ಹೊಸಗಾಲಕ್ಕೆ ತಕ್ಕಂತೆ ಗಾಂಧಿ, ನೆಹರೂ, ಇಂದಿರಾ ಹೇಳಿದ್ದನ್ನು ಕಿಲುಬು ಹಿಡಿದ ಕಾಂಗ್ರೆಸ್ಸಿಗರೇ ಬಿಟ್ಟಿದ್ದಾರೆ. ಬದಲಾಗುತ್ತಿದ್ದಾರೆ. ಬದಲಾಗದ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಬ್ರಾಹ್ಮಣ್ಯ, ವರ್ಣವ್ಯವಸ್ಥೆಯತ್ತ ಮರುಳುತ್ತಿದ್ದಾರೆ. ನಾಡದ್ರೋಹಿಗಳಾಗಲು ಬಯಸುತ್ತಿದ್ದಾರೆ.
‘ವಿದ್ಯಾರ್ಥಿಗಳು ಹಿಂದಿ ಅಥವಾ ಸಂಸ್ಕೃತವನ್ನು ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ದೃಷ್ಟಿಕೋನದಿಂದ ಕಲಿಯುತ್ತಿದ್ದರು. ಆದರೆ ಈಗ ತೃತೀಯ ಭಾಷೆಯು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಇದರಿಂದ ಮಕ್ಕಳ ಭಾಷಾ ಸಾಮರ್ಥ್ಯ ಕುಂಠಿತಗೊಳ್ಳಲಿದೆ’ ಎಂದಿದ್ದಾರೆ ಮಾಜಿ ಶಿಕ್ಷಣ ಸಚಿವ, ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ.
‘ಹಿಂದಿ ಪರೀಕ್ಷೆಯ ಅಂಕ ಲೆಕ್ಕಕ್ಕಿಲ್ಲ ಎಂದಿದ್ದರೆ, ಶಾಲೆ ಆರಂಭವಾಗುತ್ತಿದ್ದಂತೆಯೇ ಹೇಳಬೇಕಿತ್ತು. ಪರೀಕ್ಷೆ ಮಧ್ಯೆ ಹೇಳುತ್ತಾರೆಯೇ? ಶಿಕ್ಷಣ ಸಚಿವರಿಗೆ ಶಿಕ್ಷಣವೇ ಇಲ್ಲ. ಇದು ಅತ್ಯಂತ ಹೊಣೆಗೇಡಿ ಸರ್ಕಾರ’ ಎಂದಿದ್ದಾರೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.
ಒಬ್ಬರು ಮಾಜಿ ಶಿಕ್ಷಣ ಸಚಿವರು, ಇನ್ನೊಬ್ಬರು ಹಾಲಿ ಕೇಂದ್ರ ಸಚಿವರು- ಇಬ್ಬರದೂ ಒಂದೇ ವಾದ. ಇವರಷ್ಟೇ ಅಲ್ಲ, ಭಾರತೀಯ ಜನತಾ ಪಕ್ಷದ ನಾಯಕರಾದ ಆರ್. ಅಶೋಕ್, ಅಶ್ವಥನಾರಾಯಣ, ವಿಜಯೇಂದ್ರ, ಸುರೇಶ್ ಕುಮಾರ್- ಇವರೆಲ್ಲರದೂ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ತೃತೀಯ ಭಾಷೆಯಾದ ಹಿಂದಿಯನ್ನು ಕೈಬಿಟ್ಟಿದ್ದು ಸರಿ ಇಲ್ಲ ಎನ್ನುವ ವಾದವೇ ಆಗಿದೆ. ಅವರ ವಿರೋಧದಲ್ಲಿ ಪರೀಕ್ಷಾ ವೇಳೆಯಲ್ಲಿ ಕೈ ಬಿಟ್ಟಿದ್ದು ಸರಿ ಇಲ್ಲ ಎನ್ನುವ ಒಂದಂಶವನ್ನು ಬಿಟ್ಟರೆ, ತೂಗುವ ತರ್ಕವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ರಾಜ್ಯದಲ್ಲಿ ಕಾಂಗ್ರೆಸ್ ಆಳುವ ಪಕ್ಷವಾಗಿದೆ. ಬಿಜೆಪಿ ಸದ್ಯಕ್ಕೆ ವಿರೋಧ ಪಕ್ಷದ ಸ್ಥಾನದಲ್ಲಿದೆ. ವಿರೋಧ ಪಕ್ಷದಲ್ಲಿರುವ ಕಾರಣಕ್ಕೆ ರಾಜ್ಯ ಸರ್ಕಾರದ ಪ್ರತಿಯೊಂದು ನಡೆಯನ್ನು ವಿರೋಧಿಸಬೇಕು ಎಂದರೆ, ವಿರೋಧಿಸಲಿ ತಪ್ಪಿಲ್ಲ. ಅದು ಅವರ ರಾಜಕಾರಣ. ಆದರೆ ಅದು ನಾಡು-ನುಡಿಯ ವಿಚಾರಕ್ಕೆ ಬಂದಾಗಲೂ ವಿರೋಧಿಸುತ್ತಾರೆಂದರೆ, ಅವರು ನಾಡದ್ರೋಹಿಗಳಾಗಲು ಅಥವಾ ಹಿಂದಿಯವರ ಗುಲಾಮರಾಗಲು ಹಾತೊರೆಯುತ್ತಿದ್ದಾರೆಂದೇ ಅರ್ಥ.
ಇದನ್ನು ಓದಿದ್ದೀರಾ?: ಸಿಡಿದೆದ್ದ ಅಮೆರಿಕ- ತಿಕ್ಕಲು ಟ್ರಂಪ್‌ನ ಬೆನ್ನಟ್ಟಿ ಕಾಡಲಿವೆ ಕೆಟ್ಟ ಕನಸುಗಳು!
ಎಸ್.ಎಸ್.ಎಲ್.ಸಿ. ಮಕ್ಕಳಿಗೆ ತೃತೀಯ ಭಾಷೆಯಾದ ಹಿಂದಿ ನಿಜಕ್ಕೂ ಹೊರೆಯಾಗಿತ್ತು. ಆ ಹೊರೆ ಎನ್ನುವುದಕ್ಕೆ ಪುರಾವೆಯಾಗಿ, 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 90 ಸಾವಿರಕ್ಕೂ ಹೆಚ್ಚು ಕನ್ನಡದ ಮಕ್ಕಳು ಹಿಂದಿಯಲ್ಲಿ ಫೇಲ್ ಆಗಿದ್ದರು. ಅದು 2024-25ರಲ್ಲಿ 1,42,400ಕ್ಕೆ ಏರಿಕೆಯಾಗಿ ಮಕ್ಕಳ ಭವಿಷ್ಯಕ್ಕೆ ಕತ್ತಲಾವರಿಸಿತ್ತು. ವಿದ್ಯಾಭ್ಯಾಸದಿಂದ ವಿಮುಖರಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಲೇ ಸಾಗಿತ್ತು. ಅದಕ್ಕೆ ರಾಜ್ಯದ ಶೇ. 60ರಷ್ಟು ಶಾಲೆಗಳಲ್ಲಿ ಹಿಂದಿ ಶಿಕ್ಷಕರಿಲ್ಲದಿರುವುದೂ ಕಾರಣವಾಗಿತ್ತು.
