ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ನಡೆದಂತೆ ಪಶ್ಚಿಮ ಬಂಗಾಳದಲ್ಲೂ ಶಾಸಕರ ಕುದುರೆ ವ್ಯಾಪಾರ ನಡೆಸಲು ಬಿಜೆಪಿ ಹೊಂಚು ಹಾಕುತ್ತಿದ್ದು, ಇದನ್ನು ತಡೆಯಲು ಮುಂಬರುವ ಚುನಾವಣೆಯಲ್ಲಿ ಟಿಎಂಸಿಗೆ ಮೂರನೇ ಎರಡರಷ್ಟು ನಿಚ್ಚಳ ಬಹುಮತ ನೀಡುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, “ಕೇವಲ ಸರಳ ಬಹುಮತ ಬಂದರೆ ಸಾಲದು. ಅಲ್ಪ ಬಹುಮತ ಪಡೆದು ಸರ್ಕಾರ ರಚಿಸಿದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನ್ನ ಹಣಬಲ ಹಾಗೂ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಶಾಸಕರನ್ನು ಖರೀದಿಸುವ ಯತ್ನ ಮಾಡುತ್ತದೆ. ಹೀಗಾಗಿ ಬಿಜೆಪಿಯ ಈ ಪ್ರಜಾಪ್ರಭುತ್ವ ವಿರೋಧಿ ಕೃತ್ಯಕ್ಕೆ ಶಾಶ್ವತವಾಗಿ ಕಡಿವಾಣ ಹಾಕಲು ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ ಟಿಎಂಸಿಗೆ ಮೂರನೇ ಎರಡರಷ್ಟು ಸ್ಥಾನಗಳನ್ನು ನೀಡಿ ಆಶೀರ್ವದಿಸಬೇಕು,” ಎಂದು ಕರೆ ನೀಡಿದ್ದಾರೆ.
ಬಿಜೆಪಿಯ ಶಾಸಕರ ಖರೀದಿ ಕಾರ್ಯಾಚರಣೆಯನ್ನು ಕಟುವಾಗಿ ಟೀಕಿಸಿದ ಮಮತಾ ಬ್ಯಾನರ್ಜಿ, “ಮಧ್ಯಪ್ರದೇಶದಲ್ಲಿ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಹಾಗೂ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಬಿಜೆಪಿ ಯಾವ ರೀತಿ ವಾಮಮಾರ್ಗದ ಮೂಲಕ ಉರುಳಿಸಿತು ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಜನಾದೇಶವನ್ನು ಗೌರವಿಸದ ಬಿಜೆಪಿ, ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕೋಟಿಗಟ್ಟಲೆ ಹಣ ಸುರಿದು ಶಾಸಕರನ್ನು ಸೆಳೆದು ಸರ್ಕಾರಗಳನ್ನು ಅಸ್ಥಿರಗೊಳಿಸುವ ಕುತಂತ್ರದಲ್ಲಿ ಸದಾ ನಿರತವಾಗಿರುತ್ತದೆ. ಬಂಗಾಳದಲ್ಲಿ ಆ ಪಕ್ಷಕ್ಕೆ ಈ ಅವಕಾಶವನ್ನು ಯಾವುದೇ ಕಾರಣಕ್ಕೂ ನೀಡಬಾರದು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ
“ಒಂದು ವೇಳೆ ನಮಗೆ ಸ್ಪಷ್ಟವಾದ ಮೂರನೇ ಎರಡರಷ್ಟು ಬಹುಮತ ಸಿಕ್ಕರೆ, ಶಾಸಕರನ್ನು ಒಡೆಯುವುದು ಬಿಜೆಪಿಗೆ ಅಸಾಧ್ಯವಾಗುತ್ತದೆ. ಬಿಜೆಪಿಯು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಮೂಲ ತತ್ವಗಳನ್ನೇ ಗಾಳಿಗೆ ತೂರಿದೆ. ಕುದುರೆ ವ್ಯಾಪಾರಕ್ಕಿಳಿಯುವ ಅವರ ಅಸಂವಿಧಾನಿಕ ತಂತ್ರಕ್ಕೆ ಪಶ್ಚಿಮ ಬಂಗಾಳದ ಪ್ರಜ್ಞಾವಂತ ಮತದಾರರು ಮತಯಂತ್ರದ ಮೂಲಕವೇ ತಕ್ಕ ಉತ್ತರ ನೀಡಲಿದ್ದಾರೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿನ ಅಭಿವೃದ್ಧಿ ಕಾರ್ಯಗಳು ಮತ್ತು ಮಹಿಳಾ ಪರ, ಜನಪರ ಯೋಜನೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಲು ಸುಭದ್ರ ಸರ್ಕಾರ ಅತ್ಯಗತ್ಯ ಎಂದು ಪ್ರತಿಪಾದಿಸಿದ ಅವರು, ಬಿಜೆಪಿಯ ವಾಮಮಾರ್ಗದ ರಾಜಕಾರಣವನ್ನು ಬೇರುಸಹಿತ ಕಿತ್ತೊಗೆಯಲು ಜನತೆ ಬೆಂಬಲಿಸಬೇಕು ಎಂದು ಕೋರಿದ್ದಾರೆ.





