ಈ ದಿನ ಸಂಪಾದಕೀಯ | ಅಂತೂ ಚಾಲ್ತಿಗೆ ಬಂತು… ‘ಗೋದಿ ಮೀಡಿಯಾ ಗೋ ಬ್ಯಾಕ್’

Date:

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳಬೇಕಾದರೆ, ಪತ್ರಿಕೋದ್ಯಮಕ್ಕೆ ಅಂಟಿದ ಈ 'ಗೋದಿ' ರೋಗಕ್ಕೆ ಮದ್ದು ಅರೆಯಲೇಬೇಕಿದೆ, ಅದಕ್ಕೆ ದೇಶದ ಯುವಜನತೆಯ 'ಗೋದಿ ಮೀಡಿಯಾ ಗೋ ಬ್ಯಾಕ್' ಘೋಷಣೆ ಸರಿಯಾಗಿದೆ. ಜನ ಪರ್ಯಾಯ ಜನಪರ ಮಾಧ್ಯಮಗಳತ್ತ ಒಲವು ತೋರಲು ಇದು ಸೂಕ್ತ ಸಮಯವಾಗಿದೆ.

ಮುಂಗಾರು ಅಧಿವೇಶನದ ಮೂರನೇ ದಿನ ಟಿಎಂಸಿ ಸಂಸದರಾದ ಕಲ್ಯಾಣ್ ಬ್ಯಾನರ್ಜಿಯವರು ಸಂಸತ್ ಭವನದ ಕಡೆ ಹೆಜ್ಜೆ ಹಾಕುತ್ತಿದ್ದರು. ಅವರಿಗೆ ಎದುರಾದ ಪತ್ರಕರ್ತರ ಗುಂಪು, ‘ಸರ್, ಪತ್ರಕರ್ತರ ಮೇಲೆ ಹಲ್ಲೆಯಾಗಿದೆ, ಹಲ್ಲೆ ಮಾಡಿದ್ದು ಸರಿಯೇ’ ಎಂದು ಪ್ರಶ್ನಿಸಿದರು. ಆ ಪ್ರಶ್ನೆಗೆ ಅವರಿಗೆ ಬೇಕಾದ ಉತ್ತರ ಬರಬಹುದೆಂದು ನಿರೀಕ್ಷಿಸಿದ್ದರು. ಅದನ್ನೇ ದಿನವಿಡಿ ಬಿತ್ತರಿಸಿ, ವಿದ್ಯಾರ್ಥಿಗಳನ್ನು ಖಳನಾಯಕರನ್ನಾಗಿ ಚಿತ್ರಿಸಲು ನೋಡಿದ್ದರು. ಆದರೆ ಕಲ್ಯಾಣ್, ‘ನೀವು ಯಾಕೆ ಅಲ್ಲಿಗೆ ಹೋದ್ರಿ, ಅವರಿಗೆ ಗೊತ್ತು ನೀವು ಗೋದಿ ಮೀಡಿಯಾದವರು ಅಂತ. ದೇಶದ ಯುವಕರ ಜೊತೆ ನೀವು ಹೀಗೆ ಆಟವಾಡಿದರೆ ಅವರು ಆಕ್ರೋಶಗೊಳ್ಳದೆ ಇರುತ್ತಾರೆಯೇ, ಅವರು ಸರಿಯಾಗಿಯೇ ಮಾಡಿದ್ದಾರೆ’ ಎಂದರು.

- Advertisement -

ದೆಹಲಿಯ ಜಂತರ್ ಮಂತರ್‍‌ನಿಂದ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಹೊರಟ ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನಾ ಮೆರವಣಿಗೆಯ ಮೇಲೆ ಗೂಬೆ ಕೂರಿಸಲು ಕಲ್ಲು ತುಂಬಿದ್ದ ಟ್ರಂಕ್‌ವೊಂದನ್ನು ಆ ಸ್ಥಳದಲ್ಲಿ ತಂದು ನಿಲ್ಲಿಸಲಾಗಿತ್ತು. ಎರಡು-ಮೂರು ಹಳೆಯ ವಾಹನಗಳನ್ನು ನಿಲ್ಲಿಸಿ, ಅವುಗಳ ಗ್ಲಾಸ್ ಒಡೆದುಹಾಕಲಾಗಿತ್ತು. ಅದರ ವಿಡಿಯೋ ಮಾಡಿ ಸುದ್ದಿ ಸಂಸ್ಥೆಗೆ ತಲುಪಿಸಲಾಗಿತ್ತು. ವಿದ್ಯಾರ್ಥಿಗಳ ಮೆರವಣಿಗೆ ಆರಂಭವಾಗುವುದಕ್ಕೆ ಮುಂಚೆಯೇ ಆ ಪ್ರತಿಷ್ಠಿತ ಸುದ್ದಿ ಸಂಸ್ಥೆ, ‘ಪೊಲೀಸರತ್ತ ಕಲ್ಲು ತೂರಾಟ, ಗಾಯ, ಆಸ್ಪತ್ರೆಗೆ ದಾಖಲು’ ಎಂದು ವರದಿ ಮಾಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಇನ್ನು ಶಾಂತಿಯುತ ಮೆರವಣಿಗೆ ಹೊರಟ ಯುವಸಮೂಹವನ್ನು ತಡೆಯಲು ಪೊಲೀಸರು ಬ್ಯಾರಿಕೇಡ್‌ಗಳಿಂದ ಬಂದೋಬಸ್ತ್ ಮಾಡಿದ್ದಲ್ಲದೆ, ಶಸ್ತ್ರಸಜ್ಜಿತರಾಗಿ ನಿಂತಿದ್ದರು. ಮೆರವಣಿಗೆ ಮುಂದುವರೆದಂತೆ ಪೊಲೀಸರೇ ಗೊಂದಲ ಸೃಷ್ಟಿಸಲು ಲಾಠಿ ಬೀಸಿದರು. ನಮ್ಮದೇ ಮನೆಯ ಮಕ್ಕಳು ಎನ್ನದೆ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದರು. ಈ ಕ್ರೌರ್ಯವನ್ನು ಯಥಾವತ್ ವರದಿ ಮಾಡಬೇಕಾದ, ವಿದ್ಯಾರ್ಥಿಗಳ ಬೆಂಬಲವಾಗಿ ನಿಲ್ಲಬೇಕಾದ ಮುಖ್ಯವಾಹಿನಿ ಮಾಧ್ಯಮಗಳು ಪ್ರಭುತ್ವದ ಪದತಲದಲ್ಲಿ ಪವಡಿಸಿದ್ದವು.

ಇದನ್ನು ಓದಿದ್ದೀರಾ?: ʼಲಾಠಿʼಗಳಿಗೆ ಮೊಳೆ ಹೊಡೆದು ವಿದ್ಯಾರ್ಥಿಗಳನ್ನು ಬಾರಿಸಿದ ಪೊಲೀಸರ ವರ್ತನೆ ಬರ್ಬರ!

ಮುಖ್ಯವಾಹಿನಿ ಮಾಧ್ಯಮಗಳು ನಮ್ಮ ಅಳಲನ್ನು ಆಲಿಸುತ್ತಿಲ್ಲ ಎನ್ನುವುದು ಯುವ ಪೀಳಿಗೆಗೆ ಈ ಮೊದಲೇ ಮನವರಿಕೆಯಾಗಿತ್ತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಒಮ್ಮೆಯೂ ತುಟಿ ಬಿಚ್ಚದ, ಚರ್ಚಿಸದ, ಪ್ರಶ್ನಿಸದ, ವಿದ್ಯಾರ್ಥಿಗಳ ಆತ್ಮಹತ್ಯೆಗೂ ಅಲ್ಲಾಡದ ‘ಗೋದಿ ಮೀಡಿಯಾ’ ಜನವಿರೋಧಿಯಾಗಿ ಬದಲಾಗಿದ್ದನ್ನು ಕಂಡಿತ್ತು. ಅಷ್ಟೇ ಅಲ್ಲ, ಉಪವಾಸನಿರತ ​ಸೋನಂ ವಾಂಗ್ಚುಕ್ ಚೈನಾ ಏಜೆಂಟ್, ಅಭಿಜಿತ್ ದೀಪ್ಕೆ ಅಮೆರಿಕಾ ಏಜೆಂಟ್, ಜಿರಳೆ ಗ್ಯಾಂಗ್, ಉಗ್ರರು, ಭಯೋತ್ಪಾದಕರು, ಎಲ್‌ಟಿಟಿಇ, ಬಾಂಗ್ಲಾದೇಶಿ, ಖಲಿಸ್ತಾನಿ, ಫಾರಿನ್ ಫಂಡ್… ಹೀಗೆ ಕೂತಲ್ಲೇ ಕಲ್ಪಿಸಿ, ಚಿತ್ರಿಸಿ, ಸುಳ್ಳನ್ನೇ ನೂರು ಬಾರಿ ಕೂಗಿ ಹೇಳಿ ಜನರ ಕಣ್ಣಿಗೆ ಮಣ್ಣೆರಚುತ್ತಲೇ ಸಾಗಿದ್ದಕ್ಕೆ ಸಾಕ್ಷಿ ಇತ್ತು. ಹಾಗಾಗಿ ವಿದ್ಯಾರ್ಥಿಗಳು ತಾವೇ ಖುದ್ದು ಸಿಟಿಜನ್ ಜರ್ನಲಿಸ್ಟ್‌ಗಳಾಗಿದ್ದರು. ತಮ್ಮ ಮೊಬೈಲ್‌ಗಳು ಕ್ಯಾಮರಗಳಾಗಿ, ಖುದ್ದಾಗಿ ಕಂಡಿದ್ದು ವರದಿಯಾಗಿ, ಸೋಷಿಯಲ್ ಮೀಡಿಯಾ ಮೂಲಕ ಸತ್ಯವನ್ನು ಜಗತ್ತಿನ ಮುಂದಿಟ್ಟಿದ್ದರು.

ದೆಹಲಿ ಪೊಲೀಸರು ಯಾವ ಮಟ್ಟಿನ ದುಷ್ಟರು ಎನ್ನುವುದು ಜಗತ್ತಿಗೆ ಗೊತ್ತಾಗಿದ್ದೇ ಸೋಷಿಯಲ್ ಮೀಡಿಯಾದಿಂದ, ವಿದ್ಯಾರ್ಥಿಗಳೇ ರೆಕಾರ್ಡ್ ಮಾಡಿ ಹಂಚಿಕೊಂಡ ವೀಡಿಯೋಗಳಿಂದ. ಈ ದುಷ್ಟರೊಂದಿಗೆ ಮೋದಿ ಸರ್ಕಾರ ನಿಯೋಜಿಸಿದ ಬಾಡಿಗೆ ಗೂಂಡಾಗಳು ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದರು. ಆದರೆ ‘ಗೋದಿ ಮೀಡಿಯಾ’ ವಿದ್ಯಾರ್ಥಿಗಳನ್ನೇ ಗೂಂಡಾಗಳು ಎಂದು ಬಿಂಬಿಸಲು ಹೋಗಿ ತೀರಾ ಕೆಳಮಟ್ಟಕ್ಕೆ ಇಳಿಯಿತು. ಏಟು ತಿಂದ, ದೌರ್ಜನ್ಯಕ್ಕೆ ಒಳಗಾದ ಯುವಜನರನ್ನು ಮಾತನಾಡಿಸುವ ಗೋಜಿಗೆ ಹೋಗದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪೊಲೀಸರನ್ನು ಮಾತ್ರ ಮಾತನಾಡಿಸಿ ಸುದ್ದಿ ಮಾಡಿತು. ಅದರಲ್ಲೂ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಂತೂ ಸುಳ್ಳನ್ನೇ ಮುಖಪುಟ ಸುದ್ದಿಯನ್ನಾಗಿಸಿತು. ಅದನ್ನು ಹೆಕ್ಕಿ ತೆಗೆದ ಪ್ರೊ. ಯೋಗೇಂದ್ರ ಯಾದವ್, ಅವರ ‘ಪತ್ರಿಕಾಧರ್ಮ’ವನ್ನು ದೇಶದ ಮುಂದೆ ಬೆತ್ತಲು ಮಾಡಿದ್ದೂ ಆಯಿತು.

ಇಷ್ಟೆಲ್ಲಾ ರಕ್ತಪಾತವಾಗುತ್ತಿರುವಾಗ, ಭವಿಷ್ಯ ಕಳೆದುಕೊಂಡ ವಿದ್ಯಾರ್ಥಿಗಳು ಬೀದಿಯಲ್ಲಿ ಹೆಣವಾಗುತ್ತಿರುವಾಗ, ಈ ‘ಗೋದಿ ಮೀಡಿಯಾ’ ಮತ್ತೆ ಜಂತರ್ ಮಂತರ್ ಸ್ಥಳಕ್ಕಾಗಮಿಸಿ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪ್ರಭುತ್ವದ ಪರ ಪುಂಗಿ ಊದಲು ಹವಣಿಸುತ್ತಿತ್ತು. ಅಂತಹ ಹಲವಾರು ಗೋದಿ ಮೀಡಿಯಾದ ಪತ್ರಕರ್ತರನ್ನು ಪತ್ತೆಹಚ್ಚಿದ ವಿದ್ಯಾರ್ಥಿಗಳು, ಅವರ ಕ್ಯಾಮರಾಗಳಿಗೆ ರಟ್ಟುಗಳನ್ನು ಅಡ್ಡ ಹಿಡಿದು, ನಿಮ್ಮ ‘ಸೇವೆ’ ಸಾಕು ಎಂದರು. ಅವರ ಜೇಬಿಗೆ ದುಡ್ಡು ತುರುಕಿ ‘ಸುದ್ದಿ’ ಮಾಡಿ ಎಂದರು. ಕೊನೆಗೆ ‘ಗೋ ಬ್ಯಾಕ್ ಗೋದಿ ಮೀಡಿಯಾ’ ಎಂಬ ಘೋಷಣೆಗಳೊಂದಿಗೆ ಪ್ರತಿಭಟನಾ ಸ್ಥಳದಿಂದ ಹೊರಗಟ್ಟಿದರು.

ಇದು ಆಗಲೇಬೇಕಿತ್ತು, ಆಗಿದೆ. ದೇಶದ ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.

ಸ್ವಾತಂತ್ರ್ಯಾನಂತರ ದೇಶದ ಪತ್ರಿಕೋದ್ಯಮ ಇಂತಹ ಹೀನಾಯ ಸ್ಥಿತಿಗೆ, ಸಾರ್ವಜನಿಕ ಅವಹೇಳನಕ್ಕೆ, ಅವಮಾನಕ್ಕೆ ಎಂದೂ ತುತ್ತಾಗಿರಲಿಲ್ಲ. ದೇಶದ ಪತ್ರಿಕೋದ್ಯಮಕ್ಕೆ ಇಂತಹದ್ದೊಂದು ಸ್ಥಿತಿ ಎದುರಾಗುತ್ತದೆ ಎಂದು ಪತ್ರಕರ್ತರು ಊಹಿಸಿರಲಿಲ್ಲ. ಪ್ರಸ್ತುತ ಪತ್ರಿಕೋದ್ಯಮ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ, ಜನವಿರೋಧಿಯಾಗಿ, ಅತ್ಯಂತ ಅಪಾಯಕಾರಿಯಾಗಿ ಬದಲಾಗಿದ್ದು, ಪ್ರಧಾನಿ ಮೋದಿಯವರ ಅವಧಿಯಲ್ಲಿಯೇ. ಒಂದು ಅಧ್ಯಯನ ವರದಿಯ ಪ್ರಕಾರ, ಶೇ. 82ರಷ್ಟು ಭಾರತೀಯ ಮಾಧ್ಯಮಗಳು ಬಿಜೆಪಿ ಮತ್ತು ಆಡಳಿತ ಪಕ್ಷದ ಪರ ಒಲವು ಹೊಂದಿವೆ ಎಂಬ ಆರೋಪ ಕೇಳಿಬಂದಿದೆ. ಇದು ಕೇವಲ ರಾಜಕೀಯ ಆರೋಪವಲ್ಲ, ಭಾರತೀಯ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ, ನೈತಿಕತೆಗೆ, ಮೌಲ್ಯಕ್ಕೆ ಸಂಬಂಧಿಸಿದ ಗಂಭೀರ ಪ್ರಶ್ನೆ.