ಕನ್ನಡ, ಇಂಗ್ಲಿಷ್, ಹಿಂದಿ- ಮೂರು ಭಾಷೆಗಳನ್ನು ಕಡ್ಡಾಯವಾಗಿ ಕಲಿಯುವುದು ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರುವ ಕ್ರಮವಾಗಿತ್ತು. ತೃತೀಯ ಭಾಷೆಗೆ ಸಮಯ ಮತ್ತು ಶಕ್ತಿ ವ್ಯಯವಾಗುತ್ತಿದ್ದುದರಿಂದ ಇತರ ಮುಖ್ಯ ವಿಷಯಗಳ ಕಡೆ ಗಮನ ಹರಿಸುವುದು ಕಡಿಮೆಯಾಗಿ ಮಕ್ಕಳ ಕಲಿಕೆಯ ಮಟ್ಟ ಕುಸಿಯುತ್ತಿತ್ತು. ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಿಗೆ ತೃತೀಯ ಭಾಷೆ ಕಲಿಕೆ ಇನ್ನೂ ಕಷ್ಟಕರವಾಗಿತ್ತು. ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿತ್ತು. ಇದು ಸಾಮಾಜಿಕ-ಆರ್ಥಿಕ ಅಸಮಾನತೆಗೆ ಕಾರಣವಾಗಿತ್ತು. ಜೊತೆಗೆ ಹಿಂದಿಯನ್ನು ಕಲಿಸುವುದರಿಂದ ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ ಕನಿಷ್ಠ ಹತ್ತು ಸಾವಿರ ಕೋಟಿಗಳ ಹೊರೆ ಬೀಳುತ್ತಿತ್ತು.
ಈ ಎಲ್ಲ ಕಾರಣಗಳಿಂದ ತೃತೀಯ ಭಾಷೆ ಹಿಂದಿಯಿಂದ ಮುಕ್ತಿ ನೀಡಿ, ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ನಿರ್ಧಾರ ನಿಜಕ್ಕೂ ಸ್ವಾಗತಾರ್ಹವಾದದ್ದು. ಇದು ಒಂದು ರೀತಿಯಲ್ಲಿ ಕನ್ನಡದ ಮಕ್ಕಳನ್ನು ತ್ರಿಭಾಷಾ ಸೂತ್ರವೆಂಬ ಶಾಪದಿಂದ ವಿಮೋಚನೆ ಮಾಡುವಂಥದ್ದು.
ಆದರೆ ಈ ಸರಳ ಸೂತ್ರವೇ ಅರ್ಥವಾಗದ ರಾಜ್ಯ ಬಿಜೆಪಿ ನಾಯಕರು, ನಾಗಪುರದ ಸಂಘಿಗಳನ್ನು, ದಿಲ್ಲಿಯ ದೊರೆಗಳನ್ನು ತಮ್ಮ ತಲೆಯಲ್ಲಿ ತುಂಬಿಕೊಂಡು, ಅವರಿಗೆ ದ್ರೋಹ ಬಗೆಯುತ್ತಿದ್ದೇವೆಂದು ಭಾವಿಸಿ, ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸುತ್ತಿದ್ದಾರೆ. ಕನ್ನಡವನ್ನು ಕಡೆಗಣಿಸುತ್ತಿದ್ದಾರೆ.
ಸೋಜಿಗದ ಸಂಗತಿ ಎಂದರೆ, ಬಿಜೆಪಿಯೇ ಅಧಿಕಾರದಲ್ಲಿರುವ ಪಕ್ಕದ ಮಹಾರಾಷ್ಟ್ರ ಸರ್ಕಾರ, ಕಳೆದ ವರ್ಷ ತೃತೀಯ ಭಾಷೆ ಹಿಂದಿಯನ್ನು ಕೈಬಿಟ್ಟು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಂಡಿತು. ತ್ರಿಭಾಷಾ ಶಿಕ್ಷಣ ನೀತಿ ದೇಶಕ್ಕೆಲ್ಲ ಒಂದೇ ಅಲ್ಲವೇ, ಯಾಕೆ ತೆಗೆದಿರಿ ಎಂದು ಕೇಳಬೇಕಾಗಿತ್ತಲ್ಲವೇ? ಕೇಳದ ರಾಜ್ಯ ಬಿಜೆಪಿ ನಾಯಕರ ನಿಲುವು ಕನ್ನಡದ್ರೋಹವಲ್ಲವೇ?
ಕನ್ನಡದ ಮಕ್ಕಳು ಐಎಎಸ್, ಐಪಿಎಸ್ ಓದಿ ಹಿಂದಿ ರಾಜ್ಯಗಳಿಗೆ ಹೋದರೆ ಅಲ್ಲಿ ಯಾವ ಭಾಷೆ ಮಾತಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್. ಅವರ ಕಾಳಜಿಯಲ್ಲಿ ಸ್ವಲ್ಪ ಸತ್ಯವಿದೆ. ಹಾಗಂತ ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಹೋಗುವವರಿಗೆ ಹಿಂದಿ ಗೊತ್ತಿರಲೇಬೇಕು ಎಂಬ ನಿಯಮವಿಲ್ಲ. ಆಯಾಯ ರಾಜ್ಯ ಭಾಷೆಯನ್ನು ಸ್ಥಳೀಯರೊಂದಿಗೆ ಸಂವಾದಿಸುವ ಮಟ್ಟಕ್ಕೆ ಕಲಿತಿರಬೇಕು. ಅದು ಹಿಂದಿಯೇ ಆಗಿರಬೇಕು ಎಂಬ ಕಡ್ಡಾಯವಿಲ್ಲ. ಅಷ್ಟಕ್ಕೂ ಭಾರತ ಸರ್ಕಾರವೆಂದರೆ ಅದು ಕೇವಲ ಹಿಂದಿ ಸರ್ಕಾರವಲ್ಲ. ಕನ್ನಡಿಗರ, ಮರಾಠಿಗರ, ಮಲೆಯಾಳಿಗಳ, ಅಸ್ಸಾಮಿಗಳ, ಬಂಗಾಳಿಗಳ… ಹೀಗೆ ಎಲ್ಲರ ಸರ್ಕಾರ.
ಉತ್ತರ ಪ್ರದೇಶ, ಬಿಹಾರ, ರಾಜಸ್ತಾನ, ಮಧ್ಯಪ್ರದೇಶ, ಹರಿಯಾಣ, ದಿಲ್ಲಿಗಳೆಂಬ ಹಿಂದಿ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರಗಳಿವೆ. ಅಲ್ಲಿ ದ್ವಿಭಾಷಾ ಸೂತ್ರ ಅಳವಡಿಸಲಾಗಿದೆ. ಕೇವಲ ಎರಡು ಭಾಷೆಗಳನ್ನು ಕಲಿಸಲಾಗುತ್ತಿದೆ. ರಾಜ್ಯ ಬಿಜೆಪಿ ನಾಯಕರು, ತಮ್ಮದೇ ಪಕ್ಷ ಆಡಳಿತವಿರುವ ಆ ರಾಜ್ಯಗಳಲ್ಲಿ ಮೂರನೇ ಭಾಷೆಯನ್ನಾಗಿ ಕನ್ನಡವನ್ನು ಕಲಿಸಲು ಪ್ರಯತ್ನಿಸಲಿ. ಅಲ್ಲಿನ ಮಕ್ಕಳು ಕನ್ನಡ ಓದಿ, ಕನಿಷ್ಠ 35 ಅಂಕ ಪಡೆದು ಪಾಸಾಗಲಿ. ಅವರು ಕರ್ನಾಟಕದಲ್ಲಿ ಉದ್ಯೋಗ ಗಿಟ್ಟಿಸಿದರೆ, ಕನ್ನಡ ಮಾತಾಡಲಿ. ಇದು ನಿಮ್ಮಿಂದ ಸಾಧ್ಯವೇ? ಸಾಧ್ಯವಿಲ್ಲವಾದರೆ ಕರ್ನಾಟಕದ ಮಕ್ಕಳ ಮೇಲೆ ಹಿಂದಿ ಹೇರಿಕೆ ಏಕೆ?
