ಅರ್ಥ ಪಥ | ಭ್ರಮೆಯನ್ನು ಮಾರುವವರ ನಡುವೆ ಪ್ರಜಾಸತ್ತೆ ಉಳಿಸಿಕೊಳ್ಳುವ ದಾರಿ ಯಾವುದು?

Date:

ಸರ್ವಾಧಿಕಾರಿ ನಾಯಕರು ಅಧಿಕಾರ ಹಿಡಿಯಲು ಸಾಕಷ್ಟು 'ರಾಜಕೀಯ ಕಸರತ್ತು' ಮಾಡಿರುತ್ತಾರೆ. ಹಾಗಾಗಿ, ಅಧಿಕಾರ ಕಳೆದುಕೊಂಡರೆ ಶಿಕ್ಷೆಯ ಭಯ ಇರುತ್ತದೆ. ಅದನ್ನು ತಪ್ಪಿಸಿಕೊಳ್ಳಲು ಇರುವ ಒಂದೇ ದಾರಿಯೆಂದರೆ, ಅಧಿಕಾರದಲ್ಲಿ ಮುಂದುವರಿಯುವುದು; ಅದಕ್ಕಾಗಿ ಏನು ಮಾಡಲೂ ಸಿದ್ಧ!

ಇದು ಸರ್ವಾಧಿಕಾರಿ ನಾಯಕರ ಯುಗ. ಆದರೆ ಅವರನ್ನು ‘ಸ್ಟ್ರಾಂಗ್‍ಮನ್’ ಅಥವಾ ‘ಬಲಶಾಲಿ ನಾಯಕರು’ ಅನ್ನುವುದು ವಾಡಿಕೆ. ಟ್ರಂಪ್ ಬಂದ ಮೇಲಂತೂ ಜಗತ್ತಿನ ಹೆಚ್ಚಿನ ದೇಶಗಳಲ್ಲಿ ಇಂತಹವರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಮಾಸ್ಕೊ, ಬೀಜಿಂಗ್, ದೆಹಲಿ, ಅಂಕಾರ, ಬುಡಾಪೆಸ್ಟ್, ವಾರ್ಸ್ಸಾ, ಮನಿಲಾ, ರಿಯಾದ್… ಹೀಗೆ, ಹಲವು ದೇಶಗಳಲ್ಲಿ ಇವರ ವಿವಿಧ ರೂಪಗಳನ್ನು ನೋಡಬಹುದು.

ಈ ಎಲ್ಲ ಸ್ಟ್ರಾಂಗ್‍ಮನ್ ನಾಯಕರಲ್ಲಿ ಕೆಲವು ಸಮಾನ ಗುಣಗಳಿವೆ. “ನನ್ನಿಂದ ಮಾತ್ರ ದೇಶದ ಸಮಸ್ಯೆಯನ್ನು ಬಗೆಹರಿಸೋದಕ್ಕೆ ಸಾಧ್ಯ,” ಅಂತ ಇವರೆಲ್ಲ ನಂಬಿರುತ್ತಾರೆ. ಜೊತೆಗೆ, ಜನರನ್ನೂ ನಂಬಿಸುತ್ತಿರುತ್ತಾರೆ. ತಾವೇ ದೇಶ ಅಂತ ನಂಬಿರುತ್ತಾರೆ. ತಮಗೆ, ತಮ್ಮವರಿಗೆ ಅವಮಾನವಾದರೆ ಅದು ದೇಶಕ್ಕೆ ಆದ ಅವಮಾನ ಅಂತ ಬೊಬ್ಬೆ ಹಾಕುತ್ತಾರೆ. ಸರ್ಕಾರ ಮತ್ತು ಇವರ ನಡುವೆ ವ್ಯತ್ಯಾಸ ಅಳಿಸಿಹೋಗುತ್ತದೆ. ತಾವು ಸಾಮಾನ್ಯ ಜನರ ವಕ್ತಾರರಂತೆ ಮಾತನಾಡುತ್ತಿರುತ್ತಾರೆ. ವ್ಯಕ್ತಿ ಪೂಜೆ ಇವರ ಕಣಕಣದಲ್ಲೂ ಸೇರಿಕೊಂಡಿರುತ್ತದೆ. ಪ್ರತಿಯೊಂದು ಕಾರ್ಯಕ್ರಮ, ಜಾಹೀರಾತು, ಪೋಸ್ಟರಿನಲ್ಲೂ ಇವರದೇ ಮುಖ ಕಾಣಿಸಿಕೊಳ್ಳುತ್ತಿರುತ್ತದೆ. ದೇಶ ಅಪಾಯದಲ್ಲಿದೆ ಎಂದು ಯಾವಾಗಲೂ ಹೇಳುತ್ತ, ನಿರಂತರ ಭಯ ಸೃಷ್ಟಿಸುತ್ತಿರುತ್ತಾರೆ.

ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು | ಸಿಟ್ಟಿನ ಈ ಪುಟ್ಟನ ಕತೆ ನಿಮ್ಮ ಮಗುವಿನದ್ದೂ ಆಗಿರಬಹುದು

ಅವರನ್ನು ಟೀಕಿಸುವ ವಿರೋಧ ಪಕ್ಷ, ಪತ್ರಿಕೆಗಳು, ನ್ಯಾಯಾಲಯ ಎಲ್ಲವೂ ದೇಶವಿರೋಧಿಗಳಾಗಿಬಿಡುತ್ತವೆ. ಅವೆಲ್ಲ ದೇಶದ ಪ್ರಗತಿಗೆ ಇರುವ ತಡೆಗೋಡೆಗಳು ಅಂತಲೇ ಭಾವಿಸುತ್ತಾರೆ. ಅಲ್ಪಸಂಖ್ಯಾತರು, ವಲಸಿಗರು, ನಿರಾಶ್ರಿತರ ಬಗ್ಗೆ ದ್ವೇಷವನ್ನು ಕಾರುತ್ತಿರುತ್ತಾರೆ; ಇದ್ದಕ್ಕಿದ್ದಂತೆ ಅವರೆಲ್ಲ ಭಯೋತ್ಪಾದಕರಾಗಿಬಿಡುತ್ತಾರೆ. “ನೀವು ನನಗೆ ಮತ ನೀಡುವಾಗ ಕೇವಲ ಮತಯಂತ್ರದ ಬಟನ್ ಒತ್ತುತ್ತಿಲ್ಲ; ಬದಲಿಗೆ ಭಯೋತ್ಪಾದಕನ ತಲೆಗೆ ಗುರಿಯಿಟ್ಟ ಬಂದೂಕಿನ ಟ್ರಿಗರ್ ಒತ್ತುತ್ತಿರುತ್ತೀರಿ…” ಇತ್ಯಾದಿ ಮಾತುಗಳಿಂದ ಯುದ್ದಕ್ಕೆ ಹುರಿದುಂಬಿಸುತ್ತಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇವರೆಲ್ಲ ಪರಸ್ಪರ ಅಭಿಮಾನಿಗಳು. ಅಮೆರಿಕದ ಅಧ್ಯಕ್ಷನಾದ ಕೂಡಲೇ ಟ್ರಂಪ್ ಭೇಟಿ ಮಾಡಿದ ಮೊದಲ ವಿದೇಶಿ ನಾಯಕ ಅಂದರೆ, ಸೌದಿ ಆರೇಬಿಯಾದ ಮಹಮದ್ ಬಿನ್ ಸಲ್ಮಾನ್. ಇವನನ್ನು ಪುಟಿನ್ ಜಿ-20 ಸಮ್ಮೇಳನದಲ್ಲಿ ಪ್ರೀತಿಯಿಂದ ಅಪ್ಪಿಕೊಂಡು ಸ್ವಾಗತಿಸುತ್ತಾನೆ.

ಕೆಲವು ದಶಕಗಳ ಹಿಂದೆ ಇಂತಹ ಸರ್ವಾಧಿಕಾರಿಗಳು ಮಿಲಿಟರಿ ದಂಗೆಯ ಮೂಲಕ ಸರ್ಕಾರವನ್ನು ವಶಪಡಿಸಿಕೊಳ್ಳುತ್ತಿದ್ದರು. ಈಗ ಚುನಾವಣೆಯಲ್ಲೇ ಗೆದ್ದು ಅಧಿಕಾರಕ್ಕೆ ಬಂದು ಕ್ರಮೇಣ, ನಿರಂಕುಶ ಪ್ರಭುಗಳಾಗುತ್ತಾರೆ. ಇವರೆಲ್ಲ ಪ್ರಾರಂಭದಲ್ಲಿ ಜನಪ್ರಿಯ ನಾಯಕರಾಗಿದ್ದವರು. ಇಲ್ಲದಿದ್ದರೆ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಇವರಲ್ಲಿ ಹೆಚ್ಚಿನವರು ಪ್ರಾರಂಭದಲ್ಲಿ ಉದಾರವಾದಿಗಳಾಗಿ ಕಾಣಿಸಿಕೊಂಡವರು. ಪ್ರಜಾಸತ್ತಾತ್ಮಕ ನಿಲುವಿನಿಂದ ಇವರೆಲ್ಲ ಪ್ರಜಾಸತ್ತೆಯ ಪ್ರೇಮಿಗಳ ಮೆಚ್ಚುಗೆಯನ್ನೂ ಗಳಿಸಿದ್ದರು. ಇಥಿಯೋಪಿಯಾದ ಅಬಿಯ್ ಅಹಮದ್‍ಗೆ 2019ರಲ್ಲಿ ನೋಬೆಲ್ ಶಾಂತಿ ಬಹುಮಾನ ಕೂಡ ಸಿಕ್ಕಿತ್ತು. ಕ್ರಮೇಣ ಇವರ ಸರ್ವಾಧಿಕಾರಿ ರೂಪ ಜಗತ್ತಿನ ಮುಂದೆ ಅನಾವರಣಗೊಳ್ಳುತ್ತ ಹೋಯಿತು. ಸರ್ವಾಧಿಕಾರಿಗಳಾದ ಮೇಲೂ ಇನ್ನೂ ಹಲವರ ಜನಪ್ರಿಯತೆ ಹಾಗೆಯೇ ಉಳಿದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ಎಲ್ಲೆಡೆ ನಿರುದ್ಯೋಗ, ಬಡತನ, ಹಣದುಬ್ಬರದ ಹೊಡೆತದಿಂದ ಜನ ಹತಾಶರಾಗಿದ್ದಾರೆ. ಜನರ ಹತಾಶೆಗೆ ಬೇರೆಯವರನ್ನು ಶತ್ರುಗಳಾಗಿ ಬಿಂಬಿಸುವ ಮಾರ್ಗವನ್ನು ಈ ನಾಯಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಅಲ್ಪಸಂಖ್ಯಾತರು, ವಲಸಿಗರು, ನಿರಾಶ್ರಿತರು ನಿಮ್ಮ ಕೆಲಸವನ್ನು ಕಸಿದುಕೊಳ್ಳುತ್ತಿದ್ದಾರೆ ಅನ್ನುವ ಪ್ರಚಾರ ಅಬ್ಬರದಿಂದ ಸಾಗಿದೆ. ಅವರನ್ನು ತಡೆಯುವ ಶಕ್ತಿಶಾಲಿಗಳನ್ನಾಗಿ ಈ ನಾಯಕರು ತಮ್ಮನ್ನು ಬಿಂಬಿಸಿಕೊಳ್ಳುತ್ತಿರುತ್ತಾರೆ. ಅವರನ್ನು ಟೀಕಿಸುವ ನ್ಯಾಯಾಧೀಶರು, ವಿರೋಧ ಪಕ್ಷದವರು, ಪತ್ರಿಕೋದ್ಯಮಿಗಳು ಸಹಜವಾಗಿಯೇ ದೇಶದ್ರೋಹಿಗಳಾಗಿ ಚಿತ್ರಿತರಾಗುತ್ತಾರೆ; ಜೊತೆಗೆ ಇವರ ವಿರುದ್ಧ ದಾಳಿ ನಿರಂತರವಾಗಿ ನಡೆಯುತ್ತಿರುತ್ತದೆ. ಇಂತಹ ಬೆಳವಣಿಗೆಗಳಿಂದಾಗಿ ಜಗತ್ತಿನಾದ್ಯಂತ ಪ್ರಜಾಸತ್ತಾತ್ಮಕ ವ್ಯವಸ್ಥೆ ಕುಸಿಯುತ್ತಿದೆ. ಇತ್ತ ಭಾರತವು ಪತ್ರಿಕಾ ಸ್ವಾತಂತ್ರ್ಯದಲ್ಲಿ 161ನೇ ಸ್ಥಾನಕ್ಕೆ ಕುಸಿದಿದೆ.

