ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ದೇಶದ ನಿಜವಾದ ಧರ್ಮಗ್ರಂಥವಾಗಿದ್ದು, ಅದು ಭಾರತೀಯರ ರಕ್ಷಾ ಕವಚವಾಗಿದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಎಸ್.ಬಿ.ಕುಚಬಾಳ ಅಭಿಪ್ರಾಯಪಟ್ಟರು.
ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭೀಮರಾಜ ಸಾಹಿತ್ಯ ಪರಿಷತ್ ಬೀದರ ವತಿಯಿಂದ ಆಯೋಜಿಸಿದ ಬುದ್ಧ, ಬಸವ, ಅಂಬೇಡ್ಕರ ಸಾಂಸ್ಕೃತಿಕ ಉತ್ಸವ ಹಾಗೂ ಸಂವಿಧಾನ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಭಾರತದಲ್ಲಿ ವಿವಿಧ ಜಾತಿ, ಧರ್ಮಗಳ ಜನರು ವಾಸಿಸುತ್ತಿದ್ದು, ಪ್ರತಿಯೊಬ್ಬರಿಗೂ ತಮ್ಮದೇ ಆದ ಧರ್ಮಗ್ರಂಥಗಳಿವೆ. ಆದರೆ ದೇಶದ ಎಲ್ಲ ನಾಗರಿಕರನ್ನು ಸಮಾನವಾಗಿ ಕಾಣುವ ಸಂವಿಧಾನವೇ ಭಾರತದ ಧರ್ಮಗ್ರಂಥವಾಗಿದೆ. ಇದು ಪ್ರತಿಯೊಬ್ಬ ಭಾರತೀಯರ ಹಕ್ಕುಗಳನ್ನು ಕಾಪಾಡುವ ರಕ್ಷಾ ಕವಚವಾಗಿದ್ದು, ಸಮಾನತೆ ಹಾಗೂ ನ್ಯಾಯವನ್ನು ಒದಗಿಸುತ್ತದೆ. ಸರ್ವರ ಹಿತವನ್ನು ಕಾಪಾಡುವುದರ ಜೊತೆಗೆ ಸಮಾನ ಅವಕಾಶಗಳನ್ನು ನೀಡುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದಾರಿಯಾಗುತ್ತದೆ” ಎಂದು ಅವರು ತಿಳಿಸಿದರು.
ಮುಖಂಡ ಶಂಕರರಾವ ದೊಡ್ಡಿ ಮಾತನಾಡಿ, “ಸಂವಿಧಾನ ಕೇವಲ ದಲಿತ ಸಮುದಾಯಕ್ಕೆ ಸೀಮಿತವಾಗಿಲ್ಲ. ಅದು ಎಲ್ಲ ಧರ್ಮ, ಜಾತಿ ಹಾಗೂ ವರ್ಗಗಳ ಜನರಿಗೆ ನ್ಯಾಯ ಮತ್ತು ಸಮಾನ ಹಕ್ಕುಗಳನ್ನು ಒದಗಿಸಿದೆ” ಎಂದು ಹೇಳಿದರು.
ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ ಮಾತನಾಡಿ, “ಇಂದಿನ ಪರಿಸ್ಥಿತಿಯಲ್ಲಿ ಸಂವಿಧಾನವೇ ನಮ್ಮ ಉಸಿರಾಗಿದ್ದು, ಅದರ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಸಾಮಾಜಿ ಕಾರ್ಯಕರ್ತ ಸುರೇಶ್ ಜೋಜನಾಕರ್ ಮಾತನಾಡಿ, :ಎಲ್ಲರ ಹಿತ ಕಾಪಾಡುತ್ತಿರುವ ಸಂವಿಧಾನವನ್ನು ಕೆಲವರು ಬದಲಾಯಿಸಲು ಯತ್ನಿಸುತ್ತಿದ್ದಾರೆ. ಆದರೆ ಅಂತಹ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ” ಎಂದು ಹೇಳಿದರು.
ಕಲಬುರಗಿಯ ಅಮ್ರಪಾಲಿ ಬುದ್ಧ ವಿಹಾರದ ಪೂಜ್ಯ ಭಂತೆ ಧಮ್ಮಜ್ಯೋತಿ ಅವರು ಸಾನಿಧ್ಯ ವಹಿಸಿದ್ದರು. ಭೀಮರಾಜ ಸಾಹಿತ್ಯ ಪರಿಷತ್ ಅಧ್ಯಕ್ಷ ತಾತ್ಯಾರಾವ ಕೆ.ಮಾರ್ಥಂಡ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಉತ್ಸವ ಜರುಗಿತು. 15ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿ ಹಾಡು, ತತ್ವಪದ, ಕೋಲಾಟ ಹಾಗೂ ಜಾನಪದ ಗೀತೆಗಳ ಮೂಲಕ ಪ್ರೇಕ್ಷಕರ ಮನಗೆದ್ದವು.
ಇದನ್ನೂ ಓದಿ : ಔರಾದ್ | ಸಬ್ಸಿಡಿ ಬೀಜ ನೆರೆ ರಾಜ್ಯದ ರೈತರಿಗೆ ಮಾರಾಟ : ಆರೋಪ
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅರುಣ ಪಟೇಲ್, ಪತ್ರಕರ್ತ ಶಕ್ತಿಕಾಂತ ಬಾವಿದೊಡ್ಡಿ, ನಿವೃತ್ತ ಪ್ರಾಂಶುಪಾಲ ಎಂ.ಡಿ.ನಿಝಾಮ್ ಹಾಗೂ ಪ್ರಸನ್ನ ಡಾಂಗೆ, ಸುಧಾಕರ ಎಕಂಬೇಕರ್, ಬಸವರಾಜ ದಾಂಡೇಕರ್ ಸೇರಿದಂತೆ ಅನೇಕರಿದ್ದರು.




