ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳನ್ನು (ಎಕ್ಸಿಟ್ ಪೋಲ್) ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಈ ಸಮೀಕ್ಷೆಗಳನ್ನು ‘ಷೇರು ಮಾರುಕಟ್ಟೆಯನ್ನು ತಿರುಚುವ ಯತ್ನ’ ಎಂದು ಹೇಳಿರುವ ಅವರು, ತಮ್ಮ ಪಕ್ಷವು 200ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಪ್ರಕಟವಾದ ಎಕ್ಸಿಟ್ ಪೋಲ್ ಅಂಕಿ-ಅಂಶಗಳು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿಗೆ ಹಿನ್ನಡೆಯಾಗಬಹುದು ಎಂಬ ಸುಳಿವು ನೀಡಿವೆ. ಆದರೆ, ಈ ಸಮೀಕ್ಷಾ ವರದಿಗಳನ್ನು ಕಟುವಾಗಿ ಟೀಕಿಸಿರುವ ಮಮತಾ ಬ್ಯಾನರ್ಜಿ, ವಾಸ್ತವ ಚಿತ್ರಣವು ಈ ಕೃತಕ ಸಮೀಕ್ಷೆಗಳಿಗಿಂತ ಸಂಪೂರ್ಣ ಭಿನ್ನವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕ ಮಹಿಳಾ ಕ್ರಿಕೆಟ್ ಸಾಗಬೇಕಾದ ಹಾದಿ ಯಾವುದು? KSCA ತೋರಿಸಬೇಕಿದೆ ದಿಕ್ಕು
ಮತದಾರರ ಮೇಲೆ ಪ್ರಭಾವ ಬೀರಲು ಹಾಗೂ ನಿರ್ದಿಷ್ಟವಾಗಿ ಷೇರು ಮಾರುಕಟ್ಟೆಯಲ್ಲಿ ದಿಢೀರ್ ಏರಿಳಿತಗಳನ್ನು ಸೃಷ್ಟಿಸುವ ದುರುದ್ದೇಶದಿಂದಲೇ ಇಂತಹ ಸುಳ್ಳು ಸಮೀಕ್ಷೆಗಳನ್ನು ಹೆಣೆಯಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಸಮೀಕ್ಷೆಗಳ ಅಂಕಿ-ಅಂಶಗಳ ಬಗ್ಗೆ ಕಿಡಿಕಾರಿರುವ ಅವರು, “ಕ್ಷೇತ್ರ ಮಟ್ಟದ ವಾಸ್ತವ ನಮಗೆ ಚೆನ್ನಾಗಿ ತಿಳಿದಿದೆ. ರಾಜ್ಯದಲ್ಲಿ ಟಿಎಂಸಿ 200ಕ್ಕೂ ಹೆಚ್ಚು ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಜನತೆ ಬೆಂಬಲ ನೀಡಿದ್ದು, ಇಂತಹ ಸುಳ್ಳು ಸಮೀಕ್ಷೆಗಳಿಗೆ ಮರುಳಾಗುವುದಿಲ್ಲ,” ಎಂದು ಹೇಳಿದ್ದಾರೆ.




