ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಮರುಜೇವಣಿಯ ಹಣ್ಣು
ಅಮೃತಸೇವನೆಯ ಮಾಡಿ
ಆಪ್ಯಾನ ಘನವಾಯಿತ್ತು.
ಪರುಷವೇದಿಯ ಸಾಧಿಸಹೋದಡೆ
ದಾರಿದ್ರ್ಯ ಘನವಾಯಿತ್ತು.
ಮರುಜೇವಣಿಯ ಹಣ್ಣ ಮೆದ್ದು ಮರಣವಾಯಿತ್ತ ಕಂಡೆ,
ಎಲ್ಲವನು ಸಾಧಿಸಹೋದರೆ
ಏನೂ ಇಲ್ಲದಂತಾಯಿತ್ತು.
ನಾನು ನಿಜವ ಸಾಧಿಸಿ ಬದುಕಿದೆನು ಗುಹೇಶ್ವರಾ.
ಪದಾರ್ಥ:
ಆಪ್ಯಾನ = ಹಸಿವು, ಬಯಕೆ
ಪರುಷವೇದಿ = ಲೋಹಗಳನ್ನು ಬಂಗಾರ ಮಾಡುವುದು
ಮರುಜೇವಣಿ = ಮರುಹುಟ್ಟು
ವಚನಾರ್ಥ:
ಹಸಿವನ್ನು ಹಿಂಗಿಸಿಕೊಳ್ಳಬೇಕು, ಸಂಪತ್ತನ್ನು ವೃದ್ಧಿಸಿಕೊಳ್ಳಬೇಕು, ಆಯಸ್ಸನ್ನು ಹೆಚ್ಚಿಸಿಕೊಳ್ಳಬೇಕು. ಇವು ಮನುಷ್ಯ ಸಹಜ ಆಸೆಗಳು. ಹಸಿವನ್ನು ಹಿಂಗಿಸಿಕೊಳ್ಳಲು ಹಲವು ಉಪಾಯಗಳು. ದಿನನಿತ್ಯ ಹೊಮ್ಮವ ಹಸಿವನ್ನು ಶಾಶ್ವತವಾಗಿ ತಣಿಸಿಕೊಳ್ಳಲು ಅಮೃತವನ್ನು ಕುಡಿದವರಿದ್ದಾರೆ. ಹಸಿವು ಹೋಯಿತೇ? ಇಲ್ಲ. ಉಣ್ಣುವ ಬಯಕೆ ಇನ್ನೂ ಹೆಚ್ಚಾಯಿತು. ಕಚ್ಚಾ ಲೋಹಗಳನ್ನು ಬಂಗಾರವನ್ನಾಗಿ ಪರಿವರ್ತಿಸಬಲ್ಲ ಪರುಷವೇದಿಯ ವಿದ್ಯೆ ಕಲಿತು ಸಿರಿವಂತರಾಗ ಬಯಸಿದವರಿಗೆ ದಾರಿದ್ರ್ಯ ತಪ್ಪಲಿಲ್ಲ. ಸಾವನ್ನು ಗೆಲ್ಲಬಲ್ಲ ಸಂಜೀವಿನಿಯ ಹಣ್ಣನ್ನು ಸವಿದವರಿದ್ದಾರೆ. ಅವರೆಲ್ಲ ಮರಣ ಹೊಂದಿದರೇ ವಿನಾ ಅಮೃತರಾಗಲಿಲ್ಲ. ಮನುಷ್ಯ ಎಲ್ಲವನ್ನೂ ಸಾಧಿಸಲು ಯತ್ನಿಸಿದ್ದಾನೆ. ಕೊನೆಯಲ್ಲಿ ಏನೂ ಇಲ್ಲದಂತಾಯಿತ್ತು. ನಾನು ಅಂದರೆ ಶರಣ ನಿಜವ ಸಾಧಿಸಿ ಬದುಕಿದನು. ಅಮೃತ ಸೇವನೆಯ ಮಾಡಲಿಲ್ಲ, ಪರುಷವಿದ್ಯೆಯ ಸಾಧಿಸಲಿಲ್ಲ. ಸಂಜೀವಿನಿ ಹಣ್ಣ ತಿನ್ನಲಿಲ್ಲ. ತನ್ನ ತಾ ಅರಿತ. ನಿಜವ ಸಾಧಿಸಿದ. ಅವನ ಹಸಿವು ಹಿಂಗಿತು, ದಾರಿದ್ರ್ಯ ಹೋಯಿತು. ಜನನ ಮರಣಗಳ ಜಂಜಾಟ ಇಲ್ಲವಾಯಿತು. ಶರಣನದು ನಿಜವ ಸಾಧಿಸಿದ ಬದುಕು.
ಪದ ಪ್ರಯೋಗಾರ್ಥ:
ಮರುಜೇವಣಿ. ಮರುಜೀವ ಕೊಡುವುದೆಂದು ನಂಬಲಾದ ಒಂದು ಸಸ್ಯವರ್ಗ. ಈ ಪದವೇ ಸೂಚಿಸುವಂತೆ ಮರಣ ಹೊಂದಿದವರನ್ನೂ ಕೂಡ ಮತ್ತೆ ಬದುಕಿಸುವ ಶಕ್ತಿ ಈ ಸಸ್ಯದ ಹಣ್ಣಿನಲ್ಲಿದೆ. ಅಮೃತರಾಗಬೇಕೆಂದು ಬಯಸಿ ಹಲವಾರು ಜನ ಈ ಸಸ್ಯದ ಹಣ್ಣನ್ನು ಸವಿದಿದ್ದಾರೆ. ಆದರೆ ಪರಿಣಾಮವೇನಾಯಿತು? ಅವರು ಯಾರಾದರೂ ಇಂದು ಬದುಕಿ ಉಳಿದಿದ್ದಾರೆಯೇ? ಇಲ್ಲ. ಅವರೆಲ್ಲ ಮರಣಕ್ಕೆ ಒಳಗಾಗಿ ಹೋದವರೆ! ಮರುಜೇವಣಿಯ ಹಣ್ಣ ಮೆದ್ದು ಚಿರಂಜೀವಿಯಾದವರಿಲ್ಲ. ನಿಜವ ಸಾಧಿಸಿ ಬದುಕಿ ಬಯಲಲ್ಲಿ ಬಯಲಾದ ಶರಣನೇ ಚಿರಂಜೀವಿ. ಈ ಪ್ರಕೃತಿಯಲ್ಲಿ ದೊರೆಯುವ ಹಣ್ಣು ಹಂಪಲುಗಳು ಮನುಷ್ಯನನ್ನು ಆರೋಗ್ಯವಂತನನ್ನಾಗಿಸಬಲ್ಲವೇ ಹೊರತು ಅಮರನನ್ನಾಗಿಸಲಾರವು. ಮರುಜೇವಣಿಯ ಹಣ್ಣು ಒಂದು ಕಾಲ್ಪನಿಕ ವಸ್ತು. ಅಂತಹ ಕಾಲ್ಪನಿಕ ವಸ್ತುವನ್ನು ನೈಜವಾಗಿ ವಚನದಲ್ಲಿ ತಂದು ಪದಪ್ರಯೋಗ ಮಾಡಿರುವುದು ಅನನ್ಯವಾದುದು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.