ಕನ್ನಡಿಗರು ಈಗ ಕನ್ನಡವನ್ನು ತಮ್ಮ ಗುರುತನ್ನಾಗಿ, ಇಂಗ್ಲಿಷನ್ನು ಅನ್ನದ ಭಾಷೆಯನ್ನಾಗಿ ಮಾಡಿಕೊಂಡಿದ್ದಾರೆ. ಅದರಿಂದ ಅವರ ಆರ್ಥಿಕ ಮಟ್ಟ ಸುಧಾರಿಸಿದೆ. ಹೊಸಗಾಲಕ್ಕೆ ತಕ್ಕಂತೆ ಗಾಂಧಿ, ನೆಹರೂ, ಇಂದಿರಾ ಗಾಂಧಿ ಹೇಳಿದ್ದನ್ನು ಕಿಲುಬು ಹಿಡಿದ ಕಾಂಗ್ರೆಸ್ಸಿಗರೇ ಬಿಟ್ಟಿದ್ದಾರೆ. ಈ ಕಾಲಕ್ಕೆ ಬೇಕಾದ ಭಾಷೆಗಳತ್ತ ಬದಲಾಗುತ್ತಿದ್ದಾರೆ. ಬದಲಾಗದ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಬ್ರಾಹ್ಮಣ್ಯ, ವರ್ಣವ್ಯವಸ್ಥೆಯತ್ತ ಮರುಳುತ್ತಿದ್ದಾರೆ. ಹಿಂದಿ-ಸಂಸ್ಕೃತದ ಜಪ ಮಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಅಸ್ಪೃಶ್ಯತೆ ಅಳಿಸಿರಿ; ಇಲ್ಲವೇ ಇಸ್ಲಾಮ್-ಕ್ರೈಸ್ತ ಅಸ್ಪೃಶ್ಯರಿಗೂ ಸೌಲಭ್ಯ ನೀಡಿರಿ
ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ, ರೈಲ್ವೆ, ಬ್ಯಾಂಕ್, ಅಂಚೆ ಕಚೇರಿ, ವಿಮಾ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವ ಸತ್ಯ ಬಿಜೆಪಿ ನಾಯಕರಿಗೂ ಗೊತ್ತಿದೆ. ಕೆಲವೇ ದಿನಗಳ ಹಿಂದೆ ನಡೆದ ರೈಲ್ವೆ ಪರೀಕ್ಷೆಯಲ್ಲಿ ಕನ್ನಡವೇ ಇರಲಿಲ್ಲ, ಹಿಂದಿ ಕಲಿತರೂ ಕೆಲಸ ಸಿಗುತ್ತಿಲ್ಲ ಎನ್ನುವುದೂ ತಿಳಿದಿದೆ. ಆದರೂ ಹಿಂದಿಗೆ ಜೋತುಬಿದ್ದು ಬಿಜೆಪಿ ಮತ್ತು ಸಂಘಪರಿವಾರದವರು ಗಲಾಟೆ ಮಾಡುತ್ತಾರೆಂದರೆ, ಒಂದೋ ಸರ್ಕಾರಿ ಆದೇಶ ಅರ್ಥವಾಗಿಲ್ಲ ಅಥವಾ ಗುಲಾಮಗಿರಿಯಿಂದ ಹೊರಬರಲಾಗುತ್ತಿಲ್ಲ. ರಾಜಕಾರಣಿಗಳಿಗೆ ಅಧಿಕಾರವೇ ಅಂತಿಮ. ಅದಕ್ಕಾಗಿ ಕನ್ನಡ ಮತ್ತು ಕನ್ನಡಿಗರನ್ನು ನಿರ್ಲಕ್ಷಿಸುವುದೇ? ಹಿಂದಿ ಪರ ವಹಿಸಿ ನಾಡದ್ರೋಹಿಗಳಾಗುವುದೇ?




