ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆಯೊಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋರ್ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 65 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯ ನಂತರ ಬಾಲಕಿಯ ಮೃತದೇಹವನ್ನು ದನದ ಕೊಟ್ಟಿಗೆಯಲ್ಲಿದ್ದ ಸೆಗಣಿಯಲ್ಲಿ ಮುಚ್ಚಿಟ್ಟು ಆರೋಪಿ ಪರಾರಿಯಾಗಿದ್ದ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಆರೋಪಿಯು ಆಟವಾಡುತ್ತಿದ್ದ ಬಾಲಕಿಗೆ ಸಿಹಿತಿಂಡಿ ನೀಡುವ ಆಮಿಷವೊಡ್ಡಿ ದನದ ಕೊಟ್ಟಿಗೆಯ ಶೆಡ್‌ಗೆ ಕರೆದೊಯ್ದಿದ್ದಾನೆ. ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈದಿದ್ದಾನೆ. ಬಳಿಕ ಯಾರಿಗೂ ಅನುಮಾನ ಬಾರದಂತೆ ಮೃತದೇಹವನ್ನು ಸೆಗಣಿಯಲ್ಲಿ ಬಚ್ಚಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಗು ನಾಪತ್ತೆಯಾದ ಬಳಿಕ ಆತಂಕಗೊಂಡ ಪೋಷಕರು ಮತ್ತು ಸಂಬಂಧಿಕರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ, ಖಾಸಗಿ ನಿವಾಸವೊಂದರ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಯು ಬಾಲಕಿಯನ್ನು ತನ್ನೊಂದಿಗೆ ಕರೆದೊಯ್ಯುತ್ತಿರುವುದು ಸೆರೆಯಾಗಿತ್ತು. ಈ ಮಹತ್ವದ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕ ಮಹಿಳಾ ಕ್ರಿಕೆಟ್ ಸಾಗಬೇಕಾದ ಹಾದಿ ಯಾವುದು? KSCA ತೋರಿಸಬೇಕಿದೆ ದಿಕ್ಕು
ಮುಂಬೈ-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ
ಘಟನೆಯಿಂದ ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ಸ್ಥಳೀಯ ಪೊಲೀಸ್ ಚೌಕಿಗೆ ಮುತ್ತಿಗೆ ಹಾಕಿ, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಅಲ್ಲದೆ, ಮುಂಬೈ-ಬೆಂಗಳೂರು ಹೆದ್ದಾರಿಯನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಿದ್ದರಿಂದ ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದ ಪುಣೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಂದೀಪ್ ಸಿಂಗ್ ಗಿಲ್ ಅವರು, ‘ಪ್ರಕರಣದ ವಿಚಾರಣೆಯನ್ನು ತ್ವರಿತ ಗತಿಯ ನ್ಯಾಯಾಲಯದಲ್ಲಿ ನಡೆಸಲಾಗುವುದು ಹಾಗೂ ಮುಂದಿನ 15 ದಿನಗಳೊಳಗೆ ಆರೋಪಪಟ್ಟಿ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಶಾಂತರಾದರು.




