ಕರ್ನಾಟಕ ಮಹಿಳಾ ಕ್ರಿಕೆಟ್ ಸಾಗಬೇಕಾದ ಹಾದಿ ಯಾವುದು? KSCA ತೋರಿಸಬೇಕಿದೆ ದಿಕ್ಕು

Date:

ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ನೇತೃತ್ವದ ನೂತನ ಪದಾಧಿಕಾರಿಗಳ ತಂಡ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‍ನ ಆಡಳಿತ ಚುಕ್ಕಾಣಿಯನ್ನು ಹಿಡಿದಿದೆ. ಅವರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಕೆ.ಎಸ್.ಸಿ.ಎ ಲೀಗ್ ಕ್ರಿಕೆಟ್ ಟೂರ್ನಿಗಳನ್ನು ನಡೆಸುವುದರ ಜೊತೆಗೆ ಪ್ರತಿಭಾವಂತ ಆಟಗಾರರಿಗೆ ಸೂಕ್ತ ಅವಕಾಶಗಳನ್ನು ಒದಗಿಸಬೇಕಿದೆ. ಅದರಲ್ಲೂ ಸಮಕಾಲೀನ ಸಂದರ್ಭದಲ್ಲಿ ಮಹಿಳಾ ಕ್ರಿಕೆಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ.

- Advertisement -


ಭಾರತದಲ್ಲಿ ಕ್ರಿಕೆಟ್ ತನ್ನ ಆರಂಭದ ದಿನಗಳಿಂದ ಇಪ್ಪತ್ತನೇ ಶತಮಾನದ ಕೊನೆಯವರೆಗೂ, ಕ್ರಿಕೆಟ್ ಅಭಿಮಾನಿಗಳಿಂದ ಪುರುಷ ಕ್ರಿಕೆಟ್ ಆಟಗಾರರಿಗೆ ಗೌರವಾದರಗಳನ್ನು ದೊರಕಿಸಿಕೊಡುತ್ತಿತ್ತು. ಕಪಿಲ್ ದೇವ್, ಗವಾಸ್ಕರ್, ಕಿರ್ಮಾನಿ, ಅಜರುದ್ದೀನ್, ದ್ರಾವಿಡ್, ಲಕ್ಷ್ಮಣ್, ಸಚಿನ್ ತೆಂಡೂಲ್ಕರ್ ಅಂತಹ ಮಹಾನ್ ಆಟಗಾರರ ಹೆಸರು ದೇಶದ ಮೂಲೆಮೂಲೆಗಳಲ್ಲೂ ಕೇಳಿ ಬರುತ್ತಿತ್ತು. ಸಮೂಹ ಮಾಧ್ಯಮಗಳಲ್ಲಿ ಬರುತ್ತಿದ್ದ ಜಾಹೀರಾತುಗಳಲ್ಲಿಯೂ ಅವರೇ ಕಾಣಿಸಿಕೊಳ್ಳುತ್ತಿದ್ದರು. ಪುರುಷ ಕ್ರಿಕೆಟ್ ಹೆಚ್ಚು ಪ್ರಚಲಿತವಿದ್ದ ಸಂದರ್ಭದಲ್ಲಿ ಮಹಿಳಾ ಕ್ರಿಕೆಟ್ ನಗಣ್ಯವಾಗಿತ್ತು. ಒಬ್ಬ ಮಹಿಳಾ ಆಟಗಾರ್ತಿಯ ಹೆಸರು ಯಾರಿಗೂ ಗೊತ್ತಿರಲಿಲ್ಲ. ಎಷ್ಟೇ ಆದರೂ ಭಾರತ ಪುರುಷ ಪ್ರಧಾನ ಸಮಾಜ ಹೊಂದಿರುವಂತಹ ರಾಷ್ಟ್ರ. ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡಿಕೊಂಡಿರಬೇಕೆಂದು ಅವರಿಗೆ ನಿರ್ಬಂಧತೆಯ ಸೆರೆಮನೆಯಲ್ಲಿ ಇಡಲಾಗಿತ್ತು. ಹಾಗೆ ನೋಡಿದರೆ ಹನ್ನೆರಡನೇ ಶತಮಾನದಲ್ಲಿ ಅಕ್ಕ ಮಹಾದೇವಿ ಮೊದಲ ಬಾರಿಗೆ ಸಮಾಜ ಹಾಕಿದ ಬೇಡಿಯನ್ನು ಕಳಚಿಟ್ಟು ನಿರ್ವಸ್ತ್ರಳಾಗಿ ತನ್ನ ದಾರಿಯನ್ನು ಹುಡುಕುತ್ತಾ ಹೊರಟವಳು. ಅಲ್ಲಿಂದ ಇಲ್ಲಿಯವರೆಗಿನ ಮಹಿಳೆಯರ ಬದುಕಿನ ಸಂಘರ್ಷ ನಿರಂತರವಾಗಿ ಸಾಗಿದೆ. ಇದರ ಮಧ್ಯೆ ಇಪ್ಪತ್ತೊಂದನೇ ಶತಮಾನದಲ್ಲಿ ಜಾಗತೀಕರಣ, ಆಧುನೀಕರಣದ ಹಿನ್ನೆಲೆಯಲ್ಲಿ ಸ್ತ್ರೀಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುವುದು ಸಕಾರಾತ್ಮಕ ಅಂಶವಾಗಿದೆ.

ಆದರೆ ಮುಖ್ಯವಾಗಿ ತಮ್ಮ ದೈಹಿಕ ಸಾಮರ್ಥ್ಯವನ್ನು ಪರೀಕ್ಷೆ ಮಾಡುವ ಕ್ರೀಡೆಗಳಲ್ಲಿ ಅದರಲ್ಲೂ ಹೆಚ್ಚು ಜನಪ್ರಿಯವಾಗುತ್ತಿರುವ ಕ್ರಿಕೆಟ್‍ನಲ್ಲಿ, ಮಹಿಳೆಯರ ಪಾಲ್ಗೊಳ್ಳುವಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಬೇಕು. ಒಂದು ಸಮಾಧಾನಕರ ಸಂಗತಿಯೆಂದರೆ 1970ರ ದಶಕದಲ್ಲಿ ಆರಂಭವಾದ ನಮ್ಮ ದೇಶದ ಮಹಿಳಾ ಕ್ರಿಕೆಟ್ ತಂಡ, ಸಂಘರ್ಷ, ಅನಾದರಗಳ ಮಧ್ಯೆ ಹೋರಾಡಿ ಮೇಲೆ ಬಂದಿದೆ. ಅದಕ್ಕೆ ಇತ್ತೀಚೆಗೆ ಗೌರವಾದರಗಳು ಸಿಗುತ್ತಿವೆ. ಮಿಥಾಲಿ ರಾಜ್ ರಿಂದ ಹಿಡಿದು ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಶಫಾಲಿ ವರ್ಮವರೆಗೂ ಎಲ್ಲರಿಗೂ ಕ್ರಿಕೆಟ್, ಹೆಸರು ಮತ್ತು ಹಣ ತಂದುಕೊಟ್ಟಿದೆ. ಕ್ರಿಕೆಟ್ ಅಭಿಮಾನಿಗಳು ಅವರ ಹೆಸರು ಹೇಳುವಷ್ಟರ ಮಟ್ಟಿಗೆ ಚಿರಪರಿಚಿತರಾಗಿದ್ದಾರೆ. ಅಷ್ಟೇ ಅಲ್ಲದೇ ವಿರಾಟ್ ಕೊಹ್ಲಿ ಪಡೆದುಕೊಳ್ಳುತ್ತಿರುವ ವೇತನದಷ್ಟೇ ಸ್ಮೃತಿ ಮಂಧಾನಗೆ ಲಭಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...
shanta rangaswamy
shanta rangaswamy

