ದಿಲ್ಲಿ ಮಾತು | ಧನಿಕರು ಬೆಚ್ಚಗೆ ನಿದ್ರಿಸುವರು… ಇರುಳೆಲ್ಲ ಥರಗುಟ್ಟುವುದು ‘ದರಿದ್ರ’ರ ದೆಹಲಿ!

Date:

ನ್ಯಾಯಾಲಯದ ಸ್ಪಷ್ಟ ಸಂದೇಶವೆಂದರೆ- ಸಂಪನ್ಮೂಲಗಳ ಕೊರತೆ ಎನ್ನುವುದು ಮೂಲಭೂತ ಹಕ್ಕುಗಳನ್ನು ನಿರಾಕರಿಸಲು ಕಾರಣವಾಗಬಾರದು. ಸರ್ಕಾರಿ ಹೇಳಿಕೆಗಳ ಹೊರತಾಗಿಯೂ ದೆಹಲಿಯ ನೈಟ್ ಶೆಲ್ಟರ್‌ಗಳ ಸಂಖ್ಯೆ ನಿರಾಶ್ರಿತರ ಪ್ರಮಾಣಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ ಆಶ್ರಯ ಕೇಂದ್ರಗಳು ತುಂಬಿ ತುಳುಕುತ್ತವೆ. ಪರಿಣಾಮವಾಗಿ ಅನೇಕರು ಶೆಲ್ಟರ್‌ಗಳ ಹೊರಗೆ ಚಳಿಯಲ್ಲಿ ಮಲಗಬೇಕಾಗುತ್ತದೆ.

- Advertisement -

ಇತ್ತೀಚೆಗೆ ದೆಹಲಿಯ ಭಾರತ ಮಂಡಪಮ್ (ಪ್ರಗತಿ ಮೈದಾನ್) ನಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಪುಸ್ತಕ ಮೇಳಕ್ಕೆ ಹೊರಟಿದ್ದೆ. ಸಾಮಾನ್ಯವಾಗಿ ನಾನು ಪ್ರಯಾಣದಲ್ಲಿ ಕ್ಯಾಬ್, ಆಟೋ ಡ್ರೈವರುಗಳೊಂದಿಗೆ ವ್ಯವಹಾರಿಕ ಮಾತುಗಳನ್ನಾಡುತ್ತೇನೆ (ಅವರೂ ಮಾತುಗಾರರಾಗಿದ್ದರೆ, ಸಾಮಾಜಿಕ ಕಳಕಳಿಯುಳ್ಳವರಾಗಿದ್ದರೆ). ಬಡವರ ಬವಣೆಗಳು, ಅವರ ಸಮಸ್ಯೆ, ರಾಜಕೀಯ ಚರ್ಚೆ, ಮಾಲಿನ್ಯದ ಕುರಿತು ಇತ್ಯಾದಿ ಹರಟುತ್ತೇನೆ. ಜನಸಾಮಾನ್ಯರ ಅನೇಕ ವಿಷಯಗಳು ಗೊತ್ತಾಗುತ್ತವೆ. ಅವತ್ತೂ ನನ್ನ ಐವತ್ತು ನಿಮಿಷದ ಪ್ರಯಾಣದಲ್ಲಿ ಕ್ಯಾಬ್ ಡ್ರೈವರನೊಂದಿಗೆ ಮಾತಾಡುತ್ತಿದ್ದಾಗ ಮಾಲಿನ್ಯದ ವಿಷಯ ಬಂತು. ಆತ ಹೇಳುತ್ತಿದ್ದ, “ನಾವು ಡ್ರೈವರುಗಳು ಕಾರಿನ ಗ್ಲಾಸ್ ಏರಿಸಿ ಒಳಗಡೆ ಇರ್ತೇವೆ, ಆದರೆ ನಿತ್ಯವೂ  ಬೀದಿಯಲ್ಲಿ ಬದುಕುವವರು, ಬೀದಿ ಬದಿಯ ಕೈಗಾಡಿಯವರು, ತಳ್ಳುಗಾಡಿಯಲ್ಲಿ ತರಕಾರಿ, ಸಮೋಸ, ಬ್ರೆಡ್ ಪಕೋಡ, ಛೊಲೆ ಬಟೂರೆ ಇತ್ಯಾದಿ ತಿಂಡಿತಿನಿಸುಗಳನ್ನು ಮಾರುವವರು, ಕೂಲಿಕಾರ್ಮಿಕರು, ರಿಕ್ಷಾ ಚಾಲಕರು, ಹೀಗೆ ಲಕ್ಷಾಂತರ ಜನರ ಬದುಕು ಬೀದಿಯಲ್ಲಿಯೇ ಇರುತ್ತದೆ. ಅಂಥವರು ಹವಾಮಾಲಿನ್ಯವೆಂದು ಮನೆಯಲ್ಲಿ ಕುಳಿತರೆ ಆಗುತ್ತದೆಯೇ? ಹೊಟ್ಟೆಗೆ ಏನು ತಿನ್ನಬೇಕು? ಕೂಲಿನಾಲಿ ಮಾಡಿ ಹೊಟ್ಟೆ ಹೊರುವವರ ಮಕ್ಕಳು ಇಡೀ ದಿನ  ಬೀದಿಯಲ್ಲಿಯೇ ಆಡುತ್ತಿರುತ್ತವೆ ಅವುಗಳಿಗೆ ಏನೂ ಆಗುವುದಿಲ್ಲವೇ? ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ”, ಹೇಗೋ ಬದುಕುತ್ತವೆ ಮೇಡಂ, ಏರ್ ಪ್ಯೂರಿಫೈಯರಿನಲ್ಲಿ ಬದುಕುವ ಮಕ್ಕಳ ಸುಖ ಬಡವರಿಗೆಲ್ಲಿ? ನಸೀಬ್ ಅಪನಾ ಅಪನಾ…” ಎಂದು ನಿಟ್ಟುಸಿರಿಟ್ಟ..

