ಹಿಜಾಬ್‌ಗೆ ಅವಕಾಶ ಕೊಟ್ಟಿರುವುದು ದೊಡ್ಡ ಅಪರಾಧವೆಂಬಂತೆ ಬಿಂಬಿಸುತ್ತಿರುವವರು, ಜನಿವಾರಕ್ಕೆ ಅವಕಾಶ ಕೊಟ್ಟಿರುವ ಬಗ್ಗೆ ಯಾಕೆ ಟೀಕಿಸುತ್ತಿಲ್ಲ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ʼಬೇಟಿ ಬಚಾವೋ, ಬೇಟಿ ಪಡಾವೋʼ ಎನ್ನುವ ಕಾರ್ಯಕ್ರಮವನ್ನು ಜಾರಿಗೆ ತರುತ್ತಾರೆ. ಇದರ ಮೂಲಕ ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಮಾತನಾಡುತ್ತಾರೆ. ಆದರೆ ರಾಜ್ಯದಲ್ಲಿ ಅವರದೇ ಪಕ್ಷದ ನಾಯಕರು ಬೇಟಿ ಪಡಾವೋ (ಹೆಣ್ಣು ಮಕ್ಕಳ ಶಿಕ್ಷಣ) ವಿರೋಧಿಸುತ್ತಾರೆ.
ರಾಜ್ಯ ಸರ್ಕಾರ 13 ಮೇ 2026ರಂದು ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡಿದಂತೆ, ಬೇರೆ ಧರ್ಮದವರು ಅವರ ಆಚರಣೆಯಂತೆ ಜನಿವಾರವನ್ನು, ರುದ್ರಾಕ್ಷಿ, ಟಬರ್ನ್ ಸೇರಿದಂತೆ ಅವರ ಸಾಂಪ್ರದಾಯಿಕ ಸಂಕೇತಗಳನ್ನು ಬಳಸುವಂತೆ ಆದೇಶದಲ್ಲಿ ತಿಳಿಸಿದೆ.
2022ರಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ವಸ್ತ್ರಸಂಹಿತೆ ನಿಗದಿಪಡಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಮೇ 13ರ ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಾಸಕ ರಿಜ್ವಾನ್ ಅರ್ಷದ್ ಜೊತೆಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ವಿಚಾರವನ್ನು ತಿಳಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆದೇಶದಂತೆ, ʼ12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರು ʼಇವ ನಮ್ಮವ, ಇವ ನಮ್ಮವʼ ಎನ್ನುವ ಮೂಲಕ ಎಲ್ಲರನ್ನೂ ಒಳಗೊಳ್ಳುವ ಚಿಂತನೆಯನ್ನು ನೀಡಿದ್ದರು. ಅದನ್ನು ಅನುಷ್ಠಾನಗೊಳಿಸುವ ಆಶಯವನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಈ ಹಿಂದಿನ ಬಜೆಟ್ ವೇಳೆ ಸಿದ್ದರಾಮಯ್ಯನವರು ಹೇಳಿದ್ದರು. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಸಮಾನತೆ ಹಾಗೂ ಸೌಹಾರ್ದತಗೆ ನೆರವಾಗಲು ಈ ಆದೇಶವನ್ನು ಕೈಗೊಳ್ಳಲಾಗಿದೆ.
ಮಧುಬಂಗಾರಪ್ಪ ಅವರು ಹೇಳಿದಂತೆ ʼಸಾಂಪ್ರದಾಯಿಕ ಹಾಗೂ ಆಚರಣೆ ಆಧರಿಸಿದ ಸಂಕೇತಗಳನ್ನು ಧರಿಸುವಂತೆ ಅಥವಾ ಬಲವಂತವಾಗಿ ತೆಗೆಯುವಂತೆ ವಿದ್ಯಾರ್ಥಿಗಳನ್ನು ಒತ್ತಾಯ ಮಾಡುವಂತಿಲ್ಲ. ಶಿಸ್ತು, ಸುರಕ್ಷತೆ ಮತ್ತು ವಿದ್ಯಾರ್ಥಿಯ ಗುರುತಿಸುವುದಕ್ಕೆ ಅಡ್ಡಿಯಾಗದಂತೆ ನಿಗದಿತ ಸಮವಸ್ತ್ರದೊಂದಿಗೆ ಸಮಾನ ಸ್ವರೂಪದ ಸಾಂಪ್ರದಾಯಿಕ ಹಾಗೂ ಆಚರಣೆ ಆಧರಿಸಿದ ಸಂಕೇತಗಳನ್ನು ಧರಿಸಬಹುದು. ಅಂತಹ ವಿದ್ಯಾರ್ಥಿಗಳಿಗೆ ಯಾವುದೇ ಶಿಕ್ಷಣ ಸಂಸ್ಥೆ ತರಗತಿ ಅಥವಾ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅವಕಾಶ ನಿರಾಕರಿಸುವಂತಿಲ್ಲʼ ಎಂದು ಸ್ಪಷ್ಟಪಡಿಸಿದ್ದಾರೆ.
ಅದೇ ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಅವರು ಮಾತನಾಡಿ ʼಕಳೆದ ತಿಂಗಳು ಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ತೀರ್ಮಾನವನ್ನು ಕೈಗೊಂಡಿದೆʼ ಎಂದು ತಿಳಿಸಿದ್ದಾರೆ.
ಈ ಹಿಜಾಬ್ ಪ್ರಕರಣ ಆರಂಭವಾಗಿದ್ದೆ 2022ರಲ್ಲಿ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬರುವುದಕ್ಕೆ ಉಡುಪಿಯ ಪಿಯು ಕಾಲೇಜಿನಲ್ಲಿ ಅವಕಾಶ ನಿರಾಕರಿಸಲಾಗಿತ್ತು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಆ ಬಳಿಕ 2022 ಫೆಬ್ರವರಿ 5ರಂದು ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆಯನ್ನು ನಡೆಸಿದ ಹೈಕೋರ್ಟ್‌ನ ತ್ರಿಸದಸ್ಯ ಪೀಠ ʼಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆ ಅಲ್ಲʼ ಎನ್ನುವ ಅಭಿಪ್ರಾಯಪಟ್ಟು, ಸರ್ಕಾರದ ಆದೇಶವನ್ನು ಸಾಂವಿಧಾನಿಕವಾಗಿ ಎತ್ತಿ ಹಿಡಿದಿತ್ತು.
ಹೈಕೋರ್ಟ್ ನೀಡಿದ ಆ ತೀರ್ಪು, ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು. ಇಲ್ಲಿಗೆ ಸುಮ್ಮನಾಗದೆ ಈ ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದಂತಹ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಕ್ಟೋಬರ್ 2022ರಂದು ಎರಡು ರೀತಿಯ ತೀರ್ಪನ್ನು ನೀಡಿತು. ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಅಂದಿನ ನ್ಯಾ. ಹೇಮಂತ್ ಗುಪ್ತ ಮತ್ತು ನ್ಯಾನ್ಯಾ. ಸುಧಾಂಶು ದುಲಿಯಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ವಿಭಿನ್ನ ತೀರ್ಪನ್ನು ಪ್ರಕಟಿಸಿತ್ತು. ಅದರಲ್ಲಿ ನ್ಯಾ. ಹೇಮಂತ್ ಗುಪ್ತಾ ಅವರು ರಾಜ್ಯ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದರೆ, ನ್ಯಾ. ಸುಧಾಂಶು ದುಲಿಯಾ ಅವರು ʼಹಿಜಾಬ್ ಧರಿಸುವುದು ಅವರ ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡೆತಡೆ ಇರಬಾರದುʼ ಎಂದು ಹೇಳುವ ಮೂಲಕ ಸರ್ಕಾರದ ನಿಷೇಧವನ್ನು ರದ್ದುಗೊಳಿದ್ದರು.
ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ತೀರ್ಪು ವಿಭಿನ್ನವಾಗಿದ್ದರಿಂದ, ಈ ಪ್ರಕರಣದ ಅಂತಿಮ ತೀರ್ಮಾನಕ್ಕಾಗಿ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು. ಅಲ್ಲಿಂದ ಇಲ್ಲಿಯ ತನಕವೂ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಈ ನಡುವೆಯೇ ರಾಜ್ಯ ಸರ್ಕಾರದ ಈ ತೀರ್ಮಾನ ಹೊರಬಿದ್ದಿದೆ. ರಾಜ್ಯ ಸರ್ಕಾರದ ಆದೇಶವು ಎಲ್ಲರಿಗೂ ಮುಕ್ತವಾಗಿ ಶಿಕ್ಷಣವನ್ನು ಸಿಗವಂತೆ ಮಾಡುವ ಜೊತೆಗೆ, ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಬಹಳ ಮಹತ್ವದ ನಿರ್ಣಯವಾಗಿದೆ.
ಬಿಜೆಪಿ ಸರ್ಕಾರ 2022ರಲ್ಲಿ ತೆಗೆದುಕೊಂಡಿದ್ದ ಆದೇಶದಿಂದ, ಅನೇಕ ವಿದ್ಯಾರ್ಥಿನಿಯರು ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಇದಲ್ಲದೇ ಅನೇಕರು ಪರೀಕ್ಷೆಗೆ ಹಾಜರಾಗಲೂ ಹಿಂದೇಟನ್ನು ಹಾಕಿದ್ದರು. ಈ ಎಲ್ಲಾ ಗೊಂದಲಗಳಿಗೆ ಸರ್ಕಾರ ಈಗ ತೆರವು ಎಳೆದಿದ್ದು, ವೈಯಕ್ತಿಕ ಸ್ವಾತಂತ್ರ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಆದರೆ ಬಿಜೆಪಿಯವರು ಯಥಾ ಪ್ರಕಾರ ರಾಜ್ಯ ಸರ್ಕಾರದ ತೀರ್ಮಾನವನ್ನು ಟೀಕಿಸುತ್ತಾರೆ. ವಿರೋಧ ಪಕ್ಷದಲ್ಲಿ ಕೂತು ಟೀಕಿಸುವುದು ಅವರ ಹಕ್ಕು. ಆದರೂ ಬಿಜೆಪಿಯವರು ಎಲ್ಲರನ್ನೂ ಒಳಗೊಳ್ಳುವ ವಿಚಾರ ಬಂದಾಗಲೂ, ಎಂದಿನಂತೆ ಮುಸ್ಲಿಂ ದ್ವೇಷಿ ರಾಜಕಾರಣವನ್ನು ಮೆರೆಯುತ್ತಾರೆ.
ಎಲ್ಲರನ್ನೂ ಒಳಗೊಳ್ಳುವ ʼಇವ ನಮ್ಮವ, ಇವ ನಮ್ಮವʼ ಎಂದ ಬಸವಣ್ಣನವರ ನಾಡಿನಲ್ಲಿ, ಬಿಜೆಪಿಯವರು ದಿನಬೆಳಗಾದರೆ ಕೋಮು ದ್ವೇಷದವನ್ನೇ ಬಿತ್ತುತ್ತಿದ್ದಾರೆ. ಬಿಜೆಪಿಯವರು ನೀಡುವ ಪ್ರಚೋದನೆಗೆ ಬಲಿಯಾಗಿದ್ದು ಮಾತ್ರ, ಅಮಾಯಕ ವಿದ್ಯಾರ್ಥಿಗಳು. ಅದರಲ್ಲೂ ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ನಂತರವಂತೂ, ಪ್ರತಿದಿನ ರಾಜ್ಯದಲ್ಲಿ ಕೋಮು ಘಟನೆಗಳಿಗೆ ಪ್ರಚೋದಿಸುವ ಕೆಲಸವೇ ಹೆಚ್ಚಾಗಿ ನಡೆದಿತ್ತು.
ನಿಮಗೆಲ್ಲ ನೆನಪಿರಬಹುದು, ಈ ರಾಜ್ಯದಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ಎಂಬ ಘಟನೆ ನಡೆದಿದ್ದೆ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ. ಈ ಘಟನೆಯ ಜೊತೆಗೆ ಮತೀಯ ಗೂಂಡಾಗಿರಿ, ಮತಾಂತರ ನಿಷೇಧ ಕಾನೂನು, ಮುಸ್ಲಿಂ ಸಮುದಾಯದ ವ್ಯಾಪಾರಿಗಳನ್ನು ಹೊರಗಿಡುವ ಚರ್ಚೆ, ಪಠ್ಯಪುಸ್ತಕ ಕೇಸರೀಕರಣ, ಮಸೂದ್, ಹರ್ಷ, ಪ್ರವೀಣ್, ಫಾಸಿಲ್ ಕೊಲೆ, ಕೋಮುದ್ವೇಷಿ ಸಾವರ್ಕರ್ ವೈಭವೀಕರಣ, ಈದ್ಗಾ ಮೈದಾನಗಳಲ್ಲಿ ಗಣಪತಿ ಉತ್ಸವ, ಹಲಾಲ್ ಕಟ್, ಜಟ್ಕಾ ಕಟ್, ಉರಿಗೌಡ ನಂಜೇಗೌಡ ವಿವಾದ, ಹೀಗೆ ಒಂದೇ ಎರಡೇ? ಸಮುದಾಯಗಳ ನಡುವೆ ಸಂಘರ್ಷ ಸೃಷ್ಟಿಸುವ ವಿಕೃತಿಯನ್ನು ಬೊಮ್ಮಾಯಿ ಸರ್ಕಾರ ಮೆರೆದಿತ್ತು. ಇವರಿಗೆ ಸಂಘಪರಿವಾರದ ಆದೇಶ ಇತ್ತೋ ಏನೋ?
ಈಗ ರಾಜ್ಯ ಸರ್ಕಾರದ ನಿರ್ಧಾರ ಹೊರಬಿದ್ದ ತಕ್ಷಣ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಪ್ರತಿಕ್ರಿಯಿಸಿ, ʼದಾವಣಗೆರೆ ಉಪಚುನಾವಣೆ ಸುತ್ತ ನಡೆದ ಘಟನೆಗಳ ನಂತರ ಮುಸ್ಲಿಮರ ಆಕ್ರೋಶಕ್ಕೆ ಬೆದರಿರುವ ಕಾಂಗ್ರೆಸ್ ಸರ್ಕಾರ, ಹಿಜಾಬ್ ಎನ್ನುವ ಅಸ್ತ್ರವನ್ನು ಕೈಗೆತ್ತಿಕೊಂಡಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ 2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವಸ್ತ್ರ ಸಂಹಿತೆಯನ್ನು, ಸಿದ್ದರಾಮಯ್ಯ ಸರ್ಕಾರ ಗಾಳಿಗೆ ತೂರಿ ಒಂದು ಸಮುದಾಯವನ್ನು ಓಲೈಕೆಗೆ ಮುಂದಾಗಿರುವುದು ಯಾವ ಸೀಮೆಯ ಜಾತ್ಯತೀತತೆʼ ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು ʼಹಿಜಾಬ್‌ಗೆ ಹಸಿರು ನಿಶಾನೆ ತೋರಿರುವ ಸರ್ಕಾರ, ಕೇಸರಿ ಶಾಲಿಗೆ ನಿಷೇಧ ಹೇರಿದೆʼ ಅಂತ ಹೇಳಿದ್ದಾರೆ. ಅಶೋಕ್ ಅವರು, ರಾಜ್ಯ ಸರ್ಕಾರದ ಆದೇಶವನ್ನು ಸರಿಯಾಗಿ ಗಮನಿಸಿಲ್ಲ ಅನ್ನಿಸುತ್ತದೆ. ಕೇವಲ ಹಿಜಾಬ್ ಮಾತ್ರವಲ್ಲ, ಜನಿವಾರವನ್ನೂ ಧರಿಸಲು ಅವಕಾಶವನ್ನು ಮಾಡಿಕೊಡಲಾಗಿದೆ. ಇದರ ಬಗ್ಗೆ ಅಶೋಕ್ ಅವರು ಯಾಕೆ ಪ್ರಶ್ನಿಸುವುದಿಲ್ಲ?
ಬಿಜೆಪಿಯವರು ಕೊಡುವ ಹೇಳಿಕೆಯಲ್ಲಿ ಯಾವಾಗಲೂ ಧ್ವಂದ್ವ ನಿಲುವು ತಳೆಯುವುದು ಯಾಕೆ? ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಅನ್ಯಾಯ ಮಾಡಿದೆ ಎಂದು ಬಾಯಿ ಬಡಿದುಕೊಂಡ ಬಿಜೆಪಿ ಅವರು, ನಿಮ್ಮ ಪಕ್ಷದಲ್ಲಿ ಎಷ್ಟು ಮುಸ್ಲಿಮರಿಗೆ ಅವಕಾಶ ಮಾಡಿಕೊಟ್ಟಿದ್ದೀರಿ? ನಿಮ್ಮ ಪಕ್ಷದ ಅಭ್ಯರ್ಥಿ ಮತ್ತು ದಾವಣಗೆರೆ ಉಪಚುನಾವಣೆ ಪ್ರಚಾರಕ್ಕೆ ಬಂದಿದ್ದ ಬಹುತೇಕ ನಾಯಕರು ʼಕಾಂಗ್ರೆಸ್ ನಿಮಗೆ (ಮುಸ್ಲಿಂ ಸಮುದಾಯಕ್ಕೆ) ಅನ್ಯಾಯ ಮಾಡಿದೆ. ಬಿಜೆಪಿ ನಿಮ್ಮನ್ನು ಒಳಗೊಳ್ಳುತ್ತದೆ. ಹಿಂದೂಗಳಿಗೆ ಮಾತ್ರವಲ್ಲ ಎಲ್ಲರನ್ನೂ ಒಳಗೊಳ್ಳುವವರು ಅಭ್ಯರ್ಥಿʼ ಎಂದು ಘೋಷಿಸಿದ್ದರು.
ಈಗ ಶಿಕ್ಷಣದ ವಿಚಾರದಲ್ಲಿ, ಮುಕ್ತವಾಗಿ ಕಲಿಯುವ ಅವಕಾಶವನ್ನು ಮಾಡಿಕೊಡಲು ರಾಜ್ಯ ಸರ್ಕಾರ ತೆಗೆದುಕೊಂಡಿರುವಾಗ ತೀರ್ಮಾನವನ್ನು ಟೀಕಸುತ್ತಿರುವುದರ ಹಿಂದೆ ನಿಮ್ಮ ಮುಸ್ಲಿಂ ದ್ವೇಷಿ ನಡೆ ಸ್ಪಷ್ಟವಾಗಿ ಕಾಣುತ್ತಿದೆ.
ಇದೇ ಬಿಜೆಪಿ ನಾಯಕರು ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆದಿದ್ದಕ್ಕೆ ಬೀದಿ ನಾಟಕಗಳನ್ನು ಮಾಡಿ, ಹಿಂದುಗಳಿಗೆ ಅನ್ಯಾಯವಾಗುತ್ತಿದೆ ಎಂದರು. ಆದರೆ ಕಳೆದ ವಾರ ನಡೆದ ನೀಟ್ ಪರೀಕ್ಷೆಯ ಪೇಪರ್ ಲೀಕ್ ಬಗ್ಗೆ ಮಾತನಾಡುತ್ತಲೇ ಇಲ್ಲ. ನೀಟ್ ಪರೀಕ್ಷೆ ರದ್ದಾಗಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.
ಹಿಜಾಬ್‌ಗೆ ಅವಕಾಶ ಕೊಟ್ಟಿರುವುದು ದೊಡ್ಡ ಅಪರಾಧವೆಂಬಂತೆ ಬಿಂಬಿಸುತ್ತಿರುವವರು, ಜನಿವಾರಕ್ಕೆ ಅವಕಾಶ ಕೊಟ್ಟಿರುವ ಬಗ್ಗೆ ಯಾಕೆ ಟೀಕಿಸುತ್ತಿಲ್ಲ. ಶಿಕ್ಷಣದ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಸಂವಿಧಾನದ ಪ್ರಕಾರ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು. ಅದರಂತೆ ಅವರವರ ಧರ್ಮವನ್ನು ಅನುಸರಿಸುವುದು ಕೂಡ ಸಂವಿಧಾನ ನಮಗೆ ಕಲ್ಪಿಸಿಕೊಟ್ಟಿರುವ ಅವಕಾಶ.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ʼಬೇಟಿ ಬಚಾವೋ, ಬೇಟಿ ಪಡಾವೋʼ ಎನ್ನುವ ಕಾರ್ಯಕ್ರಮವನ್ನು ಜಾರಿಗೆ ತರುತ್ತಾರೆ. ಇದರ ಮೂಲಕ ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಮಾತನಾಡುತ್ತಾರೆ. ಆದರೆ ರಾಜ್ಯದಲ್ಲಿ ಅವರದೇ ಪಕ್ಷದ ನಾಯಕರು ಬೇಟಿ ಪಡಾವೋ (ಹೆಣ್ಣು ಮಕ್ಕಳ ಶಿಕ್ಷಣ) ವಿರೋಧಿಸುತ್ತಾರೆ. ಬಿಜೆಪಿ ನಾಯಕರು ದ್ವಂದ್ವ ನಿಲುವಿನಿಂದ ಹೊರಬರಬೇಕಿದೆ. ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗುವ ಬಗ್ಗೆ ಚಿಂತಿಸಬೇಕಿದೆ. ವಿಶೇಷವಾಗಿ ಶಿಕ್ಷಣದ ವಿಚಾರದಲ್ಲಿ ಕೋಮುದ್ವೇಷವನ್ನು ನಿಲ್ಲಿಸಬೇಕಿದೆ.