ಇಷ್ಟೆಲ್ಲ ಆದರೂ ಸಾಮಾನ್ಯ ಜನ ಬಹುತೇಕ ಇವರನ್ನೇ ಬೆಂಬಲಿಸುತ್ತಿದ್ದಾರೆ. ಅದಕ್ಕೆ ಹಲವು ವಿವರಣೆಗಳನ್ನು ಕೊಡಲಾಗಿದೆ. ಹಲವು ದೇಶಗಳಲ್ಲಿ ಸಾಮಾಜಿಕ, ರಾಜಕೀಯ ಧ್ರುವೀಕರಣ ತೀವ್ರವಾಗುತ್ತಿದೆ. ಧ್ರುವೀಕರಣಗೊಂಡಿರುವ ಸಮಾಜದಲ್ಲಿ ಮತದಾರರು ಪರ ಮತ್ತು ವಿರೋಧವಾಗಿ ಒಡೆದುಹೋಗಿರುತ್ತಾರೆ. ಒಂದಲ್ಲ ಒಂದು ‘ಪಕ್ಷಪಾತ ಹಿತಾಸಕ್ತಿ’ಯ ಪರವಾಗಿ ನಿಂತಿರುತ್ತಾರೆ. ಇಲ್ಲಿ ‘ಪಕ್ಷಪಾತ ಹಿತಾಸಕ್ತಿ’ ಅಂದರೆ, ಅದು ಒಂದು ರಾಜಕೀಯ ಪಕ್ಷವಾಗಿರಬಹುದು, ಒಬ್ಬ ನಾಯಕನಾಗಿರಬಹುದು, ಒಂದು ಧರ್ಮವಾಗಿರಬಹುದು, ಜಾತಿಯಾಗಿರಬಹುದು ಅಥವಾ ರಾಜಕೀಯ ನಿಲುವುಗಳೂ ಇರಬಹುದು. ಮತದಾರರ ಮುಂದೆ ಇರುವ ಇನ್ನೊಂದು ಆಯ್ಕೆ ಅಂದರೆ, ಈ ಪಕ್ಷಪಾತ ನಿಲುವನ್ನು ಮೀರಿ ಪ್ರಜಾಸತ್ತೆಯ ಪರವಾಗಿ ನಿಲ್ಲುವುದು. ಆದರೆ, ತೀವ್ರವಾದ ಸಾಮಾಜಿಕ ಕಂದರ ಮತ್ತು ಆಳವಾದ ರಾಜಕೀಯ ಧ್ರುವೀಕರಣ ಇರುವ ಸಮಾಜದಲ್ಲಿ ಜನ ತಮ್ಮ ಸ್ವಹಿತಾಸಕ್ತಿಗಾಗಿ ಪ್ರಜಾಸತ್ತೆಯನ್ನು ಬಲಿ ಕೊಡಲು ತಯಾರಿರುತ್ತಾರೆ. ಅಂದರೆ, ಈ ಧ್ರುವೀಕರಣ ಚುನಾಯಿತ ಪ್ರತಿನಿಧಿಗಳ ನಿರಂಕುಶ ಪ್ರವೃತ್ತಿಯನ್ನು ನಿಯಂತ್ರಿಸದಂತೆ ಜನರನ್ನು ತಡೆಯುತ್ತದೆ. ಪ್ರಜಾಸತ್ತೆಯನ್ನು ಬೆಂಬಲಿಸುವ ಜನ ಕೂಡ ತಮ್ಮ ಸ್ವಹಿತಾಸಕ್ತಿಗಾಗಿ ಪ್ರಜಾಸತ್ತೆಯನ್ನು ಬಲಿ ಕೊಡಲು ತಯಾರಿರುತ್ತಾರೆ. ಧ್ರುವೀಕರಣದಿಂದಾಗಿ ಸರ್ವಾಧಿಕಾರವನ್ನು ವಿರೋಧಿಸುವ ಮತದಾರರ ಸಾಮರ್ಥ್ಯ ಕ್ಷೀಣಿಸುತ್ತದೆ. ಅದು ನಿರಂಕುಶ ಆಳ್ವಿಕೆಯ ಮುಂದುವರಿಕೆಗೆ ಹಾದಿಯನ್ನು ಸುಗಮಗೊಳಿಸುತ್ತದೆ.

ಈ ಆಡಿಯೊ ಕೇಳಿದ್ದೀರಾ?: ಮೈಕ್ರೋಸ್ಕೋಪು | ಡಾರ್ವಿನ್‌ ಹೇಳಿದ್ದು ಅರಗಿಸಿಕೊಳ್ಳಲಾಗದಂಥ ಸತ್ಯವೇ?

ಇಲ್ಲಿ ಇನ್ನೂ ಒಂದು ಅಂಶವಿದೆ. ಈ ನಾಯಕರು ಅಧಿಕಾರದಲ್ಲಿ ಉಳಿಯುವುದಕ್ಕೆ ಏನೇನೋ ರಾಜಕೀಯ ಕಸರತ್ತನ್ನು ಮಾಡಿರುತ್ತಾರೆ. ಹಾಗಾಗಿ, ಅಧಿಕಾರ ಕಳೆದುಕೊಂಡರೆ ಶಿಕ್ಷೆಯ ಭಯ ಇರುತ್ತದೆ. ಅದನ್ನು ತಪ್ಪಿಸಿಕೊಳ್ಳುವುದಕ್ಕೆ ಇರುವ ಒಂದೇ ದಾರಿಯೆಂದರೆ, ಅಧಿಕಾರದಲ್ಲಿ ಮುಂದುವರಿಯುವುದು. ಬಹಳ ಕಾಲ ಆಡಳಿತದಲ್ಲಿ ಉಳಿಯುವುದಕ್ಕೆ ಸಂವಿಧಾನವನ್ನು ಬದಲಿಸುತ್ತಾರೆ. ನ್ಯಾಯಾಲಯವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ತಮ್ಮ ಹಿತವನ್ನು ರಕ್ಷಿಸುವವರನ್ನು ನ್ಯಾಯಾಧೀಶರನ್ನಾಗಿ ಮಾಡುತ್ತಾರೆ. ವಿರೋಧಿಗಳನ್ನು ಹತ್ತಿಕ್ಕುವುದಕ್ಕೆ ಕಾನೂನನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾರೆ. ಫಿಲಿಪ್ಪೀನ್ಸ್‌ ಅಧ್ಯಕ್ಷ ಡ್ಯುಟರ್ಟೆ ಅಲ್ಲಿನ ಸುಪ್ರೀಂ ಕೋರ್ಟಿನಲ್ಲಿ ತನ್ನನ್ನು ಬೆಂಬಲಿಸುವ ನ್ಯಾಯಾಧೀಶರನ್ನೇ ತುಂಬಿದ್ದಾನೆ. ಟರ್ಕಿಯಲ್ಲಿ ಹಲವಾರು ನ್ಯಾಯಾಧೀಶರನ್ನು ಹೊರಗೆ ಹಾಕಲಾಗಿದೆ. ಇಸ್ರೇಲಿನಲ್ಲಿ ಈ ಪ್ರಯತ್ನ ಜನರ ವಿರೋಧದಿಂದ ಸದ್ಯಕ್ಕೆ ನಿಂತಿದೆ. ಒಮ್ಮೆ ನ್ಯಾಯಾಂಗ ವ್ಯವಸ್ಥೆ ಕುಸಿದರೆ ಪ್ರಜಾಸತ್ತೆಯನ್ನು ನೆಲಸಮ ಮಾಡುವುದು ಸಲೀಸು. ಇಂದು ಜಗತ್ತಿನ ಹಲವು ದೇಶಗಳು ಈ ಹಂತದಲ್ಲಿವೆ.

ಭ್ರಮೆಗಳನ್ನು ಮಾರುತ್ತಿರುವ ಈ ನಾಯಕರುಗಳು ಸೂಚಿಸುತ್ತಿರುವ ಪರಿಹಾರಗಳು ವಿಭಜಿಸುವ ಸ್ವರೂಪದವು. ಒಟ್ಟಿಗೆ ಇರೋಣ ಅನ್ನುವ ಬದಲು ‘ಹೊರಗೆ ಹೋಗೋಣ (ಬ್ರೆಕ್ಸಿಟ್),’ ಗೋಡೆ ತೆಗೆಯೋಣ ಅನ್ನುವ ಬದಲು ‘ಗೋಡೆ ಕಟ್ಟೋಣ’ ಇತ್ಯಾದಿ ಸಲಹೆಗಳು ಸಲೀಸಾಗಿ ತೇಲಿಬರುತ್ತಿವೆ. ತಮ್ಮ ದೇಶವನ್ನು ಮತ್ತೆ ಮಹಾನ್ ದೇಶವನ್ನಾಗಿ ಮಾಡುತ್ತೇನೆ ಅನ್ನುವ ಈ ನಾಯಕರು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಒಪ್ಪಿಸಿಬಿಡುತ್ತಾರೆ. ಆಯ್ದ ಕೆಲವು ಬಂಡವಾಳಿಗರನ್ನು ರಾಷ್ಟ್ರೀಯ ಚಾಂಪಿಯನ್ನುಗಳನ್ನಾಗಿ ಮಾಡಿ, ಅವರಿಗೆ ದೇಶದ ಆರ್ಥಿಕ ಅಭಿವೃದ್ಧಿಯ ಜವಾಬ್ದಾರಿಯನ್ನು ವಹಿಸುತ್ತಾರೆ. ಅವರ ಅಭಿವೃದ್ಧಿಯಲ್ಲೇ ದೇಶದ ಅಭಿವೃದ್ಧಿಯನ್ನು ಕಾಣಲಾಗುತ್ತದೆ. ಅವರ ಅನುಕೂಲಕ್ಕಾಗಿ ಕಾನೂನುಗಳು ಬದಲಾಗುತ್ತಿರುತ್ತವೆ. ಇವೆಲ್ಲ ದೇಶದ ಒಳಿತಿನ ಹೆಸರಿನಲ್ಲಿ ನಡೆಯುತ್ತಿರುತ್ತವೆ. ಕೇವಲ ನಾಯಕರನ್ನಷ್ಟೇ ಅಲ್ಲ, ಅವರು ಬೆಂಬಲಿಸುವ ಬಂಡವಾಳಿಗರನ್ನು ಟೀಕಿಸುವುದು ಕೂಡ ದೇಶದ ವಿರುದ್ಧ ಟೀಕೆ ಮಾಡಿದಂತಾಗುತ್ತದೆ. ಲಾಭವೇ ಮೂಲ ಉದ್ದೇಶವಾಗಿರುವ ಈ ದೊಡ್ಡ ಬಂಡವಾಳಿಗರಿಂದ ದೇಶದ ನಿಜವಾದ ಬೆಳವಣಿಗೆ ಸಾಧ್ಯವಿಲ್ಲ. ಮಾಧ್ಯಮಗಳೂ ಈ ಬಂಡವಾಳಿಗರ ಕೈಸೇರುವುದರಿಂದ ಸುದ್ದಿಯಾಗುವ ಆತಂಕವೂ ಇಲ್ಲ.

ಬ್ರೆಜಿಲ್‍ ಮಾಜಿ ಅಧ್ಯಕ್ಷ ಬೋಲ್ಸನಾರೋ

ಮಹಿಳೆಯರು, ಅಲ್ಪಸಂಖ್ಯಾತರು, ದಲಿತರು ಹೊರೆಯಾಗಿ ಕಾಣುತ್ತಾರೆ. ದೌರ್ಜನ್ಯಕ್ಕೆ ಒಳಗಾದವರು ಸಂಕಟ ಹೇಳಿಕೊಳ್ಳುವುದು ಅಪರಾಧ ಆಗಿಬಿಡುತ್ತದೆ. ದೌರ್ಜನ್ಯ ಮಾಡಿದವರು ಹಾರಹಾಕಿಸಿಕೊಂಡು ಮೆರೆಯುತ್ತಿರುತ್ತಾರೆ. ಆಸ್ಪತ್ರೆ, ಶಾಲೆ ಇವೆಲ್ಲ ಅವಶ್ಯ ಮೂಲಸೌಕರ್ಯ ಆಗುವುದಿಲ್ಲ; ರಸ್ತೆ, ವಿಮಾನ ನಿಲ್ದಾಣಗಳು ಆದ್ಯತೆ ಪಡೆದುಕೊಳ್ಳುತ್ತವೆ. ಬಂಡವಾಳಿಗರಿಗೆ ನೀಡುವ ನೆರವು ಬೆಳವಣಿಗೆಗೆ ನೀಡುವ ಉತ್ತೇಜಕವಾಗಿ ತೋರುತ್ತದೆ. ಸರ್ಕಾರದ ಆರ್ಥಿಕ ನೀತಿಯಿಂದ ಅಂಚಿಗೆ ತಳ್ಳಲ್ಪಟ್ಟವರಿಗೆ ನೀಡುವ ನೆರವು ‘ರೇವ್ಡಿ’ ಅನಿಸಿಕೊಳ್ಳುತ್ತದೆ. ಜನ ಸೋಮಾರಿಗಳಾಗುತ್ತಾರೆ ಅನ್ನುವ ಟೀಕೆ ಪ್ರಾರಂಭವಾಗುತ್ತದೆ. ಬಡವರಿಗೆ ನೀಡುವ ಸಹಾಯಗಳು ಸರ್ಕಾರದ ಖಜಾನೆಗೆ ಹೊರೆಯಾಗಿ ತೋರುತ್ತವೆ.

ಹಾಗಂತ ಸಂಪೂರ್ಣ ನಿರಾಶೆ ಬೇಕಿಲ್ಲ. ಏಕೆಂದರೆ, ಚುನಾವಣಾ ವ್ಯವಸ್ಥೆ ಪೂರ್ತಿ ಸತ್ತಿಲ್ಲ. ಪರ್ಯಾಯ ಮಾಧ್ಯಮಗಳು ದನಿ ಎತ್ತುತ್ತಿವೆ. ನಮ್ಮ ನಾಯಕರು ಎಷ್ಟೇ ಮೌನವಾಗಿದ್ದರೂ ನೋವಿನ ದನಿಗಳು ಏಳುತ್ತಲೇ ಇವೆ. ಈ ಸರ್ವಾಧಿಕಾರಿಗಳು ಅಲ್ಲಿ-ಇಲ್ಲಿ ಚುನಾವಣೆಯಲ್ಲಿ ಸೋಲುತ್ತಿದ್ದಾರೆ. ಅಮೆರಿಕದಲ್ಲಿ ಟ್ರಂಪ್, ಬ್ರೆಜಿಲ್‍ನಲ್ಲಿ ಬೋಲ್ಸನಾರೋ ಸೋತಿದ್ದಾರೆ. ಟರ್ಕಿ ಮೇ 14ರಂದು ಚುನಾವಣೆಗೆ ಹೋಗುತ್ತಿದೆ. ಜನರ ಪ್ರತಿಕ್ರಿಯೆ ಭರವಸೆ ಮೂಡಿಸುತ್ತದೆ. ಇಸ್ರೇಲಿನಲ್ಲಿ ಮಹಿಳೆಯರು ತೀವ್ರವಾಗಿ ಹೋರಾಡುತ್ತಿದ್ದಾರೆ.

ಧ್ರುವೀಕರಣದ ತೀವ್ರತೆ ಕಡಿಮೆ ಆಗಬೇಕು ಅನ್ನುವುದರಲ್ಲಿ ಅನುಮಾನವಿಲ್ಲ. ಜನರನ್ನು ಒಡೆಯುವ ಕೆಲಸ ನಿಲ್ಲಬೇಕು. ಜನರನ್ನು ಜೋಡಿಸುವ ಕೆಲಸ ತ್ವರಿತವಾಗಿ ನಡೆಯಬೇಕು. ಆಗ ಜನರ ನಿಜವಾದ ಸಮಸ್ಯೆಗಳಿಗೆ ಗಂಭೀರವಾಗಿ ಗಮನ ಹರಿಸುವುದಕ್ಕೆ ಸಾಧ್ಯವಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಟಿ ಎಸ್ ವೇಣುಗೋಪಾಲ್
ಟಿ ಎಸ್ ವೇಣುಗೋಪಾಲ್
ಮೈಸೂರಿನವರು. ಓದಿದ್ದು ಮೈಸೂರು ವಿಶ್ವವಿದ್ಯಾಲಯ. ಸಂಖ್ಯಾಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ. ಅರ್ಥಶಾಸ್ತ್ರ, ಚರಿತ್ರೆ, ಸಂಗೀತ, ಅನುವಾದದಲ್ಲಿ ಆಸಕ್ತಿ.

8 COMMENTS

  1. ಟಿ ಸ್, ವೇಣುಗೋಪಾಲ್ ರವರ ಬರಹ 100%, ಸತ್ಯ
    ಇಂತಹಾ ಸತ್ಯ ಸಂಗತಿಗಳಿಂದ ಒಡಗೂಡಿದ ಬರಹಗಳು ಹೆಚ್ಚುಹೆಚ್ಚಾಗಿ ಮೂಡಿಬರಲಿ 🙏

    • ನಿಮ್ಮ ಮೆಚ್ಚುಗೆಗಾಗಿ ಧನ್ಯವಾದ ಸರ್. ಖಂಡಿತ ಇಂತಹ ಬರಹಗಳೇ ನಮ್ಮ ಆದ್ಯತೆ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

    • ನಿಜ ಸರ್… ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

  2. MICRO SOCIO ECONOMIC CHANGES, THAT MADE A RIPPLE IN HEART COLLECTIVELY INTO A WAVE
    NEEDS TO BE ANALYSED VERY USEFUL FOR RE STRENGHTENING NON DEPRIVITY IN DEMOCRACY

    • ಧನ್ಯವಾದ ಸರ್. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...