ಶತಮಾನದಲ್ಲೇ ಭೀಕರ ಎನ್ನಬಹುದಾದ ಎನ್ ನಿನೋ ಇದು. ಅದಕ್ಕಾಗಿಯೇ ಅದರ ಹೆಸರು ‘ಸೂಪರ್ ಎಲ್ ನಿನೋ’ ಹಾಗೂ ಇತ್ತೀಚೆಗೆ ಹೆಸರಿಸಿದಂತೆ ‘ಮೆಗಾ ಎಲ್ ನಿನೋ’. ಸಾಮಾನ್ಯವಾಗಿ ಎಲ್ ನಿನೋದಿಂದಾಗಿ ಪ್ರಪಂಚದಾದ್ಯಂತ ಬಿಸಿಗಾಳಿ ಬೀಸಲಿದೆ. ಬೇಸಿಗೆಯ ಉಷ್ಣತೆ ತೀವ್ರಗತಿಯಲ್ಲಿ ಏರಲಿದೆ. ವಾತಾವರಣದ ಉಷ್ಣತೆಯು 40 ಡಿಗ್ರಿ ಸೆಲ್ಶಿಯಸ್ ನಿಂದ 46ರವರೆಗೆ ತಲುಪಬಹುದು. ಕೆಲವು ಕಡೆ ಅದನ್ನೂ ಮೀರಬಹುದು. ಬಿಸಿಲಿನ ಝಳದಿಂದ ಮರಣಗಳು ಸಂಭವಿಸಲಿವೆ.
ಭಾರತವು ಈ ವರ್ಷದಲ್ಲಿ ಬರಗಾಲವನ್ನೆದುರಿಸಲಿದೆ ಎನ್ನುತ್ತಿವೆ ಜಾಗತಿಕ ಹವಾಮಾನ ವರದಿಗಳು. ಪೆಸಿಫಿಕ್ ಸಾಗರದಲ್ಲಿ ಎಲ್ ನಿನೋ (El Nino) ಅವತರಿಸಿರುವುದೇ ಅಂತಹ ಮುನ್ಸೂಚನೆಗೆ ಕಾರಣ. ಈ ಸಾರಿಯ ಎಲ್ ನಿನೋ ವರ್ತನೆಯು ಹೆಚ್ಚು ಗಂಭೀರವಾಗಿರುವುದರಿಂದ ಅದನ್ನು ‘ಸೂಪರ್ ಎಲ್ ನಿನೋ’ ಹಾಗೂ ‘ಮೆಗಾ ಎಲ್ ನಿನೋ’ ಎಂದು ಕರೆಯಲಾಗಿದೆ. ಎಲ್ ನಿನೋ ಸಂಭವಿಸಿದಾಗ ವಾತಾವರಣದ ಒತ್ತಡವು ಏರಪೇರಾಗಿ ಭಾರತ ಸೇರಿದಂತೆ ಏಶಿಯಾದ ಕೆಲ ದೇಶಗಳು ಮತ್ತು ಆಸ್ಟ್ರೇಲಿಯಾ ಬರಗಾಲದಿಂದ ತತ್ತರಿಸಲಿವೆ.
ಇಡೀ ವಿಶ್ವದಲ್ಲಿಯೇ ಪೆಸಿಫಿಕ್ ಸಾಗರ ಅತ್ಯಂತ ದೊಡ್ಡದು. ಅದರ ಪಶ್ಚಿಮಕ್ಕೆ ಏಶಿಯಾ ಮತ್ತು ಆಸ್ಟ್ರೇಲಿಯಾ ಖಂಡಗಳಿವೆ. ಪೂರ್ವಕ್ಕೆ ಅಮೇರಿಕಾ ಇದೆ. ಉತ್ತರದ ಆಕ್ರ್ಟಿಕ್ ಸಮುದ್ರದಿಂದ ದಕ್ಷಿಣದ ಅಂಟಾಕ್ರ್ಟಿಕಾ ಸಮುದ್ರದವರೆಗೆ ಪೆಸಿಫಿಕ್ ಸಾಗರ ಹಬ್ಬಿಕೊಂಡಿದೆ. ಪೆಸಿಫಿಕ್ ಸಾಗರದಲ್ಲಿ 3 ರಿಂದ 7 ವರ್ಷಗಳಿಗೊಮ್ಮೆ ಸಾಗರದ ನೀರು ಬಿಸಿಯಾಗಿ ಏಳುವ ತೀವ್ರತರದ ಬಿಸಿಯ ಅಲೆಗಳನ್ನು ‘ಎಲ್ ನಿನೋ’ ಎಂದು ಕರೆಯಲಾಗಿದೆ. ಎಲ್ ನಿನೋ ಉದ್ಭವಿಸಿದರೆ ಭಾರತಕ್ಕೆ ಬರಗಾಲ ಅಥವಾ ಅನಾವೃಷ್ಟಿ. ಅಮೇರಿಕಾಕ್ಕೆ ಸುಭಿಕ್ಷೆಯ ಜೊತೆಗೆ ಅತಿವೃಷ್ಟಿ. ಎಲ್ ನಿನೋದ ಪರಿಣಾಮ ಸುಮಾರು 9 ತಿಂಗಳಿಂದ 12 ತಿಂಗಳವರೆಗೆ ಇರುತ್ತದೆಯೆಂದು ಅಂದಾಜಿಸಲಾಗಿದೆ. ಎಲ್ ನಿನೋ ಪದದ ಅರ್ಥ ‘ಬಾಲಕ ಕ್ರಿಸ್ತ’ ಅಥವಾ ‘ಹುಡುಗ’. ಅದಕ್ಕೆ ವಿರುದ್ಧವಾದ ಘಟನೆಯ ಹೆಸರು ‘ಲಾ ನಿನಾ’. ಲಾ ನಿನಾ ಪದದ ಅರ್ಥ ‘ಹುಡುಗಿ’. ಅವು ಪೆಸಿಫಿಕ್ ಸಾಗರದಲ್ಲಿ ಏಳುವ ತಣ್ಣನೆಯ ಅಲೆಗಳು. ‘ಲಾ ನಿನಾ’ ಎದ್ದರೆ ಭಾರತಕ್ಕೆ ಭರ್ಜರಿ ಮಳೆ, ಪಾಶ್ಚಿಮಾತ್ಯ ದೇಶಗಳಿಗೆ ಸ್ವಲ್ಪ ಮಟ್ಟಿಗೆ ಬರ.
ಎಲ್ ನಿನೊ ವರ್ಸಸ್ ಲಾ ನಿನಾ
‘ಎಲ್ ನಿನೊ ವರ್ಸಸ್ ಲಾ ನಿನಾ’ ಎಂದು ಸರಳವಾಗಿ ಅರ್ಥೈಸಿಕೊಳ್ಳೋಣ. ಮಳೆಯ ವಿಷಯದಲ್ಲಿ ನಮಗೆ ಎಲ್ ನಿನೊ ಖಳನಾಯಕನಂತಾದರೆ ಲಾ ನಿನಾ ಸುಭಿಕ್ಷೆಯ ನಾಯಕಿ, ಮಳೆ ನಾಯಕಿ, ಮಳೆರಾಯಿ, ಮಳೆತಾಯಿ ಎಂಬ ಹೆಣ್ಣು ಮಗಳು. ಹವಾಮಾನ ವಿಜ್ಞಾನ ಅರ್ಥಾತ್ ಪವನ ವಿಜ್ಞಾನದ ಆಳ ಅಗಲ ಹೊಕ್ಕರೆ ‘ಬಾರಪ್ಪೊ ಮಳೆರಾಯ, ನೀ ಬಂದುಯ್ಯೋ ಮಳೆರಾಯ’ ಎಂಬ ಹಾಡಿನ ನುಡಿಗಟ್ಟಿಗೆ ಬದಲಾಗಿ ‘ಬಾರಮ್ಮಾ ಮಳೆತಾಯಿ, ನೀ ಬಂದುಯ್ಯೇ ಮಳೆತಾಯಿ’ ಎಂದು ಹಾಡಿಕೊಳ್ಳಬೇಕೇನೋ?

ಎಲ್ ನಿನೋದ ಸರಿಯಾದ ಉಚ್ಚಾರಣೆಯು ಎಲ್ ನಿನ್ಯೋ. ಲಾ ನಿನಾದ ಸರಿಯಾದ ಉಚ್ಚಾರಣೆಯು ಲಾ ನಿನ್ಯಾ. ಎರಡೂ ಸ್ಪಾನಿಷ್ ಭಾಷೆಯ ಪದಗಳು. ಕನ್ನಡದ ಸಂದರ್ಭದಲ್ಲಿ ಎಲ್ ನಿನೋ ಮತ್ತು ಲಾ ನಿನಾ ಎಂದು ಕರೆದುಕೊಳ್ಳೋಣ.
