ರೈತರ ವಿವಿಧ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ (ರಿ), ಉತ್ತರ ಪ್ರಾಂತ, ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
“ಕಬ್ಬು ಬೆಳೆಗಾರರಿಗೆ ನ್ಯಾಯಯುತ, ಲಾಭದಾಯಕ ಬೆಲೆ ದೊರಕಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರು ಬೆಳೆಯುವ ಎಲ್ಲಾ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ಆಧರಿಸಿ ಲಾಭದಾಯಕ ಬೆಲೆ ನಿಗದಿಪಡಿಸುವ ಮೂಲಕ ರೈತರ ಆದಾಯ ಮತ್ತು ಕೃಷಿಯ ಸ್ಥಿರತೆಗೆ ಆದ್ಯತೆ ನೀಡಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಮಾಡಿರುವ ವಿವಿಧ ಬೆಳೆಗಳ ಬೀಜಗಳು ಮೊಳಕೆಯೊಡೆಯದೆ ಬೆಳೆ ಹಾನಿಗೊಳಗಾಗಿದ್ದು, ಬಿತ್ತನೆಗಾಗಿ ಸಾಲ ಮಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ಬಾಗಲಕೋಟೆ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯಾಗಿ ಘೋಷಿಸಿ ಸೂಕ್ತ ಪರಿಹಾರ ಹಾಗೂ ನೆರವು ಒದಗಿಸಬೇಕು” ಎಂದು ಆಗ್ರಹಿಸಿದರು.
“ಕೃಷ್ಣಾ ಮೇಲ್ದಂಡೆ ಯೋಜನೆಯಡಿ ನದಿಯಲ್ಲಿ ಸಾಕಷ್ಟು ನೀರು ಲಭ್ಯವಿದ್ದರೂ ಏತ ನೀರಾವರಿ ಯೋಜನೆಗಳ ಮೂಲಕ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಲಾಗುತ್ತಿಲ್ಲ. ಬೆಳೆಗಳನ್ನು ಉಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಪ್ರದೇಶಗಳಿಗೆ ಕೂಡಲೇ ನೀರು ಹರಿಸಬೇಕು” ಎಂದು ಒತ್ತಾಯಿಸಿದರು.
ಅದೇ ರೀತಿ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ನ್ಯಾಯಯುತ ದರದಲ್ಲಿ ರೈತರಿಗೆ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಒಂದು ಗೊಬ್ಬರ ಖರೀದಿಸುವಾಗ ಮತ್ತೊಂದು ಗೊಬ್ಬರವನ್ನು ಕಡ್ಡಾಯವಾಗಿ ಖರೀದಿಸುವಂತೆ ವಿತರಕರು ಒತ್ತಾಯಿಸುವುದನ್ನು ತಕ್ಷಣ ತಡೆಯಬೇಕು. ಬಿತ್ತನೆ ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ ಸಂಘದ ಬಾಗಲಕೋಟೆ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಪ. ಹಿರೇಮಠ ಮಾತನಾಡಿ, “ರೈತ ಬದುಕಿದರೆ ದೇಶ ಬದುಕುತ್ತದೆ. ರೈತರ ಸಮಸ್ಯೆಗಳನ್ನು ಕಡೆಗಣಿಸಿದರೆ ಕೃಷಿ ಕ್ಷೇತ್ರವೇ ಸಂಕಷ್ಟಕ್ಕೆ ಸಿಲುಕಲಿದೆ. ಅನ್ನದಾತನಿಗೆ ನ್ಯಾಯಯುತ ಬೆಲೆ, ನೀರಾವರಿ, ಅಗತ್ಯ ಕೃಷಿ ಪರಿಕರಗಳು ಹಾಗೂ ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸುವುದು ಸರ್ಕಾರಗಳ ಜವಾಬ್ದಾರಿ” ಎಂದು ಹೇಳಿದರು.
ರೈತರ ನೀರಾವರಿ, ಬೆಳೆ ಹಾನಿ, ಬರ ಪರಿಸ್ಥಿತಿ, ರಸಗೊಬ್ಬರ–ಕೀಟನಾಶಕಗಳ ಕೃತಕ ಕೊರತೆ ಹಾಗೂ ಬೆಲೆ ನಿಯಂತ್ರಣ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸರ್ಕಾರಗಳು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ರೈತರ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಒತ್ತಾಯಿಸಲಾಯಿತು.
ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ, ಮುಖಂಡರಾದ ಅಶೋಕ ಮಂತ್ರಿ, ಅಜಿತ ನಾಯ್ಕ, ರುದ್ರಗೌಡ ಪಾಟೀಲ, ಶಾಂತಯ್ಯ ಪಂಚಗಟ್ಟಿಮಠ, ಚನ್ನಪ್ಪ ಮಾಚಕನೂರ, ರಮೇಶ ಸಾರವಾಡ, ಮಲ್ಲಪ್ಪ ಅವಟಿ, ಪ್ರಭಾವತಿ ಸೊನ್ನ, ಸಾವಿತ್ರಿ ಕೋಟಿ, ರಾಜೇಶ್ವರಿ ಮರೆಣ್ಣಿ, ನಾಗಮ್ಮ ಕುಂದರಗಿ ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




