ವಿದ್ಯಾರ್ಥಿ ಪ್ರತಿಭಟನೆಗಳನ್ನು ನಿರ್ವಹಿಸುವ ವೇಳೆ ಪೊಲೀಸ್ ಅಧಿಕಾರಿಗಳು ಅತ್ಯಂತ ಸಂಯಮದಿಂದ ವರ್ತಿಸಬೇಕು. ಬಲಪ್ರಯೋಗಕ್ಕಿಂತ ಪ್ರತಿಭಟನಾಕಾರರು ಏನು ಹೇಳುತ್ತಿದ್ದಾರೆ, ಏಕೆ ಪ್ರತಿಭಟಿಸುತ್ತಿದ್ದಾರೆ ಎಂಬುದನ್ನು ಆಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ವೇಳೆ ಕಲ್ಲು ತೂರಾಟ ಸೇರಿದಂತೆ ಹಿಂಸಾಚಾರ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಸಿಜೆಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
“ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಮೆರವಣಿಗೆಗಳು ನಡೆಯುವಾಗ ಭದ್ರತಾ ಪಡೆಗಳೂ ಸಂಯಮ ಪ್ರದರ್ಶಿಸಬೇಕು. ಯುವಕರು ಹಿಂಸೆಗೆ ಇಳಿಯದಂತೆ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಹಿಂಸೆಗೆ ಪ್ರತಿಯಾಗಿ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಪ್ರತಿಭಟನಾಕಾರರ ಮಾತು ಆಲಿಸುವುದೇ ಅತ್ಯಂತ ಶಕ್ತಿಯುತ ಮಾರ್ಗ” ಎಂದು ನ್ಯಾಯಪೀಠ ಹೇಳಿತು.
ಇನ್ನೊಂದೆಡೆ ಕ್ರಮ ಕೈಗೊಳ್ಳುವುದನ್ನು ಪೊಲೀಸ್ ಅಧಿಕಾರಿಗಳ ವಿವೇಚನೆಗೆ ಬಿಡುವುದು ಸರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗಿಂತ ಅವರಿಗೆ ಚೆನ್ನಾಗಿ ಗೊತ್ತಿದೆ. ವಾದವನ್ನು ಆಲಿಸಿದ್ದೇವೆ. ಕೇಂದ್ರ ಸರ್ಕಾರದ ನಿಲುವು ಸೇರಿದಂತೆ ಇತರ ಅಂಶಗಳನ್ನು ಪರಿಗಣಿಸಿ ಸೂಕ್ತ ಸಂದರ್ಭದಲ್ಲಿ ವಿಚಾರಣೆ ನಡೆಸುತ್ತೇವೆ” ಎಂದು ತಿಳಿಸಿದೆ.
ಇದನ್ನೂ ಓದಿ: ನಮ್ಮ ಬೆನ್ನು ಹತ್ತಿ ಬೇಟೆಯಾಡುವುದನ್ನು ಇನ್ನಾದರೂ ನಿಲ್ಲಿಸಿ: ಪ್ರಧಾನಿ ನಿಂದನೆ ಆರೋಪ ಹೊತ್ತ ಬಾಲೆಯ ತಾಯಿ ಕಳಕಳಿ
ಇದೇ ವೇಳೆ, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಆರೋಪದ ವಿರುದ್ಧ ನಡೆದ ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ಬಿಹಾರ ಮತ್ತು ಅಸ್ಸಾಂನಲ್ಲಿ ದಾಖಲಿಸಲಾಗಿದ್ದ ಎಫ್‌ಐಆರ್‌ಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಸಿಜೆಪಿ ಇತ್ತೀಚೆಗೆ ಹೇಳಿಕೊಂಡಿತ್ತು. ರಾತ್ರಿ ನಡೆದ ಮಾತುಕತೆಯ ಬಳಿಕ ಈ ಭರವಸೆ ದೊರೆತಿದ್ದು, ಪ್ರತಿಭಟನೆಗೆ ಸಂಬಂಧಿಸಿದಂತೆ ಹೊಸ ಕ್ರಿಮಿನಲ್ ಪ್ರಕರಣಗಳನ್ನೂ ದಾಖಲಿಸದಿರಲು ಕೇಂದ್ರ ಸರ್ಕಾರ ಒಪ್ಪಿದೆ ಎಂದು ಸಿಜೆಪಿ ಹೇಳಿತ್ತು.
ಇದೇ ಪ್ರಕರಣದ ಕುರಿತು ಜುಲೈ ನಲ್ಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ವಿರುದ್ಧ ತುರ್ತು ವಿಚಾರಣೆ ನಡೆಸುವಂತೆ ವಕೀಲರೊಬ್ಬರು ಮೌಖಿಕವಾಗಿ ಮನವಿ ಮಾಡಿದ್ದರು. ಆಗ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ತುರ್ತು ವಿಚಾರಣೆಗೆ ಒಪ್ಪಿರಲಿಲ್ಲ. ಅಲ್ಲದೆ, ಪ್ರತಿಭಟನೆಯ ವಿಡಿಯೊಗಳನ್ನು ನೋಡುವ ಅಗತ್ಯವಿಲ್ಲ, ತುರ್ತು ಹಂತದಲ್ಲಿ ಅಂತಹ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬ ನಿಲುವು ವ್ಯಕ್ತಪಡಿಸಿದ್ದರು. ಇದರಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಬಳಿಕ ಸ್ಪಷ್ಟನೆ ನೀಡಿ, ತಾವು ಯಾವುದೇ ಅರ್ಜಿಯನ್ನು ವಿಚಾರಣೆಗೆ ನಿರಾಕರಿಸಿಲ್ಲ. ನ್ಯಾಯಾಲಯದ ಮುಂದೆ ಯಾವುದೇ ಅಧಿಕೃತ ರಿಟ್ ಅರ್ಜಿಯೇ ಸಲ್ಲಿಕೆಯಾಗಿರಲಿಲ್ಲ. ಕೇವಲ ಒಂದು ಮನವಿ ಪತ್ರ ಮಾತ್ರ ಬಂದಿತ್ತು. ತಾವು ವಿಚಾರಣೆ ನಿರಾಕರಿಸಿದ್ದೇವೆ ಎಂಬ ಮಾಧ್ಯಮ ವರದಿಗಳು ತಪ್ಪು ಎಂದಿದ್ದರು. ಮತ್ತೊಂದು ವಿಚಾರಣೆಯಲ್ಲಿ “ಅತಿಯಾದ ಬಲಪ್ರಯೋಗ ಮಾಡಿದ ಪೊಲೀಸ್ ಅಧಿಕಾರಿಗಳನ್ನೂ ರಕ್ಷಿಸಬಾರದು; ವಿದ್ಯಾರ್ಥಿ ಪ್ರತಿಭಟನೆಯ ಹೆಸರಿನಲ್ಲಿ ಅಪರಾಧ ಎಸಗಿದವರನ್ನೂ ರಕ್ಷಿಸಬಾರದು” ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈಗ ಅಧಿಕಾರಿಗಳು ಸಂಯಮದಿಂದಿರಬೇಕು ಎಂದಿದೆ. ಒಂದೇ ಪ್ರಕರಣದ ಕುರಿತು ಆರಂಭದಲ್ಲಿ ತುರ್ತು ವಿಚಾರಣೆಗೆ ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ಟೀಕೆ ವ್ಯಕ್ತವಾದ ಬೆನ್ನಲ್ಲೇ ಒಂದೊಂದೇ ನಿಲುವನ್ನು ಬದಲಾಯಿಸಿದೆ.
ನೀಟ್ ಪರೀಕ್ಷಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಸಿಜೆಪಿ ಆಗ್ರಹಿಸುತ್ತಿದೆ.




