ನುಡಿದರೆ ಗುರುವಾಗಿ ನುಡಿಯಬೇಕು, ನಡೆದರೆ ಪರವಾಗಿ ನಡೆಯಬೇಕು. ಕುಳಿತರೆ ಲಿಂಗವಾಗಿ ಕುಳಿತಿರಬೇಕು, ಇದ್ದರೆ ಜಂಗಮವಾಗಿ ಇರಬೇಕು. ಈ ನಾಲ್ಕರ ಹೊಂದಿಗೆಯನರಿಯದವರು ಎಷ್ಟು ದಿನವಿದ್ದರೂ ಫಲವೇನು ಹೇಳಾ, ಬಸವಪ್ರಿಯ ಕೂಡಲ ಚೆನ್ನಬಸವಣ್ಣಾ?
12ನೇ ಶತಮಾನದ ಸಾಮಾಜಿಕ ಬದಲಾವಣೆಯ ಹರಿಕಾರರಲ್ಲಿ ಶರಣ ಹಡಪದ ಅಪ್ಪಣ್ಣ ಪ್ರಮುಖರು. ಅಪ್ಪಣ್ಣ ಬಸವಣ್ಣನವರ ಆಪ್ತರೆನಿಸಿಕೊಂಡವರು. ಸತ್ಯ, ಶುದ್ಧ, ದಕ್ಷತೆಯಿಂದ ಶರಣ ಚಳವಳಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು. ಬಸವಣ್ಣನವರ ನಿಕಟವರ್ತಿಯಾದ ಅಪ್ಪಣ್ಣ ಶರಣ ಚಳವಳಿ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಜೀವನನಿಷ್ಠೆ, ಕಾಯಕನಿಷ್ಠೆ ಹಡಪದ ಅಪ್ಪಣ್ಣನವರ ವಿಶೇಷವಾಗಿದೆ.
ವಚನಕಾರ್ತಿ ಲಿಂಗಮ್ಮ ಹಡಪದ ಅಪ್ಪಣ್ಣನವರ ಧರ್ಮಪತ್ನಿ. ಅಪ್ಪಣ್ಣನವರ ಗುರು ಚೆನ್ನಬಸವಣ್ಣ. ಹರಳಯ್ಯ-ಮಧುವಯ್ಯನವರ ಪ್ರಸಂಗ ನಡೆದ ಬಳಿಕ ಎಲ್ಲ ಶರಣರು ಕಲ್ಯಾಣ ತೊರೆದು ಎಲ್ಲೆಡೆ ಹೊರಟು ಹೋದರು. ಆಗ ಅಪ್ಪಣ್ಣ ಬಸವಣ್ಣನವರೊಂದಿಗೆ ಕೂಡಲಸಂಗಮಕ್ಕೆ ಹೋದರು ಎಂದು ಸಂಶೋಧಕರ ಅಭಿಪ್ರಾಯವಾಗಿದೆ. ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ವಚನಾಂಕಿತದಲ್ಲಿ ಬರೆದ ಅಪ್ಪಣ್ಣನವರ 249 ವಚನಗಳು ಓದಲು ಲಭ್ಯವಾಗಿದ್ದು, ಅವರ ಪತ್ನಿ ಲಿಂಗಮ್ಮನವರ 114 ವಚನಗಳಿವೆ.
ಈ ಮೇಲಿನ ವಚನವು ಮನುಷ್ಯನ ನಡೆ, ನುಡಿ, ಚಿಂತನೆ ಮತ್ತು ಬದುಕಿನ ಶುದ್ಧತೆಯ ಮಹತ್ವ ಸಾರುತ್ತದೆ. ಮನುಷ್ಯನಿಗೆ ಜೀವನ ಶಾಶ್ವತವಲ್ಲ. ಎಷ್ಟು ದಿನ ಬದುಕಿದರೂ ಒಂದು ದಿನ ಸಾವನ್ನು ಎದುರಿಸಲೇಬೇಕು. ಆದರೆ ಹುಟ್ಟು, ಸಾವಿನ ನಡುವಿನ ಬದುಕು ಹೇಗೆ ನಡೆಸುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವದ ಮೌಲ್ಯವನ್ನು ನಿರ್ಧರಿಸುತ್ತದೆ. ವ್ಯಕ್ತಿಯ ಜ್ಞಾನ, ಸಾಧನೆ, ಚೈತನ್ಯ ಹಾಗೂ ಘನತೆ ಸಮಾಜದಲ್ಲಿ ದೀರ್ಘಕಾಲ ಉಳಿಯಬೇಕಾದರೆ ಆತನ ಬದುಕು ಸಾತ್ವಿಕವಾಗಿರಬೇಕು. ನಡೆ-ನುಡಿಯಲ್ಲಿ ಸಮಚಿತ್ತತೆ ಮತ್ತು ಪ್ರಾಮಾಣಿಕತೆ ಇರಬೇಕು.
ಶರಣರ ದೃಷ್ಟಿಯಲ್ಲಿ ಗುರು ಎಂದರೆ ಕೇವಲ ವ್ಯಕ್ತಿಯಲ್ಲ; ʼಅರಿವೇ ಗುರುʼ ಎಂಬುದು ವಚನಕಾರರ ಪ್ರಮುಖ ನಿಲುವು. ನುಡಿಯು ಸತ್ಯ, ಶುದ್ಧ ಮತ್ತು ಸಮಾಜಕ್ಕೆ ಮಾರ್ಗದರ್ಶನ ನೀಡುವಂತಿರಬೇಕು. ನಡೆದಂತೆಯೇ ನುಡಿಯಬೇಕು. ಮಾತು, ಕೃತಿಯಲ್ಲಿ ಭಿನ್ನವಾಗಿರದೆ ಒಂದೇ ಆಗಿರಬೇಕು. ಅಪ್ಪಣ್ಣ ‘ನುಡಿದಂತೆ ನಡೆಯಬೇಕು, ನಡೆದಂತೆ ನುಡಿಯಬೇಕು’ ಎಂಬ ಜೀವನ ಮೌಲ್ಯವನ್ನು ಪ್ರತಿಪಾದಿಸಿದರು. ಬಸವಣ್ಣನವರು ಕೂಡ ʼನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕುʼ ಎಂದು ಹೇಳುತ್ತಾರೆ.
ಅಪ್ಪಣ್ಣರ ವಚನದಲ್ಲಿ ಗುರು, ಲಿಂಗ ಮತ್ತು ಜಂಗಮ ಎಂಬ ಶರಣ ಧರ್ಮದ ಮೂರು ಪ್ರಮುಖ ಪರಿಕಲ್ಪನೆಗಳೊಂದಿಗೆ ಮನುಷ್ಯನ ನೈತಿಕ ಬದುಕಿನ ಸಂಬಂಧವನ್ನು ವಿವರಿಸಲಾಗಿದೆ. ಲಿಂಗದಂತೆ ಪರಿಶುದ್ಧವಾಗಿ, ಸ್ಥಿರವಾಗಿ ಮತ್ತು ನಿರಾಕಾರ ಸತ್ಯದ ಅರಿವಿನೊಂದಿಗೆ ಬದುಕಬೇಕು. ಜಂಗಮನಂತೆ ಸದಾಚಾರ, ಸನ್ನಡತೆ ಮತ್ತು ಶುದ್ಧವಾದ ನಡೆ-ನುಡಿಯನ್ನು ಹೊಂದಿರಬೇಕು. ಜಂಗಮನಾಗುವುದು ಕೇವಲ ಹೊರಗಿನ ವೇಷದಿಂದ ಸಾಧ್ಯವಲ್ಲ; ತನು, ಮನ, ಭಾವ ಮತ್ತು ಆಚಾರಗಳಲ್ಲಿ ಶುದ್ಧತೆಯನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸುತ್ತಾರೆ.
ಬದುಕು-ಬರಹದಲ್ಲಿ ಸಾಮ್ಯತೆ ಇರಬೇಕು ಎಂಬುದು ಶರಣರ ಪ್ರಮುಖ ಸಂದೇಶವಾಗಿತ್ತು. ತಾವು ನುಡಿದ ಮಾತನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ತೋರಿಸುವುದೇ ನಿಜವಾದ ಶರಣತ್ವ. ಬದ್ಧತೆ, ಪ್ರಾಮಾಣಿಕತೆ, ಸತ್ಯ, ಸದಾಚಾರ ಮತ್ತು ಕಾಯಕನಿಷ್ಠೆ ಮನುಷ್ಯನ ಬದುಕಿನ ಆಧಾರವಾಗಬೇಕು. ತನು-ಮನದ ಪರಿಶುದ್ಧತೆಗಾಗಿ ಶರಣಸಂಗ ಮಾಡುತ್ತಾ ಅನುಭಾವದ ಅರಿವನ್ನು ಬೆಳೆಸಿಕೊಳ್ಳಬೇಕು. ಅಂಬಿಗರ ಚೌಡಯ್ಯನವರು “ಜಂಗಮವೆಂದಡೆ ನಡೆನುಡಿ ಸಿದ್ಧಿಯಾಗಿರಬೇಕು” ಎಂದು ನಡೆ-ನುಡಿ ಕುರಿತು ವಿಶ್ಲೇಷಿಸುತ್ತಾರೆ.
ಮಾನವನ ನುಡಿ ಸಮಾಜಕ್ಕೆ ಸ್ಫೂರ್ತಿ ನೀಡುವಂತಿರಬೇಕು. ಸತ್ಯದ ನಡೆ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಉತ್ತಮ ಆಚಾರ-ವಿಚಾರಗಳು ಬದುಕಿನಲ್ಲಿ ನೆಲೆಗೊಂಡರೆ ನೆಮ್ಮದಿ ದೊರೆಯುತ್ತದೆ. ಇದಕ್ಕೆ ವಿರುದ್ಧವಾಗಿ ಅನ್ಯಾಯ, ಅಹಂಕಾರ, ಅನಾಚಾರ ಮತ್ತು ಮೋಸದ ಬದುಕು ಮನುಷ್ಯನನ್ನು ಅಧಃಪತನದತ್ತ ಕೊಂಡೊಯ್ಯುತ್ತದೆ ಎಂದು ಶರಣರು ಎಚ್ಚರಿಸಿದರು.
ಗುರು-ಲಿಂಗ-ಜಂಗಮದ ತತ್ವದಲ್ಲಿ ನಿಷ್ಠೆಯಿಲ್ಲದೆ, ಕೇವಲ ಮನಸ್ಸಿಗೆ ಬಂದಂತೆ ಬದುಕುವುದರಿಂದ ಜೀವನಕ್ಕೆ ಯಾವುದೇ ಸಾರ್ಥಕತೆ ಸಿಗುವುದಿಲ್ಲ. ಮನುಷ್ಯ ಎಷ್ಟು ವರ್ಷ ಬದುಕಿದ್ದಾನೆ ಎಂಬುದಕ್ಕಿಂತ ಹೇಗೆ ಬದುಕಿದ್ದಾನೆ ಎಂಬುದೇ ಮುಖ್ಯ. ಜೀವನದ ಉದ್ದಕ್ಕಿಂತ ಅದರ ಗುಣಮಟ್ಟ ಮುಖ್ಯ ಎಂಬ ಸತ್ಯವನ್ನು ಅಪ್ಪಣ್ಣರ ವಚನ ನಮಗೆ ತಿಳಿಸುತ್ತದೆ. ಅಪ್ಪಣ್ಣನವರ ಕೆಲ ವಚನಗಳು ದೀರ್ಘವಾಗಿಯೂ ಇದ್ದರೂ ಸರಳತೆ, ಸಹಜತೆ ಹಾಗೂ ಕಥನಶೈಲಿಯಲ್ಲಿ ಇವೆ. ಇವರ ವಚನಗಳು ಗುರು, ಲಿಂಗ, ಜಂಗಮ ಕುರಿತಾಗಿ ಹೆಚ್ಚಿರುವುದು ಕಾಣುತ್ತೇವೆ.
ಶರಣರ ಬದುಕು ಕೇವಲ ಧಾರ್ಮಿಕ ಬದುಕಾಗಿರಲಿಲ್ಲ; ಅದು ಹೋರಾಟದ ಬದುಕಾಗಿತ್ತು. ಸಮಾನತೆ ಅವರ ನಡೆಯಾಗಿತ್ತು. ವೈಚಾರಿಕ ಸತ್ಯವನ್ನು ನುಡಿಯುವುದು ಅವರ ನಿಲುವಾಗಿತ್ತು. ಬದುಕು ಮತ್ತು ಬರಹವನ್ನು ಒಂದಾಗಿಸಿಕೊಂಡು ನಿಷ್ಠೆಯಿಂದ ಕಾಯಕ ಮಾಡಿದ ಬಸವಾದಿ ಶರಣರ ಜೀವನ ಸಮಾಜಕ್ಕೆ ಆದರ್ಶವಾಗಿದೆ. ತಮ್ಮ ಬದುಕಿನಲ್ಲಿ ಕಂಡ ಅನುಭಾವವನ್ನು ವಚನಗಳ ಮೂಲಕ ಸಮಾಜಕ್ಕೆ ನೀಡಿದ ಅವರು, ಕನ್ನಡ ಸಾಹಿತ್ಯಕ್ಕೂ ಅಪೂರ್ವ ಕೊಡುಗೆ ನೀಡಿದ್ದಾರೆ.
ವಚನ ಸಾಹಿತ್ಯದಲ್ಲಿ ಲೋಕಜೀವನಕ್ಕೆ ಅಗತ್ಯವಾದ ಅನೇಕ ಸತ್ಯಗಳು ಅಡಕವಾಗಿವೆ. ಸಾಮಾಜಿಕ, ಆರ್ಥಿಕ, ರಾಜಕೀಯ, ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಒಳಗೊಂಡ ಶರಣ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ. ತಂತ್ರಜ್ಞಾನ ಮತ್ತು ಆಧುನಿಕತೆಯ ವೇಗದ ಬದುಕಿನಲ್ಲಿಯೂ ಮನುಷ್ಯನ ನಡೆ–ನುಡಿ, ಪ್ರಾಮಾಣಿಕತೆ, ಸತ್ಯ, ಸಮಾನತೆ ಮತ್ತು ಮಾನವೀಯತೆ ಎಂಬ ಮೌಲ್ಯಗಳು ಎಂದಿಗೂ ಹಳೆಯದಾಗುವುದಿಲ್ಲ.
ಹಡಪದ ಅಪ್ಪಣ್ಣರ ವಚನವು ಕೇವಲ ಅಂದಿನ ಕಾಲಘಟ್ಟದ ಬದುಕಿಗೆ ಸೀಮಿತವಾದ ಸಂದೇಶವಲ್ಲ. ಅದು ಪ್ರತಿಯೊಬ್ಬ ಮನುಷ್ಯನಿಗೂ ಅನ್ವಯಿಸುವ ಸಾರ್ವಕಾಲಿಕ ಜೀವನದರ್ಶನವಾಗಿದೆ. ನುಡಿಯಲ್ಲಿ ಸತ್ಯ, ನಡೆಯಲ್ಲಿ ಶುದ್ಧತೆ, ಚಿಂತನೆಗಳಲ್ಲಿ ವೈಚಾರಿಕತೆ ಮತ್ತು ಬದುಕಿನಲ್ಲಿ ಮಾನವೀಯತೆ ಬೆಳೆಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ.
ʼಹಸಿವಿನಾಸೆಗೆ ಅಶನವ ಕೊಂಬರು, ವಿಷಯದಾಸೆಗೆ ಹುಸಿಯ ನುಡಿವರು. ಹಸನಾಗಿ ವ್ಯಸನವ ಹೊತ್ತು , ಭಸಿತವ ಹೂಸಿ ವಿಶ್ವವ ತಿರುಗಿದರು. ಈ ಹುಸಿಯ ಬಿಟ್ಟು, ಮಾಯೆಯ ಮಸಕವ ಮಾಣ್ದಲ್ಲದೆ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ ಕೂಡಾʼ
ಈ ಮೇಲಿನ ವಚನ ಹಡಪದ ಅಪ್ಪಣ್ಣನವರ ಪತ್ನಿ ಲಿಂಗಮ್ಮ ಅವರದು, ಮನುಷ್ಯ ತನ್ನ ಬದುಕಿಗಾಗಿ ಸುಳ್ಳು, ಮೋಸ, ವಂಚನೆ ಮಾಡುತ್ತ ತಿರುಗಾಡುತ್ತಾನೆ. ಈ ಮೋಹ- ಮಾಯೆ ತೊರೆಯದಿದ್ದರೆದೇ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿಲ್ಲ ಎಂಬ ಅವರು ತಿಳಿಸುತ್ತಾರೆ.
ಇದನ್ನೂ ಓದಿ : ವಚನ ಕಲ್ಯಾಣ | ಎಲ್ಲಿ ನೋಡಿದಡೆ ಬಯಲೊಂದೇ!
ಶರಣರ ವೈಚಾರಿಕ ಪ್ರಜ್ಞೆಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ನಡೆ-ನುಡಿಯಲ್ಲಿ ಒಂದಾಗಿರುವ ಪ್ರಜ್ಞಾವಂತ ನಾಗರಿಕರಾಗಿ ಬದುಕುವುದು ಹಡಪದ ಅಪ್ಪಣ್ಣರ ವಚನಕ್ಕೆ ನಾವು ಸಲ್ಲಿಸಬಹುದಾದ ನಿಜವಾದ ಗೌರವವಾಗಿದೆ.
(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