ಭಾರತ ಮಹಿಳಾ ಕ್ರಿಕೆಟ್ ತಂಡದಂತೆ ಕರ್ನಾಟಕ ಕ್ರಿಕೆಟ್ ತಂಡವು 1970ರ ಮಧ್ಯಭಾಗದಲ್ಲಿ ರೂಪುಗೊಳ್ಳಲು ಪ್ರಾರಂಭಿಸಿತು. 1976ರಲ್ಲಿ ಭಾರತವನ್ನು ತಮ್ಮ ಮೊದಲ ಟೆಸ್ಟ್‌ನಲ್ಲಿ ಮುನ್ನಡೆಸಿದ ಶಾಂತಾ ರಂಗಸ್ವಾಮಿಯಂತಹವರು ಮುಂಚೂಣಿಯಲ್ಲಿ ನಿಂತು ಇದನ್ನು ಪ್ರವರ್ತಿಸಿದರು. ಅಲ್ಲಿಂದ ಇಲ್ಲಿಯವರೆಗೆ ಕರ್ನಾಟಕ ಮಹಿಳಾ ತಂಡ ರಾಷ್ಟ್ರೀಯ ಮಟ್ಟದಲ್ಲಿ ಪಂದ್ಯಾವಳಿಗಳಲ್ಲಿ ಭಾಗವಹಿಸಿಕೊಂಡೇ ಬಂದಿದೆ. ಕರ್ನಾಟಕದಲ್ಲಿ 15 ವರ್ಷದೊಳಗಿನ ಮಹಿಳೆಯರ 19 ವರ್ಷದೊಳಗಿನ ಮಹಿಳೆಯರ ಹಾಗೂ ಹಿರಿಯ ಮಹಿಳೆಯರ ಕ್ರಿಕೆಟ್ ತಂಡ. ಈ ಮೂರು ಬಗೆಯ ತಂಡಗಳಿಗಾಗಿ ಮಾತ್ರ ಕೆ.ಎಸ್.ಸಿ.ಎ ಆಯ್ಕೆ ಪ್ರಕ್ರಿಯೆಯನ್ನು ಕೈಗೊಂಡಿರುತ್ತದೆ. ಮಹಿಳೆಯರು ಈ ಮೂರು ಮಾದರಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಮುಂಚೆ, ಕೆ.ಎಸ್.ಸಿ.ಎ ಅಡಿಯಲ್ಲಿ ಬರುವ ಯಾವುದಾದರೂ ಒಂದು ಕ್ಲಬ್ ಪರವಾಗಿ ಆಡಿ ತಮ್ಮ ಅಮೋಘ ಆಟದ ಮೂಲಕ ಗಮನ ಸೆಳೆದಿರಬೇಕು. ಆಗ ಮಾತ್ರ ರಾಜ್ಯ 15, 19 ಹಾಗೂ ಸೀನಿಯರ್ ತಂಡಕ್ಕೆ ಆಯ್ಕೆಯಾಗಬಹುದು.

ಇತ್ತೀಚೆಗೆ ಕ್ರಿಕೆಟ್ ಕ್ಲಬ್‍ಗಳು ಕೂಡ ಮಹಿಳಾ ಕ್ರಿಕೆಟ್‌ಗೆ ಪ್ರಾಶಸ್ತ್ಯವನ್ನು ನೀಡುತ್ತಿವೆ. ಆಯ್ಕೆ ಟ್ರಯಲ್ಸ್‌ಗಳನ್ನು ಹಮ್ಮಿಕೊಂಡು ಉಚಿತವಾಗಿ ಅವರಿಗೆ ತರಬೇತಿ ಹಾಗೂ ಅಭ್ಯಾಸ ಪಂದ್ಯಗಳನ್ನು ಆಡಿಸುತ್ತಿವೆ. ಬ್ರಿಜೇಶ್ ಪಟೇಲ್ ಕ್ರಿಕೆಟ್ ಅಕಾಡೆಮಿ, ಸಿಕ್ಸ್ ಕ್ರಿಕೆಟ್, ಜಸ್ಟ್ ಕ್ರಿಕೆಟ್, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್, ಸಂಪ್ರಸಿದ್ಧಿ, ರಾಮ್ ಸ್ಪೋರ್ಟ್ಸ್, ಎಸ್.ಎಲ್.ಎಸ್. ಕ್ರಿಕೆಟ್ ಅಕಾಡೆಮಿ, ಕವರ್ ಡ್ರೈವ್ ಮುಂತಾದವು. ಆದರೆ ಅದಕ್ಕೆ ಪ್ರತಿಕ್ರಿಯೆ ನಿರಾಶಾದಾಯಕ. ಬಹಳ ಕಡಿಮೆ ಹುಡುಗಿಯರು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ಕೆ.ಎಸ್.ಸಿ.ಎ ಅಡಿ ಬರುವ ಎಲ್ಲಾ ಕ್ರಿಕೆಟ್ ಕ್ಲಬ್‍ಗಳು ಮಹಿಳಾ ಕ್ರಿಕೆಟ್ ತಂಡಗಳನ್ನು ಕಟ್ಟಲು ಸಾಧ್ಯವಾಗಿಲ್ಲ. ಅಷ್ಟು ಮಹಿಳಾ ಆಟಗಾರ್ತಿಯರು ಸಿಗುತ್ತಿಲ್ಲ.