ಹವಾಮಾನ ಇಲಾಖೆಯ ಮುನ್ಸೂಚನೆಗಳು
ಶತಮಾನದಲ್ಲೇ ಭೀಕರ ಎನ್ನಬಹುದಾದ ಎನ್ ನಿನೋ ಇದು. ಅದಕ್ಕಾಗಿಯೇ ಅದರ ಹೆಸರು ‘ಸೂಪರ್ ಎಲ್ ನಿನೋ’ ಹಾಗೂ ಇತ್ತೀಚೆಗೆ ಹೆಸರಿಸಿದಂತೆ ‘ಮೆಗಾ ಎಲ್ ನಿನೋ’. ಸಾಮಾನ್ಯವಾಗಿ ಎಲ್ ನಿನೋದಿಂದಾಗಿ ಪ್ರಪಂಚದಾದ್ಯಂತ ಬಿಸಿಗಾಳಿ ಬೀಸಲಿದೆ. ಬೇಸಿಗೆಯ ಉಷ್ಣತೆ ತೀವ್ರಗತಿಯಲ್ಲಿ ಏರಲಿದೆ. ವಾತಾವರಣದ ಉಷ್ಣತೆಯು 40 ಡಿಗ್ರಿ ಸೆಲ್ಶಿಯಸ್ ನಿಂದ 46ರವರೆಗೆ ತಲುಪಬಹುದು. ಕೆಲವು ಕಡೆ ಅದನ್ನೂ ಮೀರಬಹುದು. ಬಿಸಿಲಿನ ಝಳದಿಂದ ಮರಣಗಳು ಸಂಭವಿಸಲಿವೆ. ಈಗಾಗಲೇ ರಾಯಚೂರು ಜಿಲ್ಲೆಯಲ್ಲಿ ಇಬ್ಬರು ಕಾರ್ಮಿಕರು ಮರಣಹೊಂದಿದ ಸುದ್ದಿ ಬಂದಿದೆ. ಮುಂಗಾರು ಮಳೆಯ ಪ್ರಮಾಣ ಕಡಿಮೆಯಾಗಲಿದೆ. ವರ್ಷ ಪೂರ್ತಿ ಕಡಿಮೆ ಮಳೆ ಹಾಗೂ ಹೆಚ್ಚು ಉಷ್ಣತೆಯ ಸಮಸ್ಯೆಯಿರುತ್ತದೆ. ಏಶಿಯಾದ ಹಲವು ದೇಶಗಳಿಗೆ ಬರ ಕಾಡಲಿದೆ. ಈ ಸಾರಿಯ ಬರಗಾಲವು 1877-78ರಲ್ಲಿ ಬಂದಂತಹ ತೀವ್ರ ಬರಗಾಲವಾಗಲಿದೆಯಂತೆ. ಆಹಾರ ಪದಾರ್ಥಗಳ ಲಭ್ಯತೆಯ ಸಮಸ್ಯೆಯಾಗಬಹುದು. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆಯ ಪ್ರಮಾಣದಲ್ಲಿ ಶೇ. 92ರಷ್ಟು ಕೊರತೆಯಾಗಲಿದೆ!
ಎಲ್ ನಿನೋದಿಂದಾಗಿಯೇ ಹಲವು ಸಾರಿ ತೀವ್ರ ಬರಗಾಲಗಳನ್ನು ಭಾರತವು ಅನುಭವಿಸಿದೆ. ಉದಾಹರಣೆಗೆ, 1876, 1899, 1918, 1965, 1972, 1987, 2002, 2009 ಮತ್ತು 2015-2018. ಈ ಲೇಖನದ ಲೇಖಕ ಒಂಬತ್ತು ವರ್ಷದವನಿದ್ದಾಗ, ಕಣ್ಣಾರೆ ಕಂಡಂತೆ, ಅನುಭವಿಸಿದಂತೆ, 1972ರ ಬರಗಾಲದಲ್ಲಿ ಜನರು ಹಸಿವಿನಿಂದ ನರಳಿದರು. ಸಿಕ್ಕ ಸಿಕ್ಕ ಆಹಾರವನ್ನು ತಿಂದರು. ಕಾಡಂಚಿನಲ್ಲಿ ಬೆಳೆದ ಕತ್ತಾಳೆಯ ಗೆಡ್ಡೆಗಳನ್ನು ಹೆಕ್ಕಿ ತಂದು ರಾತ್ರಿಯೆಲ್ಲಾ ಗುಡಾಣದಲ್ಲಿ ಬೇಯಿಸಿ ತಾವೂ ತಿಂದರು, ಮಕ್ಕಳ ಜೀವ ಉಳಿಸಿದರು. ಕಾಡು ಮೇಡಿನ ಸೊಪ್ಪು ಸೊದೆಗಳನ್ನು ಬೇಯಿಸಿ ಸೇವಿಸಿದರು.
ರೈತರಿಗೆ ವರವಾದ ಹಸಿರು ಕ್ರಾಂತಿ
1972ರ ಬರಗಾಲದ ನಂತರದ ಬರಗಾಲಗಳು ಅಷ್ಟೇನೂ ಆಹಾರದ ಸಮಸ್ಯೆಯಿಂದ ನರಳುವಂತೆ ಮಾಡಲಿಲ್ಲ. ಕಾರಣ ಅದಾಗಲೇ ಘಟಿಸಿದ್ದ ‘ಹಸಿರು ಕ್ರಾಂತಿ’. ಹಸಿರು ಕ್ರಾಂತಿಯ ದಶಕದ ಕಾಲ 1966-67ರಿಂದ 1977-78ರವರೆಗೆ ಎನ್ನಬಹುದು. ಆ ಅವಧಿಯಲ್ಲಿ ಅಧಿಕ ಇಳುವರಿಯ ಗೋಧಿ ಮತ್ತು ಭತ್ತದ ತಳಿಗಳನ್ನು ಬಿಡುಗಡೆ ಮಾಡಲಾಯಿತು. ಗೋಧಿ ಮತ್ತು ಭತ್ತದ ಉತ್ಪಾದನೆ ಹೆಚ್ಚಾಯಿತು. ನಾರ್ಮನ್ ಬೋರ್ಲಾಗ್, ಡಾ. ಎಂ. ಎಸ್. ಸ್ವಾಮಿನಾಥನ್‍ರವರಂತಹ ವಿಜ್ಞಾನಿಗಳು ಅದಕ್ಕೆ ಕಾರಣೀಭೂತರಾದರು. ಹಸಿರು ಕ್ರಾಂತಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ಪ್ರಧಾನಿಗಳಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಶ್ರೀಮತಿ ಇಂದಿರಾ ಗಾಂಧಿಯವರು ಹಸಿರು ಕ್ರಾಂತಿಗೆ ಬೆನ್ನೆಲುಬಾದರು. ಜೈ ಜವಾನ್ ಜೈ ಕಿಸಾನ್ ಘೋಷಣೆ ಜನಪ್ರಿಯವಾಯಿತು.
ಹಸಿರು ಕ್ರಾಂತಿಯ ಸಂದರ್ಭದಲ್ಲಿ, ನಮ್ಮ ರಾಜ್ಯದಲ್ಲಿ ರಾಗಿ ಲಕ್ಷ್ಮಣಯ್ಯನವರು ಕಂಡುಹಿಡಿದ ಇಂಡಾಫ್ ಮತ್ತಿತರ ರಾಗಿ ತಳಿಗಳಿಂದ ರಾಗಿ ಉತ್ಪಾದನೆ ಹೆಚ್ಚಾಯಿತು. ಅಂತಹ ರಾಗಿ ಲಕ್ಷ್ಮಣಯ್ಯನವರ ಕುರಿತ ‘ತೆನೆಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ’ ಎಂಬ ಕೃತಿಯನ್ನು 2012ರಲ್ಲಿ ರಮೇಶ್ ಸಂಕ್ರಾಂತಿ ಜೊತೆಗೂಡಿ ಹೊರತಂದಿದ್ದು ಇದೇ ಲೇಖಕ. ತೆನೆಮೆರೆಯ ಕ್ರಾಂತಿ ಕೃತಿಯನ್ನು ಹೆಚ್ಚಿನ ಓದಿಗೆಂದು ಪ್ರಥಮ ಪಿಯುಸಿಯ ಕನ್ನಡ ಪಠ್ಯವಾದ ‘ಸಾಹಿತ್ಯ ಸಂಚಲನ’ ದ ರಾಗಿ ಮುದ್ದೆ ಪಾಠದ ಕೊನೆಗೆ 2013ರಿಂದ ಗೊತ್ತುಪಡಿಸಲಾಗಿದೆ. ಕೆಲವು ಕೃಷಿ ವಿಶ್ವವಿದ್ಯಾಲಯಗಳ ಸಾಂಸ್ಕøತಿಕ ಕನ್ನಡ ಪಠ್ಯದಲ್ಲಿ 2021ರಂದ ರಾಗಿ ಲಕ್ಷ್ಮಣಯ್ಯನವರ ಕುರಿತೊಂದು ಪಾಠವಿದೆ.

ಪವನ ವಿಜ್ಞಾನ ವೀಕ್ಷಣಾಲಯಗಳ ಸ್ಥಾಪನೆಯ ಇತಿಹಾಸ
ಹವಾಮಾನದ ಮುನ್ಸೂಚನೆಗಳನ್ನು ಕುರಿತು ಜನರಿಗೆ ಮಾಹಿತಿ ನೀಡಲು ಮೈಸೂರು ಸಂಸ್ಥಾನದಲ್ಲಿ ಪವನ ವಿಜ್ಞಾನ ವೀಕ್ಷಣಾಲಯಗಳನ್ನು ಸ್ಥಾಪಿಸಿದ ರೋಚಕ ಇತಿಹಾಸವಿದೆ. ಬೆಂಗಳೂರಿನಲ್ಲಿ ಪವನ ವಿಜ್ಞಾನ ವೀಕ್ಷಣಾಲಯವನ್ನು ಮೊಟ್ಟಮೊದಲಿಗೆ 1867ರಲ್ಲಿ ಬೌರಿಂಗ್ ಆಸ್ಪತ್ರೆಯ ಬಳಿ ಬ್ರಿಟಿಷ್ ಅಧಿಕಾರಿಗಳಿಂದ ಸ್ಥಾಪಿಸಲಾಗಿದೆ. ನಂತರ ಅದನ್ನು 1892ರಲ್ಲಿ ಸೆಂಟ್ರಲ್ ಕಾಲೇಜಿನ ಹತ್ತಿರಕ್ಕೆ ಸ್ಥಳಾಂತರಿಸಲಾಯಿತೆಂದೂ, 1894ರಿಂದ ಮೈಸೂರು ರಾಜ್ಯದ ಪವನ ವಿಜ್ಞಾನ ಇಲಾಖೆಯ ಭಾಗವಾಯಿತೆಂಬ ಮಾಹಿತಿಯಿದೆ. ಈಗಲೂ ಸೆಂಟ್ರಲ್ ಕಾಲೇಜಿನ ಬಳಿ ಭಾರತ ಹವಾಮಾನ ವಿಜ್ಞಾನ ಇಲಾಖೆ (India Meteorological Department : IMD) ಯ ಹವಾಮಾನ ಕೇಂದ್ರವಿದೆ.
ಮೈಸೂರು ಸಂಸ್ಥಾನದ ಪವನ ವಿಜ್ಞಾನ ಇಲಾಖೆಯ ಆಡಳಿತ ವರದಿ 1921-22ರಲ್ಲಿ ರೋಚಕ ಮಾಹಿತಿಯಿದೆ. ಕೃಷಿ ವಿಜ್ಞಾನಕ್ಕೂ ಪವನ ವಿಜ್ಞಾನಕ್ಕೂ ಅವಿನಾಭಾವ ಸಂಬಂಧ. ಪಶುಸಂಗೋಪನೆ ಹಾಗೂ ಪಶುವೈದ್ಯಕೀಯ ವಿಜ್ಞಾನಕ್ಕೂ ಪವನ ವಿಜ್ಞಾನದ ಸಂಬಂಧವಿದೆ. ಪಶು ರೋಗಗಳು ಋತುಮಾನಕ್ಕೆ ತಕ್ಕಂತೆ ಕಾಡುತ್ತವೆ. ಹವಾಮಾನದ ಮುನ್ಸೂಚನೆಯಂತೆ ಪಶು ರೋಗಗಳು ಹರಡುವುದನ್ನು ಗ್ರಹಿಸಬಹುದು ಎಂಬುದೇ ಆ ರೋಚಕ ಮಾಹಿತಿ.
ಪವನ ವಿಜ್ಞಾನ ವೀಕ್ಷಣಾಲಯಗಳ ಉದ್ದಗಲಕ್ಕೆ ತಕ್ಕಂತೆ ಮತ್ತು ಪವನ ವಿಜ್ಞಾನದ ಪರಿಕರಗಳ ಲಭ್ಯತೆಗೆ ತಕ್ಕಂತೆ ಮೂರು ವಿಧದ ಪವನ ವಿಜ್ಞಾನ ವೀಕ್ಷಣಾಲಯಗಳು (Meteorology Observatories) ಇವೆ. ಅವೆಂದರೆ, 1). ‘ಎ’ ವರ್ಗದ ವೀಕ್ಷಣಾಲಯ (180 ಅಡಿ ಉತ್ತರ – ದಕ್ಷಿಣ ಮತ್ತು 120 ಅಡಿ ಪೂರ್ವ-ಪಶ್ಚಿಮ), 2). ‘ಬಿ’ ವರ್ಗದ ವೀಕ್ಷಣಾಲಯ (90 ಅಡಿ ಉತ್ತರ – ದಕ್ಷಿಣ ಮತ್ತು 60 ಅಡಿ ಪೂರ್ವ-ಪಶ್ಚಿಮ) ಮತ್ತು 3). ‘ಸಿ’ ವರ್ಗದ ವೀಕ್ಷಣಾಲಯ (ಚಿಕ್ಕದು).
ಪವನ ವಿಜ್ಞಾನ ಇಲಾಖೆಯ ಆಡಳಿತ ವರದಿ 1921-22ರಲ್ಲಿ ತಿಳಿಸಿದಂತೆ ಬೆಂಗಳೂರಿನಲ್ಲಿ ಮಾತ್ರ ‘ಎ’ ಅಥವಾ ಪ್ರಥಮ ವರ್ಗದ ವೀಕ್ಷಣಾಲಯವಿತ್ತು. ‘ಸಿ’ ಅಥವಾ ತೃತೀಯ ವರ್ಗದ ವೀಕ್ಷಣಾಲಯಗಳು ಮೈಸೂರು, ಚಿತ್ರದುರ್ಗ ಮತ್ತು ಹಾಸನದಲ್ಲಿದ್ದವು. ಮೈಸೂರು ಮತ್ತು ಚಿತ್ರದುರ್ಗದ ಹವಾಮಾನದ ವರದಿಯನ್ನು ಪ್ರತಿನಿತ್ಯ ಸಿಮ್ಲಾದಲ್ಲಿದ್ದ ಭಾರತ ಸರ್ಕಾರದ ಪವನ ವಿಜ್ಞಾನ ಇಲಾಖೆಯ ಕೇಂದ್ರ ಸ್ಥಾನಕ್ಕೆ ಟೆಲಿಗ್ರಾಮ್ ಮೂಲಕ ಕಳುಹಿಸಿಕೊಡಲಾಗುತ್ತಿತ್ತು. ಹಾಸನದ ಹವಾಮಾನದ ವರದಿಯನ್ನು ಪ್ರತಿನಿತ್ಯ ಮದ್ರಾಸಿಗೆ ಟೆಲಿಗ್ರಾಮ್ ಮೂಲಕ ರವಾನಿಸಲಾಗುತ್ತಿತ್ತು.
ಇವುಗಳ ಜೊತೆಗೆ, ಮಳೆ ಮಾಪಕ ಕೇಂದ್ರಗಳನ್ನು ಮೈಸೂರು ಸಂಸ್ಥಾನದ 226 ಸ್ಥಳಗಳಲ್ಲಿ ಸ್ಥಾಪಿಸಲಾಗಿತ್ತು. ಜಿಲ್ಲಾವಾರು ಮಳೆ ಮಾಪಕ ಕೇಂದ್ರಗಳ ಸಂಖ್ಯೆ ಆವರಣದಲ್ಲಿ ಇರುವಂತಿದ್ದವು: ಬೆಂಗಳೂರು (30), ಕೋಲಾರ (28), ತುಮಕೂರು (41), ಮೈಸೂರು (37), ಹಾಸನ (24), ಶಿವಮೊಗ್ಗ (24), ಕಡೂರು (19) ಮತ್ತು ಚಿತ್ರದುರ್ಗ (23).
ಬೆಂಗಳೂರಿನ ಕೇಂದ್ರದಿಂದ ನಿತ್ಯ ಒಂದು ಪೈಲಟ್ ಬಲೂನನ್ನು (Pilot Balloon or Pibal) ಆಕಾಶಕ್ಕೆ ಹಾರಿ ಬಿಟ್ಟು ಭೂಮಿಯ ಮೇಲ್ಮೈಯ ವಾತಾವರಣದ ಪವನ ವಿಜ್ಞಾನದ ನಿಯತಾಂಕಗಳನ್ನು ಪಡೆಯಲಾಗುತ್ತಿತ್ತು. ಮೇಲಾಧಿಕಾರಿಗಳು ಆಗಿಂದಾಗ್ಗೆ ಪವನ ವಿಜ್ಞಾನ ವೀಕ್ಷಣಾಲಯಗಳಿಗೆ ಭೇಟಿ ಕೊಟ್ಟು ಎಲ್ಲಾ ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಖಚಿತಪಡಿಸಿಕೊಳ್ಳುತ್ತಿದ್ದರು. ಹವಾಮಾನದ ವಾರ್ಷಿಕ ವರದಿಗಳನ್ನು ಪ್ರಕಟಿಸಲಾಗುತ್ತಿತ್ತು.
ಭಾರತ ಹವಾಮಾನ ವಿಜ್ಞಾನ ಇಲಾಖೆ
ದೂರದರ್ಶನ, ರೇಡಿಯೋ ಮತ್ತು ಪತ್ರಿಕೆಗಳಿಗೆ ಹವಾಮಾನದ ಮುನ್ಸೂಚನೆಗಳು ಲಭ್ಯವಾಗುವುದು ಭಾರತೀಯ ಹವಾಮಾನ ವಿಜ್ಞಾನ ಇಲಾಖೆಯ ಕೇಂದ್ರಗಳು ಕೊಡುವ ಮಾಹಿತಿಯಿಂದ. ಅಲ್ಲಿಯ ಸಿಬ್ಬಂದಿಯು ನಿತ್ಯ ಹವಾಮಾನ ಮುನ್ಸೂಚನೆಯ ವಿಶ್ಲೇಷಣೆಯಲ್ಲಿ ತೊಡಗಿರುತ್ತಾರೆ. ನಮ್ಮ ದೇಶದಲ್ಲಿ ಸುಮಾರು 558 ಪವನ ವಿಜ್ಞಾನ ವೀಕ್ಷಣಾಲಯಗಳು (ಒeಣeoಡಿoಟogಥಿ ಔbseಡಿvಚಿಣoಡಿies) ಇವೆ. ಅವುಗಳಲ್ಲಿ ಸುಮಾರು 141 ಪವನ ವಿಜ್ಞಾನ ವೀಕ್ಷಣಾಲಯಗಳು ಪ್ರಥಮ ದರ್ಜೆಯದ್ದಾಗಿವೆ. ಸುಮಾರು 1008 ಸ್ವಯಂಚಾಲಿತ ಹವಾಮಾನ ಕೇಂದ್ರ (Automated Weather Station: AWS)ಗಳಿವೆ. ದೇಶದ ವಿವಿಧ ಭಾಗಗಳ ಹವಾಮಾನ ಮುನ್ಸೂಚನೆಗಳನ್ನು ಸಾಧ್ಯವಾದಷ್ಟೂ ನಿಖರವಾಗಿ ನೀಡಲಾಗುತ್ತಿದೆ. ಈ ವರ್ಷದಲ್ಲಿ ಎಲ್ ನಿನೋದಿಂದಾಗಿ ಮಳೆಯ ಪ್ರಮಾಣದಲ್ಲಿ ಶೇ. 92ರಷ್ಟು ಮಳೆಯ ಕೊರತೆಯಾಗಲಿದೆಯೆಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಕೊನೆಯ ಮಾತು
ಎಲ್ ನಿನೋದಿಂದಾಗುವ ಪರಿಣಾಮಗಳನ್ನು ಎದುರಿಸಲು ಸನ್ನದ್ಧರಾಗೋಣ. ಎಲ್ ನಿನೋದ ಮುನ್ಸೂಚನೆಗಳು ಸುಳ್ಳಾಗಲಿ ಎಂದು ಭಾವಿಸೋಣ. ಮಳೆರಾಯ ಅಥವಾ ಮಳೆತಾಯಿಯನ್ನು ಕರೆಯೋಣ. ಖ್ಯಾತ ಕವಿ ಡಾ. ಸಿದ್ದಲಿಂಗಯ್ಯನವರ ‘ಅಲ್ಲೇ ಕುಂತವರೆ’ ಖಂಡಕಾವ್ಯದಲ್ಲಿ ಮಳೆಯ ಜಪವೇ ಮೈದಾಳಿದೆ. ಅದನ್ನು ಓದಿಕೊಳ್ಳುವುದು ಮತ್ತು ಹಾಡಿಕೊಳ್ಳುವುದೇ ಮನಸ್ಸಿಗೊಂದು ಮುದ. ಆ ಖಂಡಕಾವ್ಯದ ಆರಂಭದ ಪಲ್ಲವಿ ಮತ್ತು ಕೆಲ ಚರಣಗಳನ್ನು ಎಂ. ಎಸ್. ಸತ್ಯುರವರು ‘ಬರ’ ಸಿನಿಮಾದಲ್ಲಿ ಅಳವಡಿಸಿದ್ದಾರೆ. ಯೂ ಟ್ಯೂಬ್ ನಲ್ಲಿ ಸಿನಿಮಾ ಲಭ್ಯವಿದೆ. ಟೈಟಲ್ ಕಾರ್ಡ್ ತೋರಿಸುವಾಗ ಸಿದ್ದಲಿಂಗಯ್ಯನವರ ಹಾಡು ಮೈಸೂರು ಜನಾರ್ಧನ್ (ಜನ್ನಿ) ಅವರ ಧ್ವನಿಯಲ್ಲಿ ಮೊಳಗುತ್ತದೆ. ಮನಸ್ಸನ್ನು ತಟ್ಟುತ್ತದೆ.

ʼಬರʼ ಸಿನಿಮಾವು ದಕ್ಷ ಜಿಲ್ಲಾಧಿಕಾರಿಯೊಬ್ಬರು ಹೇಗೆ ಬರದ ಪರಿಸ್ಥಿತಿಯನ್ನು ನಿರ್ವಹಿಸುತ್ತಾರೆ ಎಂಬುದರ ಕುರಿತಾಗಿದೆ. ಅಂತಹ ದಕ್ಷ ಜಿಲ್ಲಾಧಿಕಾರಿಯೇ ವಿ. ಬಾಲಸುಬ್ರಮಣಿಯನ್. ಅವರು ಗುಲ್ಬರ್ಗಾದ ಜಿಲ್ಲಾಧಿಕಾರಿಯಾಗಿ 1978-79ರ ಸುಮಾರಿಗೆ ಬರ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದರು. ಆ ಸಂದರ್ಭ ಕುರಿತು ಖುದ್ದು ಭೇಟಿ ನೀಡಿ ಯು. ಆರ್. ಅನಂತಮೂರ್ತಿಯವರು ಬರೆದ ಕಾದಂಬರಿ ಆಧರಿಸಿದ ಸಿನಿಮಾವೇ ಬರ. ಜಿಲ್ಲಾಧಿಕಾರಿ ಪಾತ್ರದಲ್ಲಿ ಅನಂತನಾಗ್ ಅಭಿನಯಿಸಿದ್ದಾರೆ. ವಿ. ಬಾಲಸುಬ್ರಮಣಿಯನ್ ಅವರ ಆತ್ಮಕತೆಯು ಇತ್ತೀಚೆಗೆ ‘ಕಲ್ಯಾಣ ಕೆಡುವ ಹಾದಿ – ರೆಬೆಲ್ ಐಎಎಸ್ ಅಧಿಕಾರಿಯ ಆತ್ಮಕತೆ’ ಎಂಬ ಹೆಸರಿನಲ್ಲಿ ಲಡಾಯಿ ಪ್ರಕಾಶನ, ಗದಗ ಅವರಿಂದ ಪ್ರಕಟವಾಗಿದೆ. ಬರವನ್ನು ವರದಿ ಮಾಡಲು ಸಿ. ಎಂ. ಆರ್ಮುಗಂ, ಶಾಸಕರು, ಕೆಜಿಎಫ್, ಅವರನ್ನು ಅಂದಿನ ಮುಖ್ಯಮಂತ್ರಿಗಳಾದ ದೇವರಾಜ ಅರಸುರವರು ಗುಲ್ಬರ್ಗಾ ಜಿಲ್ಲೆಗೆ ಕಳುಹಿಸಿದರಂತೆ. ಆರ್ಮುಗಂರವರು ನೇರವಾಗಿ ಜಿಲ್ಲಾಧಿಕಾರಿಗಳೊಂದಿಗೆ ಕಸಾಯಿ ಖಾನೆಗೆ ನಡೆದರಂತೆ. ಬರದ ತೀವ್ರತೆಯು ಕಸಾಯಿ ಖಾನೆಗೆ ಬರುವ ಹಿಂಡು ಹಿಂಡು ಜಾನುವಾರುಗಳ ಮೂಲಕವೂ ಗೋಚರಿಸಬಹುದು ಎಂಬ ಉದ್ದೇಶ ಭೇಟಿಯ ಹಿಂದೆ ಇತ್ತು!!!
1965, 1972, 1987, 2002, 2009 ಮತ್ತು 2015-2018 ಬರದ ಸಂದರ್ಭಗಳಲ್ಲಿ ಗ್ರಾಮೀಣ ಜನತೆಗೆ ಉದ್ಯೋಗ ನೀಡಿ ಕೆರೆ ಕಾಲುವೆಗಳ ದುರಸ್ತಿ, ಹೊಸದಾಗಿ ಕುಂಟೆಗಳ ನಿರ್ಮಾಣ, ರಸ್ತೆ ನಿರ್ಮಾಣದಂತಹ ಕೆಲಸ ನೀಡಿ ಕೂಲಿಗಾಗಿ ಕಾಳು, ಹಣ ನೀಡಲಾಗುತ್ತಿತ್ತು. ಗ್ರಾಮೀಣಾಭಿವೃದ್ಧಿಯನ್ನು ಮತ್ತಷ್ಟು ವ್ಯಾಪಕವಾಗಿ ಹಮ್ಮಿಕೊಳ್ಳಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು 2006ರಲ್ಲಿ ಜಾರಿಗೊಳಿಸಲಾಯಿತು. ಯೋಜನೆಯು ಅದೇ ರೂಪದಲ್ಲಿ ಬರದಂತಹ ಕಷ್ಟಕಾಲದಲ್ಲಿ ನೆರವಾಗಲಿ ಎಂದು ಆಶಿಸೋಣ. ಹಸಿರನ್ನು ಕಾಪಾಡಿ ಬರವನ್ನು ತಡೆಯುವ ಪರಿಸರವನ್ನು ನಿರ್ಮಿಸಲು ನಾವೆಲ್ಲಾ ಪಣ ತೊಡೋಣ.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ



