- ಮತಗಟ್ಟೆಗಳ ಬಳಿ ಎಲ್ಲ ರೀತಿಯ ಸೌಲಭ್ಯ : ತುಷಾರ್ ಗಿರಿನಾಥ್
- ಮತದಾನದ ಪ್ರಾಮುಖ್ಯತೆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ
ಬೆಂಗಳೂರಿನಲ್ಲಿ 80 ವರ್ಷ ಮೇಲ್ಪಟ್ಟವರಿಗಾಗಿ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗಿದೆ. ಇದರ ಸದುಪಯೋಗವನ್ನು ಎಲ್ಲ ಹಿರಿಯ ನಾಗರಿಕರು ಪಡೆದುಕೊಂಡು ಮತ ಚಲಾಯಿಸಬೇಕು ಹಾಗೂ ಯುವ ಮತದಾರರಲ್ಲಿ ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿದರು.
ಪಶ್ಚಿಮ ಹಾಗೂ ದಕ್ಷಿಣ ವಲಯದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಅವರು, “ಹೆಚ್ಚು ಮತದಾನವಾಗಬೇಕೆಂಬ ಉದ್ದೇಶದಿಂದ ಚುನಾವಣಾ ಆಯೋಗವು ಮತಗಟ್ಟೆಗಳ ಬಳಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದೆ. ಈ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸಬೇಕಿದೆ” ಎಂದು ಹೇಳಿದರು.
“ನಗರದಲ್ಲಿ ಮತದಾನ ಮಾಡುವ ಪ್ರತಿಯೊಬ್ಬರೂ ಮತಚಲಾಯಿಸುವಂತೆ ಮಾಡಿ ಮತದಾನದ ಶೇಖಡಾವಾರು ಪ್ರಮಾಣವನ್ನು ಹೆಚ್ವಿಸಬೇಕು. ಪಾಲಿಕೆ ಘನತ್ಯಾಜ್ಯ ವಿಭಾಗದ ಆಟೋ ಟಿಪ್ಪರ್‌ಗಳಲ್ಲಿ ಧ್ವನಿವರ್ಧಕಗಳ ಮೂಲಕ ಮತದಾನದ ಪ್ರಾಮುಖ್ಯತೆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪತಿ ಚಾಕಲೇಟ್ ತಂದುಕೊಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಪತ್ನಿ
ಸಭೆಯಲ್ಲಿ ಟಿ.ಎನ್.ಬಾಲಕೃಷ್ಣ ಅವರ ನಿರ್ದೇಶನದಲ್ಲಿ ಬಿ.ಎಂ.ಟಿ.ಸಿ-ಕೆ.ಎಸ್.ಆರ್.ಟಿ.ಸಿಯ ನಾಟಕ ತಂಡವು “ಮತದಾನ ಸಂಕಲ್ಪ” ಎಂಬ ಜಾಗೃತಿ ನಾಟಕವನ್ನು ಪ್ರದರ್ಶಿಸಿದರು.
ಈ ವೇಳೆ ವಲಯ ಆಯುಕ್ತರಾದ ಡಾ. ಆರ್.ಎಲ್.ದೀಪಕ್, ಜಯರಾಮ್ ರಾಯ್‌ಪುರ, ರೆಡ್ಡಿ ಶಂಕರಬಾಬು, ಪ್ರೀತಿ ಗೆಹ್ಲೋಟ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.