ಮೇಲ್ದರ್ಜೆಗೇರಿಸಲು ಮತ್ತು ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಎಸ್ ಎನ್ ಅಭಿವೃದ್ಧಿ ಬ್ಯಾಂಕ್ ನೆರವೇನಹಳ್ಳಿ ಉನ್ನತ ಶಿಕ್ಷಣ ಇಲಾಖೆ ಕೈಗೆತ್ತಿಕೊಂಡಿರುವ ಉತ್ಕೃಷ್ಟದ ಮತ್ತು ಸಂಶೋಧನಾ ಕೇಂದ್ರವಾಗಿ(ಸೆಂಟರ್ ಆಫ್ ಎಕ್ಸಲೆನ್ಸ್) ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉನ್ನತೀಕರಣದ ಭಾಗ್ಯ ದೊರತಿದೆ.
ಹೌದು ರಾಜ್ಯದಲ್ಲಿ 40 ಸರ್ಕಾರಿ ಪದವಿ ಕಾಲೇಜುಗಳಿಗೆ ಉನ್ನತೀಕರಣ ಭಾಗ್ಯ ದೊರೆತಿದ್ದು, ಅದರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉನ್ನತೀಕರಣ ಭಾಗ್ಯ ದೊರೆತಿದ್ದು, ಇದರಿಂದ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಮೂಲಸೌಕರ್ಯಗಳು ದೊರೆತಂತಾಗಿದೆ.
ಆಯ್ಕೆಯಾದ ಪದವಿ ಕಾಲೇಜುಗಳ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವ ಹಿನ್ನೆಲೆಯಲ್ಲಿ ಪ್ರತಿ ಕಾಲೇಜಿಗೆ 15 ಕೋಟಿ ರೂ. ಅನುದಾನದಲ್ಲಿ ಕಲಿಕಾ ಉಪಕರಣಗಳು, ಪ್ರಯೋಗಾಲಯಗಳು, ಕಂಪ್ಯೂಟರ್ ಕೇಂದ್ರ, ಡಿಜಿಟಲ್ ಗ್ರಂಥಾಲಯ ಹಾಗೂ ಸಂಶೋಧನಾ ಕೇಂದ್ರಗಳನ್ನು ತೆರೆಯಲು ಅವಕಾಶ ಸಿಗುತ್ತದೆ. ಈ ಸಂಬಂಧ ಕ್ರಿಯಾ ಯೋಜನೆ ತಯಾರಿಸಲು ಇಲಾಖೆ ಸೂಚಿಸಿದೆ.
ಎರಡು ದಶಕಗಳಿಂದ ಪ್ರತಿವರ್ಷ ಕಾಲೇಜಿನಲ್ಲಿ ನೂರಾರು ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡುತ್ತಿದ್ದು, ಗುಣಮಟ್ಟಕ್ಕೆ ಶಿಕ್ಷಣಕ್ಕೆ ಹೆಸರಾಗಿದೆ. ಜತೆಗೆ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಡಿ ಕಂಪ್ಯೂಟರ್ ಮತ್ತು ವ್ಯವಹಾರ(ಬಿಬಿಎ ಬಿಸಿಎ) ಅಧ್ಯಯನ ಕೇಂದ್ರ ತೆರೆಯುವ ಪ್ರಸ್ತಾವನೆಯೂ ಇದೆ.
ಈಗಾಗಲೇ ಕೇಂದ್ರ ಸರ್ಕಾರ ಉನ್ನತ ಶಿಕ್ಷಣ ಅಭಿಯಾನ( ಉಷಾ ಯೋಜನೆ)ದಡಿ ಒದಗಿಸಿದ 5 ಕೋಟಿ ರೂ. ಅನುದಾನದಲ್ಲಿ ಒಳಾಂಗಣ ಕ್ರೀಡಾಂಗಣ, ಕಂಪ್ಯೂಟರ್ ಕೇಂದ್ರ ಹಾಗೂ ಸಭಾಂಗಣ ನಿರ್ಮಾಣ ನಡೆಯುತ್ತಿದೆ. ಈಗ ರಾಜ್ಯ ಸರ್ಕಾರಿ ಮಾದರಿ ಕೇಂದ್ರವಾಗಿ ಆಯ್ಕೆ ಮಾಡಿರುವುದು ಅಭಿವೃದ್ಧಿಗೆ ಪೂರಕವಾಗಿದೆ ಎನ್ನುತ್ತಾರೆ ಶಿಕ್ಷಣ ಪ್ರೇಮಿಗಳು.
ಪ್ರಾಚಾರ್ಯ ಡಾ. ಎಚ್ ಎ ಕಟಗೂರ ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದು, “ಗುಣಮಟ್ಟದ ಉನ್ನತ ಶಿಕ್ಷಣ ಎಲ್ಲರಿಗೂ ದೊರೆಯುವಂತೆ ಸರ್ಕಾರ ರಾಜ್ಯದ 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಮಾದರಿಯ ಕಾಲೇಜುಗಳು ಎಂದು ಆಯ್ಕೆ ಮಾಡಿದೆ. ವಿಜಯಪುರ ಜಿಲ್ಲೆಯಿಂದ ನಮ್ಮ ಕಾಲೇಜು ಮಾತ್ರ ಆಯ್ಕೆಯಾಗಿರುತ್ತದೆ. ನಮಗೆ ಹೆಮ್ಮೆ ಅನುಸುತ್ತದೆ. ಇದರಿಂದಾಗಿ ಗುಣಮಟ್ಟದ ಉನ್ನತ ಶಿಕ್ಷಣ ಪದವಿ ವಿದ್ಯಾರ್ಥಿಗಳಿಗೆ ದೊರೆಯಲು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕಾರಿಯಾಗಿರುತ್ತದೆ. ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇದು ಸಹಕಾರಿಯಾಗುತ್ತದೆ” ಎಂದರು.
ದಲಿತ ವಿದ್ಯಾರ್ಥಿ ಪರಿಷತ್ತಿನ ತಾಲೂಕು ಅಧ್ಯಕ್ಷ ಮುತ್ತು ಚಲವಾದಿ ಮಾತನಾಡಿ, “ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಉನ್ನತೀಕರಿಸಿದ್ದರಿಂದ ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ಮಟ್ಟಕ್ಕೆ ಏರಲು ಸಹಕಾರಿಯಾಗುತ್ತದೆ” ಎಂದರು.
ಎರಡು ದಶಕಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಮುದ್ದೇಬಿಹಾಳ ಪದವಿ ಪೂರ್ವ ಕಾಲೇಜು ಈಗ ಮಾದರಿ ಕಾಲೇಜು ಎನಿಸಿಕೊಂಡಿದ್ದು, ವಿದ್ಯಾರ್ಥಿಗಳ ಸಂಶೋಧನಾ ಸಾಮರ್ಥ್ಯ, ಡಿಜಿಟಲ್ ಕೌಶಲ್ಯ ಮತ್ತು ಉದ್ಯೋಗ ಸಿದ್ಧತೆ ಹೆಚ್ಚಾಗಲಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ ಬಿಬಿಎ ಮತ್ತು ಬಿಸಿಎ ಕೋರ್ಸ್‌ಗಳನ್ನು ಪ್ರಾರಂಭಿಸುವ ಯೋಜನೆಯೂ ಇದೆ.
ಇದನ್ನೂ ಓದಿದ್ದೀರಾ? ಬೀದರ್ | ‘ಈದಿನ’ ವರದಿಗೆ ಸ್ಪಂದನೆ : ಸೋರಳ್ಳಿ ಗ್ರಾಮಕ್ಕೆ ಡಿಸಿ ಶಿಲ್ಪಾ ಶರ್ಮಾ ಭೇಟಿ, ಪರಿಶೀಲನೆ
ಈ ಕ್ರಮವು ಗ್ರಾಮೀಣ, ದಲಿತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣದಲ್ಲಿ ಸಮಾನ ಅವಕಾಶ ಒದಗಿಸುವತ್ತ ರಾಜ್ಯ ಸರ್ಕಾರದ ಸಕಾರಾತ್ಮಕ ಹೆಜ್ಜೆಯಾಗಿದೆ. ಮುದ್ದೇಬಿಹಾಳದ ಈ ಕಾಲೇಜು ಭವಿಷ್ಯದಲ್ಲಿ ಪ್ರಾದೇಶಿಕ ವಿದ್ಯಾ ಕೇಂದ್ರವಾಗಿ ಬೆಳೆಯುವಲ್ಲಿ ಯಾವುದೇ ಸಂದೇಹವಿಲ್ಲ. ಈ ಉನ್ನತೀಕರಣವು ಕೇವಲ ಕಾಲೇಜಿನ ಅಭಿವೃದ್ಧಿ ಮಾತ್ರವಲ್ಲ, ಸಮಗ್ರ ತಾಲೂಕಿನ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗೆ ದಾರಿ ತೋರುವ ಮಹತ್ವದ ಮೈಲುಗಲ್ಲಾಗಿದೆ.