Mithali raj
Mithali raj

ಕೆಲವು ಕ್ಲಬ್‍ಗಳಲ್ಲಿ ಒಂದಿಬ್ಬರು ಹುಡುಗಿಯರು ಕಲಿಯಲು ಬರುತ್ತಿರುವುದಾದರೂ, ಹುಡುಗರ ಜೊತೆ ಆಡಬೇಕಾದ ಅನಿವಾರ್ಯತೆಯಿಂದ ಕೆಲಕಾಲ ಆಡಿ ಕ್ರಿಕೆಟ್ ನಿಲ್ಲಿಸುವ ಸಾಧ್ಯತೆಗಳು ನಿಚ್ಚಳವಾಗಿರುತ್ತವೆ. ಬೇರೆ ಕ್ಲಬ್‍ಗಳು ಅವರು ವಾಸವಿರುವ ಜಾಗದಿಂದ ಬಹಳ ದೂರದಲ್ಲಿರುವುದರಿಂದ ಶಿಕ್ಷಣದ ಜೊತೆಗೆ ಅದನ್ನು ಸರಿದೂರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಹಿಳಾ ಕ್ರಿಕೆಟ್ ಸ್ಪರ್ಧೆ ಹೇಳಿಕೊಳ್ಳುವಂತಿಲ್ಲ. ನಮ್ಮ ನಾಡಿನ ಮಹಿಳೆಯರಿಗೆ ಈಗಾಗಲೇ ಭಾರತ ತಂಡವನ್ನು ಪ್ರತಿನಿಧಿಸಿರುವ ನಮ್ಮವರೇ ಆದ ಶಾಂತಾ ರಂಗಸ್ವಾಮಿ, ವೇದ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್, ವೆಲ್ಲಾಸ್ವಾಮಿ ವನಿತಾ, ಕರುಣಾ ಜೈನ್, ಮಮತಾ ಮಬೇನ್, ಇತ್ತೀಚೆಗೆ ಹೆಸರು ಮಾಡುತ್ತಿರುವ ಶ್ರೇಯಾಂಕಾ ಪಾಟೀಲ್ ಮಾದರಿಯಾಗಬೇಕು. ಇವರಲ್ಲಿ ಬಹುಪಾಲು ಆಟಗಾರ್ತಿಯರ ಹಾದಿ ಹೂವಿನ ಹಾದಿಯಾಗಿರಲಿಲ್ಲ. ಮುಳ್ಳಿನ ಹಾದಿಯಾಗಿತ್ತು. ಅನೇಕರು ಅವಮಾನ, ಹೀಗಳಿಕೆ ಎಲ್ಲವನ್ನು ಸಹಿಸಿ ಮೇಲೆ ಬಂದಿದ್ದಾರೆ. ತಮ್ಮ ಆತ್ಮವಿಶ್ವಾಸ, ಬದ್ಧತೆ, ತಾಳ್ಮೆ, ತ್ಯಾಗ, ಧೈರ್ಯ, ಸಾಧನೆ ಮಾಡಬೇಕೆಂಬ ಹಂಬಲ ಈ ಹಂತಕ್ಕೆ ಏರುವಂತೆ ಮಾಡಿದೆ.

