ಸಾರಾ ಅಬೂಬಕ್ಕರ್ ಅವರ ಕತೆ | ಯುದ್ಧ

Date:

ಸಾಮಾನ್ಯ ಜನರ ಮೇಲೆ ಯುದ್ಧದ ಯಾವ ರೀತಿ ಪರಿಣಾಮ ಬೀರುತ್ತದೆ; ಅದು ತರುವ ಸಾವು, ನೋವು, ಸಂಕಟಗಳೇನು; ಯುದ್ಧ ಎಷ್ಟು ನಿರರ್ಥಕ ಎನ್ನುವುದನ್ನು ನಮ್ಮದೆಗೆ ದಾಟಿಸುವ ಮನೋಜ್ಞ ಕತೆ... ಈದಿನ ಓದುಗರಿಗಾಗಿ

”ಡಾಕ್ಟರ್! ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗ್ರೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ. ಎಲ್ಲಾದರೂ ಹೇಗಾದರೂ ಇಳಿಯೋಣವೆಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ ಇಲ್ಲವಲ್ಲ?” ವಿಮಾನದ ಪೈಲಟ್ ನುಡಿದನು.

- Advertisement -

”ಇದು ನಮ್ಮ ಪ್ರದೇಶವೇ, ವೈರಿಗಳ ಪ್ರದೇಶವೇ ಎಂದು ಕೂಡಾ ಗೊತ್ತಾಗ್ತಾ ಇಲ್ಲ. ಹೇಗಾದರೂ ನೆಲ ಮುಟ್ಟಿದ್ದರೆ ಸಾಕಾಗಿತ್ತು” ಎನ್ನುತ್ತಾ ರಾಹಿಲ್ ತನ್ನ ಕೈಯಲ್ಲಿದ್ದ ಔಷಧ ಮತ್ತು ತುರ್ತು ಪರಿಸ್ಥಿತಿಗೆ ಬೇಕಾದ ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು ಇನ್ನಷ್ಟು ಭದ್ರವಾಗಿ ಹಿಡಿದುಕೊಂಡನು. ಅಷ್ಟರಲ್ಲಿ ವಿಮಾನ ಭಯಂಕರ ಶಬ್ದದೊಡನೆ ಸ್ಫೋಟಿಸಿ ನೂರಾರು ಹೋಳುಗಳಾಗಿ ಚದುರಿಬಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ನೀರಿನಾಳದಲ್ಲಿ ಎಚ್ಚರಗೊಂಡ ಡಾಕ್ಟರ್ ರಾಹಿಲ್ ಕಷ್ಪಪಟ್ಟು ಮೇಲೆ ಬಂದನು. ಒಂದು ಕಾಲನ್ನು ಅಲುಗಿಸಲಾಗದಿದ್ದರೂ ಹೇಗೋ ಈಜತೊಡಗಿದನು. ತಾನು ತೀರದ ಕಡೆಗೆ ಹೋಗುತ್ತಿದ್ದೇನೆಯೇ ಅಥವಾ ಸಾಗರದ ಕಡೆಗೆ ಹೋಗುತ್ತಿದ್ದೇನೆಯೇ ಗೊತ್ತಾಗುತ್ತಿರಲಿಲ್ಲ. ಸೈನಿಕ ಉಡುಪಿನಲ್ಲಿ ಈಜಲು ಬಹಳ ತೊಂದರೆಯಾಗುತ್ತಿತ್ತು. ಬಹಳ ಹೊತ್ತು ಈಜಿ ಕೈ ಸೋತು ಇನ್ನೇನು ಮುಳುಗುವುದೇ ಎಂದು ಹತಾಶೆಯಿಂದ ಕೊನೆಯ ಬಾರಿ ತಲೆ ಎತ್ತಿದಾಗ ಕಣ್ಣು ಕೋರೈಸುವ ಮಿಂಚೊಂದು ಮಿಂಚಿ ಸಮೀಪದಲ್ಲೇ ತೀರವಿರುವುದನ್ನು ಪರಿಚಯಿಸಿತು. ಕಿವಿಗಡಚಿಕ್ಕುವ ಗುಡುಗೊಂದು ಹಿಂಬಾಲಿಸಿತು.

ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ

ತೀರ ಕಣ್ಣಿಗೆ ಬಿದ್ದೊಡನೆ ರಾಹಿಲನ ದೇಹದಲ್ಲಿ ಹೊಸರಕ್ತ ಸಂಚಾರವಾದಂತಾಗಿ ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಬಲವಾಗಿ ಎರಡು ಕೈಗಳಿಂದಲೂ ನೀರನ್ನು ಹಿಂದಕ್ಕೆ ತಳ್ಳುತ್ತಾ ದಡ ಸೇರಿ ದೀರ್ಘವಾದ ನಿಟ್ಟುಸಿರು ಬಿಟ್ಟನು. ದಡ ಸೇರಿಯಾಯಿತು.  ಆದರೆ ಈ ನೆಲ ಯಾರಿಗೆ ಸೇರಿದ್ದು? ತನ್ನನ್ನು ಹಿಡಿದು ಕೊಲ್ಲುವವರಿಗೋ ಅಥವಾ ತನ್ನನ್ನು ಬದುಕಿಸಿ ರಕ್ಷಣೆ ನೀಡುವವರಿಗೋ?

ಆತನು ಎದ್ದು ನಿಲ್ಲಲು ಪ್ರಯತ್ನಿಸಿದನು. ಉಹೂಂ ಒಂದು ಕಾಲು ಅಸಾಧ್ಯವಾದ ನೋವಿನಿಂದ ತತ್ತರಿಸಿತು. ಆತನು ಅಲ್ಲೇ ಕುಸಿದು ಕುಳಿತನು. ಈವರೆಗೆ ಈಜಿದ್ದೇ ಅದ್ಭುತವೆನ್ನಿಸಿತು. ಮುಂದೇನು? ಮಿಂಚು ಮತ್ತೊಮ್ಮೆ ಮಿಂಚಿತು. ಆ ಬೆಳಕಿನಲ್ಲಿ ಕಣ್ಣಿಗೆ ಬಿತ್ತು ಸಾಮಾನ್ಯವಾದೊಂದು ಒಂಟಿ ಮನೆ.

ಧಾರಾಕಾರವಾಗಿ ಸುರಿಯುತ್ತಿರುವ ಈ ಮಳೆಯಿಂದ ಮೊದಲು ರಕ್ಷಣೆ ಪಡೆಯಬೇಕು. ಮುರಿದುಹೋದ ಕಾಲಿನ ಆರೈಕೆಯಾಗಬೇಕು. ಆತನು ಕತ್ತಲಲ್ಲೇ ತೆವಳತೊಡಗಿದನು. ಒಂದಷ್ಟು ದೂರ ಚಲಿಸಿದ್ದನೋ ಇಲ್ಲವೋ ಮಹಿಳೆಯೊಬ್ಬಳ ಆರ್ತನಾದ ಆ ಮಳೆಯ ಶಬ್ದವನ್ನೂ ಭೇದಿಸಿ ಆತನ ಕಿವಿಯೊಳಗೆ ನುಗ್ಗಿತು. ಆತನು ಬೆಚ್ಚಿದನು. ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ? ಆ ಮನೆಯೊಳಗೆ ಏನು ಸಂಭವಿಸುತ್ತಿದೆ? ತಾನೀಗ ಈ ಕದವನ್ನು ತಟ್ಟಿದರೆ ಪರಿಣಾಮವೇನಾಗಬಹುದು? ಆ ಮನೆಯಿಂದ ಒಂದೇ ಒಂದು ಬೆಳಕಿನ ಕಿರಣವೂ ಹೊರಗಡೆಗೆ ಹಾಯುತ್ತಿರಲಿಲ್ಲ. ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ಬ್ಲಾಕ್ ಔಟ್’ ನಿಯಮ ಪಾಲಿಸಲಾಗುತ್ತಿದೆ. ಇಂತಹ ಈ ಸಮಯದಲ್ಲಿ ಆ
ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ?

ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ

”ಯಾ… ಅಲ್ಲಾ…” ಮಹಿಳೆಯ ಆರ್ತನಾದ ಇನ್ನಷ್ಟು ಸ್ಪಷ್ಟವಾಗಿ ಕೇಳಿಸಿತು. ಈಗ ಮಾತ್ರ ರಾಹಿಲನ ಮುಖದಲ್ಲಿ ಭಯದ ನೆರಳು ಮರೆಯಾಗಿ ಕೊಂಚ ನೆಮ್ಮದಿ ಕಾಣಿಸಿಕೊಂಡಿತು. ಆತನು ಬೇಗ ಬೇಗನೆ ಆ ಮನೆಯತ್ತ ತೆವಳತೊಡಗಿದನು. ತುರ್ತು ಚಿಕಿತ್ಸಾ ಪೆಟ್ಟಿಗೆ ಆತನ ಕೈಯಿಂದ ಯಾವಾಗಲೋ ಜಾರಿ ಬಿದ್ದಿತ್ತು. ಮತ್ತೊಮ್ಮೆ ಮಿಂಚು ಮಿಂಚಿದಾಗ ತಾನು ಆ ಮನೆಯ ತೀರಾ ಸಮೀಪಕ್ಕೆ ಬಂದಿರುವುದು ಆತನಿಗರಿವಾಯಿತು.

ಒಳಗಿನಿಂದ ಮತ್ತೊಮ್ಮೆ ಸುಸ್ಪಷ್ಟವಾದ ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ ಸಾಂತ್ವನವೂ ಕೇಳಿ ಬಂತು. ”ಏನು ಮಾಡಲಿ ಮಗಳೇ? ಈ ಮಳೆಯಲ್ಲಿ ಈ ಕತ್ತಲಲ್ಲಿ ನಾನು ಯಾರನ್ನು ಕರೆಯಲಿ? ಒಮ್ಮೆ ಬೆಳಗಾಗಿದ್ದರೆ ಸಾಕಾಗಿತ್ತು.”

ರಾಹಿಲ್ ತೆವಳುತ್ತಾ ಹೇಗೋ ಮೆಟ್ಟಲು ಹತ್ತಿ ಬಾಗಿಲು ಬಡಿದನು. ”ಅಮ್ಮಾ, ಬಾಗಿಲು ತೆಗಿಯಿರಿ..”

”ಹಾಂ… ಯಾರಪ್ಪಾ ಅದೂ? ಈ ಮಳೆಯಲ್ಲಿ, ಈ ಕತ್ತಲ ಗುಹೆಯಲ್ಲಿ… ಯಾರೂ?” ಎಂದು ಒಳಗಿನಿಂದ ಹೆಂಗಸೊಬ್ಬಳು ಜೋರಾಗಿಯೇ ಕೇಳಿದಳು.

”ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಗಾಯಗೊಂಡಿದ್ದೇನೆ. ಪ್ಲೀಸ್…” ದಯನೀಯವಾಗಿ ಅಂಗಲಾಚಿದನು ರಾಹಿಲ್.

”ಗಾಯ? ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೇ?” ಮುದುಕಿಯೊಬ್ಬಳು ಗೊಣಗಿಕೊಳ್ಳುತ್ತಾ ಬಾಗಿಲು ತೆರೆದಳು.

ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ

ರಾಹಿಲನು ತೆವಳುತ್ತಲೇ ಆತುರದಿಂದ ಮನೆಯೊಳಗೆ ನುಗ್ಗಿ ಬಾಗಿಲಿಕ್ಕಿಕೊಂಡು ಮನೆಯಾಕೆಯನ್ನು ದಿಟ್ಟಿಸಿದನು. ತಲೆಗೂದಲು ಬೆಳ್ಳಗಾದ ಮುದುಕಿ. ಕೈಯಲ್ಲೊಂದು ಚಿಕ್ಕ ದೀಪ. ದೀಪದ ಬೆಳಕು ಹೊರ ಬೀಳದಂತೆ ಒಂದು ಭಾಗಕ್ಕೆ ಕಾಗದವನ್ನು ಅಂಟಿಸಲಾಗಿತ್ತು.

ಮುಖವೆಲ್ಲ ಸುಕ್ಕುಗಟ್ಟಿದ ಮುದುಕಿ ದೀಪವನ್ನು ರಾಹಿಲನ ಸಮೀಪ ತಂದು ಆತನ ಮುಖವನ್ನು ಪರೀಕ್ಷಿಸುವಂತೆ ದಿಟ್ಟಿಸಿದಳು. ”ಯಾರಪ್ಪಾ ನೀನು? ನಮ್ಮ ಕಡೆಯವನು ತಾನೇ?” ಭಯ ಮತ್ತು ಸಂದೇಹದ ಛಾಯೆಯಿತ್ತು ಮುದುಕಿಯ ಮಾತುಗಳಲ್ಲಿ.

ಆತನು ಮುದುಕಿಯ ಕೈಯ ದೀಪದೆಡೆಗೆ ದೃಷ್ಟಿ ಹೊರಳಿಸಿ, ”ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ. ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು” ಎಂದು ಗಂಭೀರವಾಗಿ ನುಡಿದನು.

”ಯಾ ಅಲ್ಲಾ… ಉಮ್ಮಾ… ನನ್ನನ್ನು ರಕ್ಷಿಸಿ. ನಾನಿನ್ನು ತಾಳಲಾರೆ…” ಒಳಗಿಂದ ಮತ್ತೊಮ್ಮೆ ಕೇಳಿತು ಆರ್ತನಾದ.

”ಯಾರಮ್ಮಾ ಅದು? ಏನಾಗಿದೆ?” ತನ್ನ ನೋವನ್ನೂ ಮರೆತು ಕೇಳಿದನು ರಾಹಿಲ್. ”ಏನು ಹೇಳಲಪ್ಪ? ನನ್ನ ಸೊಸೆ ಹೆರಿಗೆಯ ಬೇನೆ ತಿನ್ನುತ್ತಿದ್ದಾಳೆ. ಸಂಜೆಯಿಂದಲೇ ನೋವು ಪ್ರಾರಂಭವಾಗಿದೆ. ಡಾಕ್ಟರನ್ನು ಅಥವಾ ಸೂಲಗಿತ್ತಿಯನ್ನಾದರೂ ಕರೆಯೋಣವೆಂದರೆ ಈ ಬಾಂಬುಗಳು, ಬ್ಲಾಕ್ ಔಟ್. ಯಾರಿಗೆ ಬೇಕಾಗಿದೆ ಈ ಯುದ್ಧ? ನನ್ನ ಹುಡುಗಿಗೊಮ್ಮೆ ಹೆರಿಗೆಯಾದರೆ ಸಾಕಾಗಿತ್ತು.”

”ಅಮ್ಮಾ, ನಾನೋರ್ವ ಡಾಕ್ಟರ್. ನಾನು ಆಕೆಯನ್ನು ಪರೀಕ್ಷಿಸಲೇ?”

ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ

”ಆಂ… ಹೌದಾ?” ಮುದುಕಿಯ ಭಯ, ಸಂದೇಹಗಳೆಲ್ಲ ಒಂದೇ ಬಾರಿಗೆ ನಿವಾರಣೆಯಾದಂತೆ ಕಂಡಿತು ”ಅಲ್ಲಾಹುವೇ ನಿನ್ನನ್ನು ನಮ್ಮ ಬಳಿಗೆ ಕಳಿಸಿದನೆಂದು ತೋರುತ್ತದೆ. ಆದರೆ… ನೀನು ತುಂಬಾ ಬಳಲಿದ್ದಿ, ನೀರಲ್ಲಿ ಒದ್ದೆಯಾಗಿದ್ದಿ. ಇರು ನನ್ನ ಮಗನ ಬಟ್ಟೆ ತಂದು ಕೊಡುವೆ” ಎನ್ನುತ್ತಾ ಒಳಹೋಗಿ ಆತನಿಗೆ ತನ್ನ ಮಗನ ಬಟ್ಟೆಗಳನ್ನು ತಂದಿತ್ತಳು. ಆತನು ಕುಳಿತಲ್ಲೇ ಬಟ್ಟೆ ಬದಲಾಯಿಸುವುದನ್ನು ಕಂಡಳು, ”ಯಾಕೆ? ಎದ್ದು ನಿಲ್ಲಲಾಗುತ್ತಿಲ್ಲವೇ?” ಎಂದು ಕೇಳಿದಳು.

”ಕಾಲಿಗೆ ಸ್ಪಲ್ಪ ಪೆಟ್ಟಾಗಿದೆ. ಅದನ್ನು ಆಮೇಲೆ ನೋಡುವ. ಈಗ ನಿಮ್ಮ ಸೊಸೆಯನ್ನು ತೋರಿಸಿ” ಎಂದನು.

ಮುದುಕಿ ದೀಪ ಹಿಡಿದುಕೊಂಡು ಒಳಗಿನ ಮಲಗುವ ಕೋಣೆಗೆ ಹೋದಳು. ಆತನು ತೆವಳುತ್ತಾ ಕಾಲೆಳೆಯುತ್ತಾ ಮುದುಕಿಯನ್ನು ಹಿಂಬಾಲಿಸಿದನು. ಅಲ್ಲಿನ ಮಂದ ಬೆಳಕಿನಲ್ಲಿ ನರಳುತ್ತಿದ್ದಾಕೆಯನ್ನು ದಿಟ್ಟಿಸಿ, ”ನಾನಾಕೆಯನ್ನು ಪರೀಕ್ಷಿಸುವೆ, ನೀವು ಬಿಸಿ ನೀರು ಸಿದ್ಧಪಡಿಸಿ” ಎಂದು ಮುದುಕಿಯನ್ನು ಕಳುಹಿಸಿ ಮಲಗಿದ್ದಾಕೆಯನ್ನು ಪರೀಕ್ಷಿಸತೊಡಗಿದನು. ಆತನು ಪರೀಕ್ಷಿಸುತ್ತಿದ್ದಂತೆ ನೋವೊಂದು ಅಲೆಯಂತೆ ಬಂದು ಆಕೆ ಕೂಗಿಕೊಳ್ಳುವಂತೆ ಮಾಡಿತು. ಹೊರಗೆ ದೂರದಲ್ಲಿ ವಿಮಾನವೊಂದರ ಹಾರಾಟದ ಶಬ್ದದೊಡನೆ ಬಾಂಬಿನ ಸ್ಫೋಟವೂ ಕೇಳಿಸಿತು.

ಜೀವಿಯೊಂದನ್ನು ಜೀವಸಹಿತ ಹೊರಹಾಕಲು ಈ ಹೆಣ್ಣುಮಗಳು ತನ್ನ ಜೀವವನ್ನೇ ಪಣಕ್ಕಿಟ್ಟಿದ್ದಾಳೆ. ಹೊರಗೆ ಯುದ್ಧದ ಹೆಸರಿನಲ್ಲಿ ಮನುಷ್ಯಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ!

ರಾಹಿಲನು ತಲೆ ಕೊಡವಿಕೊಂಡನು. ಆಕೆಗೆ ಸುಲಭವಾಗಿ ಹೆರಿಗೆಯಾಗುವುದು ಸಾಧ್ಯವಿಲ್ಲೆಂಬುದು ಆತನಿಗೆ ಮನದಟ್ಟಾಯಿತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೆ ಮಾತ್ರ ಆಕೆ ಮತ್ತು ಮಗು ಇಬ್ಬರೂ ಬದುಕುವುದು ಸಾಧ್ಯ. ಅದೂ ಕೂಡಾ ಈ ಹೊತ್ತಿನಲ್ಲಿ ಅಸಾಧ್ಯವೇ. ಬಹಳ ಹೊತ್ತಿನ ಪ್ರಯತ್ನದ ಬಳಿಕ ಆತನು ಮಗುವನ್ನೇನೋ ಹೊರ ತೆಗೆದನು. ಆದರೆ ಅದು ನಿರ್ಜೀವವಾಗಿತ್ತು.

ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ

ಮುದುಕಿ ಮತ್ತು ಸೊಸೆಯ ರೋದನ ಮನೆಯ ಮೂಲೆ ಮೂಲೆಗಳಲ್ಲೂ ಪ್ರತಿಧ್ವನಿಸಿತು. ”ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ? ಈ ಯುದ್ಧವಿಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ? ಈ ಮನುಷ್ಯರಿಗೆ ಎಂತಹ ಬುದ್ಧಿ ಕೊಡುತ್ತೀಯಾ?” ಎಂದು ಮುದುಕಿ ಎದೆ ಬಡಿದುಕೊಂಡು ಅಳುತ್ತಾ ಸೊಸೆಗೆ ಸ್ನಾನ ಮಾಡಿಸಿ ಒಂದೆಡೆ ಮಲಗಿಸಿದಳು. ನಿರ್ಜೀವ ಮಗುವಿಗೂ ಸ್ನಾನ ಮಾಡಿಸಿ ಬಟ್ಟೆ ಸುತ್ತಿದಳು.

ರಾಹಿಲನು ಕೋಣೆಯಿಂದ ಹೊರಬಂದು ತನ್ನ ಕಾಲಿನ ಆರೈಕೆ ಪ್ರಾರಂಭಿಸಿದನು. ಮುದುಕಿಯಿಂದ ಒಂದೆರಡು ಪುಟ್ಟ ಹಲಗೆ ತುಂಡುಗಳನ್ನು ಪಡೆದುಕೊಂಡು ಕಾಲಿನ ಎರಡು ಭಾಗಗಳಲ್ಲಿಟ್ಟು ಬಟ್ಟೆಯಿಂದ ಬಲವಾಗಿ ಬಿಗಿದನು ಎಲುಬು ತುಂಡಾಗಿಲ್ಲವೆನ್ನಿಸಿತು. ಬಳಿಕ, ”ಅಮ್ಮಾ, ನಾನು ಬರುವುದು ಕೊಂಚ ತಡವಾಗಿದ್ದರೂ ನಿಮ್ಮ ಸೊಸೆಯೂ ಉಳಿಯುತ್ತಿರಲಿಲ್ಲ. ಹೇಗೋ ಸೊಸೆಯನ್ನು ಬದುಕಿಸಿದೆ. ಈಗ ನನಗೆ ತುಂಬಾ ಸುಸ್ತು. ಮಲಗಲು ಒಂದಷ್ಟು ಜಾಗ ಕೊಡಿ” ಎಂದನು.

ಮುದುಕಿ ಈಗಲೂ ಸಂದೇಹದಿಂದಲೇ ಆತನನ್ನು ದೃಷ್ಟಿಸಿದಳು. ”ಯಾರೀತ? ತಮ್ಮವನೇ ಅಥವಾ ವೈರಿ ದೇಶದವನೇ?”

”ಟಕ್, ಟಕ್, ಟಕ್” ಪುನಃ ಶಬ್ದ. ಜೊತೆಯಲ್ಲೇ, ”ಯಾರದು, ಒಳಗೆ? ಬಾಗಿಲು ತೆಗೆಯಿರಿ” ಎಂಬ ಅಧಿಕಾರವಾಣಿ.

ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ

ಮುದುಕಿಯ ಸಂದೇಹ ನಿಜವಾಗಿತ್ತು. ಬಂದಿದ್ದಾತ ತಮ್ಮವನಲ್ಲ. ತಮಗೆ, ತಮ್ಮ ದೇಶಕ್ಕೆ ದ್ರೋಹ ಬಗೆಯುವವನು. ಕ್ಷಣಕಾಲ ಆಕೆಯ ಕಣ್ಣುಗಳು ರೋಷದಿಂದ ಕೆರಳಿದವು. ಬಾಗಿಲ ಬಳಿ ಸಮೀಪಿಸುತ್ತಾ ಆಕೆ ಆತನ ಮುಖ ನೋಡಿದಳು.

ಓ… ಈ ಕಣ್ಣುಗಳು ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ? ಅಸಹಾಯಕತೆಯ ಆ ದಯನೀಯ ನೋಟ. ಆತ ”ಬಾಗಿಲು ತೆರೆಯಬೇಡಿ” ಎಂದು ಕೈ ಸನ್ನೆ ಮಾಡಿದನು.

”ಬಾಗಿಲು ತೆಗೆಯಿರಿ!” ಈ ಬಾರಿ ಗರ್ಜನೆಯಾಗಿ ಬಂತು ಹೊರಗಿನ ಧ್ವನಿ. ನಿಶ್ಶಬ್ದವಾಗಿ ರಾಹಿಲನನ್ನು ಸೊಸೆ ಮಲಗಿದ ಕೋಣೆಗೆ ಕಳಿಸಿ ಮಂಚದಡಿಯನ್ನು ತೋರಿಸಿದಳು. ಬಟ್ಟೆ ಸುತ್ತಿದ ನಿರ್ಜೀವ ಶಿಶುವನ್ನು ಬಾಗಿಲ ಬಳಿ ಮಲಗಿಸಿ ಹೊರಬಂದು ಬಾಗಿಲು ತೆರೆದಳು.

ಸೈನಿಕರ ಉಡುಪಿನಲ್ಲಿದ್ದ ನಾಲ್ಕೈದು ಜನರು, ”ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ?” ಎಂದು ಕೇಳುತ್ತಾ ಒಳನುಗ್ಗಿದರು.

”ಇಲ್ಲವಲ್ಲಾ?” ಮುದುಕಿ ನುಡಿದಳು. ”ನಮ್ಮವರೇ ಅಥವಾ ಆ ಕಡೆಯವರೇ?” ಎಂದೂ ಕೇಳಿದಳು. ”ಆ ಕಡೆಯವರು. ನಮ್ಮ ಮೇಲೆ ದಾಳಿ ಮಾಡಲು ಬಂದವರು. ಅಷ್ಟರಲ್ಲಿ ನಾವು ವಿಮಾನವನ್ನು ಹೊಡೆದುರುಳಿಸಿದೆವು” ಎಂದು ಒಬ್ಬನೆಂದಾಗ ಇನ್ನೊಬ್ಬನು, ”ಸಾರ್, ಅದರಲ್ಲಿದ್ದವರು ಬದುಕಿರಲಾರರು. ಈ ನದಿಯಲ್ಲಿ ಬಿದ್ದರೂ ಬದುಕುವ ಸಾಧ್ಯತೆ ಇಲ್ಲ. ನಾವು ಈ ಕತ್ತಲಲ್ಲಿ ವ್ಯರ್ಥ ಪ್ರಯತ್ನ ಮಾಡಬೇಕಷ್ಟೇ?” ಎಂದನು.

ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

”ಆದರೂ ಈ ಮನೆಯಲ್ಲೊಮ್ಮೆ ನೋಡಿ ಬಿಡಿ.” ಅಪ್ಪಣೆ ಕೊಟ್ಟನಾತ. ಉಳಿದವರು ಒಳಹೊಕ್ಕರು. ಮುದುಕಿ ಅಳುತ್ತಾ, ”ಹೂಂ… ನೋಡಿ; ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನೂ ನೋಡಿ! ಈ ಯುದ್ಧ ನನ್ನ ಮೊಮ್ಮಗುವನ್ನೂ ಉಳಿಸಲಿಲ್ಲವಲ್ಲ? ಯಾರಿಗಾಗಿ, ಯಾತಕ್ಕಾಗಿ ಈ ಯುದ್ಧ? ಅದನ್ನಾದರೂ ಹೇಳಿರಲ್ಲ?” ಎನ್ನುತ್ತಾ ಆ ನಿರ್ಜೀವ ಶಿಶುವಿನ ಬಳಿ ಕುಳಿತು ಮತ್ತೊಮ್ಮೆ ಎದೆ ಬಡಿದುಕೊಂಡು ಅಳತೊಡಗಿದಳು.

ಬಂದವರು ಮಗುವಿನ ಮೃತದೇಹವನ್ನು ದಿಟ್ಟಿಸಿದರು. ಕೋಣೆಯಲ್ಲಿ ಹರಡಿದ್ದ ಹಸಿನೆತ್ತರ ವಾಸನೆ ಅವರ ಮೂಗಿಗೆ ಬಡಿಯಿತು. ಬಂದವರು ನಿಶ್ಶಬ್ದವಾಗಿ ಹೊರನಡೆದರು.

ಬಳಿಕ ಆಕೆ ರಾಹಿಲನನ್ನು ಹೊರಗೆ ಕರೆದು ಒಂದು ಕೋಣೆ ತೋರಿಸಿ ”ಈ ರಾತ್ರಿಯನ್ನು ಈ ಕೋಣೆಯಲ್ಲಿ ಕಳೆಯಿರಿ. ನಾಳೆ ಬೇರೇನಾದರೂ ಏರ್ಪಾಟು ಮಾಡುವಾ” ಎಂದಳು.

ಒಂದೆರಡು ದಿನಗಳಲ್ಲಿ ಪರಸ್ಪರರಲ್ಲಿ ವಿಶ್ವಾಸ ಮೂಡಿತು. ಇಬ್ಬರೂ ಪರಸ್ಪರರಲ್ಲಿ ಸುಖ ದುಃಖಗಳನ್ನು ಹಂಚಿಕೊಂಡರು. ಮುದುಕಿಯೇ ಮೊದಲು ತನ್ನ ಕಡತ ಬಿಚ್ಚಿದಳು.

”ನೋಡಪ್ಪಾ, ನಾನು ಈ ಊರಿಗೆ ಬಂದು ಐವತ್ತು ವರ್ಷಗಳಾದರೂ ಆಗಿರಬಹುದು. ಮದುವೆಯಾಗಿ ನವ ವಧುವಾಗಿ ಈ ಊರನ್ನು ಪ್ರವೇಶಿಸಿದೆ. ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೆವು. ಜಮೀನು ಆಸ್ತಿ ನಮಗೆ ಸಾಕಾಗುವಷ್ಟಿತ್ತು. ಈಗಲೂ ಇದೆಯೆನ್ನು. ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ? ಯುದ್ಧವಂತೆ, ಯುದ್ಧ!” ತಿರಸ್ಕಾರದಿಂದ ನುಡಿದಳು ಮುದುಕಿ.

”ಆಗಲೂ ಯುದ್ಧವಾಗಿತ್ತಾ ಅಜ್ಜೀ?” ರಾಹಿಲ್ ಕೇಳಿದನು.

ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

”ಹೂಂ… ಆಗ ಈ ಊರು ಆ ದೇಶದವರ ಕೈಯಲ್ಲಿತ್ತು. ಅವರ ಧರ್ಮ ಬೇರೆ ನಮ್ಮ ಧರ್ಮ ಬೇರೆ ಎಂಬ ಕಾರಣಕ್ಕೆ ಆಗ ಯುದ್ಧ ಮಾಡಿದರು. ಸಾವಿರಗಟ್ಟಲೆಯಲ್ಲಿ ಜನರು ಪ್ರಾಣ ತೆತ್ತ ಬಳಿಕ ಯುದ್ಧ ನಿಂತು ಈ ಊರು ಈ ದೇಶಕ್ಕೆ ಸೇರಿತು. ಊರೇನೋ ಕೈ ಬದಲಾಯಿಸಿತು. ಆದರೇನು? ನಮ್ಮ ಬದುಕಿನಲ್ಲೇನಾದರೂ ವ್ಯತ್ಯಾಸವಾಗಿದೆಯೇ? ನಾವು ಬೆವರಿಳಿಸಿ ದುಡಿದದ್ದನ್ನು ಈ ಜನರು ಹಲವು ಹೆಸರು ಹೇಳಿ, ಹಲವು ಕಾರಣ ನೀಡಿ ದೋಚಿಕೊಂಡು ಹೋಗುತ್ತಾರೆ. ದುಡಿದದ್ದನ್ನೇ ಕೊಂಡು ಹೋದರೆ ಹಾಳಾಗಲಿ ಎಂದು ಸುಮ್ಮನಿರಬಹುದಾಗಿತ್ತು. ಮನೆಯ ಮಕ್ಕಳನ್ನೂ ಯುದ್ಧಕ್ಕೆ ಕರೆದೊಯ್ಯುತ್ತಾರಲ್ಲಾ? ಇವರ ಮನೆ ಹಾಳಾಗ!” ನೆಲಕ್ಕೆ ಕೈ ಬಡಿದು ಶಪಿಸಿದಳು ಮುದುಕಿ.

”ಈಗ ನಿಮ್ಮ ಮಗನೆಲ್ಲಿದ್ದಾನಮ್ಮಾ?” ರಾಹಿಲ್ ಕೇಳಿದನು.

”ಯುದ್ಧಕ್ಕೆ ಹೋಗಿದ್ದಾನೆ! ನನ್ನ ಮಗನಿನ್ನೂ ಚಿಕ್ಕ ಹುಡುಗನಾಗಿದ್ದಾಗ ಯುದ್ಧಕ್ಕೆ ಹೋದ ಅವನ ತಂದೆ ಹಿಂತಿರುಗಲಿಲ್ಲ. ಎದೆ ತುಂಬ ಬೂದಿ ಮುಚ್ಚಿದ ಕೆಂಡ, ಎದೆಯ ಗಾಯ ಇಂದಿಗೂ ಇದೆ, ನೋಡು. ಎಲ್ಲ ದುಃಖ ನುಂಗಿಕೊಂಡು ಮಗನನ್ನು ಸಾಕಿ ಸಲಹಿದೆ. ಮದುವೆಯನ್ನೂ ಮಾಡಿದೆ. ಈಗ ಐದಾರು ವರ್ಷಗಳ ಬಳಿಕ ಸೊಸೆ ಗರ್ಭಿಣಿಯಾದಳು. ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ಮಗನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು. ಅಷ್ಟರಲ್ಲಿ ಬಂತು ಯುದ್ಧ! ಅವನೊಮ್ಮೆ ಹಿಂತಿರುಗಿ ಬಂದಿದ್ದರೆ ಸಾಕಾಗಿತ್ತು. ಈ ವಿಷಯ ತಿಳಿದು ಅವನೆಷ್ಟು ಸಂಕಟ ಪಡುತ್ತಾನೋ…” ಕೊನೆಯ ಮಾತನ್ನು ಹೇಳುವಾಗ ಮುದುಕಿಯ ಕಂಠ ಗದ್ಗದವಾಗಿ ಮುಂದೆ ಮಾತೇ ಹೊರಡಲಿಲ್ಲ.

***

ಸಾರಾ ಅಬೂಬಕ್ಕರ್(1936-2023): ಕೇರಳ ರಾಜ್ಯದ ಕಾಸರಗೋಡು ಸಾರಾ ಅವರ ಹುಟ್ಟೂರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಮತ್ತು ತಾಯಿ ಜೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ ನೆರವೇರಿತು. ಮುಂದೆ ಅವರು ಹೈಸ್ಕೂಲಿನವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಅರೇಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ಆಶಯ ಅವರ ಬಾಲ್ಯದಲ್ಲೇ ಮೂಡಿಬಂದಿತ್ತು. ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷೀರ್‌ ಅವರ ಕಾದಂಬರಿಗಳ ಓದಿನ ಪ್ರಭಾವದಿಂದ ಅವರಲ್ಲಿ ಬರೆಯಬೇಕೆಂಬ ಅಂತರಾಳದ ಒತ್ತಡ ನಿರಂತರವಾಗಿ ಹೊರಹೊಮ್ಮುತ್ತಿತ್ತು. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನದಿಂದಾಗಿ ಎಂ.ಕೆ.ಇಂದಿರಾ ಅವರಂತೆ ನಲವತ್ತು ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು ಬರೆದ ಮೊದಲ ಕಾದಂಬರಿ ಚಂದ್ರಗಿರಿಯ ತೀರದಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಪ್ರಕಟಿತ ಕೃತಿಗಳು: ಚಂದ್ರಗಿರಿ ತೀರದಲ್ಲಿ, ಸಹನಾ, ವಜ್ರಗಳು, ಕದನ ವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ(ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-2), ತಳ ಒಡೆದ ದೋಣಿ, ಪಂಜರ, ಕನ್ನಡ, ಇಳಿಜಾರು, ಕಾಣಿಕೆ(ಕಾದಂಬರಿಗಳು); ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ, ಸುಮಯ್ಯಾ(ಜನಪದ ಆಧರಿಸಿದ ಕಥೆಗಳು), ಗಗನ ಸಖಿ(ಕಥಾ ಸಂಕಲನಗಳು); ಐಷಾರಾಮದ ಆಳದಲ್ಲಿ(ಪ್ರವಾಸ ಸಾಹಿತ್ಯ); ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು(ಬಾನುಲಿ ನಾಟಕಗಳು). ಚಂದ್ರಗಿರಿ ತೀರದಲ್ಲಿ ಕಾದಂಬರಿ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ.

sara abubakkar1 1 1
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಟೀಲ ಪುಟ್ಟಪ್ಪ ಅವರ ಕತೆ | ಸಾವಿನ ಮೇಜವಾನಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಎಚ್. ನಾಗವೇಣಿ ಅವರ ಕತೆ | ಧಣಿಗಳ ಬೆಳ್ಳಿಲೋಟ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...