ಜನರಲ್ಲಿ ಭಯ, ಗೊಂದಲ ಮತ್ತು ಅನುಮಾನ ಹೆಚ್ಚುತ್ತಿರುವಾಗ ಸರ್ಕಾರಗಳು ಪಾರದರ್ಶಕ ಮಾಹಿತಿಯನ್ನು ನೀಡಬೇಕು. ಹಠಾತ್ ಸಾವುಗಳ ಕುರಿತು ಸಮಗ್ರ ರಾಷ್ಟ್ರೀಯ ಅಧ್ಯಯನ ನಡೆಸಬೇಕು. ಸಾಮಾನ್ಯರ ಸಾವು ಕೂಡ ಸರ್ಕಾರಕ್ಕೆ ಮುಖ್ಯವೆನಿಸಬೇಕು. ಇದು ಗಂಭೀರ ಆರೋಗ್ಯ ಸಮಸ್ಯೆ ಎಂಬುದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅರಿಯಬೇಕು.
ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಅವರ ಹಠಾತ್ ಸಾವು, ಜನಸಾಮಾನ್ಯರನ್ನು ಬೆಚ್ಚಿಬೀಳಿಸಿದೆ. ಕೇವಲ 47ರ ಹರೆಯದ ಆರೋಗ್ಯವಂತ ದೇಹ, ಲವಲವಿಕೆಯ ಸ್ವಭಾವ, ಸ್ನೇಹಜೀವಿ ದಿಲೀಪ್ ರಾಜ್, ಹಠಾತ್ ಹೃದಯಾಘಾತದಿಂದ ಸಾವಿಗೀಡಾದದ್ದನ್ನು ನಂಬುವುದು ಕಷ್ಟವಾಗಿದೆ. ಅರಗಿಸಿಕೊಳ್ಳುವುದು ಅಸಾಧ್ಯವಾಗಿದೆ.
ದಿಲೀಪ್ ರಾಜ್ ರಂಗಭೂಮಿ, ಸಿನೆಮಾ, ಕಿರುತೆರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು. ನಟನೆ, ನಿರ್ದೇಶನ, ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದರು. ಜನಪ್ರಿಯ ವ್ಯಕ್ತಿಯಾಗಿದ್ದರು. ಅಂತಹ ವ್ಯಕ್ತಿಗೆ ಹಠಾತ್ ಸಾವು ಸಂಭವಿಸಿತು ಎಂದಾಕ್ಷಣ ನೆನಪಾಗಿದ್ದು- 46ರ ಹರೆಯದ ನಟ ಪುನೀತ್ ರಾಜಕುಮಾರ್ ಅವರ ಹಠಾತ್ ಸಾವು. ಕಾಕತಾಳೀಯವೋ ಏನೋ, ‘ಮಿಲನ’ ಎಂಬ ಚಿತ್ರದಲ್ಲಿ ಒಬ್ಬರು ನಾಯಕರಾದರೆ, ಮತ್ತೊಬ್ಬರು ಖಳನಾಯಕರಾಗಿ ನಟಿಸಿದ್ದರು. ಫಿಟ್‌ನೆಸ್ ಬಗ್ಗೆ ಇಬ್ಬರೂ ಅತೀವ ಆಸಕ್ತಿ ಹೊಂದಿದ್ದರು. ಇಬ್ಬರ ವಯಸ್ಸು ಹೆಚ್ಚೂಕಡಿಮೆ ಒಂದೇ. ಹಾಗಾಗಿ ಇವರಿಬ್ಬರ ಹಠಾತ್ ಸಾವಿನಲ್ಲಿ ಸಾಮ್ಯತೆ ಇರುವಂತಿದೆ. ಆ ಕಾರಣಕ್ಕಾಗಿಯೇ ಹಠಾತ್ ಸಾವುಗಳ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ.
ಇತ್ತೀಚಿಗೆ ವರ್ಷಗಳಲ್ಲಿ ಹಠಾತ್ ಸಾವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ವಿಶೇಷವಾಗಿ ಯುವಕರು, ಕೆಲಸದ ಒತ್ತಡದಲ್ಲಿರುವವರು, ವ್ಯಾಯಾಮ ಮಾಡುವಾಗ ಕುಸಿದು ಬೀಳುವವರು ಅಥವಾ ಯಾವುದೇ ದೊಡ್ಡ ಕಾಯಿಲೆ ಇಲ್ಲದಿದ್ದರೂ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಸಹಜವಾಗಿಯೇ ಜನರ ಆತಂಕಕ್ಕೆ, ಕಳವಳಕ್ಕೆ ಕಾರಣವಾಗುತ್ತಿದೆ.
ಇದನ್ನು ಓದಿದ್ದೀರಾ?: ಪೆರಿಯಾರ್- ಅಂಬೇಡ್ಕರ್ ಹೆಸರು ಹೇಳಿಕೊಂಡು ಜ್ಯೋತಿಷಿಗೆ ಮಣೆ ಹಾಕುವುದು ಡಂಭಾಚಾರ
ಇದೇ ಸಂದರ್ಭದಲ್ಲಿ, ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ(NCRB) ವರದಿ ಹೊರಬಿದ್ದಿದೆ. ಆ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿದಿನ 52 ಮಂದಿ ಹಠಾತ್ ಸಾವಿಗೆ ಬಲಿಯಾಗುತ್ತಿದ್ದಾರೆ. 2022ರಲ್ಲಿ ಹೃದಯ ಸಂಬಂಧಿ ಸಾವುಗಳ ಸಂಖ್ಯೆಯಲ್ಲಿ ಶೇ. 12.5ರಷ್ಟು ಏರಿಕೆಯಾಗಿದೆ. ಹಠಾತ್ ಸಾವಿಗೆ 2023ರಲ್ಲಿ 63,609; 2024ರಲ್ಲಿ 76,024 ಮಂದಿ ಬಲಿಯಾಗಿದ್ದಾರೆ. ಅದರಲ್ಲೂ 30ರಿಂದ 60ರ ಮಧ್ಯವಯಸ್ಕರಲ್ಲಿಯೇ ಹೆಚ್ಚಾಗಿ ಹಠಾತ್ ಸಾವು ಸಂಭವಿಸಿದೆ. ಇದು ಕೇವಲ ಅಂಕಿ-ಅಂಶಗಳಲ್ಲ, ನೂರಾರು ಕುಟುಂಬಗಳ ಆಧಾರಸ್ತಂಭಗಳು ಕುಸಿದ ಕಹಿ ಸತ್ಯ.
ಈ ಹಠಾತ್ ಸಾವುಗಳಿಗೆ ಹೃದಯ ಸಂಬಂಧಿ ಕಾಯಿಲೆಗಳು, ಆಹಾರ ಕ್ರಮಗಳು, ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳು, ಜೀವನಶೈಲಿಯ ಬದಲಾವಣೆ, ಮಾನಸಿಕ ಒತ್ತಡ ಮತ್ತು ಆತಂಕ, ನಿಗದಿತ ಆರೋಗ್ಯ ತಪಾಸಣೆ ಮಾಡಿಸದಿರುವುದೇ ಪ್ರಮುಖ ಕಾರಣಗಳು ಎಂದು ತಜ್ಞರು ತಿಳಿಸಿದ್ದಾರೆ. ಆದರೆ, ದಿಲ್ಲಿಯ ಆಸ್ಪತ್ರೆಯೊಂದು 2019ರ ಜನವರಿಯಿಂದ 2025ರ ಜನವರಿವರೆಗೆ ಸುಮಾರು 6,139 ಮಂದಿ ಹೃದ್ರೋಗಿಗಳನ್ನು ಸಂಶೋಧನೆಗೆ ಒಳಪಡಿಸಿದೆ. ಆ ಸಂಶೋಧನಾ ವರದಿ ಪ್ರಕಾರ, ಹೃದಯದ ರಕ್ತನಾಳದಲ್ಲಿ ಹೃದಯದ ಸ್ನಾಯುಗೆ ರಕ್ತ ಸರಬರಾಜು ಹಠಾತ್ ಆಗಿ ನಿಲ್ಲುವ ಗಂಭೀರ ತೊಂದರೆಯ ಕಾರಣಕ್ಕೆ ಹೃದಯಾಘಾತ ಸಂಭವಿಸುತ್ತದೆ ಎನ್ನಲಾಗಿದೆ.
ಜೊತೆಗೆ, ವೈದ್ಯಕೀಯ ವಲಯದ ಅಧ್ಯಯನಗಳು- ಕೋವಿಡ್ ನಂತರ ಹೃದಯ ಸಂಬಂಧಿ ಸಮಸ್ಯೆಗಳು, ರಕ್ತ ಹೆಪ್ಪುಗಟ್ಟುವಿಕೆ, ಶ್ವಾಸಕೋಶದ ಹಾನಿ, ಮಾನಸಿಕ ಒತ್ತಡ ಮತ್ತು ಜೀವನಶೈಲಿಯ ಬದಲಾವಣೆಗಳು ಜನರ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಿವೆ ಎಂದು ಸ್ಪಷ್ಟಪಡಿಸುತ್ತಿವೆ. ಸೋಂಕಿನಿಂದ ಗುಣಮುಖರಾದ ಬಳಿಕವೂ ಕೆಲವರಿಗೆ ದೌರ್ಬಲ್ಯ, ಉಸಿರಾಟದ ತೊಂದರೆ, ಅಸಹಜ ಹೃದಯ ಬಡಿತ ಮುಂದುವರಿದಿದೆ. ಇದೇ ಕಾರಣದಿಂದ ಯುವಕರಲ್ಲೂ ಹಠಾತ್ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರಬಹುದು ಎನ್ನಲಾಗುತ್ತಿದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಕೋವಿಡ್ ಸೋಂಕಿನ ಅಲೆಗಳು ಕಡಿಮೆಯಾದ ಬಳಿಕ, ಹಠಾತ್ ಸಾವುಗಳು ಏಕೆ ಹೆಚ್ಚುತ್ತಿವೆ ಎಂಬುದಾಗಿದೆ. ಕೆಲವೇ ಕ್ಷಣಗಳ ಹಿಂದೆ ಆರೋಗ್ಯವಂತರಂತೆ ಕಾಣುತ್ತಿದ್ದ ಯುವಕ-ಯುವತಿಯರು ಕುಸಿದು ಬೀಳುವುದು, ಪ್ರಾಣ ಕಳೆದುಕೊಳ್ಳುವುದು ಜನರಲ್ಲಿ ಭಯ ಮತ್ತು ಅನುಮಾನಗಳನ್ನು ಹುಟ್ಟಿಸಿದೆ.
ಆ ಅನುಮಾನಗಳನ್ನು ಪರಿಹರಿಸಬೇಕಾದ ಸರ್ಕಾರಗಳು ಮೌನಕ್ಕೆ ತಲೆಬಾಗಿವೆ. ಹಠಾತ್ ಸಾವುಗಳ ಕುರಿತು ಸಾಮಾಜಿಕ ಜಾಲತಾಣಗಳು ಜೀವಂತವಾಗಿವೆ, ವದಂತಿಗಳನ್ನು ಹಬ್ಬಿಸುತ್ತಿವೆ. ಇದು ಸಹಜವಾಗಿಯೇ ಜನಸಾಮಾನ್ಯರನ್ನು ಗೊಂದಲಕ್ಕೆ ದೂಡುತ್ತದೆ. ಅದಕ್ಕೆ ಪೂರಕವಾಗಿ ಕೊರೋನ ಲಸಿಕೆಗಳಿಂದ ಅಡ್ಡ ಪರಿಣಾಮಗಳಾಗಬಹುದು ಎನ್ನುವುದನ್ನು ಲಸಿಕೆ ತಯಾರಿಕೆಯ ಕಂಪೆನಿಗಳು ಒಪ್ಪಿಕೊಂಡಿದ್ದೂ ಇದೆ. ಕೋವಿಡ್ ಕಾಲದಲ್ಲಿ, ಸಾವು-ಬದುಕಿನ ನಡುವೆ ಹೋರಾಡುತ್ತಿರುವಾಗ, ತುರ್ತು ಚಿಕಿತ್ಸೆಯ ಅನಿವಾರ್ಯತೆ ಎದುರಾದಾಗ, ಪ್ರಧಾನಿ ಮೋದಿಯವರೇ ಲಿಸಿಕೆ ಕಡ್ಡಾಯ ಎಂದರು. ಅಕಸ್ಮಾತ್, ಈಗ ಸಂಭವಿಸುತ್ತಿರುವ ಹಠಾತ್ ಸಾವುಗಳಿಗೆ ಆ ಲಸಿಕೆ ಕಾರಣವಾದರೆ, ಮೋದಿಯವರು ಆ ಸಾವುಗಳ ಹೊಣೆ ಹೊರಬೇಕಾಗುತ್ತದಲ್ಲವೇ?
ಕರೋನೋತ್ತರ ದಿನಗಳಲ್ಲಿ ಹಠಾತ್ ಸಾವುಗಳಿಗೂ ಲಸಿಕೆಗೂ ಸಂಬಂಧವಿದೆಯೇ ಎನ್ನುವ ಪ್ರಶ್ನೆಯನ್ನು ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಅವರು ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿಸಿದ್ದರು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದರು. ಇದೇ ಸಮಯದಲ್ಲಿ ಹಾಸನ ಜಿಲ್ಲೆಯಲ್ಲಿ, ಒಂದೇ ತಿಂಗಳಿನಲ್ಲಿ 20 ಜನರ ಹಠಾತ್ ಸಾವು ಸಂಭವಿಸಿ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿತ್ತು. ಒಂದು ಕಡೆಯಿಂದ ಪತ್ರ, ಮತ್ತೊಂದು ಕಡೆಯಿಂದ ಹಠಾತ್ ಸಾವುಗಳು- ಇದರಿಂದ ಎಚ್ಚೆತ್ತ ರಾಜ್ಯ ಸರಕಾರ ಡಾ. ರವೀಂದ್ರ ನಾಥ್ ನೇತೃತ್ವದಲ್ಲಿ ಸಮಿತಿ ರಚಿಸಿತು. ಹತ್ತು ದಿನಗಳ ಒಳಗೆ ವರದಿ ಕೊಡಲು ಆದೇಶಿಸಿತು. ಸಮಿತಿಯೂ ಅಷ್ಟೇ ಆತುರದಲ್ಲಿ ವರದಿ ನೀಡಿತು. ಹೃದಯಾಘಾತಗಳಿಗೆ ಜೀವನ ಶೈಲಿಯೇ ಮುಖ್ಯ ಕಾರಣ ಎಂದು ಷರಾ ಬರೆಯಿತು. ಅಲ್ಲಿಗೆ ಸರ್ಕಾರ ಸುಮ್ಮನಾಯಿತು.
ಅದೇ ರೀತಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ನಡೆಸಿದ ಸುದೀರ್ಘ ಅಧ್ಯಯನವು, ಕರೋನಾ ಲಸಿಕೆ ಪಡೆದಿದ್ದರಿಂದ ಹಠಾತ್ ಸಾವುಗಳು ಸಂಭವಿಸುತ್ತಿಲ್ಲ ಎಂದಿತು. ಆ ಮೂಲಕ ಲಸಿಕೆ ಪೂರೈಕೆ ಮಾಡಿದ ಕಂಪನಿಗಳನ್ನು ಆರೋಪಗಳಿಂದ ಮುಕ್ತಗೊಳಿಸಿತು. ಅಲ್ಲಿಗೆ, ಆ ಕಂಪನಿಗಳಿಂದ ಕೋಟಿಗಟ್ಟಲೆ ಚುನಾವಣೆ ಬಾಂಡ್ ಮೂಲಕ ಹಣ ಪಡೆದಿದ್ದ ಬಿಜೆಪಿ ಕೂಡ ಬಚಾವಾಯಿತು.
ಇದನ್ನು ಓದಿದ್ದೀರಾ?: ಉಷ್ಣ ಹವೆ, ಗೊಬ್ಬರ ಕೊರತೆ: ಬಿಗಡಾಯಿಸಲಿರುವ ಕೃಷಿ ಬಿಕ್ಕಟ್ಟು
ಪರಿಸ್ಥಿತಿ ಹೀಗಿರುವಾಗ, ಸರ್ಕಾರಗಳ ಪಾತ್ರ ಅತ್ಯಂತ ಮುಖ್ಯವಾಗುತ್ತದೆ. ಜನರಲ್ಲಿ ಭಯ, ಗೊಂದಲ ಮತ್ತು ಅನುಮಾನ ಹೆಚ್ಚುತ್ತಿರುವಾಗ ಸರ್ಕಾರಗಳು ಪಾರದರ್ಶಕ ಮಾಹಿತಿಯನ್ನು ನೀಡಬೇಕು. ಹಠಾತ್ ಸಾವುಗಳ ಕುರಿತು ಸಮಗ್ರ ರಾಷ್ಟ್ರೀಯ ಅಧ್ಯಯನ ನಡೆಸಬೇಕು. ಯುವಜನತೆಯಲ್ಲಿ ಹೃದಯ ಸಂಬಂಧಿ ತಪಾಸಣೆ, ಸಾರ್ವಜನಿಕ ಆರೋಗ್ಯ ಜಾಗೃತಿ, ಕೆಲಸದ ಸ್ಥಳಗಳಲ್ಲಿ ಆರೋಗ್ಯ ಪರೀಕ್ಷೆ ಮತ್ತು ಮಾನಸಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವತ್ತ ಗಮನ ಹರಿಸಬೇಕು.
ಹಾಗೆಯೇ ಜನಪ್ರಿಯ ನಟರೊಬ್ಬರ ಸಾವು ಸಂಭವಿಸಿದಾಗ ಚರ್ಚೆ ಮುನ್ನಲೆಗೆ ಬರುವುದಲ್ಲ; ಸಾಮಾನ್ಯರ ಸಾವು ಕೂಡ ಸರ್ಕಾರಕ್ಕೆ ಮುಖ್ಯವೆನಿಸಬೇಕು. ಕೇವಲ ‘ಭಯ ಬೇಡ’ ಎಂದು ಹೇಳುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ; ಇದು ಗಂಭೀರ ಆರೋಗ್ಯ ಸಮಸ್ಯೆ ಎಂಬುದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅರಿಯಬೇಕು.




