ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಾಗಿ ಆಗಮಿಸಿದ್ದ ತಂಡವೊಂದರ ಮೇಲೆ ಸ್ಥಳೀಯ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಬೆಟ್ಟದ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿದೆ. ಹಲ್ಲೆಯಲ್ಲಿ ಹಲವರು ಗಾಯಗಗೊಂಡಿದ್ದು, 7 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಜಾನೆ ದೇವಸ್ಥಾನದ ಆವರಣದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ತಂಡದ ಮೇಲೆ ಯುವಕರ ಗುಂಪು ಮುಗಿಬಿದ್ದಿದೆ. “ಇಲ್ಲಿ ಚಿತ್ರೀಕರಣ ಮಾಡಲು ಯಾರು ಅನುಮತಿ ನೀಡಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ. ಸಾರ್ವಜನಿಕ ದೇವಸ್ಥಾನದ ಆವರಣದಲ್ಲಿ ಫೋಟೋ ತೆಗೆಯಲು ವಿಶೇಷ ಅನುಮತಿಯ ಅಗತ್ಯವಿಲ್ಲ ಎಂದು ಫೋಟೋಗ್ರಾಫರ್‌ಗಳು ಸಮರ್ಥಿಸಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ತಾರಕ್ಕೇರಿದೆ.
ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮದೇನೂ ತಪ್ಪಿಲ್ಲ ಎಂದು ಹೇಳಿದರೂ ಪುಂಡರ ಗುಂಪು ಏಕಾಏಕಿ ಹಲ್ಲೆಗೆ ಮುಂದಾಗಿದ್ದು ಮನಬಂದಂತೆ ಥಳಿಸಿದೆ. ಹಲ್ಲೆ ನಡೆಸದಂತೆ ಮನವಿ ಮಾಡಿಕೊಂಡರೂ ಬಿಡದೆ, ಹಲ್ಲೆ ನಡೆಸಿದ್ದೂ ಅಲ್ಲದೆ, ಅವರ ಕ್ಯಾಮೆರಾ ಹಾಗೂ ಇತರೆ ವಸ್ತುಗಳನ್ನು ಹಾನಿಗೊಳಿಸಲು ಯತ್ನಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಎರಡೂ ಗುಂಪು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿವೆ. ದೂರು ದಾಖಲಿಸಲು ಬಂದಾಗಲೂ ಪೊಲೀಸ್ ಠಾಣೆ ಎದುರೇ ಪರಸ್ಪರ ಹಲ್ಲೆ ನಡೆಸಿದ್ದಾರೆ.
ಗಲಾಟೆಗೂ ಮುನ್ನ ಕ್ಯಾಮರಾಮನ್ ಕೂಡ ಯುವಕರ ಕುರಿತು ಅಸಭ್ಯವಾಗಿ ಮಾತನಾಡಿದ್ದಾರೆ. ಕೆರಳಿದ ಕೆಲವರು ಹಲ್ಲೆಗೆ ಮುಂದಾಗಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.
ಇದನ್ನೂ ಓದಿ: ಹಾಸನ | ಭಗತ್ ಸಿಂಗ್ ಹುತಾತ್ಮ ದಿನದಂದು ಪ್ರತಿಜ್ಞೆ; ನಮ್ಮೂರ ಶಾಲೆ, ನಮ್ಮ ಹಕ್ಕು!
ಪೊಲೀಸರು ವಿಡಿಯೋ ಆಧಾರದ ಮೇಲೆ ತನಿಖೆ ಕೈಗೊಂಡಿದ್ದಾರೆ. ಪ್ರವಾಸಿ ತಾಣಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಕ್ರಮ ಜರುಗಿಸಬೇಕು ಮತ್ತು ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




