ಎಚ್ಚರ | ಮಳೆ ಬಂದಾಗ ರಾಜಧಾನಿ ಬೆಂಗಳೂರಿನಲ್ಲಿ ಬಳಸದಿರಿ ಕೆಳಸೇತುವೆ!

Date:

  • 700ಕ್ಕೂ ಹೆಚ್ಚು ಕಡೆಗಳಲ್ಲಿ ತೆರವಾಗದ ರಾಜಕಾಲುವೆ ಒತ್ತುವರಿ
  • ಅವೈಜ್ಞಾನಿಕ ಕೆಳಸೇತುವೆಗೆ ಬಲಿಯಾದ 23 ವರ್ಷದ ಯುವತಿ

ಭಾನುವಾರ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ರಾಜಧಾನಿ ಬೆಂಗಳೂರು ಅಕ್ಷರಶಃ ತತ್ತರಿಸಿದೆ. ಸತತವಾಗಿ ಎರಡು ಗಂಟೆಗಳ ಕಾಲ ಸುರಿದ ಜೋರು ಮಳೆಗೆ 23 ವರ್ಷದ ಹರೆಯದ ಯುವತಿಯನ್ನು ನಗರದ ಅವೈಜ್ಞಾನಿಕ ಕೆಳಸೇತುವೆ ಬಲಿ ತೆಗೆದುಕೊಂಡಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ, ಮೋಚಾ ಚಂಡಮಾರುತ ಸಂಭವಿಸಿದೆ. ಇದರ ಪರಿಣಾಮ ಕರ್ನಾಟಕದಲ್ಲೂ ಭಾರೀ ಮಳೆಯಾಗುತ್ತಿದೆ. ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಆರಂಭವಾಯಿತು. ಎಲ್ಲೆಡೆ ವಾಹನ ಸಂಚಾರ ದಟ್ಟಣೆ ಉಂಟಾಗಿ ಜನರು ಮನೆ ತಲುಪಲು ಹರಸಾಹಸ ಪಡುವಂತಾಯಿತು. ಇನ್ನೂ ಕೆಲವೆಡೆ ವಾಹನಗಳ ಮೇಲೆ ಮರದ ಕೊಂಬೆಗಳು ಬಿದ್ದು ಜಖಂ ಆಗಿದ್ದವು. ರಸ್ತೆ ತುಂಬೆಲ್ಲಾ ನೀರು, ಕೆಳಸೇತುವೆಗಳಲ್ಲಿ ನೀರು ತುಂಬಿಕೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಕೆಲವು ಜನರಿಗೆ ಈ ಮಳೆ ಸಂತಸ ಕೊಟ್ಟಿದ್ದರೇ, ಇನ್ನೂ ಕೆಲವರ ಜೀವವನ್ನೇ ಕಿತ್ತುಕೊಂಡಿದೆ.

ಅವೈಜ್ಞಾನಿಕ ಕೆಳಸೇತುವೆಗೆ ಬಲಿಯಾದ ಯುವತಿ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಜಾ ದಿನದ ಹಿನ್ನೆಲೆ, ಬೆಂಗಳೂರನ್ನು ನೋಡಿ ಕಣ್ತುಂಬಿಕೊಳ್ಳಲು ಹೈದರಾಬಾದ್ ಕುಟುಂಬ ನಗರಕ್ಕೆ ಆಗಮಿಸಿತ್ತು. ಆದರೆ, ಮಳೆ ಬಂದ ಕಾರಣ ವಾಪಾಸ್ ಮನೆಗೆ ಹಿಂತಿರುಗುವ ವೇಳೆ, ಕೆಆರ್‌ ಸರ್ಕಲ್‌ ಕೆಳಸೇತುವೆಯಲ್ಲಿ ತುಂಬಿದ್ದ ನೀರಿನಲ್ಲಿ ಒಂದೇ ಕುಂಟುಂಬದ ಆರು ಮಂದಿ ಕಾರಿನಲ್ಲಿ ಸಿಲುಕಿಕೊಂಡಿದ್ದರು. ಕಾರಿನಿಂದ ಎಲ್ಲರನ್ನೂ ಹೊರಗೆ ತೆಗೆಯಲಾಯಿತು. ಕೊನೆಗೆ ಯುವತಿಯನ್ನು ಹೊರಗೆ ತರುವಷ್ಟರಲ್ಲಿ ಆಕೆ ಅಸ್ವಸ್ಥಳಾಗಿದ್ದರು. ತಕ್ಷಣಕ್ಕೆ ಆಸ್ಪತ್ರೆಗೆ ಕರೆದೊಯ್ದರೂ ಖಾಸಗೀ ಆಸ್ಪತ್ರೆಯ ವೈದ್ಯರು ಯುವತಿಗೆ ತಕ್ಷಣಕ್ಕೆ ಚಿಕಿತ್ಸೆ ನೀಡದ ಕಾರಣ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.

