ಶಾಸಕರು ತಮ್ಮ ಕುಟುಂಬದೊಂದಿಗೆ ಪಂದ್ಯ ವೀಕ್ಷಿಸಲು ಬಯಸುವುದು ತಪ್ಪಲ್ಲ; ಆದರೆ, ಅದಕ್ಕಾಗಿ ಅಧಿವೇಶನದಲ್ಲಿ ಒತ್ತಾಯಿಸುವುದು ಮತ್ತು ಸರ್ಕಾರಿ ಯಂತ್ರವನ್ನು ಬಳಸುವುದು ತಪ್ಪು. ಅಧಿಕಾರ ಜನಸೇವೆಗೆ ಬಳಕೆಯಾಗಬೇಕೇ ಹೊರತು, ವಿಐಪಿ ವಿನೋದಕ್ಕಲ್ಲ.
ರಾಜ್ಯ ವಿಧಾನಮಂಡಲದಲ್ಲಿ ಇತ್ತೀಚೆಗೆ ಭಾರೀ ಚರ್ಚೆಯೊಂದು ನಡೆಯಿತು. ಅದು ಜನರಿಗಾಗಿ, ಜನಪರ ಯೋಜನೆಗಳಿಗಾಗಿ, ಅಭಿವೃದ್ಧಿ ಕಾರ್ಯಗಳಿಗಾಗಿ, ನಾಡಿನ ಒಳಿತಿಗಾಗಿ ನಡೆದ ಚರ್ಚೆಯಲ್ಲ. ಬದಲಿಗೆ, ಶನಿವಾರ (ಮಾರ್ಚ್ 28) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ‘ಆರ್‌ಸಿಬಿ ಮತ್ತು ಎಸ್‌ಆರ್‌ಎಚ್’ ನಡುವಿನ ಐಪಿಎಲ್ ಮೊದಲ ಪಂದ್ಯದ ವೀಕ್ಷಣೆಗೆ ವಿಐಪಿ ಟಿಕೆಟ್‌ಗಾಗಿ ನಡೆದ ಚರ್ಚೆಯಾಗಿತ್ತು.
‘ನಾವು ವಿಐಪಿಗಳು. ನಾವು ಸಾಮಾನ್ಯ ಜನರಂತೆ ಕ್ಯೂನಲ್ಲಿ ನಿಲ್ಲಲು ಸಾಧ್ಯವಿಲ್ಲ. ಎಲ್ಲೆಲ್ಲೋ ಜಾಗ ಕೊಡ್ತರೆ, ಅಲ್ಲೆಲ್ಲ ಹೋಗಿ ಕೂರಕ್ಕಾಗಲ್ಲ. ಪ್ರತಿಯೊಬ್ಬ ಶಾಸಕರಿಗೂ ತಲಾ 4 ವಿಐಪಿ ಟಿಕೆಟ್ ಕೊಡಿಸಬೇಕು’ ಎಂಬುದು ಶಾಸಕರ ವಾದವಾಗಿತ್ತು. ತಾವು ಮಾತ್ರವಲ್ಲದೆ, ತಮ್ಮ ಕುಟುಂಬದವರೂ ವಿಐಪಿ ಗ್ಯಾಲರಿಯಲ್ಲಿ ಉಚಿತವಾಗಿ ಕುಳಿತು ಟಿಕೆಟ್ ನೀಡಬೇಕೆಂಬುದು ಶಾಸಕರ ಒತ್ತಾಯವಾಗಿತ್ತು.
ಇದನ್ನು ಓದಿದ್ದೀರಾ?: ಕಾಂಗ್ರೆಸ್‌ನ ಢೋಂಗಿತನ; ಮುಸಲ್ಮಾನರಿಗೆ ನಿರಂತರ ದ್ರೋಹ
ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ವಿಧಾನಮಂಡಲದಲ್ಲಿ ಎತ್ತಿದ ಈ ಬೇಡಿಕೆಗೆ ಆಡಳಿತ ಪಕ್ಷ – ವಿಪಕ್ಷವೆನ್ನದೆ ಎಲ್ಲ ಪಕ್ಷಗಳ ಶಾಸಕರು ಸಹಮತ ವ್ಯಕ್ತಪಡಿಸಿದರು. ಟಿಕೆಟ್‌ಗಾಗಿ ಒಗ್ಗಟ್ಟು ಪ್ರದರ್ಶಿಸಿದರು. ಬಹುಶಃ, ಇದೊಂದು ಮಸೂದೆ ಏನಾದರೂ ಆಗಿದ್ದರೆ, ಯಾವುದೇ ಚರ್ಚೆಗಳೇ ಇಲ್ಲದೆ ಸರ್ವಾನುಮತದಿಂದ ಅಂಗೀಕಾರಗೊಂಡ ಮಸೂದೆಯೂ ಆಗಿಬಿಡುತ್ತಿತ್ತು. ಆದರೆ, ಇದು ಮಸೂದೆಯಾಗಿರಲಿಲ್ಲ.
ಯಾರು ಏನಂದಾರು ಎಂಬ ಸಣ್ಣ ಅಳುಕು ಇಲ್ಲದೆ, ಸ್ವಾರ್ಥಕ್ಕಾಗಿ ಸದನದಲ್ಲಿ ಇಟ್ಟ ಶಾಸಕರ ‘ವಿಐಪಿ ಟಿಕೆಟ್’ ಬೇಡಿಕೆಯನ್ನು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸಮ್ಮತಿಸಿದರು. ಪ್ರತಿಯೊಬ್ಬರಿಗೂ ತಲಾ 4 ಟಿಕೆಟ್ ನೀಡುವಂತೆ ಸರ್ಕಾರಕ್ಕೆ ಸೂಚನೆಯನ್ನೂ ನೀಡಿದರು. ಇಂದು (ಶನಿವಾರ) ನಡೆಯಲಿರುವ ಐಪಿಎಲ್ ಆಟವನ್ನು ಶಾಸಕರು ತಮ್ಮ ಸಕುಟುಂಬ ಸಮೇತ ಸ್ಟೇಡಿಯಂನಲ್ಲಿ ಕುಳಿತು ವೀಕ್ಷಿಸಲಿದ್ದಾರೆ. ಕೋಹ್ಲಿ, ರಜತ್ ಪಾಟಿದಾರ್, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯರ ಆಟಕ್ಕೆ ಕೇಕೆ ಹಾಕಲಿದ್ದಾರೆ. ಬಹುಶಃ ಈ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೇರಿಕೊಳ್ಳಬಹುದು.
ಈ ಸರ್ಕಾರಕ್ಕೆ ಎಳ್ಳಷ್ಟು ನಾಚಿಕೆ-ಅಂಜಿಕೆ ಇಲ್ಲ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ ವರ್ಷವಷ್ಟೇ ಇದೇ ಐಪಿಎಲ್ ವಿಜಯೋತ್ಸವದ ಕಾರಣಕ್ಕಾಗಿ, ತಮ್ಮ ಕಣ್ಣೆದುರೇ 11 ಮಂದಿ ಜೀವ ತೆತ್ತಿದ್ದರು. ಐಪಿಎಲ್‌ನಲ್ಲಿ ಆರ್‌ಸಿಬಿ ಮೊದಲ ಬಾರಿಗೆ ಗೆದ್ದಿದ್ದಕ್ಕಾಗಿ ತಂಡವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ಆಯೋಜಿಸಿತ್ತು. ತಾವೇನು ಕಮ್ಮಿ ಎಂಬಂತೆ ಪ್ರಚಾರದ ಗೀಳಿಗೆ ಬಿದ್ದ ಸರ್ಕಾರ ಕೂಡ, ವಿಧಾನಸೌಧದ ಮುಖ್ಯದ್ವಾರದಲ್ಲಿ ತಂಡವನ್ನು ಸನ್ಮಾನಿಸಲು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಎರಡೂ ಕಾರ್ಯಕ್ರಮಗಳಿಗೆ ಸಾವಿರಾರು ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಸ್ವೇಡಿಯಂ ಪ್ರವೇಶಿಸುವಾಗ ನೂಕು-ನುಗ್ಗಲು ಉಂಟಾಗಿ, ಕಾಲ್ತುಳಿತದಲ್ಲಿ 11 ಮಂದಿ ಅಮಾಯಕರು ಅಸುನೀಗಿದರು. ನೂರಾರು ಮಂದಿ ಗಾಯಗೊಂಡರು.
ಸರ್ಕಾರ ಮತ್ತು ಕ್ರಿಕೆಟ್ ತಂಡ ಎರಡೂ ತೋರಿದ ನಿರ್ಲಕ್ಷ್ಯದಿಂದ 11 ಕುಟುಂಬಗಳು ತಮ್ಮ ಭವಿಷ್ಯವನ್ನೇ ಕಳೆದುಕೊಂಡವು. ಈ ಕಹಿ ಘಟನೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅದಿನ್ನೂ ಮರೆಯಾಗುವ ಮೊದಲೇ, ಸಂವೇದನಾಶೂನ್ಯ ಶಾಸಕರು ಅದೇ ಕ್ರಿಕೆಟ್ ಪಂದ್ಯ ವೀಕ್ಷಿಸಲು ವಿಐಟಿ ಟಿಕೆಟ್‌ಗಳಿಗಾಗಿ ಅಧಿವೇಶನದಲ್ಲಿ ಪಟ್ಟು ಹಿಡಿದಿದ್ದಾರೆ. ಅಧಿವೇಶನದ ಘನತೆ-ಗೌರವಕ್ಕೂ ಅಪಕೀರ್ತಿ ತಂದಿದ್ದಾರೆ. ಈ ಅಧಿಕಾರಸ್ಥರ ಕತೆ ಹೀಗಾದರೆ, ಕ್ರಿಕೆಟ್ ಆಟಗಾರರು ಕೂಡ ಅವಿವೇಕಿಗಳಂತೆ ವರ್ತಿಸಿದ್ದರು. ಕಾಲ್ತುಳಿತದ ಕಾರಣಕ್ಕಾಗಿ ದಾಖಲಾದ ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸದೆ, ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ಆಡುವುದಿಲ್ಲವೆಂದು ಆರ್‌ಸಿಬಿ ಆಟಗಾರರು ಹಠಕ್ಕೆ ಬಿದ್ದಿದ್ದರು.
ಅಂದಹಾಗೆ, ವಿಧಾನಮಂಡಲದ ಅಧಿವೇಶನಗಳು ಪ್ರಜಾಪ್ರಭುತ್ವದ ಜೀವನಾಡಿಗಳು. ಇವುಗಳಿರುವುದು ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಕುರಿತು ಆರೋಗ್ಯಕರವಾಗಿ ಚರ್ಚಿಸಲು. ರಾಜ್ಯದ ಆಡಳಿತ, ಕಾನೂನು ರಚನೆ ಹಾಗೂ ಸರ್ಕಾರದ ಕಾರ್ಯನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು. ಜನಪರ ನೀತಿಗಳನ್ನು ರೂಪಿಸಲು.
ಕಳೆದ ವಾರ ಮುಗಿದ ಅಧಿವೇಶನ, ಅದೂ ಬಜೆಟ್ ಅಧಿವೇಶನದಲ್ಲಿ ಗಂಭೀರ ವಿಚಾರಗಳು ಚರ್ಚೆಯಾಗಬೇಕಿತ್ತು. ಆದರೆ, ಅಂತಹ ಯಾವುದೇ ಚರ್ಚೆಗಳು ಈ ಬಾರಿಯ ಸದನದಲ್ಲಿ ಕಾಣಲಿಲ್ಲ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಇಂಧನ ಮತ್ತು ಎಲ್‌ಪಿಜಿ ಬಿಕ್ಕಟ್ಟು ಎದುರಾಗಿದೆ. ರಾಜ್ಯದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ತೀವ್ರ ಸಂಕಷ್ಟದಲ್ಲಿವೆ. ಗೃಹ ಬಳಕೆಯ ಸಿಲಿಂಡರ್‌ಗಳು ಅಗತ್ಯಕ್ಕೆ ತಕ್ಕಂತೆ ದೊರೆಯುತ್ತಿಲ್ಲ. ಹಲವರು ಸೌದೆ ಒಲೆಗಳ ಮೊರೆ ಹೋಗುತ್ತಿದ್ದಾರೆ. ಮತ್ತೊಂದೆಡೆ, 12 ರಾಜ್ಯಗಳನ್ನು ಕಾಡಿರುವ ಮತದಾರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಎಂಬ ಪೆಡಂಭೂತ ರಾಜ್ಯದ ಮನೆ ಬಾಗಿಲಿಗೆ ಬಂದು ನಿಂತಿದೆ. ಮತಪಟ್ಟಿಯಿಂದ ಹೆಸರು ಕಳೆದುಕೊಳ್ಳುವ ಆತಂಕ ಪ್ರತಿ ಮನೆ ಮಂದಿಯನ್ನೂ ಕಾಡುತ್ತಿದೆ. ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳು ಜನರು ಬಸವಳಿಯುವಂತೆ ಮಾಡಿವೆ.
ಈ ಲೇಖನ ಓದಿದ್ದೀರಾ?: ಯುದ್ಧವೆಂಬ ವಿನಾಶವನ್ನು ಕೈ ಮಾಡಿ ಕರೆದಿರುವ ಇಬ್ಬರು ಮಹಾಮೂರ್ಖರು!
ಇಂತಹ ನಾನಾ ಸಮಸ್ಯೆ-ಸವಾಲು-ಬಿಕ್ಕಟ್ಟುಗಳು ಎದುರಾಗಿರುವ ಸಂದರ್ಭದಲ್ಲಿ, ಜನಸಾಮನ್ಯರ ಕಷ್ಟ-ನಷ್ಟಗಳ ಕುರಿತು ಚರ್ಚಿಸಬೇಕಿದ್ದ ಅಧಿವೇಶನದಲ್ಲಿ ಶಾಸಕರ ಸ್ವ-ಹಿತಾಸಕ್ತಿಗಳು ಚರ್ಚೆಯಾಗಿವೆ. ಜನಪ್ರತಿನಿಧಿಗಳು ಎನ್ನಿಸಿಕೊಂಡವರು ಕ್ರಿಕೆಟ್ ಪಂದ್ಯದ ಟಿಕೆಟ್‌ಗಳಿಗಾಗಿ, ‘ವಿಐಪಿ’ ಸ್ಥಾನಮಾನ ಟ್ರೀಟ್‌ಮೆಂಟ್‌ಗಾಗಿ ಹಾತೊರೆದಿದ್ದಾರೆ.
ಈ ವಿಐಪಿ ಸಂಸ್ಕೃತಿ ಭಾರತೀಯ ರಾಜಕೀಯದಲ್ಲಿ ಬಹುಕಾಲದಿಂದಲೂ ಟೀಕೆಗೆ ಒಳಗಾಗಿದೆ. ಶಾಸಕರು ‘ನಾವು ವಿಐಪಿ’ಗಳು ಎಂದು ಹೇಳುವಾಗ ಅವರು ‘ತಾವು ಜನರಿಂದ ಆಯ್ಕೆಯಾದವರು’ ಎಂಬುದನ್ನು ಮರೆಯುತ್ತಿದ್ದಾರೆ. ‘ತಮ್ಮ ಅಧಿಕಾರವು ಜನರ ಸೇವೆಗಾಗಿಯೇ ಹೊರತು ವೈಯಕ್ತಿಕ ಸುಖಕ್ಕಾಗಿ ಅಲ್ಲ’ ಎಂಬುದನ್ನು ಮರೆಮಾಚುತ್ತಿದ್ದಾರೆ. ಕುಟುಂಬಸಮೇತ ಐಪಿಎಲ್ ಪಂದ್ಯವೊಂದನ್ನು ವೀಕ್ಷಿಸಲು ಸರ್ಕಾರದಿಂದ ಸೌಲಭ್ಯ ಕೇಳುತ್ತಿದ್ದಾರೆ. ಕರ್ನಾಟಕದ ಘನತೆವೆತ್ತ ರಾಜಕಾರಣದ ಮಾನವನ್ನು ಕಳೆಯುತ್ತಿದ್ದಾರೆ.
ಶಾಸಕರು ತಮ್ಮ ಕುಟುಂಬದೊಂದಿಗೆ ಪಂದ್ಯ ವೀಕ್ಷಿಸಲು ಬಯಸುವುದು ತಪ್ಪಲ್ಲ; ಆದರೆ, ಅದಕ್ಕಾಗಿ ಅಧಿವೇಶನದಲ್ಲಿ ಒತ್ತಾಯಿಸುವುದು ಮತ್ತು ಸರ್ಕಾರಿ ಯಂತ್ರವನ್ನು ಬಳಸುವುದು ತಪ್ಪು. ಅಧಿಕಾರ ಜನಸೇವೆಗೆ ಬಳಕೆಯಾಗಬೇಕೇ ಹೊರತು, ವಿಐಪಿ ವಿನೋದಕ್ಕಲ್ಲ.



