ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಕಂಗಳ ಕರುಳ
ಕಂಗಳ ಕರುಳ ಕೊಯ್ದವರ
ಮನದ ತಿರುಳ ಹುರಿದವರ
ಮಾತಿನ ಮೊದಲ ಬಲ್ಲವರ
ಎನಗೊಮ್ಮೆ ತೋರ
ಗುಹೇಶ್ವರ
ವಚನಾರ್ಥ:
ನಾವು ಕಣ್ಣುಗಳಲ್ಲಿ ನೋಡಿದ್ದು ಮನಸ್ಸಿನಲ್ಲಿ ಮನನವಾಗಿ ನಮ್ಮ ಮಾತಿನಲ್ಲಿ ಹೊರಬಂದು ಕ್ರಿಯೆಯಾಗುತ್ತದೆ. ಕರುಳು ಅಂದರೆ ಅಂತರಾಳ. ಅದು ಆಸೆಗಳು ಅಂಕುರಿಸುವ ಆವಾಸ ಸ್ಥಾನ. ಕಂಗಳ ಕರುಳು ಅಂದರೆ ಕಣ್ ದೃಷ್ಟಿಯಿಂದ ಅಂತರಾಳದಲ್ಲಿ ಅವತರಿಸಿದ ಆಸೆಗಳು ಅಂದರ್ಥ. ಕಂಗಳ ಕರುಳ ಕೊಯ್ದವರು ಎಂದರೆ ಕಣ್ ದೃಷ್ಟಿಯಿಂದ ಅಂತರಾಳದಲ್ಲಿ ಜನಿಸುವ ಆಸೆಗಳನ್ನು ಕತ್ತರಿಸಿ ಹಾಕಿದವರು. ಮನುಷ್ಯನ ಮನಸ್ಸು ಎಂಬುದು ಬೇಕು ಬಯಕೆಗಳ ಅಗರ. ಅದೇ ಮನಸ್ಸಿನ ತಿರುಳು. ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು ಬೇಕೆನುತ ಬೊಬ್ಬಿಡುತಲಿಹ ಘಟವನಿದನು ಏಕೆಂದು ರಚಿಸಿದನೋ ಬೊಮ್ಮ ಎಂಬುದು ಕಗ್ಗದ ಪ್ರಶ್ನೆ. ಬೇಕು ಬೇಕು ಎನಿಸುವ ಮನದ ತಿರುಳ ಹುರಿಯಬೇಕು. ಹೇಗೆ ಅಂದರೆ ಈ ಬೇಕು ಜಪ ಸಾಕು ಎನ್ನಿಸುವವರೆಗೆ ಹುರಿಯಬೇಕು. ಮಾತಿಗೆ ಮೊದಲು ಮನದಲ್ಲಿ ಚಿಂತನೆ ಇರುತ್ತದೆ. ಚಿಂತಿಸಿ ಅರಿದು ಆಡುವ ಮಾತೇ ಜ್ಯೋತಿರ್ಲಿಂಗ. ಅಂತಹ ಮಾತಿನ ಮೂಲವನ್ನು ಬಲ್ಲವನು ಶರಣ. ಕಂಗಳ ಕರುಳ ಕೊಯ್ದವನು ಶರಣ. ಮನದ ತಿರುಳ ಹುರಿದವನು ಶರಣ. ಅವನನ್ನು ದರ್ಶಿಸಬೇಕು.
ಪದಪ್ರಯೋಗಾರ್ಥ:
ಕಂಗಳ ಕರುಳ ಕೊಯ್ದವರ. ಇದು ಅನನ್ಯವಾದ ಪದಪುಂಜ. ಮೂರೂ ಪದಗಳು ಕ ಅಕ್ಷರದ ಆಧಾರಿತವಾಗಿವೆ. ಕಣ್ಣುಗಳಿಗೂ ಕರುಳು ಇರುತ್ತದೆ ಎಂಬುದು ಅಲ್ಲಮನ ಅನುಭವದ ಮಾತು. ಕಣ್ಣಿಗೆ ಬಿದ್ದ ವಸ್ತುವಿನ ಬಗ್ಗೆ ಕರುಳಲ್ಲಿ ಆಸೆ ಮೂಡುತ್ತದೆ. ಹಾಗೆ ಅಂಕುರಿಸಿದ ಆಸೆ ದೈಹಿಕ ಚಲನವಲನಗಳಲ್ಲಿ ವ್ಯಕ್ತವಾಗಿ ನಡವಳಿಕೆಗೆ ಕಾರಣವಾಗುತ್ತದೆ. ನೋಟ, ಸ್ಪರ್ಶ, ರುಚಿ, ಶ್ರವಣ, ಘ್ರಾಣ ಎಂಬ ಪಂಚ ಇಂದ್ರಿಯ ಸುಖಗಳಲ್ಲಿ ಪ್ರಮುಖವಾದದ್ದು ನೋಟಸುಖ. ಕಣ್ಣಿನ ನೋಟ ಸುಖದಿಂದಲೇ ಇತರ ಇಂದ್ರಿಯಗಳು ಉದ್ದೀಪನಗೊಳ್ಳುತ್ತವೆ. ಯಾವುದೇ ವಿಷಯಕ್ಕೆ ಆಸೆ ಪಡುವುದು ಅಪರಾಧವಲ್ಲ. ಆದರೆ ಆಸೆ ಅತಿಯಾಗಬಾರದು. ಆಗಾಗ ಆಸೆಗಳು ಎಂಬ ಗಿಡದ ರೆಂಬೆ ಕೊಂಬೆಗಳ ಕೊಯ್ಯುತ್ತಿರಬೇಕು. ಇದನ್ನೇ ಅಲ್ಲಮ ಕಂಗಳ ಕರುಳ ಕೊಯ್ದವುದು ಎಂದದ್ದು. ಅಲ್ಲಮನ ಈ ಚಿಕ್ಕ ವಚನದಲ್ಲಿ ಹನ್ನೊಂದು ಪದಗಳು ನಾಲ್ಕು ಸಾಲುಗಳು ಇದ್ದು ಪ್ರತಿ ಸಾಲು ‘ರ’ ಅಕ್ಷರದಿಂದ ಕೊನೆಗೊಳ್ಳುವ ಪದ ಚಮತ್ಕಾರವಿದೆ. ಅದು ಅಲ್ಲಮನ ಅನನ್ಯತೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.



