ರಾಜಧಾನಿ ಬೆಂಗಳೂರಿನ ಹೆಬ್ಬಾಳ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಮೇಲ್ಸೇತುವೆಗೆ ಹೆಚ್ಚುವರಿ ರ‍್ಯಾಂಪ್ ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆ ಬಂದ್ ಮಾಡಲಾಗಿದ್ದು, ಜುಲೈ 15ರವರೆಗೆ ಆ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಹೆಬ್ಬಾಳ ಮತ್ತು ಶಿವಾಜಿನಗರ ನಡುವೆ ಸಂಚರಿಸುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳ ಸೇವೆಗಳನ್ನು ಕೊಡಿಗೇಹಳ್ಳಿ ಗೇಟ್‌ವರೆಗೆ ವಿಸ್ತರಿಸಲಾಗಿದೆ.
ಹೆಬ್ಬಾಳದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳಿಂದಾಗಿ ಹೆಬ್ಬಾಳ ಪೊಲೀಸ್ ಠಾಣೆ ಬಳಿಯ ಬಸ್ ನಿಲ್ದಾಣದಿಂದ ಬಸ್‌ಗಳನ್ನು ಹಿಡಿಯಲು ಹಲವು ಪ್ರಯಾಣಿಕರು ತೊಂದರೆ ಅನುಭವಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಹೆಬ್ಬಾಳ ಮೇಲ್ಸೇತುವೆಗೆ ರ‍್ಯಾಂಪ್ ಸೇರಿಸುವ ಕಾಮಗಾರಿ ಆರಂಭವಾಗುತ್ತಿದ್ದಂತೆ ಸಂಚಾರ ಪೊಲೀಸರು ಜುಲೈ 3ರ ಸೋಮವಾರದಿಂದ ಸರ್ವಿಸ್ ರಸ್ತೆಗೆ ನಿರ್ಬಂಧ ಹೇರಿದ ಪರಿಣಾಮ ಸೋಮವಾರ ಮತ್ತು ಮಂಗಳವಾರ ಸಿಬಿಐ ಸ್ಟಾಪ್‌ನಲ್ಲಿ ಬಸ್‌ಗಳು ಆರಂಭಗೊಂಡು ನಿಲ್ಲುತ್ತಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜುಲೈ 15ರವರೆಗೆ ಹೆಬ್ಬಾಳ ಮೇಲ್ಸೇತುವೆ ಬಳಿ ಸಂಚಾರ ದಟ್ಟಣೆ ಬಿಸಿ
“ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಕೊಡಿಗೇಹಳ್ಳಿ ಗೇಟ್‌ವರೆಗೆ ಸೇವೆಯನ್ನು ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ. ಕಾಮಗಾರಿ ಪೂರ್ಣಗೊಳ್ಳುವವರೆಗೂ ಇದು ಮುಂದುವರಿಯಲಿದೆ” ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.