ವಿದೇಶಾಂಗ ನೀತಿ ಗೊತ್ತಿಲ್ಲದ ಜೈಶಂಕರ್, ಬಡವರು ಹೇಗೆ ಬದುಕುತ್ತಿದ್ದಾರೆ ಎಂದು ಅರಿಯದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕಳೆದ 12 ವರ್ಷಗಳಿಂದ ಸುಳ್ಳು ಹೇಳುತ್ತಲೇ ಬಂದ ಪ್ರಧಾನಿ ನರೇಂದ್ರ ಮೋದಿಯವರು- ಇವರಿಂದ ಈ ದೇಶ ಉದ್ಧಾರವಾಗುವುದು ಸಾಧ್ಯವೇ?
ಇತ್ತೀಚಿಗೆ ವಿದೇಶಾಂಗ ಸಚಿವ ಜೈಶಂಕರ್ 4 ಎಫ್(ಫುಡ್, ಫ್ಯೂಯಲ್, ಫರ್ಟಿಲೈಸರ್, ಫೈನಾನ್ಸ್)ಗಳ ಕುರಿತು ಜಾಗತಿಕ ಮಟ್ಟದಲ್ಲಿ ಪ್ರಸ್ತಾಪಿಸಿದ್ದಾರೆ. ಅದು ಈಗ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ವಿವಾದಕ್ಕೆ ತಿರುಗಿದೆ. ದೇಶದ ಜನರಲ್ಲಿ ಆತಂಕ, ತಲ್ಲಣವನ್ನೂ ಸೃಷ್ಟಿಸಿದೆ.
ಆಹಾರ, ಇಂಧನ, ಗೊಬ್ಬರ ಮತ್ತು ಹಣಕಾಸು- ಇವು ಒಂದು ದೇಶದ ಆರ್ಥಿಕ ಹಾಗೂ ರಾಷ್ಟ್ರೀಯ ಭದ್ರತೆಯ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಬಹಳ ಉಪಯುಕ್ತವಾದ ನಾಲ್ಕು ಸೂಚಕಗಳು. ದೇಶದ ಸಂಪೂರ್ಣ ಸ್ಥಿತಿಯನ್ನು ಇವುಗಳಿಂದಷ್ಟೇ ನಿರ್ಧರಿಸಲಾಗುವುದಿಲ್ಲ. ನಾಳೆಯಿಂದಲೇ ದೇಶದಲ್ಲಿ ಆಹಾರ, ಇಂಧನ, ಗೊಬ್ಬರ ಕೊರತೆಯುಂಟಾಗುತ್ತದೆ ಅಂತೇನೂ ಅಲ್ಲ. ಆದರೆ, ಕೆಲವು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್-ರಷ್ಯಾ, ಇಸ್ರೇಲ್-ಪ್ಯಾಲಸ್ತೀನ್ ಮತ್ತು ಇತ್ತೀಚಿನ ಅಮೆರಿಕ-ಇರಾನ್ ಯುದ್ಧಗಳು ಹಾಗೂ ಅವುಗಳಿಂದಾದ ಪಲ್ಲಟಗಳ ಪರಿಣಾಮವಾಗಿ, ಹಲವು ದೇಶಗಳ ಆರ್ಥಿಕ ಸ್ಥಿತಿ ಏರುಪೇರು ಆಗಿದೆ. ಅದರಲ್ಲಿ ಅನುಮಾನವೇ ಇಲ್ಲ.
ಆದರೆ, ದೇಶದ ಆಹಾರ ಸಂಗ್ರಹ, ಇಂಧನ ಭದ್ರತೆ, ಗೊಬ್ಬರ ದಾಸ್ತಾನು, ವಿದೇಶಿ ವಿನಿಮಯ ಮತ್ತು ಸರ್ಕಾರದ ಹಣಕಾಸು ಸಾಮರ್ಥ್ಯ ಯಾವ ಸ್ಥಿತಿಯಲ್ಲಿದೆ; ದೇಶ ಎಷ್ಟು ಕಾಲ ಈ ಒತ್ತಡವನ್ನು ತಡೆದುಕೊಳ್ಳಬಲ್ಲದು ಎಂಬುದನ್ನು ದೇಶವನ್ನಾಳುತ್ತಿರುವ ನಾಯಕರು ಜನತೆಗೆ ತಿಳಿಸುತ್ತಿಲ್ಲ. ಇದು ಈಗ ಆರ್ಥಿಕ ತಜ್ಞರ ನಡುವಿನ ಬಹುದೊಡ್ಡ ಚರ್ಚೆಯಾಗಿದೆ.
ವಿದೇಶಾಂಗ ಸಚಿವ ಜೈಶಂಕರ್ ಅವರ ಮಾತಿನಲ್ಲಿ ಆ ಆತಂಕವಿದೆ, ಸ್ಪಷ್ಟತೆ ಇಲ್ಲ. ಆದರೆ ದೇಶ ಭವಿಷ್ಯದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಬಹುದು, ಭಾರೀ ಸಮಸ್ಯೆಗೆ ಸಿಲುಕಬಹುದು, ಕೆಲವು ವಿದ್ಯಮಾನಗಳು ಅದಕ್ಕೆ ಪೂರಕವಾಗಿ ವರ್ತಿಸಬಹುದು ಎಂಬ ಆತಂಕವಿರುವುದಂತೂ ಸತ್ಯ. ಅದಕ್ಕೆ ಅವರು ಕೊಡುವ ಕಾರಣಗಳು: ದೀರ್ಘಕಾಲದ ಯುದ್ಧ, ಹಾರ್ಮುಜ್ ಮತ್ತು ಕಪ್ಪು ಸಮುದ್ರ ಜಲಸಂಧಿಗಳ ಅಡಚಣೆ. ಇದರಿಂದಾಗಿ ಆಮದು-ರಫ್ತು ವ್ಯವಹಾರಕ್ಕೆ ತೊಡಕುಂಟಾಗಿದೆ. ಜಾಗತಿಕ ತೈಲ ಬೆಲೆ ತುಟ್ಟಿಯಾಗಿದೆ. ಹಾಗೆಯೇ ಜಾಗತಿಕ ಮಟ್ಟದಲ್ಲಿ ಎಲ್ ನಿನೊದಂತಹ ಹವಾಮಾನ ವೈಪರೀತ್ಯಗಳು ಸಂಭವಿಸುತ್ತಿರುವುದರಿಂದ, ಅದು ಆಹಾರ ಉತ್ಪನ್ನದ ಮೇಲೆ ಪರಿಣಾಮ ಬೀರಿದೆ. ಬೆಲೆ ಏರಿಕೆಯಾಗಿದೆ. ಜನರಲ್ಲಿ ಕೊಳ್ಳುವ ಶಕ್ತಿ ಕುಗ್ಗಿದೆ. ಹಣದುಬ್ಬರ ಹೆಚ್ಚಾಗಿದೆ. ರೂಪಾಯಿ ಅಪಮೌಲ್ಯವಾಗಿದೆ. ಷೇರು ಬೆಲೆ ಕುಸಿತ ಕಂಡಿದೆ. ಸುರಕ್ಷಿತ ಹೂಡಿಕೆ ತಾಣಗಳಿಂದ ಹಣ ತೆಗೆಯುತ್ತಿರುವುದು ಹಣಕಾಸು ಬಿಕ್ಕಟ್ಟನ್ನು ಬಿಗಡಾಯಿಸಿದೆ.
ಇದನ್ನು ಓದಿದ್ದೀರಾ?: ಹೆಣ್ಣುಮಕ್ಕಳ ಹತ್ಯೆ ಅತ್ಯಾಚಾರಗಳ ಬಗ್ಗೆ ನಿಮಗೆ ʼಕಲ್ಚರಲ್ ಶಾಕ್ʼ ಆಗೋದು ಯಾವಾಗ ಮೋದೀಜಿ?
ಒಟ್ಟಾರೆ ದೇಶದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಅದನ್ನು ಜೈಶಂಕರ್ ಅವರು ನೇರವಾಗಿ ಹೇಳುವ ಬದಲು, ಸುತ್ತಿ ಬಳಸಿ ಹೇಳಿದ್ದಾರೆ. ವಾಸ್ತವ ಸ್ಥಿತಿಯನ್ನು ಜನರ ಮುಂದಿಟ್ಟರೆ ಅದು ಮೋದಿಯವರ ವರ್ಚಸ್ಸಿನ ಮೇಲೆ, ಕೇಂದ್ರ ಸರ್ಕಾರದ ಮೇಲೆ, ಜನರ ನಂಬಿಕೆಯ ಮೇಲೆ ಪರಿಣಾಮ ಬೀರುತ್ತದೆಂದು ಭಾವಿಸಿ ಹೆಣಗಾಡಿದ್ದಾರೆ. ಅದೇ ರೀತಿ ಮೋದಿಯವರು ಕೂಡ ಕೆಲವೇ ತಿಂಗಳುಗಳ ಹಿಂದೆ ‘ಎಣ್ಣೆ ಕಡಿಮೆ ಬಳಸಿ, ಚಿನ್ನ ಖರೀದಿಸಬೇಡಿ’ ಎಂದು ದೇಶದ ಜನತೆಗೆ ಬುದ್ಧಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಪರ್ಯಾಸಕರ ಸಂಗತಿ ಎಂದರೆ, ಮೇ 2026ರಲ್ಲಿಯೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು, ‘ಸದ್ಯದಲ್ಲಿಯೇ ದೇಶಕ್ಕೆ ಆರ್ಥಿಕ ಸುನಾಮಿ ಅಪ್ಪಳಿಸಲಿದೆ’ ಎಂದು ಭವಿಷ್ಯ ನುಡಿದಿದ್ದರು. ಅಷ್ಟೇ ಅಲ್ಲ, ‘ಎದುರಾಗಲಿರುವ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿಲ್ಲ’ ಎಂದು ವಿಷಾದ ಕೂಡ ವ್ಯಕ್ತಪಡಿಸಿದ್ದರು. ಆಗ ಬಿಜೆಪಿ ನಾಯಕರು ಮತ್ತು ಮಡಿಲ ಮಾಧ್ಯಮಗಳು ರಾಹುಲ್ ಗಾಂಧಿಯವರಿಗೆ ದೇಶದ್ರೋಹಿಯ ಪಟ್ಟ ಕಟ್ಟಿದ್ದರು. ಆದರೆ ಈಗ, ಕೇವಲ ನಾಲ್ಕು ತಿಂಗಳ ಅಂತರದಲ್ಲಿ ರಾಹುಲ್ ಗಾಂಧಿಯವರ ಭವಿಷ್ಯವನ್ನು ವಿದೇಶಾಂಗ ಸಚಿವ ಜೈಶಂಕರ್ ಮಾತುಗಳು ನಿಜ ಮಾಡುತ್ತಿವೆ.
ಇದಷ್ಟೇ ಅಲ್ಲ, ಕೇವಲ ಒಂದು ತಿಂಗಳ ಹಿಂದೆ, ದೇಶದ ಆರ್ಥಿಕತೆಯು 2026-27ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 7.8ರಷ್ಟು ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಬೆಳವಣಿಗೆ ದಾಖಲಿಸಿದೆ ಎಂದು ಕೇಂದ್ರ ಸರ್ಕಾರ ಎದೆಯುಬ್ಬಿಸಿ ಹೇಳಿಕೊಂಡಿತ್ತು. ಆ ಅಂಕಿ-ಅಂಶಗಳನ್ನಿಟ್ಟು ಭಾರತ ಅಭಿವೃದ್ಧಿಪಥದತ್ತ ಎಂದು ಸಾರಿತ್ತು. ಆದರೆ, ಅದು ನಿಜವಾದ ಜಿಡಿಪಿ ದತ್ತಾಂಶವಲ್ಲ, ನಿಜಸ್ಥಿತಿಯನ್ನು ಮರೆಮಾಚಲು ಕೃತಕವಾಗಿ ಸೃಷ್ಟಿಸಲಾಗಿದ್ದು ಎನ್ನುವುದು ನಿಧಾನವಾಗಿ ಎಲ್ಲರ ಗಮನಕ್ಕೂ ಬಂದಿತ್ತು. ಜಾಗತಿಕ ಆರ್ಥಿಕತೆಯು ತೀವ್ರ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಇಂಧನ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲಿ ಮಾತ್ರ ಈ ಪ್ರಮಾಣದ ಆರ್ಥಿಕ ಪ್ರಗತಿಯೇ ಎನ್ನುವುದು ಆರ್ಥಿಕ ತಜ್ಞರ ಅನುಮಾನವಾಗಿತ್ತು.
ಇದನ್ನು ಓದಿದ್ದೀರಾ?: ಬರ, ಸರ್ವಪಕ್ಷ ನಿಯೋಗ ಮತ್ತು ರಾಜಕಾರಣಿಗಳ ಕಪಟ ನಾಟಕ
ಹಾಗೆಯೇ ಅವರು ಹಲವು ಗಂಭೀರ ಪ್ರಶ್ನೆಗಳನ್ನೂ ಎತ್ತಿದ್ದರು. ದೇಶದ ಆರ್ಥಿಕ ಬೆಳವಣಿಗೆಯ ಲಾಭ ನಿಜವಾಗಿಯೂ ಜನಸಾಮಾನ್ಯರಿಗೆ ಮುಟ್ಟುತ್ತಿದೆಯೇ, ಜನರ ಜೀವನಮಟ್ಟ ಸುಧಾರಿಸಿದೆಯೇ ಎಂದು ಪರಿಶೀಲಿಸುವುದು ಹೆಚ್ಚು ಸೂಕ್ತ ಎಂದಿದ್ದರು. ಜನರಿಗೆ ಅನ್ನ, ಬಟ್ಟೆ, ನೀರು, ಸೂರು ಸಿಕ್ಕಿ ಸುರಕ್ಷಿತವಾಗಿ, ನೆಮ್ಮದಿಯಾಗಿ ಬದುಕಬೇಕು. ಆದರೆ ದೇಶದಲ್ಲಿರುವ 140 ಕೋಟಿ ಜನರಲ್ಲಿ 80 ಕೋಟಿ ಬಡವರಿದ್ದಾರೆ ಎಂದು ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ನೀತಿ ಆಯೋಗದ ಪ್ರಕಾರವೇ 15ರಿಂದ 29 ವರ್ಷದ ಸುಮಾರು 8.7 ಕೋಟಿ ಯುವಕರು ಕೆಲಸವಿಲ್ಲದೆ ಕೂತಿದ್ದಾರೆ. ದೇಶದ ಒಟ್ಟು ಕಾರ್ಮಿಕರಲ್ಲಿ ದಿನಗೂಲಿ ಕಾರ್ಮಿಕರೇ ಶೇಕಡ 20ರಷ್ಟಿದ್ದಾರೆ. ದೇಶಕ್ಕೆ ಹರಿದುಬರುತ್ತಿರುವ ನಿವ್ವಳ ವಿದೇಶಿ ನೇರ ಬಂಡವಾಳ ಪಾತಾಳಕ್ಕೆ ಕುಸಿದಿದೆ. ರಫ್ತು ವಹಿವಾಟು ಕಡಿಮೆಯಾಗಿ ಆಮದು ಹೆಚ್ಚಾಗುತ್ತಿದೆ. ಅಂದಮೇಲೆ ಮೇಕ್ ಇನ್ ಇಂಡಿಯಾ ಕತೆ ಏನಾಯಿತು? ವ್ಯವಸ್ಥೆ ಇಷ್ಟೊಂದು ಹದಗೆಟ್ಟಿರುವುದನ್ನು ನೋಡಿ ಇಂದಿನ ಯುವಪೀಳಿಗೆ (ಝೆನ್ ಜಿ) ಬೀದಿಗಿಳಿದು ಪ್ರತಿಭಟಿಸಿದ್ದಲ್ಲವೇ?
ವಿದೇಶಾಂಗ ನೀತಿ ಗೊತ್ತಿಲ್ಲದ ಜೈಶಂಕರ್, ಬಡವರು ಹೇಗೆ ಬದುಕುತ್ತಿದ್ದಾರೆ ಎಂದು ಅರಿಯದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕಳೆದ 12 ವರ್ಷಗಳಿಂದ ಸುಳ್ಳು ಹೇಳುತ್ತಲೇ ಬಂದ ಪ್ರಧಾನಿ ನರೇಂದ್ರ ಮೋದಿಯವರು- ಇವರಿಂದ ಈ ದೇಶ ಉದ್ಧಾರವಾಗುವುದು ಸಾಧ್ಯವೇ? ಮುಂದೆ ಇನ್ನೆಂತಹ ದಿನಗಳ ಕಾದಿವೆಯೋ ಆ ಶ್ರೀರಾಮನೇ ಬಲ್ಲ!




