ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಕೂಡ ಹಗರಣವಾಗಿ ಮಾರ್ಪಟ್ಟಿದೆ. ಡೇಟಿಂಗ್ ಹೆಸರಿನಲ್ಲಿ ವಂಚಿಸಲ್ಪಡುವ ಮತ್ತು ವಂಚನೆಗೆ ಒಳಗಾಗುವ ಪ್ರಕರಣಗಳು ವರದಿಯಾಗುತ್ತಿವೆ. ಇದೀಗ ಅಂತಹದ್ದೇ ಪ್ರಕರಣವೊಂದರಲ್ಲಿ, ಬೆಂಗಳೂರಿನ ವಿಚ್ಛೇದಿತ ವ್ಯಕ್ತಿಯೊಬ್ಬರು ₹1.05 ಕೋಟಿ ಕಳೆದುಕೊಂಡಿದ್ದಾರೆ.
ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಓರ್ವ ಮಹಿಳೆಯನ್ನು ಸಂಪರ್ಕಿಸಿದ್ದಾರೆ. ಆಕೆ, ತಾನೂ ವಿಚ್ಛೇದಿತೆ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದಾಳೆ. ವ್ಯಾಪಾರದಲ್ಲಿ ಸಹಾಯ ಮಾಡುವುದಾಗಿ ನಂಬಿಸಿ ಬರೋಬ್ಬರಿ ಕೋಟಿ ರೂಪಾಯಿ ವಂಚಿಸಿದ್ದಾಳೆ ಎಂದು ತಿಳಿದುಬಂದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಕೃತಿ ಶ್ರೀಧರನ್ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಮಹಿಳೆ ಮೂಲತಃ ಕೇರಳದವರು ಎಂದು ಹೇಳಲಾಗಿದೆ. ಆಕೆ, ವಂಚನೆಗೊಳಗಾದ ವ್ಯಕ್ತಿಯೊಂದಿಗೆ ಸುಮಾರು ಮೂರ್ನಾಲ್ಕು ತಿಂಗಳು ಚಾಟಿಂಗ್ ನಡೆಸಿದ್ದಾಳೆ.
ಆತನ ವಿಶ್ವಾಸ ಗಳಿಸಿದ ಬಳಿಕ, “ಆನ್‌ಲೈನ್ ವಿದೇಶಿ ವಿನಿಮಯ ವ್ಯಾಪಾರದಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಇದರಿಂದ ಉತ್ತಮ ಆದಾಯ ಬರುತ್ತಿದೆ. ನಾನು ₹12 ಕೋಟಿ ಗಳಿಸಿದ್ದೇನೆ. ನೀವು ಹೆಚ್ಚು ಆದಾಯ ಗಳಿಸಬಹುದು” ಎಂದು ಆಮಿಷವೊಡ್ಡಿದ್ದಾಳೆ.
ಆಕೆಯ ಮಾತನ್ನು ನಂಬಿದ ಸಂತ್ರಸ್ತ ಕಾಲಕ್ರಮೇಣ ಒಟ್ಟು ₹1.05 ಕೋಟಿ ವ್ಯಯಿಸಿದ್ದಾನೆ. ಬಳಿಕ, ತನ್ನ ಹೂಡಿಕೆ ಹಣವನ್ನು ವಾಪಸ್ ಪಡೆಯಲು ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾನೆ. ಆದರೆ, ಆತನ ವೈಯಕ್ತಿಕ ಮಾಹಿತಿ ಹಾಗೂ ಬ್ಯಾಂಕ್ ಮಾಹಿತಿಗಳನ್ನೆಲ್ಲ ಪಡೆದುಕೊಂಡಿದ್ದ ಮಹಿಳೆ ಆತನಿಗೆ ಬೆದರಿಕೆ ಹಾಕಿದ್ದಾಳೆ. ಅಲ್ಲದೆ, ಆತನ ಬ್ಯಾಂಕ್ ಖಾತೆಯಿಂದ ಲಾಗ್ ಔಟ್ ಮಾಡಿದ್ದಾಳೆ ಎಂದು ಬೆಂಗಳೂರು ಆಗ್ನೇಯ ಪೊಲೀಸ್ ಉಪ ಆಯುಕ್ತ ಸಿ.ಕೆ ಬಾಬಾ ಹೇಳಿದ್ದಾರೆ.
ಸಂತ್ರಸ್ತ ವ್ಯಕ್ತಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಸೈಬರ್ ಕ್ರೈಮ್ ಪೊಲೀಸರು ಆತನ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಿದ್ದಾರೆ. ಆತ ಕಳೆದುಕೊಂಡ ಮೊತ್ತವನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬನ ಕತ್ತು ಕೊಯ್ದು ಕೊಲೆ
ಡೇಟಿಂಗ್/ಮ್ಯಾಟ್ರಿಮೋನಿಯಲ್ ಪ್ಲಾಟ್ಫಾರ್ಮ್‌ಗಳನ್ನು ಬಳಸುವವರಿಗೆ ಪೊಲೀಸ್ ಸಲಹೆ
- ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿ, ವಿಳಾಸ ಅಥವಾ ದಾಖಲೆಗಳನ್ನು ಹಂಚಿಕೊಳ್ಳಬೇಡಿ
- ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ಬಾರಿ ಭೇಟಿ ಮಾಡಿ ಮತ್ತು ಆ ಖಾತೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ
- ವರ್ಚುವಲ್ ಪ್ಲಾಟ್ಫಾರ್ಮ್‌ಗಳ ಮೂಲಕ ನಿಕಟ ಚಾಟ್‌ಗಳು/ಕರೆಗಳನ್ನು ಮಾಡಬೇಡಿ
- ಆತುರದ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ
- ವಂಚನೆಯ ಅನುಮಾನವಿದ್ದರೆ 1930 ಅಥವಾ 112 ಅನ್ನು ಸಂಪರ್ಕಿಸಿ