ಹೋರಾಟದ ಕಣಕ್ಕಿಳಿದರೆ ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಬೀದಿಗಿಳಿಯುವುದಷ್ಟೇ ಅಲ್ಲ, ಪ್ರಾಣವನ್ನೇ ಪಣಕ್ಕಿಡುವ ಅಸಾಧಾರಣ ಛಲಗಾರ್ತಿ. ಕಮ್ಯುನಿಸ್ಟರ ವಿರುದ್ಧದ ದಶಕಗಳ ಸಮರ ಹಾಗೂ ಟಾಟಾ ಕಂಪನಿಯ ವಿರುದ್ಧ ಸಿಂಗೂರಿನಲ್ಲಿ ನಡೆಸಿದ ಸುದೀರ್ಘ ಉಪವಾಸ ಸತ್ಯಾಗ್ರಹ ಸೇರಿದಂತೆ ಅವರ ಎಲ್ಲಾ ಹೋರಾಟಗಳಲ್ಲೂ ಇದು ಸ್ಪಷ್ಟವಾಗಿ ಸಾಬೀತಾಗಿದೆ. ಇದೀಗ ಇವಿಎಂ ರಕ್ಷಣೆಗೆ ನಿಂತಿರುವ ಅವರ ದಿಟ್ಟ ಹೆಜ್ಜೆಗಳು, ಕೇಂದ್ರ ಆಡಳಿತ ಯಂತ್ರ ಮತ್ತು ಚುನಾವಣಾ ಆಯೋಗದ ಯಾವುದೇ ಕುತಂತ್ರಗಳಿಗೂ ತಾವು ಎಂದಿಗೂ ಮಣಿಯುವುದಿಲ್ಲ ಎಂಬ ಕಠಿಣ ಸಂದೇಶವನ್ನು ರವಾನಿಸಿವೆ
ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯು ಕೇವಲ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವಿನ ರಾಜಕೀಯ ಕದನವಾಗಿ ಮಾತ್ರ ಉಳಿದಿಲ್ಲ; ಬದಲಾಗಿ, ಇದು ಕೇಂದ್ರ ಚುನಾವಣಾ ಆಯೋಗದ ಸಾಂಸ್ಥಿಕ ನಿಷ್ಪಕ್ಷಪಾತದ ಮೇಲಿನ ಅತಿದೊಡ್ಡ ಜನಾಭಿಪ್ರಾಯ ಸಂಗ್ರಹವಾಗಿ ಮಾರ್ಪಟ್ಟಿದೆ. ಎಕ್ಸಿಟ್ ಪೋಲ್(ಚುನಾವಣೋತ್ತರ ಸಮೀಕ್ಷೆ) ಅಂದಾಜುಗಳು ಹೊರಬೀಳುತ್ತಿದ್ದಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇವಿಎಂ ತಿರುಚುವಿಕೆಯ ಕುರಿತು ತೀವ್ರ ಆತಂಕ ವ್ಯಕ್ತಪಡಿಸುತ್ತಿರುವುದನ್ನು ಕೇವಲ ತಮ್ಮ ಪಕ್ಷದ ಹಿನ್ನಡೆ ಎಂದು ತಳ್ಳಿಹಾಕುವಂತಿಲ್ಲ. ಇದರ ಹಿಂದೆ, ಕೇಂದ್ರದ ಆಡಳಿತಾರೂಢ ಬಿಜೆಪಿ ಹಾಗೂ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ನಡುವಿನ ಒಳಒಪ್ಪಂದ ಮತ್ತು ವ್ಯವಸ್ಥಿತ ಹುನ್ನಾರದ ಸ್ಪಷ್ಟ ಸುಳಿವುಗಳಿವೆ. ದೀದಿ ದಿಢೀರನೆ ಇವಿಎಂ ‘ಪ್ಯಾನಿಕ್ ಬಟನ್’ ಒತ್ತಲು ಪ್ರಮುಖವಾಗಿ ನಾಲ್ಕು ಆಯಾಮಗಳ ಕಾರಣಗಳಿವೆ.
ಎಕ್ಸಿಟ್ ಪೋಲ್ ಎಂಬ ಮಾನಸಿಕ ಯುದ್ಧ
ಚುನಾವಣೋತ್ತರ ಸಮೀಕ್ಷೆಗಳನ್ನು ಬಿಜೆಪಿ ತನ್ನ ಪರವಾದ ವಾತಾವರಣ ಸೃಷ್ಟಿಸಲು ಒಂದು ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂಬುದು ವಿರೋಧ ಪಕ್ಷಗಳ ದೀರ್ಘಕಾಲದ ಆರೋಪ. ವಾಸ್ತವ ಫಲಿತಾಂಶಕ್ಕೂ ಮುನ್ನವೇ ‘ಬಿಜೆಪಿ ಗೆಲ್ಲುತ್ತಿದೆ’ ಎಂಬ ಸುಳ್ಳು ಭ್ರಮೆಯನ್ನು ಸೃಷ್ಟಿಸುವ ಮೂಲಕ, ವಿರೋಧ ಪಕ್ಷದ ಮತ ಎಣಿಕೆ ಏಜೆಂಟರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದು ಇದರ ಹಿಂದಿನ ತಂತ್ರ. ಒಂದು ವೇಳೆ ಅಂತಿಮ ಹಂತದಲ್ಲಿ ಇವಿಎಂಗಳಲ್ಲಿ ಕೃತಕವಾಗಿ ಫಲಿತಾಂಶ ಬದಲಾದರೂ, ಅದು ಎಕ್ಸಿಟ್ ಪೋಲ್ ಅಂಕಿ-ಅಂಶಗಳೊಂದಿಗೆ ತಾಳೆಯಾಗುವುದರಿಂದ ಯಾರೂ ಅದನ್ನು ಪ್ರಶ್ನಿಸಬಾರದು ಎಂಬುದು ಈ ತಂತ್ರಗಾರಿಕೆಯ ಭಾಗ. ಇದನ್ನು ಅರಿತಿರುವ ಮಮತಾ ಬ್ಯಾನರ್ಜಿ, ಮುಂಚಿತವಾಗಿಯೇ ಇವಿಎಂ ಬಗ್ಗೆ ದನಿ ಎತ್ತುವ ಮೂಲಕ ಎಕ್ಸಿಟ್ ಪೋಲ್‌ಗಳ ವಿಶ್ವಾಸಾರ್ಹತೆಯನ್ನು ಬುಡಮೇಲು ಮಾಡಿದ್ದಾರೆ.
‘ರೆಫರಿ’ಯ ಮೇಲೆಯೇ ಮೂಡಿದ ಅಪನಂಬಿಕೆ
ಒಂದು ನ್ಯಾಯಸಮ್ಮತ ಆಟದಲ್ಲಿ ರೆಫರಿ(ಕೇಂದ್ರ ಚುನಾವಣಾ ಆಯುಕ್ತ) ನಿಷ್ಪಕ್ಷಪಾತವಾಗಿರಬೇಕು. ಆದರೆ, ಪ್ರಸ್ತುತ ಚುನಾವಣಾ ಆಯೋಗದ ಕಾರ್ಯವೈಖರಿ ಬಿಜೆಪಿಯ ರಾಜಕೀಯ ವಿಭಾಗದಂತೆ ಭಾಸವಾಗುತ್ತಿದೆ. ಕೋಲ್ಕತ್ತಾದ ಸ್ಟ್ರಾಂಗ್ ರೂಂ ಬಳಿ ಸಿಸಿಟಿವಿ ಕಣ್ಗಾವಲು ಇಲ್ಲದ ಪ್ರತ್ಯೇಕ ಕೊಠಡಿಯಲ್ಲಿ ಬೆಳಗಿನ ಜಾವ 4 ಗಂಟೆಗೆ ಅಂಚೆ ಮತಪತ್ರಗಳ ಟ್ರಂಕ್‌ಗಳನ್ನು ವಿಂಗಡಣೆ ಮಾಡಿರುವುದು ಆಯೋಗದ ಪಾರದರ್ಶಕತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೇಂದ್ರ ಸಶಸ್ತ್ರ ಪಡೆಗಳು ಮತದಾರರನ್ನು ಬೆದರಿಸುತ್ತಿರುವ ದೂರುಗಳಿದ್ದರೂ ಆಯೋಗ ಮೌನ ವಹಿಸಿದ್ದು, ಇವಿಂಗಳ ಮೇಲೆ ವಿರೋಧ ಪಕ್ಷಗಳ ಚಿಹ್ನೆಯನ್ನು ಟೇಪ್ ಹಾಕಿ ಮರೆಮಾಚಿದ ಘಟನೆಗಳು ಆಯೋಗವು ಕೇವಲ ಆಡಳಿತಾರೂಢ ಬಿಜೆಪಿಯ ಹಿತಾಸಕ್ತಿ ಕಾಯುತ್ತಿದೆ ಎಂಬ ಅನುಮಾನವನ್ನು ಬಲಪಡಿಸಿವೆ.
