲಿ ನಡೆದಿದೆ.
ಆಗಸ್ಟ್ 1ರಂದು ಬೆಂಗಳೂರಿನ ಬಸವೇಶ್ವರನಗರದ ಕಾರ್ಮೆಲ್ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಗಳು ತಮ್ಮದೇ ತರಗತಿಯ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಜತೆಗೆ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿಗಳು ತಮ್ಮ ಖಾಸಗಿ ಅಂಗ ಪ್ರದರ್ಶನ ಮಾಡಿ, ಅಶ್ಲೀಲವಾಗಿ ವರ್ತಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿಯರು ತಮ್ಮ ಪಾಲಕರ ಬಳಿ ಅಳಲು ತೋಡಿಕೊಂಡಿದ್ದಾರೆ.
ವಿದ್ಯಾರ್ಥಿನಿಯರ ಪಾಲಕರಲ್ಲಿ ಒಬ್ಬರಾದ ಮೀರಾ ಎಂಬುವವರು ವಿದ್ಯಾರ್ಥಿಗಳ ಈ ನಡವಳಿಕೆ ಬಗ್ಗೆ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. ಆದರೆ, ಶಾಲಾ ಆಡಳಿತ ಮಂಡಳಿ ಈ ಬಗ್ಗೆ ನಿರ್ಲಕ್ಷ್ಯ ತೋರಿದೆ. ಹಾಗಾಗಿ ಈ ಪ್ರಕರಣ ಇದೀಗ ಠಾಣೆ ಮೆಟ್ಟಿಲೇರಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕನ್ನಡ ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಬೆದರಿಸಿ ಹಣ ವಸೂಲಿ
ಬೆಂಗಳೂರಿನ ಕಾರ್ಮೆಲ್ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರ ಮುಂದೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ತರಗತಿಯಲ್ಲಿರುವ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿ ಮಕ್ಕಳ ಈ ರೀತಿಯ ಅನುಚಿತ ವರ್ತನೆಗಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮೀರಾ ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.