ಇದನ್ನೂ ಓದಿ: ಸೋನಂ ವಾಂಗ್ಚುಕ್ ನಿರಶನ ಮತ್ತು ಮೋದಿ ಮೌನ

ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಕೆಲಸ ಪ್ರಭುತ್ವದ ಪರ ನಿಲ್ಲುವುದಲ್ಲ, ಸತ್ಯದ ಪರ ನಿಲ್ಲುವುದು. ಪ್ರಭುತ್ವವನ್ನು ಪ್ರಶ್ನಿಸುವುದು. ಅನ್ಯಾಯ-ಅಕ್ರಮಗಳನ್ನು ಖಂಡಿಸುವುದು. ಅಸಹಾಯಕರ ದನಿಯಾಗುವುದು. ಅಂಚಿನ ಜನರ ಜೊತೆಗಿರುವುದು. ಆದರೆ, ಪತ್ರಕರ್ತರು ಮೋದಿ ಬಿಸ್ಕೆಟ್ ತಿನ್ನುವ ಗೋದಿ ಮೀಡಿಯಾದವರಾಗಿದ್ದಾರೆ. ಕಣ್ಣೆದುರು ನಡೆಯುತ್ತಿರುವ ತಪ್ಪನ್ನು ತಪ್ಪು ಅಂತ ಹೇಳಲಾಗದ ಹೇಡಿಗಳಾಗಿದ್ದಾರೆ. ಮೋದಿಯನ್ನು ದೇವರನ್ನಾಗಿ ಬಿಂಬಿಸುತ್ತಲೇ ಗುಲಾಮರಾಗಿ ಬದಲಾಗಿದ್ದಾರೆ.  

ಹಾಗಾಗಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳಬೇಕಾದರೆ, ಪತ್ರಿಕೋದ್ಯಮಕ್ಕೆ ಅಂಟಿದ ಈ ‘ಗೋದಿ’ ರೋಗಕ್ಕೆ ಮದ್ದು ಅರೆಯಲೇಬೇಕಿದೆ, ಅದಕ್ಕೆ ದೇಶದ ಯುವಜನತೆಯ ‘ಗೋದಿ ಮೀಡಿಯಾ ಗೋ ಬ್ಯಾಕ್’ ಘೋಷಣೆ ಸರಿಯಾಗಿದೆ. ಜನ ಪರ್ಯಾಯ ಜನಪರ ಮಾಧ್ಯಮಗಳತ್ತ ಒಲವು ತೋರಲು ಇದು ಸೂಕ್ತ ಸಮಯವಾಗಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಕಲ್ಯಾಣ | ಪ್ರತಾಪೂರ ಗ್ರಾ.ಪಂ.ನಲ್ಲಿ ₹25.34 ಲಕ್ಷ ಅಕ್ರಮದ ಆರೋಪ, ತನಿಖೆಗೆ ಆದೇಶವಿದ್ದರೂ ವಿಳಂಬ!

ಬಸವಕಲ್ಯಾಣ ತಾಲೂಕಿನ ಪ್ರತಾಪೂರ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಆಯೋಗದ ಅನುದಾನದಡಿ...

ವಿಜಯಪುರ | ಜಿಪಂನಿಂದ ಉಚಿತ ಕಂಪ್ಯೂಟರ್ ತರಬೇತಿ: ಅಭ್ಯರ್ಥಿಗಳಿಗೆ ₹1,500 ಸಹಾಯಧನ

ನಿರುದ್ಯೋಗಿ ಯುವಜನರನ್ನು ಸ್ವಯಂ ಉದ್ಯೋಗದತ್ತ ಪ್ರೇರೇಪಿಸುವ ಉದ್ದೇಶದಿಂದ ವಿಜಯಪುರ ಜಿಲ್ಲಾ ಪಂಚಾಯಿತಿಯ...

ಟಿಬೆಟ್‌ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ: ಜಲಪ್ರಳಯದ ಬೆನ್ನಲ್ಲೇ ಚೀನಾಗೆ ಮತ್ತೊಂದು ಆಘಾತ

ಚೀನಾದ ಟಿಬೆಟ್ ಭಾಗದಲ್ಲಿ ಗುರುವಾರ ರಾತ್ರಿ 7.0 ತೀವ್ರತೆಯ ಭಾರಿ ಭೂಕಂಪ...

ಕಲಬುರಗಿ | ಬಸ್‌ನಲ್ಲಿ ಮರೆತು ಹೋಗಿದ್ದ ಚಿನ್ನಾಭರಣ ಮರಳಿಸಿದ ಚಾಲಕ, ನಿರ್ವಾಹಕ

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟುಹೋಗಿದ್ದ ಬೆಳ್ಳಿ...