ಇದನ್ನು ಓದಿದ್ದೀರಾ? ಕಿಂಗ್ ಕೊಹ್ಲಿ ಜರ್ಸಿ ನಂಬರ್ 18ರ ಹಿಂದಿದೆ ಕಣ್ಣೀರಿನ ಕಥೆ; ಕರ್ನಾಟಕಕ್ಕೂ ಇದಕ್ಕೂ ಏನು ನಂಟು?

ಮಹಿಳಾ ಕ್ರಿಕೆಟಿಗರಿಗೂ ಪುರುಷರ ಐ.ಪಿ.ಎಲ್ ನಂತೆ ಡಬ್ಲ್ಯೂ.ಪಿ.ಎಲ್ ಇದೆ. ರಾಷ್ಟ್ರವನ್ನು ಪ್ರತಿನಿಧಿಸಲು ಸಾಧ್ಯವಾಗದಿದ್ದರೂ ಡಬ್ಲ್ಯೂ.ಪಿ.ಎಲ್ ಮೂಲಕ ಹಣ, ಹೆಸರು ಗಳಿಸಲು ಸಾಧ್ಯ. ಮಹಿಳೆಯರಲ್ಲಿ ಇರಬಹುದಾದ ಮಾನಸಿಕ, ದೈಹಿಕ ಹಿಂಜರಿಕೆಯನ್ನು ದೂರವಿಟ್ಟು ಮೈದಾನಕ್ಕೆ ಇಳಿಯಬೇಕು. ಇದಕ್ಕೆ ಪುರುಷರೂ ಬೆನ್ನೆಲುಬಾಗಿರಬೇಕು. ಆಗ ಮಾತ್ರ ಕ್ರಿಕೆಟ್‍ನಲ್ಲೂ ಆರೋಗ್ಯಕರವಾದ ಸ್ಪರ್ಧಾತ್ಮಕವಾದ ಜಗತ್ತು ಸೃಷ್ಟಿಯಾಗುತ್ತದೆ. ಬಿ.ಸಿ.ಸಿ.ಐ ಹಾಗೂ ಕೆ.ಎಸ್.ಸಿ.ಎ ಮಹಿಳಾ ಕ್ರಿಕೆಟಿಗರಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿವೆ.

smriti mandhana
smriti mandhana

ಭಾರತ ಕ್ರಿಕೆಟ್ ತಂಡ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ನೇತೃತ್ವದ ನೂತನ ಪದಾಧಿಕಾರಿಗಳ ತಂಡ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‍ನ ಆಡಳಿತ ಚುಕ್ಕಾಣಿಯನ್ನು ಹಿಡಿದಿದೆ. ಅವರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಕೆ.ಎಸ್.ಸಿ.ಎ ಲೀಗ್ ಕ್ರಿಕೆಟ್ ಟೂರ್ನಿಗಳನ್ನು ನಡೆಸುವುದರ ಜೊತೆಗೆ ಪ್ರತಿಭಾವಂತ ಆಟಗಾರರಿಗೆ ಸೂಕ್ತ ಅವಕಾಶಗಳನ್ನು ಒದಗಿಸಿಕೊಡಬೇಕಿದೆ. ಅದರಲ್ಲೂ ಸಮಕಾಲೀನ ಸಂದರ್ಭದಲ್ಲಿ ಮಹಿಳಾ ಕ್ರಿಕೆಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ. ರಾಜ್ಯ ಕ್ರಿಕೆಟ್ ಸಂಸ್ಥೆ ಇತ್ತೀಚೆಗೆ ಒಂದು ಸುತ್ತೋಲೆ ಹೊರಡಿಸಿ ಪ್ರತಿ ತಿಂಗಳು ಕರ್ನಾಟಕ ಸೀನಿಯರ್ ತಂಡಕ್ಕೆ ಆಡಿದ ಮಾಜಿ ಆಟಗಾರ್ತಿಯರಿಗೆ ಗೌರವ ಸನ್ಮಾನವನ್ನು ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ಘೋಷಿಸಿದೆ. ಅಷ್ಟೇ ಅಲ್ಲದೆ ಮೊದಲ ಬಾರಿಗೆ ಹದಿನೈದು ವರ್ಷದೊಳಗಿನ ಹುಡುಗಿಯರ ಕೆ.ಎಸ್.ಸಿ.ಎ ಲೀಗ್ ಪಂದ್ಯಗಳನ್ನು ಆಯೋಜಿಸಿದೆ. ಈ ಮೊದಲು ನೇರವಾಗಿ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಈ ಹೊಸ ಸಮಿತಿಯು ಮಹಿಳಾಪರವಾದ ನಿರ್ಣಯಗಳನ್ನು ಕೈಗೊಳ್ಳುತ್ತಿರುವುದು ಮಹಿಳೆಯರು ಕ್ರಿಕೆಟ್ ಕಡೆ ವಾಲುವಂತೆ ಮಾಡುತ್ತಿದೆಯಾದರೂ, ಅವರ ಸಂಪೂರ್ಣ ಸಹಭಾಗಿತ್ವಕ್ಕೆ ಇನ್ನಷ್ಟು ವಿನೂತನವಾದ ಹೆಜ್ಜೆಗಳನ್ನು ಇಡಬೇಕಿದೆ. ಕರ್ನಾಟಕ ಕ್ರಿಕೆಟ್ ಸಂಸ್ಥೆ ಆರು ರೀತಿಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಬಹುದಾಗಿದೆ.

veda krishnamurthy
veda krishnamurthy
  1. ಶಾಲಾ ಮತ್ತು ಕಾಲೇಜಿನ ಹುಡುಗಿಯರಿಗೆ ಕ್ರಿಕೆಟ್ ಲೀಗ್ ಪಂದ್ಯಗಳನ್ನು ಆರಂಭಿಸಿ ಹೆಚ್ಚಿನ ಶಾಲಾ, ಕಾಲೇಜುಗಳು ಭಾಗವಹಿಸುವಂತೆ ನೋಡಿಕೊಳ್ಳುವುದು. ಪ್ರೋತ್ಸಾಹದಾಯಕ ನಗದು ಬಹುಮಾನಗಳನ್ನು ಕೊಡುವುದು.
  2. ಕೆ.ಎಸ್.ಸಿ.ಎ ಯ ಅಡಿ ಬರುವ ಎಲ್ಲಾ ಕ್ಲಬ್‍ಗಳಿಗೂ ಮಹಿಳಾ ತಂಡಗಳನ್ನು ಕಡ್ಡಾಯವಾಗಿ ರೂಪಿಸುವಂತೆ ಆದೇಶ ಹೊರಡಿಸಿ, ಪುರುಷರಿಗೆ ಚಾಲ್ತಿ ಇರುವ ಲೀಗ್‍ನಂತೆ ಮಹಿಳೆಯರಿಗೂ ಕಡೆ ಪಕ್ಷ ಮೊದಲ ಡಿವಿಷನ್, ಎರಡನೇ ಡಿವಿಷನ್ ಲೀಗ್ ಪ್ರಾರಂಭಿಸುವುದು.
  3. ಇದನ್ನು ಮುಂದಿನ ಹಂತದಲ್ಲಿ ಎಲ್ಲಾ ಜಿಲ್ಲೆ, ತಾಲ್ಲೂಕುಗಳಿಗೂ ವಿಸ್ತರಿಸುವುದು. ಕೆ.ಎಸ್.ಸಿ.ಎ.ಯಿಂದಲೇ ನಿರಂತರವಾಗಿ ಮುಂದಿನ ಹಂತ ತಲುಪಬಹುದಾದ ಹೆಚ್ಚಿನ ಸಂಖ್ಯೆಯ ಪ್ರತಿಭಾವಂತ ಹುಡುಗಿಯರನ್ನು ಗುರುತಿಸಿ, ನುರಿತ ತರಬೇತುದಾರರಿಂದ ತರಬೇತಿ ಕೊಡಿಸುವುದು.
  4. ಬಡ ಕುಟುಂಬದಿಂದ ಆಯ್ಕೆಯಾಗುವ ಹೆಣ್ಣು ಮಕ್ಕಳಿಗೆ ಕ್ರಿಕೆಟ್ ಕಿಟ್‍ಗಳನ್ನು ಉಚಿತವಾಗಿ ವಿತರಿಸುವ ಕಾರ್ಯವನ್ನು ಕೆ.ಎಸ್.ಸಿ.ಎ ಯೇ ಮಾಡಬೇಕು ಹಾಗೂ ಮಹಿಳಾ ಕ್ರಿಕೆಟ್ ಬೆಳೆಯುವವರೆಗೂ ಬೇರೆ ಜಿಲ್ಲೆಗಳಿಂದ ಆಯ್ಕೆಯಾಗಿ ಬರುವ ಹುಡುಗಿಯರಿಗೆ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡುವುದು.
  5. ಅಂಪೈರಿಂಗ್, ಸ್ಕೋರಿಂಗ್ ಪರೀಕ್ಷೆಗಳಲ್ಲಿ ಮಹಿಳೆಯರಿಗೂ ಅವಕಾಶ ಮಾಡಿಕೊಟ್ಟು, ಹೆಚ್ಚು ಮಹಿಳೆಯರು ಕ್ರಿಕೆಟ್‍ನಲ್ಲಿ ಆಸಕ್ತಿ ತೋರುವಂತೆ ಮಾಡುವುದು.

    ಹೀಗೆ ಕ್ರಮವಹಿಸಿದಾಗ ಮಹಿಳಾ ಕ್ರಿಕೆಟ್ ಉತ್ತುಂಗ ಶಿಖರವನ್ನು ತಲುಪುವ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು. ಜೊತೆಗೆ ಕರ್ನಾಟಕ ಮಹಿಳಾ ಕ್ರಿಕೆಟ್ ಸಂಸ್ಥೆ ಭಾರತದ ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೂ ಮಾದರಿಯಾಗಬಲ್ಲದು. ಮಹಿಳಾ ಸಬಲೀಕರಣದ ಮಾತುಗಳು ಕೇವಲ ಬಾಯಿ ಮಾತಿನಿಂದ ಬಂದರೆ ಪ್ರಯೋಜನವಿಲ್ಲ. ಪ್ರಾಯೋಗಿಕವಾಗಿ ಅದು ಸಾಧ್ಯವಾಗಬೇಕಿದೆ. ಅದಕ್ಕಾಗಿ ಇನ್ನಷ್ಟು ಶ್ರಮವಹಿಸಬೇಕಿದೆ.
?s=150&d=mp&r=g
ಡಾ ರಿಯಾಝ್‌ ಪಾಷ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೋಯ್ಡಾ ಬಳಿ ವಿದ್ಯಾರ್ಥಿಗಳಿಗೆ ಗುದ್ದಿ ಪರಾರಿಯಾದ ಕಾರು ಚಾಲಕ

​ನೋಯ್ಡಾದ ನಾಲೆಡ್ಜ್ ಪಾರ್ಕ್ ಪ್ರದೇಶದಲ್ಲಿರುವ ಪ್ರತಿಷ್ಠಿತ ಜಿಎನ್‌ಐಓಟಿ (GNIOT) ಕಾಲೇಜಿನ ಮುಂಭಾಗದಲ್ಲಿ...

ಮಹಾರಾಷ್ಟ್ರ ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆ: ಕೇವಲ 8,000 ರೂ. ಆಸೆಗೆ ಬಿದ್ದು ಶೂಗಳಲ್ಲಿ ಅಡಗಿಸಿ ಪಶ್ನೆಪತ್ರಿಕೆ ಕಳವು!

ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ ಭಾರತ

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್...