ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ದ್ವಿವಾರ್ಷಿಕವಾಗಿ ನಡೆಯುವ ಚುನಾವಣೆಯು ಆರಂಭವಾಗಿದೆ. ವಿಧಾನಸಭೆ ಸದಸ್ಯರು ಮತದಾನ ಆರಂಭಿಸಿದ್ದಾರೆ. ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಬೆಳಗ್ಗೆ 9 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಚುರುಕಾಗಿ ಸಾಗುತ್ತಿದೆ.
ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ಮುಂದುವರೆಯಲಿದ್ದು, ಸಂಜೆ 5 ಗಂಟೆಯಿಂದಲೇ ಮತ ಎಣಿಕೆ ಕಾರ್ಯವೂ ಆರಂಭವಾಗಲಿದೆ. ಇಂದೇ ಫಲಿತಾಂಶ ಪ್ರಕಟವಾಗಲಿದೆ. ಅಭ್ಯರ್ಥಿಯೊಬ್ಬರ ಗೆಲುವಿಗೆ ಕನಿಷ್ಠ 28 ಮೊದಲ ಪ್ರಾಶಸ್ತ್ಯದ ಮತಗಳ ಅಗತ್ಯವಿದೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಅವಧಿಯಲ್ಲಿಯೂ ನಡೆಯದ ಪಂಚಾಯತ್ ಚುನಾವಣೆ: ರಾಜೀವ್ ಗಾಂಧಿ ಕನಸಿಗೆ ಎಳ್ಳುನೀರು
ಕಾಂಗ್ರೆಸ್ ಒಟ್ಟು ಐವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿ ಕೆ ಹರಿಪ್ರಸಾದ್, ತಿಪ್ಪಣ್ಣಪ್ಪ ಕಾಮಕನೂರ್, ಪಿ ವಿ ಮೋಹನ್ ಮತ್ತು ಶಿವಣ್ಣ ಮಳವಳ್ಳಿ ಕಣದಲ್ಲಿದ್ದಾರೆ. ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಆದರೆ ಐದನೇ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸುತ್ತಿದೆ.
ಇನ್ನು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ರಘು ಕೌಟಿಲ್ಯ ಮತ್ತು ಲಿಂಗರಾಜ್ ಪಾಟೀಲ್ ಕಣದಲ್ಲಿದ್ದಾರೆ. ಬಿಜೆಪಿ ಎರಡೂ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಸಂಖ್ಯಾಬಲದ ಪ್ರಕಾರ ಕಾಂಗ್ರೆಸ್ 4 ಮತ್ತು ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿವೆ. ಆದರೆ ಬಾಕಿ ಉಳಿಯುವ 7ನೇ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಹೆಚ್ಚುವರಿ ಮತಗಳ ಕೊರತೆ ಇರುವುದರಿಂದ ಉಭಯ ಪಕ್ಷಗಳೂ ಪಕ್ಷೇತರರ ಮೇಲೆ ನಂಬಿಕೆ ಇಟ್ಟಿವೆ. ಅಡ್ಡ ಮತದಾನದ ಸಾಧ್ಯತೆಯೂ ಇದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಎಲ್ಲ ಪಕ್ಷಗಳು ತಮ್ಮ ಶಾಸಕರಿಗೆ ವಿಪ್ ಜಾರಿಗೊಳಿಸಿವೆ.




