ಶೇ.1ರಷ್ಟು ಕೋಟಾವನ್ನು ಅಲೆಮಾರಿ – ಅಲೆಮಾರಿಗಳಿಗೆ ನೀಡಬಹುದಾಗಿತ್ತು. ನೀಡಿ ಆ ಕಳಂಕ ನಿವಾರಣೆ ಮಾಡಿಕೊಳ್ಳಬಹುದಾಗಿತ್ತು. ಹಾಗೂ ರೋಸ್ಟರ್ ಅನ್ನು ಸುಲಭವಾಗಿ ಹೊಂದಾಣಿಕೆ ಮಾಡಬಹುದಾಗಿತ್ತು ಕೂಡ. ರೋಸ್ಟರ್ ಮಾಡುವಾಗ ಈ ಕೆಳಗಿನ ಮಾದರಿಯನ್ನು (C 2, A, B) (A, B, C 1) (B.C 1, A)( C 1, A, B) ( A, B, C 1) ಒಳ ಪಡಿಸಿಕೊಂಡಿದ್ದಲ್ಲಿ, ಯಾರಿಗೂ ಅನ್ಯಾಯವಾಗುತ್ತಿರಲಿಲ್ಲ
‘ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ’ ಎಂಬೊಂದು ಜನಪ್ರಿಯ ಪ್ರಚಲಿತದಲ್ಲಿರುವ ಹಳೆಯ ಗಾದೆ. ಒಳ ಮೀಸಲಾತಿ ಚಾಲ್ತಿಗೆ ಬಂದರೂ ಫಲಾನುಭವಿಗಳಾಗದ ಅಲೆಮಾರಿ- ಅಲೆಮಾರಿಗಳೆಂಬ 59 ಜಾತಿಯ ತಬ್ಬಲಿಗಳಿಗೆ ಈ ಗಾದೆ ಯಥಾರ್ಥ ಹೊಂದುತ್ತದೆ.
ಪರಿಶಿಷ್ಟ ಜಾತಿಗಳೊಳಗೆ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಹೋರಾಟ ನಿನ್ನೆ ಮೊನ್ನೆಯದಲ್ಲ. ಅದಕ್ಕೆ ಸುಮಾರು ಐದು ದಶಕಗಳ ಇತಿಹಾಸವೇ ಇದೆ. ಉತ್ತರ ರಾಜ್ಯ ಒಂದರಲ್ಲಿ ಇದು ಪ್ರಾರಂಭವಾಗಿ ಆಂಧ್ರಪ್ರದೇಶದ ಮೂಲಕ ಕರ್ನಾಟಕಕ್ಕೆ ಸಾಗಿ ಬರುತ್ತದೆ. ಕರ್ನಾಟಕದಲ್ಲಿ ಈ ಹೋರಾಟದ ತೀವ್ರತೆಯನ್ನು ಕಂಡುಕೊಂಡ ಸರ್ಕಾರ 2004ರಲ್ಲಿ ನ್ಯಾಯಮೂರ್ತಿಎ.ಜೆ. ಸದಾಶಿವ ಆಯೋಗವನ್ನು ರಚಿಸುತ್ತದೆ. ಆಯೋಗ ಕೆಲವು ಕಾರಣಗಳಿಂದ ದೀರ್ಘಾವಧಿಯನ್ನು ವ್ಯಯಿಸಿ 2012ರಲ್ಲಿ ವರದಿಯನ್ನು ಸಲ್ಲಿಸುತ್ತದೆ. ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ಪ್ರಕರಣಗಳು ಇತ್ಯರ್ಥವಾಗದೆ ಇದ್ದುದರಿಂದ, ಯಾವುದೇ ಸರ್ಕಾರವು ಒಳ ಮೀಸಲಾತಿ ಕೊಡುವಲ್ಲಿ ವಿಳಂಬವಾದದ್ದು ನಿಜ.
ಇದನ್ನೂ ಓದಿ ಮೀಡಿಯಾ ತೋರಿಸುತ್ತಿರುವುದೊಂದು, FIR ನಲ್ಲಿರುವುದು ಇನ್ನೊಂದು: ನಾಸಿಕ್ TCS ಕೇಸ್‌ನ ಅಸಲಿಯತ್ತೇನು?
ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗವೂ ಅಲೆಮಾರಿ- ಅರೆ ಅಲೆಮಾರಿಗಳಿಗೂ ಪ್ರತ್ಯೇಕ ಮೀಸಲಾತಿಯನ್ನು ಕೊಡಬೇಕೆಂಬ ಶಿಫಾರಸ್ಸನ್ನು ಮಾಡಿತ್ತು. ಎಡಗೈ ಮತ್ತು ಬಲಗೈ ಜಾತಿಗಳ ನಡುವಿನ ವ್ಯತ್ಯಾಸ ಮತ್ತು ಅವುಗಳಲ್ಲಿ ಹೊಂದಾಣಿಕೆ ಇಲ್ಲದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಂತೂ ಸರಿಯಷ್ಟೇ. ಹೋರಾಟಗಾರರ ಒತ್ತಾಯ ತೀವ್ರ ಸ್ವರೂಪ ಪಡೆದುಕೊಂಡಂತೆಲ್ಲಾ, ಸರ್ಕಾರ ಸಚಿವ ಸಂಪುಟದ ಉಪ ಸಮಿತಿಯೊಂದನ್ನು ರಚಿಸಿ, ಕೈ ತೊಳೆದುಕೊಂಡಿತು. ಉಪ ಸಮಿತಿಯು ಸುತ್ತಿ ಬಳಸಿ ಒಂದು ಸೂತ್ರವನ್ನು ಹೆಣೆದು ಅದರಂತೆ ಒಳ ಮೀಸಲಾತಿಯನ್ನು ಕೊಟ್ಟು, ನ್ಯಾಯಾಲಯದ ನಿರ್ಬಂಧ ಇದ್ದುದರ ಪ್ರಯುಕ್ತ ಕೇಂದ್ರ ಸರ್ಕಾರಕ್ಕೆ ಹೊತ್ತು ಹಾಕಿ, ತನ್ನ ಕರ್ತವ್ಯದ ಹೊರೆಯನ್ನು ಕಳಚಿಕೊಂಡಿತು. ಅಲ್ಲಿಗೆ ಒಂದು ಅಂಕ ಮುಕ್ತಾಯವಾಯಿತು.

ದೇವಿಂದ್ರ ಸಿಂಗ್ vs ಪಂಜಾಬ್ ರಾಜ್ಯ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ಒಳ ಮೀಸಲಾತಿಗಿದ್ದ ಅಡಚಣೆಯನ್ನು ನಿವಾರಣೆ ಮಾಡಿದ ನಂತರದಲ್ಲಿ ಅದರ ಬಿಸಿ ರಾಜ್ಯಗಳಿಗೆ ತಾಕಿತು. ರಾಜ್ಯದಲ್ಲೂ ಕೂಡ ತತ್ಸಂಬಂಧ ಒಂದು ಆಯೋಗವನ್ನು ರಚಿಸುವ ಅನಿವಾರ್ಯತೆ ಉಂಟಾಯಿತು. ಅದರ ಫಲವೇ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ. ಆಯೋಗವು ಕರ್ನಾಟಕದ ಪರಿಶಿಷ್ಟ ಜಾತಿಯ ಸುಮಾರು 24 ಲಕ್ಷ ಕುಟುಂಬಗಳನ್ನು ಸಮೀಕ್ಷೆ ಮಾಡಿ 101 ಜಾತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡಿತು.
ಆಯೋಗವು 6 ಮಾನದಂಡಗಳನ್ನು ಅನುಸರಿಸಿ ಒಳ ಮೀಸಲಾತಿಗಾಗಿ (ಉಪ ವರ್ಗೀಕರಣ) ಸರ್ವೋಚ್ಚ ನ್ಯಾಯಾಲಯದ ಅಪೇಕ್ಷೆಯಂತೆ ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗಮನದಲ್ಲಿಟ್ಟುಕೊಂಡು 5 ವಿಭಾಗಗಳಲ್ಲಿ ಜಾತಿಗಳನ್ನು ವಿಂಗಡಿಸಿತು.
1. ಅತ್ಯಂತ ಹಿಂದುಳಿದ ಸಮುದಾಯಗಳು- ಸೂಕ್ಷ್ಮ ಅತಿ ಸೂಕ್ಷ್ಮ ಮತ್ತು ಅದೇ ರೀತಿಯ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಯನ್ನು ಹೊಂದಿರುವ 59 ಸಮುದಾಯಗಳು.
2. ಹೆಚ್ಚು ಹಿಂದುಳಿದ ಸಮುದಾಯಗಳು- ಮಾದಿಗ ಮತ್ತು ಅದೇ ರೀತಿಯ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಯನ್ನು ಹೊಂದಿರುವ 18 ಸಮುದಾಯಗಳು.
3. ಹಿಂದುಳಿದ ಸಮುದಾಯಗಳು : ಹೊಲೆಯ ಮತ್ತು ಅದೇ ರೀತಿಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿತಿಯನ್ನು ಹೊಂದಿರುವ 17 ಸಮುದಾಯಗಳು.
4. ಕಡಿಮೆ ಹಿಂದುಳಿದ ಸಮುದಾಯಗಳು- ಲಂಬಾಣಿ, ಭೋವಿ ಮತ್ತು ಕೊರಮ -ಕೊರಚ ಎಂಬ 3 ಸಮುದಾಯಗಳು.
5. ಮೂಲ ಜಾತಿಯ ಹೆಸರನ್ನು ತಿಳಿಯಪಡಿಸದಿರುವ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂಬ ಮೂರು ಪ್ರದೇಶ ಸೂಚಿ ಅಥವಾ ಜನರಿಕ್ ಜಾತಿಗಳು.
ಆಯೋಗ ಸಾಕಷ್ಟು ಎಚ್ಚರಿಕೆ ವಹಿಸಿ ಸರ್ವೋಚ್ಚ ನ್ಯಾಯಾಲಯದ ಇಚ್ಛೆಯಂತೆ ನೂರೊಂದು ಜಾತಿಗಳನ್ನು ಗುಂಪುಗಳನ್ನಾಗಿ ವಿಂಗಡಿಸಿ ಎಲ್ಲರೂ ಮೆಚ್ಚ ಬಹುದಾದಂತ ಒಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆದರೆ ಸರ್ಕಾರ ಕಾಣದ ಕೈಗಳ ಕೈವಾಡಕ್ಕೆ ಸೋತು ಐದು ವಿಭಾಗಗಳಲ್ಲಿದ್ದ ಶಿಫಾರಸುಗಳನ್ನು ಮೂರು ವಿಭಾಗಗಳಿಗೆ ಇಳಿಸಿತು. ಅನಾಥರಂತಿರುವ 59 ಅಲೆಮಾರಿ -ಅರೆ ಅಲೆಮಾರಿ ಸಮುದಾಯಗಳನ್ನು ಪ್ರಬಲ ಮೂರನೇ ಗುಂಪಿಗೆ ಸೇರಿಸಿ, ‘ಸಾರ್ಥಕ್ಯ’ ಪಡೆದುಕೊಂಡಿತು. ಯಾವುದೇ ಅಳತೆಗೋಲಿಲ್ಲದ ಈ ವಿಭಾಗವು ವ್ಯಾಪಕ ಟೀಕೆಗೆ ಗುರಿಯಾಯಿತು. ಈ ಒಳ ಮೀಸಲಾತಿಯು ಸರ್ಕಾರವೇ ಹೆಚ್ಚಿಸಿದ್ದ ಕೋಟಾ 17ಕ್ಕೆ ಅನುಗುಣವಾಗಿತ್ತು. ಈ ಸಂಬಂಧದಲ್ಲಿ ಉಚ್ಚ ನ್ಯಾಯಾಲಯ ಒಟ್ಟಾರೆ ಮೀಸಲಾತಿ ಶೇಕಡ 50ರಷ್ಟನ್ನ ಮೀರಿ ಹೋಗಿರುವುದನ್ನು ಆಕ್ಷೇಪಿಸಿ ಅದನ್ನು ಶೇ 15ಕ್ಕೆ ಇಳಿಸಲು ಫರ್ಮಾನು ಹೊರಡಿಸಿತು. ನ್ಯಾಯಾಲಯದ ಈ ಆದೇಶದಿಂದ ಸರ್ಕಾರ ಪೀಕಲಾಟಕ್ಕೆ ಒಳಗಾಯಿತು.
ಮೀಸಲಾತಿ ಕೋಟಾವನ್ನು ಶೇ.15ಕ್ಕೆ ಇಳಿಸಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕೊಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಅನೇಕ ನೆಪಗಳಿಂದ ಮುಂದೂಡುತ್ತಾ ಬಂದ ಸರ್ಕಾರ ಕೊನೆಗೂ ಇದೇ ಏಪ್ರಿಲ್24ರಂದು ಸೂತ್ರವೊಂದನ್ನು ಅಳವಡಿಸಿ ಎಲ್ಲಾ ಬಣಗಳು ‘ಒಪ್ಪಿ’ವೆ ಎಂದು ಹೇಳಿಕೊಂಡು ಅದನ್ನು ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಸರ್ಕಾರ ಹೆಣೆದಿರುವ ಸೂತ್ರದ ಪ್ರಕಾರ, ಮಾದಿಗ ಮತ್ತು ಅದರ ಉಪಜಾತಿಗಳಿಗೆ 5.25 ಮತ್ತು ಹೊಲೆಯ ಮತ್ತು ಅದರ ಉಪಜಾತಿಗಳಿಗೆ 5.25 ಹಾಗೂ ಕೊರಚ- ಕೊರಮ, ಲಂಬಾಣಿ, ಭೋವಿ ಮತ್ತು ಅಲೆಮಾರಿಗಳನ್ನು ಒಳಗೊಂಡ ಗುಂಪಿಗೆ 4.5 ರಷ್ಟು ಮೀಸಲಾತಿ ಕೋಟಾ ನೀಡುವುದರ ಮೂಲಕ ಎಲ್ಲರನ್ನೂ ಸಂಭಾಳಿಸಲು ಪ್ರಯತ್ನಪಟ್ಟಿದೆ. ಸಾಕಷ್ಟು ಜನ ಸರ್ಕಾರದ ಈ ತೀರ್ಮಾನವನ್ನು ಸ್ವಾಗತಿಸಿದ್ದಾರೆ ಎಂಬುದು ಬೇರೆ ಮಾತು. ಇಲ್ಲಿಯೂ ಕೂಡ ಸರ್ಕಾರ ನಿಷ್ಕರುಣೆಯಿಂದ ತಬ್ಬಲಿಗಳಾದ ಅಲೆಮಾರಿ ಮತ್ತು ಅರೆ ಅಲೆಮಾರಿಗಳನ್ನು ಮತ್ತಷ್ಟು ಕಂಗೆಡಿಸಿತು. ಈ ಸಮುದಾಯಗಳಿಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಪ್ರಭಾವಿಗಳು ಇಲ್ಲದಿರುವುದರಿಂದ ಅವರ ಬಗ್ಗೆ ಜನಸಾಮಾನ್ಯರು ಮರುಕ ಪಡುವುದರ ಹೊರತು ಮತ್ತೇನು ಮಾಡಲು ಸಾಧ್ಯ?
ಸರ್ಕಾರವೇನೋ ಬಹಳ ಕಾಲ ನನೆಗುದಿಗೆ ಬಿದ್ದಿದ್ದ ಒಂದು ಕಗ್ಗಂಟೊಂದನ್ನು ಬಿಡಿಸಲಾಗಿದೆ ಎಂದು ನಿಟ್ಟುಸಿರು ಬಿಟ್ಟಿರಬಹುದು. ಆದರೆ, ಮೀಸಲಾತಿ ಕೋಟಾವನ್ನು ಎಲ್ಲಾ ಮೂರು ಗುಂಪುಗಳಿಗೂ ಅಪೂರ್ಣಾಂಕದಲ್ಲಿ ನೀಡಲಾಗಿದೆ. ಹೀಗೆ ನೀಡಲಾಗಿರುವುದರಿಂದ, ರೋಸ್ಟರ್ ಚಕ್ರದಲ್ಲಿ ಅಳವಡಿಸಲು ಆಗದ ಮಾತು. ಪೂರ್ಣಾಂಕಗಳಾದ 5%,5%, 4% ಇವುಗಳನ್ನು ರೋಸ್ಟರ್ ಚಕ್ರದಲ್ಲಿ ಅಳವಡಿಸಿದರೆ ಮೊದಲನೇ ಗುಂಪಿಗೆ 5, ಎರಡನೇ ಗುಂಪಿಗೆ 5 ಮತ್ತು ಮೂರನೇ ಗುಂಪಿಗೆ 4, ಹೀಗೆ ಶೇಕಡ 14ರಷ್ಟು ಹುದ್ದೆಗಳನ್ನು 100ರ ಒಂದು ರೋಸ್ಟರ್‌ನಲ್ಲಿ ಕೊಡಲು ಸಾಧ್ಯವಾಗುತ್ತದೆ. ಉಳಿದ 1% ಭಿನ್ನಾಂಕಗೊಂಡಿದೆ. ಅದನ್ನು ಮೂರು ವಿಭಾಗಗಳಲ್ಲಿಯೂ ಹಂಚಬೇಕು. ಹಾಗೆ ಹಂಚಬೇಕಾದರೆ 100ರ ಒಂದು ರೋಸ್ಟರ್ನಲ್ಲಿ ಸಾಧ್ಯವಿಲ್ಲ. ಮೊದಲನೇ ಮತ್ತು ಎರಡನೇ ಗುಂಪಿಗೆ ಒಂದು ಪೂರ್ಣಾಂಕ ಸಿಗಬೇಕಾದರೆ- ನಾಲ್ಕು ಚಕ್ರದ ರೋಸ್ಟರ್ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ಅದನ್ನು ಸರ್ಕಾರ ಯಾವ ರೀತಿಯಲ್ಲಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು. ಮತ್ತೆ ಮೂರನೇ ಗುಂಪಿನ ಸಮುದಾಯಗಳಿಗೆ 4.5% ಕೋಟಾ ನಿಗದಿಪಡಿಸಿರುವುದರಿಂದ, ಒಂದು ಪೂರ್ಣಾಂಕ ಸಿಗಬೇಕಾದರೆ 2 ರೋಸ್ಟರ್ ಚಕ್ರ ಪೂರ್ಣಗೊಳ್ಳಬೇಕು. ಈ ಗುಂಪಿಗೆ ಮೊದಲನೇ ಚಕ್ರದ ರೋಸ್ಟರ್ ನಲ್ಲಿ ಕೇವಲ 4 ಸ್ಥಾನಗಳನ್ನು ತುಂಬಲು ಮಾತ್ರ ಸಾಧ್ಯ. ಅಲೆಮಾರಿ- ಅರೆ ಅಲೆಮಾರಿ ಗಳಿಗೆ ಶೇಕಡ 20ರಷ್ಟು ಮೀಸಲಾತಿ ಕೊಡಲಾಗುವುದು ಎಂದು ಹೇಳಲಾಗಿದೆ. ಇವರಿಗೆ ಮೊದಲನೇ ರೋಸ್ಟರ್ ಚಕ್ರದಲ್ಲಿ ಮೀಸಲಾತಿ ಸಿಗುವುದೇ ಇಲ್ಲ. ಇವರಿಗೆ ಶೇಕಡ ಒಂದರಷ್ಟು ಮೀಸಲಾತಿ ಸಿಗಬೇಕಾದರೂ ಎರಡು ಚಕ್ರದ ರೋಸ್ಟರ್ ಪೂರ್ಣಗೊಳ್ಳಬೇಕು. ಈ ಎಲ್ಲವನ್ನು ಕಾದು ನೋಡುವ ಪರಿಸ್ಥಿತಿ ಬಂದಿದೆ.
ಸರ್ಕಾರ ಸರಳ ಸೂತ್ರ, (5. A)( 5. B)( 4 .1 C 1, C 2) ವನ್ನು ಅಳವಡಿಸಿಕೊಂಡಿದ್ದರೆ, ಶೇ.1ರಷ್ಟು ಕೋಟಾವನ್ನು ಅಲೆಮಾರಿ – ಅಲೆಮಾರಿಗಳಿಗೆ ನೀಡಬಹುದಾಗಿತ್ತು. ನೀಡಿ ಆ ಕಳಂಕ ನಿವಾರಣೆ ಮಾಡಿಕೊಳ್ಳಬಹುದಾಗಿತ್ತು. ಹಾಗೂ ರೋಸ್ಟರ್ ಅನ್ನು ಸುಲಭವಾಗಿ ಹೊಂದಾಣಿಕೆ ಮಾಡಬಹುದಾಗಿತ್ತು ಕೂಡ. ರೋಸ್ಟರ್ ಮಾಡುವಾಗ ಈ ಕೆಳಗಿನ ಮಾದರಿಯನ್ನು (C 2, A, B) (A, B, C 1) (B.C 1, A)( C 1, A, B) ( A, B, C 1) ಒಳ ಪಡಿಸಿಕೊಂಡಿದ್ದಲ್ಲಿ, ಯಾರಿಗೂ ಅನ್ಯಾಯವಾಗುತ್ತಿರಲಿಲ್ಲ, ಒಂದು ಚಕ್ರದ ರೋಸ್ಟರ್ನಲ್ಲಿ ಎಲ್ಲವನ್ನು ಮಾಡಬಹುದಾಗಿತ್ತು. ಹಾಗೂ ಇದನ್ನು ಮುಂದೆ ಅನುಸರಿಸಲು- ಕಾದಿಡಲು ಕೂಡ ಸುಲಭವಾಗುತ್ತಿತ್ತು.
ಸರ್ಕಾರ ಈಗ ತನ್ನ ಇಚ್ಛೆ ಮೇರೆಗೆ ಮಾಡಿಯಾಗಿದೆ, ಅದರ ಸಾಧಕ- ಬಾಧಕಗಳನ್ನಷ್ಟೇ, ಮುಂದೆ ನೋಡುವ ಅವಕಾಶ ಸಾಮಾನ್ಯರಿಗೆ ಉಳಿದಿರುವುದು. ಮುಂದೆ, ಪರಿಶಿಷ್ಟ ಜಾತಿಗಳೊಳಗೆ ಹೊಂದಾಣಿಕೆಯಾಗಿ ಎಲ್ಲವೂ ಸುಖಾಂತವಾಗಬೇಕು.
ಸರ್ಕಾರದ ನೀತಿ – ನಿಲುವುಗಳು ಎಲ್ಲರನ್ನೂ ಒಳಗೊಳ್ಳುವಂತಿರಬೇಕು; ರಾಜಕೀಯ ಕಾರಣಕ್ಕಾಗಿಯೋ ಅಥವಾ ಯಾರ ಹಿತ ಕಾಯಲೋ ಇರಬಾರದು.

ಕೆ.ಎನ್. ಲಿಂಗಪ್ಪ
ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.