ಕೆಳಸೇತುವೆಗಳಲ್ಲೇಕೆ ನೀರು ತುಂಬುತ್ತವೆ?  

ಮಳೆಗಾಲಕ್ಕೂ ಮುನ್ನ ಬೆಂಗಳೂರನ್ನು ಸಿದ್ಧಗೊಳಿಸಬೇಕಿದ್ದ ಬಿಬಿಎಂಪಿ ಕರ್ತವ್ಯ ನಿರ್ವಹಿಸದೇ ನಿರ್ಲಕ್ಷ್ಯ ತೋರಿದೆ. ಕಳೆದ ಜನವರಿ ಮತ್ತು ಫೆಬ್ರುವರಿಯಲ್ಲಿ ನಗರದಲ್ಲರುವ ಚರಂಡಿ ಹೂಳು ತೆಗೆಯಲು ಹಾಗೂ ರಾಜಕಾಲುವೆಗೆ ಗೋಡೆ ನಿರ್ಮಾಣ ಮಾಡಲು ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದರೂ ಯಾವುದೇ ಕಾರ್ಯವಾಗಿಲ್ಲ, ನಗರದಲ್ಲಿ ಚರಂಡಿ ಹೂಳುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿಲ್ಲ. ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಕ್ಕೆ ಈಗ ನಡೆದ ಕರಾಳ ಘಟನೆ ನಿದರ್ಶನವಾಗಿದೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಅಂಡರ್‌ಪಾಸ್‌ಗಳಿವೆ?

2023-24ರ ಬಿಬಿಎಂಪಿ ಬಜೆಟ್‌ ಭಾಷಣದ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲಿ 42 ಮೇಲ್ಸೇತುವೆಗಳು ಮತ್ತು 28 ಕೆಳ ಸೇತುವೆಗಳಿವೆ. 2023 ಮುಗಿಯುವ ಹೊತ್ತಿಗೆ 4 ಮೇಲ್ಸೇತುವೆ 4 ಕೆಳ ಸೇತುವೆಗಳನ್ನು ಪೂರ್ಣಗೊಳಿಸಲು ಪಾಲಿಕೆ ಯೋಜಿಸಿದೆ.

ಗುಟ್ಟಹಳ್ಳಿಯ ಕಾವೇರಿ ಜಂಕ್ಷನ್ ಅಂಡರ್‌ಪಾಸ್, ಸಿ ವಿ ರಾಮನ್ ರಸ್ತೆಯ ಸಿಎನ್‌ಆರ್‌ರಾವ್ ಅಂಡರ್‌ಪಾಸ್, ಹೊಸಕೆರೆಹಳ್ಳಿಯ ಮುತ್ತುರಾಜ್ ಜಂಕ್ಷನ್ ಅಂಡರ್‌ಪಾಸ್, ಬನ್ನೇರುಘಟ್ಟ ರಸ್ತೆಯ ಡೈರಿ ಸರ್ಕಲ್ ಅಂಡರ್‌ಪಾfಸ, ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆ ಕೆಳಸೇತುವೆ, ಜೆಪಿ ನಗರದ ಜಿ ಆರ್ ವಿಶ್ವನಾಥ್ ಅಂಡರ್‌ಪಾಸ್‌, ಹಳೆಯ ವಿಮಾನ ನಿಲ್ದಾಣ ರಸ್ತೆಯ ಎಚ್‌ಎಎಲ್‌ ಅಂಡರ್‌ಪಾಸ್, ಹೆಣ್ಣೂರು, ಹೊರಮಾವು, ಜಯದೇವ ಆಸ್ಪತ್ರೆ, ಉತ್ತರಹಳ್ಳಿ, ಕಾಡುಬೀಸನಹಳ್ಳಿ, ಬಸವೇಶ್ವರ ನಗರ, ಕೆ ಆರ್‌ ಸರ್ಕಲ್, ಕುಂದಲಹಳ್ಳಿ, ಹೊರವರ್ತುಲ ರಸ್ತೆ, ಲಗ್ಗೆರೆ, ಮಡಿವಾಳ, ವಿಜಯನಗರ, ಅರಮನೆ ರಸ್ತೆ, ಮಲ್ಲೇಶ್ವರಂ, ಬಳ್ಳಾರಿ ರಸ್ತೆ, ನಾಗರಭಾವಿ, ನಾಯಂಡಹಳ್ಳಿ, ರಾಜಾಜಿನಗರ ಪ್ರವೇಶದಲ್ಲಿ ಇರುವ ಅಂಡರ್‌ಪಾಸ್‌, ರಾಜಾಜಿನಗರದ ಸ್ಟಾರ್‌ ಸರ್ಕಲ್‌ ಬಳಿ, ರಾಮಮೂರ್ತಿ ನಗರ, ವಸಂತ ನಗರ, ಬಸವನಗುಡಿ ಸೇರಿದಂತೆ ಒಟ್ಟಾರೆ 28 ಕೆಳಸೇತುವೆಗಳಿವೆ.

ಇದರಲ್ಲಿ ಕೆಲವು ಬಳಕೆಯಲ್ಲಿದ್ದು, ಇನ್ನೂ ಹಲವು ಕೆಳ ರಸ್ತೆಗಳನ್ನು ಕಾಮಗಾರಿ ಹೆಸರು ಸೇರಿದಂತೆ ಇನ್ನಿತರ ಕಾರಣ ನೀಡಿ ಮುಚ್ಚಲಾಗಿದೆ. ಇದರಲ್ಲಿ ಬಹುತೇಕ ಕೆಳರಸ್ತೆಗಳು ವಿದ್ಯುತ್‌ ದೀಪದ ಸಮಸ್ಯೆ, ಮಳೆ ಬಂದಾಗ ಕೆಳರಸ್ತೆಯಲ್ಲಿ ನೀರು ಸೋರುವುದು, ನೀರು ಸರಿಯಾಗಿ ಪೊಲಾಗದಿರುವುದು ಸೇರಿದಂತೆ ಮಳೆ ಬಂದ ಸಮಯದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೂ ಇದನ್ನು ಗಂಭೀರವಾಗಿ ಪರಿಗಣಿಸದ ಬಿಬಿಎಂಪಿ ನಿರ್ಲಕ್ಷ್ಯ ವಹಿಸುತ್ತಿದೆ.

ನಗರದಲ್ಲಿರುವ ಅಪಾಯಕಾರಿ ಅಂಡರ್‌ಪಾಸ್‌ಗಳು

ನಗರದಲ್ಲಿರುವ 28 ಅಂಡರ್‌ಪಾಸ್‌ಗಳ ಪೈಕಿ ಆರು ಅಂಡರ್‌ಪಾಸ್‌ಗಳು ಅತ್ಯಂತ ಅಪಾಯಕಾರಿಯಾಗಿದ್ದು, ಮಳೆ ಬಂದ ಕೆಲವೇ ನಿಮಿಷಕ್ಕೆ ಈ ಅಂಡರ್‌ಪಾಸ್‌ಗಳು ತುಂಬುತ್ತವೆ. ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವುದೇ ಇದಕ್ಕೆ ಮುಖ್ಯ ಕಾರಣ.

ಶಿವಾನಂದ ರೈಲ್ವೆ ಅಂಡರ್ ಪಾಸ್, ಕೆ.ಆರ್.ಸರ್ಕಲ್ ಅಂಡರ್ ಪಾಸ್, ಪ್ಯಾಲೇಸ್ ರೋಡ್ ಗಾಲ್ಫ್ ಅಂಡರ್ ಪಾಸ್, ಮಾಗಡಿ ರೋಡ್‌ನ ಹೌಸಿಂಗ್ ಬೋಡ್೯ ಅಂಡರ್ ಪಾಸ್, ಟೋಲ್ ಗೇಟ್ ಅಂಡರ್ ಪಾಸ್, ನಾಯಂಡಹಳ್ಳಿ, ಅಂಡರ್ ಪಾಸ್‌ಗಳು ಅತ್ಯಂತ ಅಪಾಯಕಾರಿ ಎನ್ನಲಾಗಿದೆ.

ರಾಜಧಾನಿಯಲ್ಲಿ ಅವೈಜ್ಞಾನಿಕಗಳ ಸರಮಾಲೆ  

ರಾಜಧಾನಿ ಬೆಂಗಳೂರನ್ನು ನೋಡಿಕೊಳ್ಳುತ್ತಿರುವುದು ಬಿಬಿಎಂಪಿ. ಜನರಿಗೆ ಏನೇ ಸಮಸ್ಯೆ ಬಂದರೂ ಅಥವಾ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಿ ಕೊಡುವುದು ಈ ನಾಗರಿಕ ಸಂಸ್ಥೆಯ ಕೆಲಸವಾಗಿದೆ. ಜನರ ರಕ್ಷಣೆಯೇ ಪಾಲಿಕೆಯ ದ್ಯೇಯವಾಗಿದೆ. ಆದರೆ, ಜನರಿಗೆ ಅವಶ್ಯವಿರುವ ಕನಿಷ್ಠ ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ಪಾಲಿಕೆ ಹಿಂದುಳಿದೆ.

ನಗರದ ತುಂಬಾ ಅವೈಜ್ಞಾನಿಕ ಕಾಮಗಾರಿಗಳು ತಾಂಡವವಾಡುತ್ತಿದ್ದು, ಜನರನ್ನು ಬಲಿ ತೆಗೆದುಕೊಳ್ಳುತ್ತಿವೆ. ರಸ್ತೆ ಗುಂಡಿ ಸಮಸ್ಯೆ, ಅವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚುವುದು, ಅವೈಜ್ಞಾನಿಕ ರಸ್ತೆ ಉಬ್ಬು (ಹಂಪ್), ಅವೈಜ್ಞಾನಿಕ ಕೆಳಸೇತುವೆ, ಮೇಲ್ಸೆತುವೆ, ಅವೈಜ್ಞಾನಿಕ ಪಾದಚಾರಿ ಮಾರ್ಗ, ನಗರದ ಹಲವೆಡೆ ಕಾಮಗಾರಿ ನಿಲ್ಲಿಸಿರುವುದು ಸೇರಿದಂತೆ ನಗರದ ತುಂಬಾ ಅವೈಜ್ಞಾನಿಕ ಕಾಮಗಾರಿಗಳೆ ತಾಂಡವವಾಡುತ್ತಿವೆ. ದಿನಕ್ಕೊಬ್ಬರನ್ನು ಬಲಿ ತೆಗೆದುಕೊಳ್ಳುತ್ತಿವೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿ ಧಾರಕಾರ ಮಳೆ | ಸುರಂಗ ಮಾರ್ಗದಡಿ ಸಿಲುಕಿದ್ದ ಮಹಿಳೆ ದುರ್ಮರಣ

ಮಳೆಗಾಲಕ್ಕೆ ಸನದ್ಧವಾಗದ ಬಿಬಿಎಂಪಿ ಏನು ಮಾಡುತ್ತಿದೆ?

ಬೆಂಗಳೂರಿನಲ್ಲಿ ಕಳೆದ ವರ್ಷ 2022ರಲ್ಲಿ ಜೋರು ಮಳೆಗೆ ಮಹಾನಗರಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿತ್ತು. ವೈಟ್‌ಫೀಲ್ಡ್‌, ಬೆಳ್ಳಂದೂರು, ಸಾಯಿಲೇಔಟ್‌, ರೈನ್‌ ಬೋ ಡ್ರೈವ್, ಹೊಸಕೇರೆ ಹಳ್ಳಿ ಸೇರಿದಂತೆ ನಗರದ ಹಲವು ಪ್ರದೇಶಗಳು ನೀರಿನಿಂದ ತುಂಬಿದ್ದವು. ಈ ವೇಳೆ, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿ ಹೊಗಿತ್ತು. ಇದಕ್ಕೆ ರಾಜಕಾಲುವೆ ಹಾಗೂ ಕೆರೆಗಳ ಒತ್ತುವರಿಯೇ ಕಾರಣ ಎಂದು ತಿಳಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಒತ್ತುವರಿ ಮಾಡಿಕೊಂಡ ಪ್ರದೇಶಗಳನ್ನು ತೆರವು ಮಾಡಲು ಕಾರ್ಯಾಚರಣೆ ಕೈಗೊಂಡಿದ್ದರು.

ಈ ಸಮಯದಲ್ಲಿ ಬಿಬಿಎಂಪಿ ಸತತವಾಗಿ ಎರಡು ತಿಂಗಳವರೆಗೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿತು. ಬಳಿಕ ತೆರವು ಮಾಡಲು ಸೂಚಿಸಿದ ಮಾರ್ಕ್‌ಗಳನ್ನು ಅಳಿಸಿಹಾಕಲಾಗಿದೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮುಂದಿಟ್ಟು ದಿನೇದಿನೆ ಬಿಬಿಎಂಪಿಯ ಜೆಸಿಬಿಯ ಸದ್ದು ಕೇಳಿಸುವುದೇ ಕಡಿಮೆಯಾಯಿತು.

ಮುಂದಿನ ವರ್ಷದ ಮಳೆಗಾಲಕ್ಕಾದರೂ ಜನರಿಗೆ ಯಾವುದೇ ತೊಂದರೆಯಾಗದಂತೆ ತಡೆಯಲು ಅಣಿಯಾಗೋಣ ಎಂದು ತಯಾರಿ ಮಾಡಿಕೊಳ್ಳದ ಬಿಬಿಎಂಪಿ ಕೈಕಟ್ಟಿ ಕುಳಿತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾವಂತದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಹೀಗೆ ಮಾಡದೀರಿ!

  1. ಮಳೆಯಿಂದ ರಕ್ಷಣೆ ಪಡೆಯಲು ಅಂಡರ್‌ಪಾಸ್‌ನಲ್ಲಿ ನಿಲ್ಲದಿರಿ
  2. ಮರದ ಕೆಳಗೆ ನಿಲ್ಲದಿರಿ
  3. ವಿದ್ಯುತ್ ಕಂಬದ ಬಳಿ ನಿಲ್ಲದಿರಿ
  4. ಮಳೆಯ ಸಮಯದಲ್ಲಿ ವೇಗದ ವಾಹನ ಚಾಲನೆ ಅಪಾಯಕಾರಿ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೇಸಿಗೆ | ಬಿಯರ್ ಮೊರೆ ಹೋದ ಮದ್ಯಪ್ರಿಯರು: 11 ದಿನದಲ್ಲಿ 27 ಲಕ್ಷ ಲೀ. ಬಿಯರ್ ಮಾರಾಟ

ತಾಪಮಾನ ಹೆಚ್ಚಳದಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನರು ಬಿಸಿಯಾದ ಪಾನೀಯಗಳಿಗಿಂತ ತಂಪಾದ...

ಕಾವೇರಿ 5ನೇ ಹಂತದ ನೀರು ಬಳಕೆಗೆ ಜಲಮಂಡಳಿ ಚಿಂತನೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜಲಮಂಡಳಿ ನೀರಿನ...

ಏ.18 ರಿಂದ ಸಿಇಟಿ ಪರೀಕ್ಷೆ ಆರಂಭ : ಮಾರ್ಗಸೂಚಿಗಳೇನು?

ವೃತ್ತಿಪರ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ 2024ನೇ ಸಾಲಿನ ಸಮಾನ್ಯ ಪ್ರವೇಶ...

ಮತದಾನದ ದಿನ ಐಟಿ–ಬಿಟಿ ಸಿಬ್ಬಂದಿಗೆ ರಜೆ ನೀಡಲು ಸೂಚನೆ : ತುಷಾರ್ ಗಿರಿನಾಥ್

ಬೆಂಗಳೂರು ವ್ಯಾಪ್ತಿಯಲ್ಲಿರುವ ಎಲ್ಲ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಮತದಾನದ ದಿನ...