ಹೊಸ ನಿಯಮಗಳ ಮೂಲಕ ಕೇಂದ್ರದ ನಿಯಂತ್ರಣ
ಮತ ಎಣಿಕೆ ಕೇಂದ್ರಗಳಲ್ಲಿ ಕನಿಷ್ಠ ಒಬ್ಬರು ಮೇಲ್ವಿಚಾರಕರು ಕಡ್ಡಾಯವಾಗಿ ಕೇಂದ್ರ ಸರ್ಕಾರದ ಸಿಬ್ಬಂದಿಯೇ ಆಗಿರಬೇಕು ಎಂಬ ಚುನಾವಣಾ ಆಯೋಗದ ಹೊಸ ಹಾಗೂ ಏಕಪಕ್ಷೀಯ ನಿಯಮ ಮಮತಾ ಅವರ ಆಕ್ರೋಶಕ್ಕೆ ಮತ್ತೊಂದು ಪ್ರಮುಖ ಕಾರಣ. ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಬದಿಗೊತ್ತಿ, ಕೇಂದ್ರದ ಅಧೀನದಲ್ಲಿರುವ ಅಧಿಕಾರಿಗಳಿಗೆ ಮಣೆ ಹಾಕಿರುವುದು ಮತ ಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಹೈಜಾಕ್ ಮಾಡುವ ತಂತ್ರವಾಗಿ ಟಿಎಂಸಿಗೆ ಕಂಡಿದೆ. ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮಟ್ಟಿಗೆ ಈ ವಿಚಾರ ಗಂಭೀರವಾಗಿದ್ದು, ಆಯೋಗವು ಉದ್ದೇಶಪೂರ್ವಕವಾಗಿ ಬಿಜೆಪಿಗೆ ಅನುಕೂಲ ಮಾಡಿಕೊಡಲು ನಿಯಮಗಳನ್ನು ತಿರುಚುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.
ಇದನ್ನು ಓದಿದ್ದೀರಾ? ಸಮೀಕ್ಷೆಗಳ ಲೆಕ್ಕಾಚಾರ ಬುಡಮೇಲು; ಪಶ್ಚಿಮ ಬಂಗಾಳದಲ್ಲಿ ಮಣ್ಣುಮುಕ್ಕಿದ್ದ ‘ಎಕ್ಸಿಟ್ ಪೋಲ್’
‘ವೋಟ್ ಚೋರಿ’ಯಿಂದ ‘ಇವಿಎಂ ಹ್ಯಾಕಿಂಗ್’ವರೆಗಿನ ಬದಲಾವಣೆ
ಸ್ಥಳೀಯ ಮಟ್ಟದಲ್ಲಿ ಗೂಂಡಾಗಳನ್ನು ಬಳಸಿ ಬೂತ್ ವಶಪಡಿಸಿಕೊಳ್ಳುವ ‘ಮತ ಕಳ್ಳತನ’ ಹಿಂದಿನ ಕಾಲದ ತಂತ್ರವಾಗಿತ್ತು. ಆದರೆ, ಇಂದು ಕೇಂದ್ರದ ಆಡಳಿತ ಯಂತ್ರ, ಸಶಸ್ತ್ರ ಪಡೆಗಳು ಮತ್ತು ತಂತ್ರಜ್ಞಾನವನ್ನು (EVM) ಬಳಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ ನಡೆಯುವ ಸಾಂಸ್ಥಿಕ ಕಳ್ಳತನದ ವಿರುದ್ಧ ಹೋರಾಡುವ ಅನಿವಾರ್ಯತೆ ಟಿಎಂಸಿಗಿದೆ. ಈ ಮೊದಲು ರಾಹುಲ್ ಗಾಂಧಿಯವರು ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನಿಸಿದಾಗ ದೂರವುಳಿದಿದ್ದ ಮಮತಾ, ಈಗ ದಿಢೀರನೆ ಎಚ್ಚೆತ್ತುಕೊಳ್ಳಲು ಕಾರಣ, ಬಿಜೆಪಿಯ ತಂತ್ರಗಾರಿಕೆಯು ಈಗ ತಾಂತ್ರಿಕ ಸ್ವರೂಪಕ್ಕೆ ಬದಲಾಗಿರುವುದು.
ಮಮತಾ ಬ್ಯಾನರ್ಜಿಯವರು ತಡರಾತ್ರಿ ಸುರಿಯುವ ಮಳೆಯಲ್ಲೂ ಸ್ಟ್ರಾಂಗ್ ರೂಂಗಳಿಗೆ ಭೇಟಿ ನೀಡುತ್ತಿರುವುದು ಕೇವಲ ಪ್ಯಾನಿಕ್ (ಆತಂಕ) ಅಲ್ಲ, ಅದು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಅನಿವಾರ್ಯ ರಕ್ಷಣಾತ್ಮಕ ತಂತ್ರ. ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಮರೆತು ಆಡಳಿತ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವಾಗ, ಇವಿಎಂ ಭದ್ರತೆಯ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸುವುದು ಹಾಗೂ ಕಾನೂನು ಹೋರಾಟಕ್ಕೆ ಇಳಿಯುವುದೊಂದೇ ವಿರೋಧ ಪಕ್ಷಗಳಿಗೆ ಉಳಿದಿರುವ ಏಕೈಕ ಮಾರ್ಗವಾಗಿದೆ. ಮೇ 4ರ ಫಲಿತಾಂಶವು ಕೇವಲ ಬಂಗಾಳದ ಜನಾದೇಶವನ್ನಷ್ಟೇ ಅಲ್ಲ, ಭಾರತದ ಚುನಾವಣಾ ವ್ಯವಸ್ಥೆಯ ಭವಿಷ್ಯವನ್ನು ನಿರ್ಧರಿಸಲಿದೆ.
ಹೋರಾಟದ ಕಣಕ್ಕಿಳಿದರೆ ಮಮತಾ ಬ್ಯಾನರ್ಜಿ ಬೀದಿಗಿಳಿಯುವುದಷ್ಟೇ ಅಲ್ಲ, ಪ್ರಾಣವನ್ನೇ ಪಣಕ್ಕಿಡುವ ಅಸಾಧಾರಣ ಛಲಗಾರ್ತಿ. ಕಮ್ಯುನಿಸ್ಟರ ವಿರುದ್ಧದ ದಶಕಗಳ ಸಮರ ಹಾಗೂ ಟಾಟಾ ಕಂಪನಿಯ ವಿರುದ್ಧ ಸಿಂಗೂರಿನಲ್ಲಿ ನಡೆಸಿದ ಸುದೀರ್ಘ ಉಪವಾಸ ಸತ್ಯಾಗ್ರಹ ಸೇರಿದಂತೆ ಅವರ ಎಲ್ಲಾ ಹೋರಾಟಗಳಲ್ಲೂ ಇದು ಸ್ಪಷ್ಟವಾಗಿ ಸಾಬೀತಾಗಿದೆ. ಇದೀಗ ಇವಿಎಂ ರಕ್ಷಣೆಗೆ ನಿಂತಿರುವ ಅವರ ದಿಟ್ಟ ಹೆಜ್ಜೆಗಳು, ಕೇಂದ್ರ ಆಡಳಿತ ಯಂತ್ರ ಮತ್ತು ಚುನಾವಣಾ ಆಯೋಗದ ಯಾವುದೇ ಕುತಂತ್ರಗಳಿಗೂ ತಾವು ಎಂದಿಗೂ ಮಣಿಯುವುದಿಲ್ಲ ಎಂಬ ಕಠಿಣ ಸಂದೇಶವನ್ನು ರವಾನಿಸಿವೆ. ಪ್ರಜಾಪ್ರಭುತ್ವದ ಉಳಿವಿಗಾಗಿ, ಚುನಾವಣಾ ಅಖಾಡದಲ್ಲಿ ಬಿಜೆಪಿಯ ಅಕ್ರಮ ಹುನ್ನಾರಗಳನ್ನು ಮೆಟ್ಟಿಬೀಳಲು ಹಿಂದಿನ ಜೀವನ್ಮರಣದ ಹೋರಾಟಗಳ ಮಾದರಿಯಲ್ಲೇ ದೀದಿ ಮತ್ತೊಮ್ಮೆ ಸಡ್ಡುಹೊಡೆದು ಮುಂಚೂಣಿಯಲ್ಲಿ ನಿಂತಿದ್ದಾರೆ. ಈ ಹೋರಾಟವು ಅವರ ಅಚಲ ನಿರ್ಧಾರವನ್ನು ಮತ್ತೆ ಸಾರ್ವರ್ತಿಕಗೊಳಿಸಿದೆ.




