ಅಮೇಜಾನ್‍ನಲ್ಲಿ ದಟ್ಟ ಕಾಡುಗಳ ಸೃಷ್ಟಿಗೆ ಬಯೋಚಾರ್ ಕಾರಣವೆಂದು ನಂಬಲಾಗಿದೆ. ಅಲ್ಲಿ ಆಗಾಗ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತದೆ. ಕಾಡ್ಗಿಚ್ಚಿನಲ್ಲಿ ಮರಗಿಡಗಳು ಸುಟ್ಟು ಕರಕಲಾಗುತ್ತವೆ. ಆ ಕರಕಲು ವಸ್ತು ಬಯೋಚಾರ್ ಆಗಿ ಮಣ್ಣಿನೊಂದಿಗೆ ಕಲೆತುಕೊಳ್ಳುತ್ತದೆ. ಅಲ್ಲಿಯ ಬಯೋಚಾರ್ ಅನ್ನು ‘ಟೆರ್ರಾ ಪ್ರೆಟಾ’ (Terra Preta) ಎಂದು ಕರೆಯಲಾಗಿದೆ. ಟೆರ್ರಾ ಪ್ರೆಟಾ ಎಂದರೆ ಕಪ್ಪು ಮಣ್ಣು ಎಂದರ್ಥ.
ಬಯೋಚಾರ್ ಎಂಬ ಜೈವಿಕ ಇದ್ದಿಲಿನ ಬಳಕೆಯಿಂದ ಮಣ್ಣಿನ ಸಂರಕ್ಷಣೆ ಮಾಡಿಕೊಳ್ಳಬಹುದು ಮತ್ತು ಬೆಳೆಗಳಿಂದ ಅಧಿಕ ಇಳುವರಿ ಪಡೆಯಬಹುದು ಎಂಬ ಮಾಹಿತಿಯು ರೈತರ ಗಮನ ಸೆಳೆಯುತ್ತಿದೆ. ಬಯೋಚಾರ್ ಬಳಕೆಯಿಂದಾಗುವ ಉಪಯೋಗಗಳ ಕುರಿತು ಒಂದೆರಡು ದಶಕಗಳಿಂದ ಸಂಶೋಧನೆಗಳಾಗಿವೆ. ಇದೊಂದು ಹೊಸದಾಗಿ ಪರಿಚಯಿಸಲಾಗುತ್ತಿರುವ ತಂತ್ರಜ್ಞಾನ.
ಜೈವಿಕ ಇದ್ದಿಲಿನ ಇತಿಹಾಸ : ಅಮೆಜಾನಿನ ಟೆರ್ರಾ ಪ್ರೆಟಾ
ಅಮೇಜಾನ್‍ನಲ್ಲಿ ದಟ್ಟ ಕಾಡುಗಳ ಸೃಷ್ಟಿಗೆ ಬಯೋಚಾರ್ ಕಾರಣವೆಂದು ನಂಬಲಾಗಿದೆ. ಅಲ್ಲಿ ಆಗಾಗ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತದೆ. ಕಾಡ್ಗಿಚ್ಚಿನಲ್ಲಿ ಮರಗಿಡಗಳು ಸುಟ್ಟು ಕರಕಲಾಗುತ್ತವೆ. ಆ ಕರಕಲು ವಸ್ತು ಬಯೋಚಾರ್ ಆಗಿ ಮಣ್ಣಿನೊಂದಿಗೆ ಕಲೆತುಕೊಳ್ಳುತ್ತದೆ. ಅಲ್ಲಿಯ ಬಯೋಚಾರ್ ಅನ್ನು ‘ಟೆರ್ರಾ ಪ್ರೆಟಾ’ (Terra Preta) ಎಂದು ಕರೆಯಲಾಗಿದೆ. ಟೆರ್ರಾ ಪ್ರೆಟಾ ಎಂದರೆ ಕಪ್ಪು ಮಣ್ಣು ಎಂದರ್ಥ. ಅಮೇಜಾನಿನ ದಟ್ಟ ಕಾಡುಗಳ ಸೃಷ್ಟಿಗೆ ಟೆರ್ರಾ ಪ್ರೆಟಾ ಕಾರಣವೆಂದು ಅಲ್ಲಿಯ ಆದಿವಾಸಿಗಳು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಅವರು ವಾಸಿಸುವ ತಾಣಗಳ ಸುತ್ತ ಅಂತಹ ಕಪ್ಪು ಮಣ್ಣನ್ನು ಹೆಚ್ಚಾಗಿ ಬಳಸುತ್ತಿದ್ದರು. ಅಂತಹ ಪ್ರಾಚೀನ ವಿಜ್ಞಾನವನ್ನು ಇಂದಿನ ವಿಜ್ಞಾನಿಗಳು ಬಲವಾಗಿ ನಂಬಿ ಸಂಶೋಧನೆಗಳತ್ತ ಗಮನಹರಿಸಿದ್ದರ ಫಲಿತಾಂಶವೇ ಇದೀಗ ತಯಾರಾಗುತ್ತಿರುವ ಬಯೋಚಾರ್ ಎಂಬ ಜೈವಿಕ ಇದ್ದಿಲು.

ಬಯೋಚಾರ್ ತಯಾರಿಕೆಗೆ ಬಳಸುವ ವಸ್ತುಗಳು
ಕಡಿಮೆ ಆಮ್ಲಜನಕದ ವಾತಾವರಣದಲ್ಲಿ ಸಸ್ಯಮೂಲದ ವಸ್ತುಗಳನ್ನು ಸುಟ್ಟು ಬಯೋಚಾರನ್ನು ತಯಾರಿಸಲಾಗುತ್ತದೆ. ಯಾವುದೇ ತರಹದ ಒಣಗಿದ ಸಸ್ಯ ವಸ್ತು ಹಾಗೂ ಬೆಳೆ ತ್ಯಾಜ್ಯವನ್ನು ಬೆಂಕಿಯಲ್ಲಿ ಹದವಾಗಿ ಸುಡಬೇಕು. ಅಂತಹ ವಸ್ತುಗಳೆಂದರೆ ತೆಂಗಿನ ಚಿಪ್ಪು, ಒಣಗಿಸಿದ ಎಳನೀರಿನ ಚಿಪ್ಪು, ಅಡಿಕೆ ಸಿಪ್ಪೆ, ಜೋಳದ ದಿಂಡು, ತೆಂಗಿನ ಗರಿ, ಮರದ ರೆಂಬೆ ಕೊಂಬೆ, ಸೌದೆ, ಮರದ ತೊಗಟೆ, ಮರ ಕೊಯ್ಯುವ ಗಿರಣಿಯಲ್ಲಿ ಉತ್ಪತ್ತಿಯಾಗುವ ಮರದ ಪುಡಿ, ಬಿದಿರು, ಮುಸುಕಿನ ಜೋಳದ ತೆನೆಯ ದಿಂಡು, ಒಣಗಿದ ಜೋಳದ ದಂಟು, ಸೂರ್ಯಕಾಂತಿ ದಂಟು, ಬೀಜ ಉದುರಿಸಿಕೊಂಡ ಸೂರ್ಯಕಾಂತಿಯ ತೆನೆ, ಹರಳಿನ ಕಡ್ಡಿ, ಹಿಪ್ಪುನೇರಳೆ ಕಡ್ಡಿ, ಕಬ್ಬಿನ ಸೋಗೆ, ಭತ್ತದ ಹುಲ್ಲು, ಒಣಗಿಸಿದ ಆಹಾರ ತ್ಯಾಜ್ಯ ಮುಂತಾದುವು.
ಬಯೋಚಾರ್ ತಯಾರಿಸುವ ವಿಧಾನ
ದೊಡ್ಡ ಪ್ರಮಾಣದಲ್ಲಿ ಬಯೋಚಾರ್ ತಯಾರಿಸಲು ದಹನ ಯಂತ್ರ (Combustion Unit) ವನ್ನು ಬಳಸಲಾಗುತ್ತದೆ. ಅಂತಹ ಯಂತ್ರದಲ್ಲಿ ನಡೆಯುವ ಕ್ರಿಯೆಯನ್ನು ಪೈರೋಲಿಸಿಸ್ (Pyrolysis) ಅರ್ಥಾತ್ ಉಷ್ಣ ವಿಭಜನೆಯ ಕ್ರಿಯೆ ಎಂದು ಕರೆಯಲಾಗಿದೆ. ಆ ಕ್ರಿಯೆಯಲ್ಲಿ ಆಮ್ಲಜನಕವಿಲ್ಲದಿರುವುದರಿಂದ ವಸ್ತುಗಳು ಹೊತ್ತಿ ಉರಿಯುವುದಿಲ್ಲ. ಬೆಂಕಿಯಂತೂ ಇರುತ್ತದೆ. ದಹನ ಯಂತ್ರದ ಒಳಗಿನ ಉಷ್ಣತೆಯು ಸುಮಾರು 550 ಡಿಗ್ರಿ ಸೆಲ್ಸಿಯಸ್. ದಹನದ ಅವಧಿಯು 5ರಿಂದ 6 ಗಂಟೆಗಳು. ಅದರೊಳಗಿನ ವಸ್ತುಗಳು ಉಷ್ಣ ವಿಭಜನೆಗೆ ಒಳಪಟ್ಟಾಗ ಅನಿಲ, ತೈಲ ಮತ್ತು ಬಯೋಚಾರ್ ಎಂಬ ಮೂರು ತರಹದ ವಸ್ತುಗಳು ಉತ್ಪತ್ತಿಯಾಗುತ್ತವೆ. ಇಲ್ಲಿ ರೈತರಿಗೆ ಬಯೋಚಾರ್ ಉತ್ಪಾದನೆಯೇ ಮುಖ್ಯ. ಅನಿಲ ಮತ್ತು ತೈಲಗಳ ಉಪಯೋಗಗಳು ಪ್ರತ್ಯೇಕ.

ರೈತರೇ ಸುಲಭವಾಗಿ ತಯಾರಿಸಿಕೊಳ್ಳಬಹುದಾದ ಬಯೋಚಾರ್
ದೊಡ್ಡದೊಂದು ಕಬ್ಬಿಣದ ಡ್ರಮ್ ಬಳಸಿ ರೈತರು ತಮ್ಮ ಹೊಲ ಮತ್ತು ತೋಟಗಳಲ್ಲಿ ಬಯೋಚಾರನ್ನು ತಯಾರಿಸಿಕೊಳ್ಳಬಹುದು. ಡ್ರಮ್ಮಿನ ಒಳಗಡೆ ದಹಿಸಬೇಕಾದ ಬೆಳೆ ತ್ಯಾಜ್ಯವನ್ನು ತುಂಬಬೇಕು. ಡ್ರಮ್ಮಿನ ಒಳಗೆ ಬೆಂಕಿ ಹಚ್ಚಿ, ಉರಿಯಲು ಪ್ರಾರಂಭಿಸುತ್ತಿದ್ದಂತೆ ಕಬ್ಬಿಣದ ಮುಚ್ಚಳ ಮುಚ್ಚಬೇಕು. ಆ ಮುಚ್ಚಳದಲ್ಲಿ 4-5 ಅಂಗುಲದ ಒಂದು ರಂಧ್ರವಿರಬೇಕು. ಆ ರಂಧ್ರದ ಮೂಲಕ ನಾಲ್ಕು ಅಡಿ ಉದ್ದದ ಕೊಳವೆಯನ್ನು ಸಿಕ್ಕಿಸಿರಬೇಕು. ಕೊಳವೆಯ ಮೂಲಕ ಹೊಗೆಯು ಹೊರಹೋಗುತ್ತದೆ. ಡ್ರಮ್ಮಿನ ಒಳಗೆ 280ರಿಂದ 500 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುತ್ತದೆ. ಸುಮಾರು 4ರಿಂದ 5 ಗಂಟೆಗಳಲ್ಲಿ ಬೆಳೆ ತ್ಯಾಜ್ಯಗಳು ಕಡಿಮೆ ಆಮ್ಲಜನಕದ ವಾತಾವರಣದಲ್ಲಿ ಉರಿದು ಬಯೋಚಾರ್ ಸಿದ್ದವಾಗುತ್ತದೆ. ಪ್ರತಿ ನೂರು ಕಿಲೋಗ್ರಾಂ ಬೆಳೆ ತ್ಯಾಜ್ಯದಿಂದ 30ರಿಂದ 35 ಕಿಲೋಗ್ರಾಂ ಬಯೋಚಾರ್ ಪಡೆಯಬಹುದು. ಅದನ್ನು ಮತ್ತಷ್ಟು ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಅಂತಹ ಪುಡಿಯ ಕಣಗಳ ಗಾತ್ರವು ಸರಾಸರಿ ಒಂದು ಮಿಲಿಮೀಟರಿನಷ್ಟಿರಬೇಕು. ಆಗ ಬಯೋಚಾರ್ ಪುಡಿಯು ಮಣ್ಣಿಗೆ ಸೇರಿಸಲು ಸಿದ್ದ. ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳನ್ನು ಸಂಪರ್ಕಿಸಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿಕೊಂಡು ಬಯೋಚಾರ್ ಸಿದ್ದಪಡಿಸಿಕೊಳ್ಳುವ ವಿಧಾನವನ್ನು ಅರಿತುಕೊಳ್ಳುವುದು ಉತ್ತಮ. ಇದೊಂದು ಕಡಿಮೆ ವೆಚ್ಚದ ತಂತ್ರಜ್ಞಾನ.

ಪರಿಸರ ಸ್ನೇಹಿ ಬಯೋಚಾರ್
ತೆರೆದ ಪರಿಸರದಲ್ಲಿ ಬೆಂಕಿ ಹಾಕಿ ಸುಟ್ಟಾಗ ಏಳುವ ಹೊಗೆಯಿಂದ ವಾಯು ಮಾಲಿನ್ಯವಾಗುತ್ತದೆ. ಇಂಗಾಲದ ಡೈಆಕ್ಸೈಡ್ ಉತ್ಪತ್ತಿಯು ಹೆಚ್ಚಾಗಿ ಪರಿಸರಕ್ಕೆ ಸೇರುತ್ತದೆ. ಜಾಗತಿಕ ತಾಪಮಾನದ ಏರಿಕೆಯೂ ಆಗಬಹುದು. ಇಲ್ಲವೇ ಬೆಳೆಯುಳಿಕೆಗಳು ಪರಿಸರದಲ್ಲಿ ವೃಥಾ ಉಳಿದುಹೋಗುತ್ತವೆ. ಇಂತಹ ಸಮಸ್ಯೆಗಳಿಂದ ದೂರವಿರಲು ಬಯೋಚಾರ್ ತಯಾರಿಕೆಯು ಕ್ರಮೇಣ ಹೆಚ್ಚಾಗುತ್ತಿದ್ದಂತೆ ಅದು ಪರಿಸರ ಸ್ನೇಹಿಯಾಗುತ್ತದೆ.
ಜೈವಿಕ ಇದ್ದಿಲಿನ ಬಳಕೆಯ ಉಪಯೋಗಗಳು
ಬಯೋಚಾರನ್ನು ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರಗಳ ಜೊತೆಗೆ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಬಳಸಬಹುದು. ಬಯೋಚಾರ್ ಎನ್ನುವುದೊಂದು ಗೊಬ್ಬರವಲ್ಲ. ಆದರೆ, ಅದರ ಬಳಕೆಯಿಂದ ಹಲವು ಅನುಕೂಲಗಳಿವೆ.
ಜೈವಿಕ ಇದ್ದಿಲಿನ ಬಳಕೆಯಿಂದ ಮಣ್ಣಿನ ಸಂರಕ್ಷಣೆಯ ಜೊತೆಗೆ ಮಣ್ಣಿನ ಫಲವತ್ತತೆಯ ಸುಧಾರಣೆಯಾಗುತ್ತದೆ. ಮಣ್ಣು ಸವಕಳಿಯನ್ನು ತಡೆಯಬಹುದು. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಹುದು. ಬಯೋಚಾರಿನಲ್ಲಿ ಶೇ. 50ರಿಂದ 95ರಷ್ಟು ಇಂಗಾಲವಿರುವುದರಿಂದ ಮಣ್ಣಿನಲ್ಲಿ ಇಂಗಾಲಾಂಶದ ಸಂಗ್ರಹಣೆಯಾಗುತ್ತದೆ. ಜೈವಿಕ ಇದ್ದಿಲಿನಿಂದ ಕೂಡಿದ ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಬೇರುಗಳು ಮಣ್ಣಿನಲ್ಲಿ ಸುಲಭವಾಗಿ ಹರಡಿಕೊಂಡು ಬೆಳೆಯಲು ಮತ್ತು ಪೋಷಕಾಂಶಗಳನ್ನು ಹೀರಿಕೊಂಡು ಗಿಡಗಳಿಗೆ ಒದಗಿಸಲು ಅನುಕೂಲಕರ. ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಾಣುಜೀವಿಗಳ ಸಂಖ್ಯೆಯು ವೃದ್ಧಿಯಾಗುತ್ತದೆ. ಪೊಟ್ಯಾಶಿಯಮ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಬೆಳೆಗಳ ಇಳುವರಿ ಜಾಸ್ತಿಯಾಗುತ್ತದೆ. ಬೆಳೆಗಳಿಗೆ ಉತ್ತಮ ಪೋಷಕಾಂಶಗಳ ಪೂರೈಕೆಯಾಗುತ್ತದೆ. ಮಳೆ ನೀರಿನೊಂದಿಗೆ ಪೋಷಕಾಂಶಗಳು ಹರಿದುಹೋಗದಂತೆ ಬಯೋಚಾರಿನ ಕಣಗಳು ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಬೆಳೆಗಳ ಉತ್ಪಾದನೆಯಲ್ಲಿ ಶೇ. 15ರಷ್ಟು ಹೆಚ್ಚಳವಾಗುತ್ತದೆ. ಕೋಲಾರ ಮತ್ತು ತಿಪಟೂರಿನ ರೈತರು ಈಗಾಗಲೇ ಬಯೋಚಾರನ್ನು ಯಶಸ್ವಿಯಾಗಿ ಬಳಸಿದ್ದಾರೆ.

ಬಯೋಚಾರನ್ನು ಪಶುಗಳ ಆಹಾರದಲ್ಲಿ ಸೇರ್ಪಡೆಯ ಅಂಶ (Feed additive)ವಾಗಿ ಬಳಸುವ ಬಗ್ಗೆ ಸಂಶೋಧನೆಗಳಾಗಿವೆ. ಅದರಿಂದ, ಜೀರ್ಣತೆಯ ವೃದ್ಧಿ, ಉತ್ತಮವಾಗಿ ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಒಟ್ಟಾರೆ ಉತ್ತಮ ಆರೋಗ್ಯಕ್ಕೆ ಪೂರಕ ಎಂದು ಕಂಡುಕೊಳ್ಳಲಾಗಿದೆ.
ಹಾಗೆಯೇ, ಮಣ್ಣಿನಲ್ಲಿ ಶೇ. 0.33ರಿಂದ 0.5ರಷ್ಟಿರುವ ಸಾವಯವ ಇಂಗಾಲದ ಪ್ರಮಾಣವನ್ನು ಬಯೋಚಾರ್ ಬಳಕೆಯು ಗಣನೀಯವಾಗಿ ಹೆಚ್ಚಿಸುತ್ತದೆ. ಅಂತಹ ಸಾವಯವ ಇಂಗಾಲವು ಮಣ್ಣಿನಲ್ಲಿ ನೂರರಿಂದ ಸಾವಿರ ವರ್ಷಗಳವರೆಗೆ ಉಳಿದುಕೊಳ್ಳುತ್ತದೆ. ಗೊಬ್ಬರವಿಲ್ಲದೆ ಬಯೋಚಾರನ್ನು ಮಾತ್ರ ಯಥೇಚ್ಚವಾಗಿ ಬಳಸಿದರೆ ಗಿಡಗಳು ಒಣಗಿಹೋಗುವ ಸಂಭವವಿರುತ್ತದೆ.

ಕೊನೆಯ ಮಾತು
ದಿಲ್ಲಿಯ ಸುತ್ತಮುತ್ತಲಿನ ರಾಜ್ಯಗಳ ರೈತರು ತಮ್ಮ ಹೊಲ ಗದ್ದೆಗಳಲ್ಲಿನ ಬೆಳೆಯುಳಿಕೆಗಳಿಗೆ ಬೆಂಕಿ ಹಚ್ಚಿ ಸುಡುತ್ತಾರೆ. ಅದರ ಹೊಗೆಯು ವಿಪರೀತವಾದ ವಾಯು ಮಾಲಿನ್ಯವನ್ನುಂಟುಮಾಡುತ್ತದೆ. ದೆಹಲಿ ಮತ್ತಿತರ ನಗರಗಳಲ್ಲಿ ಉಸಿರಾಡುವುದೇ ಕಷ್ಟವಾಗುತ್ತದೆ. ಚಳಿಗಾಲದಲ್ಲಿ ಬೀಳುವ ಮಂಜಿನೊಂದಿಗೆ ಕೂಡಿಕೊಳ್ಳುವ ಹೊಗೆಯು ‘ಹೊಗೆ ಮಂಜು’ (smog) ಆಗಿ ರಸ್ತೆ ಮಾರ್ಗ ಸರಿಯಾಗಿ ಕಾಣಿಸದೆ ವಾಹನ ಚಲಾಯಿಸುವುದು ಕಷ್ಟವಾಗಿ ಹಲವಾರು ಅಪಘಾತಗಳಾಗುತ್ತವೆ. ಅಂತಹ ಸಮಸ್ಯೆಯಿಂದ ಹೊರಬರಲು ಬೆಳೆಯುಳಿಕೆಗಳನ್ನು ಕಡಿಮೆ ಆಮ್ಲಜನಕದ ವಾತಾವರಣದಲ್ಲಿ ಸುಟ್ಟು ಕಡಿಮೆ ಹೊಗೆ ಉಗುಳುವಂತೆ ಮಾಡಿ ಬಯೋಚಾರ್ ಅನ್ನು ತಯಾರಿಸಿಕೊಳ್ಳಬಹುದು. ರೈತರು ಮತ್ತು ಸರ್ಕಾರವು ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಬೇಕಿದೆ.
ರಾಜ್ಯ ಸರ್ಕಾರದ 2026-27ನೇ ಸಾಲಿನ ಮುಂಗಡ ಪತ್ರದಲ್ಲಿ ಕಂಡಿಕೆ 41ರಲ್ಲಿ ‘ವಸುಧಾಮೃತ’ ಎಂಬ ಯೋಜನೆಯನ್ನು ಘೋಷಿಸಲಾಗಿದೆ. ಅದರಂತೆ, “ಮಣ್ಣಿನ ಸಾವಯವ ಇಂಗಾಲ ಹಾಗೂ ಅದರ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ದತಿಗಳನ್ನು ಉತ್ತೇಜಿಸಲು ‘ವಸುಧಾಮೃತ’ ಕಾರ್ಯಕ್ರಮವನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿಗೊಳಿಸಲಾಗುವುದು” ಎಂದು ಹೇಳಲಾಗಿದೆ. ಬಯೋಚಾರ್ ಬಳಕೆಯೆಂದರೆ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣವನ್ನು ಹೆಚ್ಚಿಸುವುದಾಗಿದೆ.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ