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಏನು ಹೇಳಲಿ ಅವನಿಗೆ? ಮನಸ್ಸು ಮೂಕವಾಯಿತು.

ಚಳಿಗಾಲದಲ್ಲಿ ದಿಲ್ಲಿಯ ಬೀದಿಗಳಲ್ಲಿ ನಮಗೆ ಕಾಣುವ ಇನ್ನೊಂದು ಸಾಮಾನ್ಯ ದೃಶ್ಯವೆಂದರೆ ಫುಟ್ಪಾತು, ಸೇತುವೆ ಕೆಳಗಡೆ, ಮಹಾನಗರದ ಹೃದಯ ಭಾಗವಾದ ಕನಾಟ್ ಪ್ಲೇಸಿರಲಿ, ನಿಜಾಮುದ್ದೀನ್ ದರ್ಗಾ ಇರಲಿ ಎಲ್ಲಿ ನೋಡಿದರೂ ನಮಗೆ ಕಾಣುವುದು ಹರಕು ಪರಕು ಮಲಿನಗೊಂಡ ಸ್ವೆಟರ್ ಶಾಲುಗಳಲ್ಲಿ ಈ ದೇಶದಲ್ಲಿ ಅತ್ಯಂತ ಕಡೆಗಣಿಸಲ್ಪಡುವ ಬೀದಿ ಬದಿಯ ನಿರ್ಗತಿಕರು. ಬಣ್ಣಗೆಟ್ಟ ನಗರದ ದೃಶ್ಯ. ಲುಟಿಯನ್ಸ್  ವಾಸುವಿನ್ಯಾಸದ ಈ ಸುಂದರ ದೇಶದ ರಾಜಧಾನಿಯ ಬೀದಿಗಳಲ್ಲಿ ಓಡಾಡುವ ಮಿರ ಮಿರ  ಮಿರುಗುವ ಕಾರುಗಳು, ದೊಡ್ಡ ದೊಡ್ದ ಗಗನ ಚುಂಬಿ ಕಟ್ಟಡಗಳ ಹೊಳಪಿನಲ್ಲಿ ಬದುಕಲು ಹೆಣಗುತ್ತಿರುವ ಒಂದು ವರ್ಗವಿದೆ. 

ಪಟ್ಟಣದಲ್ಲಿ ದುಡಿದು ಬದುಕುವ ಆಸೆಯಿಂದ ಹಳ್ಳಿಗಳಿಂದ ಬರುವ ಬಹುಸಂಖ್ಯಾತ ವಲಸಿಗರು. ತಮ್ಮ ಚಿಕಿತ್ಸೆಗಾಗಿ ದೂರ ದೂರದ ಊರುಗಳಿಂದ ಬಂದ  ರೋಗಿಗಳು ಆಸ್ಪೆತ್ರೆಯಲ್ಲಿ ಪ್ರವೇಶ ಸಿಗದೇ ದೆಹಲಿಯ ಎಲುಬು ಸೀಳುವ ಕಡುಚಳಿಯಲ್ಲಿ  ನಡಗುತ್ತಾ ಹತ್ತಿರದ ಸಬ್ ವೇ / ಅಂಡರ್ ಪಾಸ್ ನಲ್ಲಿ ವಾಸಿಸುತ್ತಾ ತಮ್ಮ ಸರತಿಗಾಗಿ ಕಾಯುತ್ತಿರುವವರು. ಬಯಲೇ ಬದುಕಾಗಿರುವ ಭಿಕ್ಷುಕರು, ತಾವು ನಿಂತ ಜಾಗದಲ್ಲಿಯೇ ಒಲೆಹೂಡಿ ರೊಟ್ಟಿ ಬೇಯಿಸುತ್ತಿರುವ ಮಹಿಳೆಯರು,  ದಾರಿಹೋಕರನ್ನು, ನಿಂತು ಏನಾದರೂ ತಿನ್ನುತ್ತಿರುವವರನ್ನು ಸುತ್ತುವರಿದು ಕಾಡುವ ಕೊಡಿ ಎಂದು ಪೀಡಿಸುವ ಮಕ್ಕಳು.

chandni chowk indien

ಅವಕಾಶ ನೋಡಿ ಕಳವು ಮಾಡುವ ಜೇಬುಗಳ್ಳರು, ಕುಡುಕರು, ಕುನ್ನಿಗಳು. ನಗರದ ಟ್ರ್ಯಾಫಿಕ್ಕಿನ ಪರಿವೆಯಿಲ್ಲದೇ ಬೀದಿಬದಿ ಸಣ್ಣ ಬೋಗುಣಿ ಅಥವಾ ಬಕೆಟ್ ಇಟ್ಟುಕೊಂಡು ಮೈತೊಳೆದುಕೊಳ್ಳುತ್ತಿರುವವರು, ಜಗಳಾಡುತ್ತಿರುವವರು, ಗ್ರಾಹಕರಿಗಾಗಿ ಕಾಯುತ್ತಿರುವವರು ಹೀಗೇ ಈ ಥಳ ಥಳಿಸುವ ನಗರದ ಇನ್ನೊಂದು ಕರಾಳ ನೋಟ ನಿಮ್ಮನ್ನು ಇರಿಯುತ್ತಿರುತ್ತದೆ.  ಒಂದೊಂದು ದೊಡ್ಡ ಪಟ್ಟಣಗಳಲ್ಲಿ ನೂರಾರು ಹಳ್ಳಿಗಳು ಅಡಗಿವೆ. ದಿಲ್ಲಿಯೂ ಇದಕ್ಕೆ ಹೊರತಲ್ಲ. ಒಂದೊಂದು ಪಾಶ್ ಕಾಲೋನಿಯ ಸುತ್ತ ಹತ್ತಾರು ಸ್ಲಂ ಏರಿಯಾಗಳು.                       

ರಾತ್ರಿ ಹನ್ನೆರಡು ಗಂಟೆಯ ನಂತರ ದೆಹಲಿಯ ಬೀದಿಗಳು ಖಾಲಿಯಾಗುತ್ತವೆ ಎಂದು ನಾವು ಭಾವಿಸುತ್ತೇವೆ. ಬೆಚ್ಚಗಿನ ಕಂಬಳಿ ಹೊದ್ದು ನಾವು ನಿದ್ರಿಸುವಾಗ ದೆಹಲಿಯ ಇನ್ನೊಂದು ನಗರ ಎದ್ದು ಕಾಣುತ್ತದೆ. ಫುಟ್‌ಪಾತ್‌ಗಳ ಮೇಲೆ ಹಾಸಿದ ಹಳೆಯ ಚೀಲಗಳು, ಆಸ್ಪತ್ರೆಗಳ ಹೊರಗಡೆ ಮಲಗಿರುವ ಕುಟುಂಬಗಳು, ಫ್ಲೈಓವರ್‌ಗಳ ಕೆಳಗೆ ಒಟ್ಟುಗೂಡಿರುವ ದಿನಗೂಲಿ ಕಾರ್ಮಿಕರು. ಬೀದಿ ಬದಿ ಬದುಕುವವರು ದೆಹಲಿಗೆ ಅಪವಾದವಲ್ಲ; ಅವರು ಈ ನಗರದ ಅನಿವಾರ್ಯ ಭಾಗ.

“ ಕುಛ್ ಲೋಗ್ ಠಂಡ್ ಸೇ ನಹಿ , ಹಮಾರಿ ಬೇರುಖಿ ಸೇ ಮರತೇ ಹೈ ಎನ್ನುತ್ತಾರೆ ಕವಿ ಶಾಯರ್ ಗುಲ್ಜಾರ್. “ಕೆಲವರು ಚಳಿಯಿಂದ ಅಲ್ಲ ನಮ್ಮ ನಿರ್ಲಕ್ಷ್ಯದಿಂದ ಸಾಯುತ್ತಾರೆ” ಎಂಬುದು ಸಾವಿರ ಪಾಲು ಸತ್ಯವಾದ ಮಾತು. 

ಚಳಿಗಾಲದ ಸಂದರ್ಭದಲ್ಲಿ ಬೀದಿ ಬದಿಯ ಜೀವನ ನಿಜಕ್ಕೂ ದುಸ್ತರವಾಗುತ್ತದೆ. ಚಳಿಗೆ ಸಾಯುವವರ ಸಂಖ್ಯೆ ಏರುತ್ತದೆ. ಸರಕಾರಕ್ಕೂ ಇದೊಂದು ಚಾಲೆಂಜ್. ಕಡು ಚಳಿ, ಭಾರೀ ಬಿಸಿಲು ಹಾಗೂ ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಅನಿಶ್ಚಿತತೆಗಳು ನಿರಾಶ್ರಿತರ ಬದುಕನ್ನು ಇನ್ನಷ್ಟು ಅಪಾಯಕ್ಕೆ ಒಳಪಡಿಸುತ್ತಿವೆ. ದಿನಗೂಲಿ ಕಾರ್ಮಿಕರು, ವಲಸಿಗರು, ಬೀದಿಬದಿ ವ್ಯಾಪಾರಿಗಳು, ವೃದ್ಧರು, ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಬಂಧಿಕರು ಬಹುಪಾಲು ತೆರೆದ ಆಕಾಶದ ಕೆಳಗೆ ನಿದ್ರಿಸಬೇಕಾಗುತ್ತದೆ. ತಾತ್ಕಾಲಿಕವಾಗಿ ನಿರ್ಮಿಸಿದ ನೈಟ್ ಶೆಲ್ಟರ್‌ಗಳು (ರಾತ್ರಿ ಆಶ್ರಯ ಕೇಂದ್ರಗಳು) ನಿರಾಶ್ರಿತರಿಗೆ ಸುರಕ್ಷತೆ ಮತ್ತು ರಕ್ಷಣೆಯ ಪ್ರಮುಖ ಆಸರೆಯಾಗಿವೆ. ಆದರೆ, ರಾಜ್ಯದ ಭರವಸೆ ಮತ್ತು ಈ ಆಶ್ರಯ ಕೇಂದ್ರಗಳ ನೆಲದ ವಾಸ್ತವಗಳ ನಡುವೆ ದೊಡ್ಡ ಅಂತರವಿರುವುದು ಸ್ಪಷ್ಟವಾಗುತ್ತದೆ.

ಭಾರತದ ಸುಪ್ರೀಂ ಕೋರ್ಟ್ Article 21 ಅಡಿಯಲ್ಲಿ ‘ಆಶ್ರಯದ ಹಕ್ಕು’ ಜೀವನ ಹಕ್ಕಿನ ಅವಿಭಾಜ್ಯ ಅಂಗವೆಂದು ಹಲವು ಬಾರಿ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲೇ ದೆಹಲಿಯಲ್ಲಿ ದೆಹಲಿ ಅರ್ಬನ್ ಶೆಲ್ಟರ್ ಇಂಪ್ರೂವ್‌ಮೆಂಟ್ ಬೋರ್ಡ್ (DUSIB) ಮೂಲಕ ನೈಟ್ ಶೆಲ್ಟರ್‌ಗಳ ಜಾಲವನ್ನು ವಿಸ್ತರಿಸಲಾಗಿದೆ.

ಇತ್ತೀಚೆಗೆ ದೆಹಲಿಯ ನೈಟ್ ಶೆಲ್ಟರ್ ಕುರಿತು ನಡೆದ ವ್ಯಾಪಕ ಚರ್ಚೆಯಲ್ಲಿ ಆಸ್ಪತ್ರೆಗಳ ಸುತ್ತಲಿನ ಬೀದಿ ಬದುಕು ಪ್ರಮುಖವಾಗಿತ್ತು. ಪ್ರತಿಷ್ಠಿತ AIIMS, Safdarjung, RML, Lady Hardinge ಮುಂತಾದ ಆಸ್ಪತ್ರೆಗಳ ಬಳಿ ಪ್ರತಿದಿನ ನೂರಾರು ಜನರು ನೆಲದ ಮೇಲೆ ಮಲಗಿರುತ್ತಾರೆ. ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಬಂಧಿಕರು, ದಿನಗೂಲಿ ಕಾರ್ಮಿಕರು, ಮತ್ತು ದೂರದ ಊರುಗಳಿಂದ ಬಂದ ಕುಟುಂಬಗಳು ಇಲ್ಲಿ ತಂಗುತ್ತಾರೆ.

Street Foods of Chandni Chowk

ಈ ಪರಿಸ್ಥಿತಿಯೇ 2026ರ ಜನವರಿಯಲ್ಲಿ ದೆಹಲಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ (suo motu) ಪ್ರಕರಣ ದಾಖಲಿಸಲು ಕಾರಣವಾಯಿತು. ಚಳಿಗಾಲದ ತೀವ್ರತೆಯಲ್ಲಿ ಜನರು ಆಸ್ಪತ್ರೆಗಳ ಹೊರಗಡೆ ಮಲಗುತ್ತಿರುವುದು “ಜೀವನ ಹಕ್ಕಿನ ಉಲ್ಲಂಘನೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ದೆಹಲಿಯ ಹೈಕೋರ್ಟ್ ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ:

ಆಸ್ಪತ್ರೆಗಳ ಸಮೀಪ ತಕ್ಷಣ ತಾತ್ಕಾಲಿಕ ನೈಟ್ ಶೆಲ್ಟರ್‌ಗಳನ್ನು ಸ್ಥಾಪಿಸಬೇಕು.

ಮೆಟ್ರೋ ಸಬ್‌ವೇಗಳು, ಪ್ಯಾಂಡಲ್‌ಗಳು, ಖಾಲಿ ಸರ್ಕಾರಿ ಜಾಗಗಳನ್ನು ಬಳಸಬೇಕು.

DUSIB ಗೆ MCD, DDA, NDMC, DMRC, ಪೊಲೀಸ್ ಇಲಾಖೆಗಳ ಸಂಪೂರ್ಣ ಸಹಕಾರ ಇರಬೇಕು.

ಶೆಲ್ಟರ್‌ಗಳ ಸಂಖ್ಯೆ, ಸಾಮರ್ಥ್ಯ ಮತ್ತು ಸೌಲಭ್ಯಗಳ ಬಗ್ಗೆ ಪಾರದರ್ಶಕ ವರದಿ ಸಲ್ಲಿಸಬೇಕು.

ನ್ಯಾಯಾಲಯದ ಸ್ಪಷ್ಟ ಸಂದೇಶವೆಂದರೆ- ಸಂಪನ್ಮೂಲಗಳ ಕೊರತೆ ಎನ್ನುವುದು ಮೂಲಭೂತ ಹಕ್ಕುಗಳನ್ನು ನಿರಾಕರಿಸಲು ಕಾರಣವಾಗಬಾರದು. ಸರ್ಕಾರಿ ಹೇಳಿಕೆಗಳ ಹೊರತಾಗಿಯೂ ದೆಹಲಿಯ ನೈಟ್ ಶೆಲ್ಟರ್‌ಗಳ ಸಂಖ್ಯೆ ನಿರಾಶ್ರಿತರ ಪ್ರಮಾಣಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ ಆಶ್ರಯ ಕೇಂದ್ರಗಳು ತುಂಬಿ ತುಳುಕುತ್ತವೆ. ಪರಿಣಾಮವಾಗಿ ಅನೇಕರು ಶೆಲ್ಟರ್‌ಗಳ ಹೊರಗೆ ಚಳಿಯಲ್ಲಿ ಮಲಗಬೇಕಾಗುತ್ತದೆ. ಪ್ರಮುಖ ಆಸ್ಪತ್ರೆಗಳ ಸುತ್ತ ರೋಗಿಗಳು ಮತ್ತು ಅವರ ಪರಿಚಾರಕರು ಪಾದಚಾರಿ ಮಾರ್ಗಗಳಲ್ಲಿ ಮಲಗುತ್ತಿರುವ ದೃಶ್ಯಗಳು ವ್ಯವಸ್ಥೆಯ ವೈಫಲ್ಯವನ್ನು ಸ್ಪಷ್ಟಪಡಿಸುತ್ತವೆ.

ದೆಹಲಿಯ ನೈಟ್ ಶೆಲ್ಟರ್‌ಗಳ ನಿರ್ವಹಣೆಯನ್ನು ದೆಹಲಿ ಅರ್ಬನ್ ಶೆಲ್ಟರ್ ಇಂಪ್ರೂವ್‌ಮೆಂಟ್ ಬೋರ್ಡ್ (DUSIB) ನೋಡಿಕೊಳ್ಳುತ್ತದೆ. ಸರ್ಕಾರಿ ದಾಖಲೆಗಳ ಪ್ರಕಾರ, ದೆಹಲಿಯಲ್ಲಿ 300ಕ್ಕೂ ಹೆಚ್ಚು ನೈಟ್ ಶೆಲ್ಟರ್‌ಗಳು ಇದ್ದವು ಎಂದು ಹೇಳಲಾಗುತ್ತದೆ. ಕೆಲ ವರದಿಗಳಲ್ಲಿ ಈ ಸಂಖ್ಯೆ 322ರವರೆಗೆ ಹೋಗುತ್ತದೆ. ಇದರಲ್ಲಿ ಶಾಶ್ವತ ರೇನ್‌ಬಸೇರಾಗಳು, ಸಮುದಾಯ ಭವನಗಳು, ಹಾಗೂ ಚಳಿಗಾಲದಲ್ಲಿ ಸ್ಥಾಪಿಸುವ ತಾತ್ಕಾಲಿಕ ಟೆಂಟ್ ಗಳು ಸೇರಿವೆ.

ಆದರೆ ಬೀದಿಯಲ್ಲಿ ಮಲಗಿರುವವರು ಹೇಳುವ ವಾಸ್ತವ ಬೇರೆ. “ಶೆಲ್ಟರ್‌ಗಳೇನೋ ಇವೆ, ಆದರೆ ಜಾಗ ಇಲ್ಲ”, “ತಡವಾಗಿ ಹೋದರೆ ಒಳಗೆ ಬಿಡುವುದಿಲ್ಲ”, ಮೂಲಭೂತ ಸೌಕರ್ಯಗಳಿಲ್ಲ, ಶೌಚಾಲಯಗಳಲ್ಲಿ ನೈರ್ಮಲ್ಯವಿಲ್ಲ,ಕುಡಿಯುವ ನೀರಿನ ಸೌಲಭ್ಯವಿಲ್ಲ, “ಮಹಿಳೆಯರಿಗೆ ಸುರಕ್ಷತೆ ಇಲ್ಲ” ಇವು ಸಾಮಾನ್ಯವಾಗಿ ಕೇಳಿಬರುವ ದೂರುಗಳು. ಮಹಿಳೆಯರು ವಿಶೇಷವಾಗಿ ರಾತ್ರಿ ಸುರಕ್ಷತೆಯ ಕೊರತೆಯನ್ನು ಉಲ್ಲೇಖಿಸುತ್ತಾರೆ. ಇದರಿಂದ ಅನೇಕರು “ಶೆಲ್ಟರ್‌‍ಗಿಂತ ಬೀದಿಯೇ ಸುರಕ್ಷಿತ” ಎಂದು ಬೀದಿಯನ್ನೇ ಆಶ್ರಯಿಸುತ್ತಾರೆ. ಇದು ವ್ಯವಸ್ಥೆಯ ಗಂಭೀರ ವೈಫಲ್ಯವನ್ನು ಸೂಚಿಸುತ್ತದೆ. ಅರ್ಥಾತ್  ಸಮಸ್ಯೆ ಕೇವಲ ಶೆಲ್ಟರ್‌ಗಳ ಸಂಖ್ಯೆಯಲ್ಲ, ಅವುಗಳ ಲಭ್ಯತೆ, ಸುರಕ್ಷತೆ  ಮತ್ತು ಗುಣಮಟ್ಟದಲ್ಲೂ ಇದೆ.

ಸರ್ಕಾರದ ಪ್ರಕಾರ, ನೈಟ್ ಶೆಲ್ಟರ್‌ಗಳಲ್ಲಿ ಒಟ್ಟಾರೆ ಸುಮಾರು 19,000–20,000 ಹಾಸಿಗೆಗಳು ಲಭ್ಯವಿವೆ. ಆದರೆ ದೆಹಲಿಯ ನಿರಾಶ್ರಿತರ ಸಂಖ್ಯೆಯ ಅಂದಾಜು ಲಕ್ಷಾಂತರದಲ್ಲಿದೆ. ಚಳಿಗಾಲದ ಸಮಯದಲ್ಲಿ ಈ ಅಂತರ ಇನ್ನಷ್ಟು ಹೆಚ್ಚಾಗುತ್ತದೆ. ಅನೇಕ ಬೀದಿ ಬದಿ ಬದುಕುವವರು ಹೇಳುವಂತೆ, ಶೆಲ್ಟರ್‌ಗಳು ಸಂಜೆ ವೇಳೆಗೆ ತುಂಬಿ ಹೋಗುತ್ತವೆ. ಕೆಲಸ ಮುಗಿಸಿ ತಡವಾಗಿ ಬರುವ ಕಾರ್ಮಿಕರಿಗೆ ಒಳಗೆ ಹೋಗುವ ಅವಕಾಶ ಸಿಗುವುದಿಲ್ಲ. ಹೀಗಾಗಿ ಅವರು ಮತ್ತೆ ಫುಟ್‌ಪಾತ್, ಬಸ್ ನಿಲ್ದಾಣ, ಅಥವಾ ಫ್ಲೈಓವರ್‌ಗಳ ಕೆಳಗೆ ಹಿಂದಿರುಗುತ್ತಾರೆ. ಕೆಲವಡೆ ಶೆಲ್ಟರ್‌ಗಳು ಕೇವಲ ಸಂಖ್ಯೆಯ ತೋರಿಕೆಯಾಗಿ ಉಳಿದಿವೆ.

ನೈಟ್ ಶೆಲ್ಟರ್‌ಗಳ ನಿರ್ವಹಣೆಯಲ್ಲಿ ಆಡಳಿತಾತ್ಮಕ ನಿರ್ಲಕ್ಷ್ಯವೂ ಪ್ರಮುಖ ಪಾತ್ರ ವಹಿಸುತ್ತದೆ. ಬಜೆಟ್ ಇದ್ದರೂ ಅದನ್ನು ಸಮರ್ಪಕವಾಗಿ ಬಳಸದಿರುವುದು, ಖಾಸಗಿ ಸಂಸ್ಥೆಗಳಿಗೆ ನಿರ್ವಹಣೆಯನ್ನು ಒಪ್ಪಿಸಿ ಮೇಲ್ವಿಚಾರಣೆಯ ಕೊರತೆ, ಮತ್ತು ದೂರುಗಳಿಗೆ ಸ್ಪಂದಿಸದ ಧೋರಣೆಗಳು ಈ ಸಮಸ್ಯೆಯನ್ನು ಗಂಭೀರಗೊಳಿಸುತ್ತವೆ. ನಿರಾಶ್ರಿತರನ್ನು ನಾಗರಿಕರೆಂದು ಕಾಣದೆ, ‘ತಾತ್ಕಾಲಿಕ ಸಮಸ್ಯೆ’ ಎಂದು ನಿರ್ಲಕ್ಷಿಸುವ ಮನೋಭಾವವೂ ಇಲ್ಲಿ ಗೋಚರಿಸುತ್ತದೆ.

ನೈಟ್ ಶೆಲ್ಟರ್‌ಗಳ ಪ್ರಶ್ನೆ ಕೇವಲ ಜನ ಕಲ್ಯಾಣ ಯೋಜನೆಯಲ್ಲ; ಇದು ಮಾನವ ಗೌರವದ ಪ್ರಶ್ನೆಯಾಗಿದೆ. ಸುರಕ್ಷಿತವಾಗಿ ನಿದ್ರೆ ಮಾಡುವ ಹಕ್ಕು, ಸ್ವಚ್ಛತೆ, ಗೌಪ್ಯತೆ ಮತ್ತು ಭದ್ರತೆ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳು. ನಿರಾಶ್ರಿತರಿಗೆ ಆಶ್ರಯ ಒದಗಿಸುವುದು ದಾನವಲ್ಲ; ಅದು ರಾಜ್ಯದ ಸಂವಿಧಾನಾತ್ಮಕ ಕರ್ತವ್ಯ. ನಗರ ಅಭಿವೃದ್ಧಿಯ ಅರ್ಥ ಕೇವಲ ಫ್ಲೈಓವರ್‌ಗಳು ಮತ್ತು ಸ್ಮಾರ್ಟ್ ಸಿಟಿಗಳಲ್ಲ; ಅತಿ ದುರ್ಬಲರಿಗೂ ಮಾನವೀಯ ಬದುಕು ದೊರಕಿಸುವುದರಲ್ಲಿದೆ ನಮ್ಮ ನಿಜವಾದ ವಿಕಾಸ.

“ಠಂಡ್ ಇತನಿ ಹೈ ಕಿ ಜಿಸ್ಮ್ ಜಮನೇ ಲಗೆ ಹೈ! ಔರ್ ಶಹರ್ ಕೆಹತಾ ಹೈ ಸಬ್ ಇಂತಜಾಮ್ ಪೂರೆ ಹೈ !” ಚಳಿ ಎಷ್ಟಿದೆಯೆಂದರೆ ದೇಹ  ಹಿಮಗಟ್ಟುತ್ತಿದೆ, ನಗರ ಹೇಳುತ್ತದೆ ಎಲ್ಲ ವ್ಯವಸ್ಥೆಯೂ ಆಗಿದೆ ಎಂದು”  ನವಾಜ್ ದೇವಬಂದಿ ಅವರ ಈ ಸಾಲು ವರ್ತಮಾನದ ಕಟುಸತ್ಯ. 

ಇತ್ತೀಚಿನ ಹೈಕೋರ್ಟ್ ಆದೇಶಗಳು ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿವೆ. ಈಗ ಪ್ರಶ್ನೆ ಒಂದೇ, ಈ ಎಚ್ಚರಿಕೆ ಕೇವಲ ದಾಖಲೆಗಳಲ್ಲಿ ಉಳಿಯುತ್ತದೆಯೇ ಅಥವಾ ಬೀದಿಯಲ್ಲಿ ಮಲಗಿರುವವರ ಬದುಕಿನಲ್ಲಿ ನಿಜವಾದ ಬದಲಾವಣೆ ತರುತ್ತದೆಯೋ ಎಂದು ಕಾದು ನೋಡಬೇಕು.

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅವಳ ಕಣ್ಣೋಟ | ಮಿಮಿ-ತಾಯ್ತನದ ನಡುವೆ ಮರೆಯಾದ ಕನಸು

ಮಹಿಳೆಯರ ಬದುಕಿನಲ್ಲಿ ಮದುವೆ, ತಾಯ್ತನ ಇವೆಲ್ಲವೂ ಸಹಜವಾದ ಆಯ್ಕೆಗಳೇ. ಆದರೆ ಅವಳ...

ಕೃಷಿರಂಗ | ಬರ ಪೀಡಿತ ಜಿಲ್ಲೆಗಳಿಗೆ ವರದಾನ- ಸಮಗ್ರ ಕೃಷಿ

ಸಮಗ್ರ ಕೃಷಿಯನ್ನು ಅರ್ಥಮಾಡಿಕೊಳ್ಳುವುದು ಕಠಿಣವಲ್ಲ. ಅದು ಸರಳವಾದ ಕ್ರಮ. ಸುಲಭವಾಗಿ ಪಾಲಿಸಬಹುದಾದ...

ದಿಲ್ಲಿ ಮಾತು | ಬೆಳಕಿನ ಬೆನ್ನೇರಿ ಹೋದ ಕತ್ತಲು, ಮತ್ತೆ ಮರಳದಂತೆ ಮುಚ್ಚಿದ ಕಬ್ಬಿಣದ ಬಾಗಿಲುಗಳು…

2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕಳೆದ ಆರು ವರ್ಷಗಳಿಂದ ತಿಹಾರ್...

ವಚನ ಕಲ್ಯಾಣ | ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ!

ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು. ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು....