ನವೀಕರಿಸಬಹುದಾದ ಇಂಧನಗಳತ್ತ ತುರ್ತು ಬದಲಾವಣೆ ಈಗ ಆಯ್ಕೆಯಲ್ಲ ಅನಿವಾರ್ಯ. ಯುದ್ಧದ ಕಿಚ್ಚಿನಿಂದ ಅರೆಬರೆ ಸುಟ್ಟಿರುವ ಜಾಗತಿಕ ಇಂಧನ ಮಾರುಕಟ್ಟೆಯ ಗಾಯಕ್ಕೆ ಹಸಿರು ಇಂಧನದ ಮದ್ದು ಅರೆಯಲೇಬೇಕಿದೆ. ಇಲ್ಲದಿದ್ದರೆ, ನಿರಂತರ ಬಿಕ್ಕಟ್ಟುಗಳ ನಡುವೆ ಜನಸಾಮಾನ್ಯರ ಬದುಕು ಅತಂತ್ರವಾಗಿಯೇ ಉಳಿಯಬೇಕಾದೀತು.
ಕೆಲ ನಾಯಕರ ಅಧಿಕಾರ ದಾಹ, ಯುದ್ಧೋನ್ಮಾದದಿಂದ ಜಗತ್ತು ಇಂಧನ ಬಿಕ್ಕಟ್ಟಿಗೆ ಸಿಲುಕಿದೆ. ಇರಾನ್, ಅಮೆರಿಕ & ಇಸ್ರೇಲ್ ನಡುವಿನ ಯುದ್ಧ ಜಗತ್ತನ್ನು ಮತ್ತೊಂದು ದೊಡ್ಡ ಆರ್ಥಿಕ ಹಿಂಜರಿತದ ಅಂಚಿಗೆ ತಂದು ನಿಲ್ಲಿಸಿದೆ. ಅನಿಲ ಹಾಗೂ ತೈಲ ಮಾರುಕಟ್ಟೆಗಳು ಇಂದು ಹಿಂದೆಂದೂ ಕಾಣದ ಅತಂತ್ರ ಸ್ಥಿತಿ ತಲುಪಿವೆ. ಯುದ್ಧದ ಬಳಿಕ ಸಾಮಾನ್ಯರದ್ದು ಬಾಣಲೆಯಿಂದ ಬೆಂಕಿಗೆ ಬೀಳುವ ಸ್ಥಿತಿ. ಪವಾಡದಂತೆ ಯುದ್ಧ ನಾಳೆಯೇ ನಿಂತು, ಶಾಂತಿ ನೆಲೆಸಿದರೂ, ಈಗ ಕಂಗೆಟ್ಟಿರುವ ಸ್ಥಿತಿಯಿಂದ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲು ವರ್ಷಗಳೇ ಬೇಕು ಎನ್ನುತ್ತಿದ್ದಾರೆ ತಜ್ಞರು.
ಎರಡನೇ ಮಹಾಯುದ್ಧದಂತಹ ಮಹಾ ಬಿಕ್ಕಟ್ಟುಗಳಿಂದ ಜಗತ್ತು ಚೇತರಿಸಿಕೊಳ್ಳಲು ವರ್ಷಗಳೇ ಬೇಕಾಗಿದ್ದವು. ಕೊರೋನಾ ಸಾಂಕ್ರಾಮಿಕ ಸೃಷ್ಟಿಸಿದ ಲಾಕ್‌ಡೌನ್ ಸಂಕಷ್ಟದಿಂದ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ. ಯಾವುದೇ ದೊಡ್ಡ ಬಿಕ್ಕಟ್ಟಿನ ನಂತರ ಕಳೆದುಹೋದ ಉದ್ಯೋಗಗಳ ಸೃಷ್ಟಿ, ಹಳೆಯ ಆರ್ಥಿಕ ವೇಗವನ್ನು ಮರಳಿ ಪಡೆಯಲು ಕನಿಷ್ಠ ಒಂದು ದಶಕದ ಕಾಲಾವಕಾಶ ಬೇಕಾಗುತ್ತದೆ. ಯುದ್ಧದ ಪಳೆಯುಳಿಕೆಗಳನ್ನ ಆಯ್ದು ಮತ್ತೆ ಪೇರಿಸಿ, ಅಂಟಿಸುವ ಕೆಲಸ ಯುದ್ಧದಷ್ಟೇ ಕಠೋರ.
“27 ರಾಷ್ಟ್ರಗಳ ಐರೋಪ್ಯ ಒಕ್ಕೂಟದಾದ್ಯಂತ ತೈಲ ಮತ್ತು ಅನಿಲ ಪೂರೈಕೆಯಲ್ಲಿ ಸದ್ಯಕ್ಕೆ ಯಾವುದೇ ತಕ್ಷಣದ ಕೊರತೆಯಿಲ್ಲದಿದ್ದರೂ, ಡೀಸೆಲ್ ಮತ್ತು ವಿಮಾನ ಇಂಧನದ (Jet Fuel) ಪೂರೈಕೆಯ ಮೇಲೆ ಭಾರಿ ಒತ್ತಡವಿದೆ. ಅಲ್ಲದೆ, ಜಾಗತಿಕ ಅನಿಲ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ನಿರ್ಬಂಧಗಳು ವಿದ್ಯುತ್ ದರಗಳನ್ನು ಏರಿಸುತ್ತಿವೆ. ನಾನು ಅತ್ಯಂತ ಸ್ಪಷ್ಟವಾಗಿ ಹೇಳಬಯಸುವುದೇನೆಂದರೆ, ಒಂದು ವೇಳೆ ನಾಳೆಯೇ ಶಾಂತಿ ಸ್ಥಾಪನೆಯಾದರೂ ಭವಿಷ್ಯದಲ್ಲಿ ಪರಿಸ್ಥಿತಿ ಮತ್ತೆ ಮೊದಲಿನಂತೆ ಸಹಜ ಸ್ಥಿತಿಗೆ (Normal) ಮರಳುವುದಿಲ್ಲ” ಎಂದು ಐರೋಪ್ಯ ಒಕ್ಕೂಟದ (EU) ಇಂಧನ ಆಯುಕ್ತ ಡಾನ್ ಜೋರ್ಗೆನ್ಸನ್ ಎಚ್ಚರಿಸಿದ್ದಾರೆ.

ಯುರೋಪ್‌ನಲ್ಲಿ ಅನಿಲ ದರ ಸುಮಾರು 70% ಮತ್ತು ತೈಲ ದರ 60% ರಷ್ಟು ಏರಿಕೆಯಾಗಿದೆ. ಜೋರ್ಗೆನ್ಸನ್ ಅವರ ಪ್ರಕಾರ, ಯುದ್ಧ ಆರಂಭವಾದಾಗಿನಿಂದ ಪಳೆಯುಳಿಕೆ ಇಂಧನಗಳ ಆಮದಿಗಾಗಿ ಐರೋಪ್ಯ ಒಕ್ಕೂಟವು ಪಾವತಿಸುತ್ತಿರುವ ಮೊತ್ತದಲ್ಲಿ ಬರೋಬ್ಬರಿ 14 ಬಿಲಿಯನ್ ಯುರೋಗಳಷ್ಟು (ಸುಮಾರು1.25 ಲಕ್ಷ ಕೋಟಿ ರೂಪಾಯಿ) ಏರಿಕೆಯಾಗಿದೆ. ತೈಲ ಮತ್ತು ಅನಿಲ ದರಗಳ ತೀವ್ರ ಏರಿಕೆಯಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬಗಳು ಮತ್ತು ಉದ್ಯಮಗಳಿಗೆ ನೆರವಾಗಲು ಐರೋಪ್ಯ ಒಕ್ಕೂಟದ ಆಡಳಿತ ಮಂಡಳಿಯು ಹಲವಾರು ಕ್ರಮಗಳನ್ನು ಸಿದ್ಧಪಡಿಸುತ್ತಿದೆ ಎಂದು ಐರೋಪ್ಯ ಒಕ್ಕೂಟದ ಇಂಧನ ಸಚಿವರ ಸಭೆಯಲ್ಲಿ ಹೇಳಿದ್ದಾರೆ.
ಮನೆಯಿಂದಲೇ ಕೆಲಸ ಮಾಡುವುದು (Work from home), ಹೆದ್ದಾರಿಗಳಲ್ಲಿ ವಾಹನಗಳ ವೇಗವನ್ನು ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಒತ್ತು ನೀಡುವುದು, ಕಾರ್-ಪೂಲಿಂಗ್ (Car-sharing) ಅನ್ನು ಉತ್ತೇಜಿಸುವುದೂ ಸೇರಿದಂತೆ ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ (IEA) 10 ಅಂಶಗಳ ಯೋಜನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಐರೋಪ್ಯ ಒಕ್ಕೂಟದ ದೇಶಗಳಿಗೆ ಸಲಹೆ ನೀಡಿದ್ದಾರೆ.
ಪುನರ್ ನಿರ್ಮಾಣ ಸುಲಭವಲ್ಲ!
ಯುದ್ಧದ ಬಳಿಕ ಯುದ್ಧದಲ್ಲಿ ತೈಲ ಶುದ್ಧೀಕರಣ ಘಟಕಗಳು (Refineries) ಮತ್ತು ಗ್ಯಾಸ್ ಪ್ಲಾಂಟ್‌ಗಳು ಹಾನಿಗೊಳಗಾದಾಗ, ಅವುಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು ತಿಂಗಳುಗಟ್ಟಲೆ ಸಮಯ ಹಿಡಿಯುವ ಕೆಲಸ. ಒಂದು ತೈಲ ಶುದ್ಧೀಕರಣ ಘಟಕವು ಸಾವಿರಾರು ಕಿಲೋಮೀಟರ್ ಉದ್ದದ ಪೈಪ್‌ಲೈನ್‌ಗಳು ಮತ್ತು ಅತ್ಯಂತ ಸಂಕೀರ್ಣವಾದ ಡಿಸ್ಟಿಲೇಷನ್ ಟವರ್‌ಗಳ ಜಾಲ ಹೊಂದಿರುತ್ತದೆ. ಇವುಗಳ ದುರಸ್ತಿಗೆ ಬೇಕಾದ ಹೈ-ಪ್ರೆಶರ್ ಪಂಪ್‌ಗಳು ಮತ್ತು ವಿಶೇಷ ಉಕ್ಕಿನ ಬಿಡಿಭಾಗಗಳು ಜಗತ್ತಿನ ಕೆಲವೇ ದೇಶಗಳಲ್ಲಿ ಲಭ್ಯವಿರುತ್ತವೆ. ದಾಳಿಯಿಂದಾಗಿ ಉತ್ಪಾದನೆ ಕುಸಿದಿರುವ ಈ ಸಂದರ್ಭದಲ್ಲಿ, ಘಟಕಗಳು ಮತ್ತೆ ಕಾರ್ಯಾರಂಭ ಮಾಡಲು ಕನಿಷ್ಠ 2 ರಿಂದ 3 ತಿಂಗಳು ಬೇಕಾಗುತ್ತದೆ. ಇಸ್ರೇಲ್-ಅಮೆರಿಕ-ಇರಾನ್ ದೇಶಗಳು ನಡೆಸಿದ ಪರಸ್ಪರ ದಾಳಿ ಆಯಾ ದೇಶಗಳ ತೈಲ ಉತ್ಪಾದಕಾ ಘಟಕಗಳನ್ನು ನಾಶಪಡಿಸಿದೆ. ಅವು ಮತ್ತೆ ಸಹಜ ಸ್ಥಿತಿಗೆ ಮರಳುವವರೆಗೆ ಪೂರೈಕೆ ಇಲ್ಲ ಎಂದಾದಮೇಲೆ ಸಹಜವಾಗಿಯೇ ಬೆಲೆಗಳು ಏರುಗತಿಯಲ್ಲಿರುತ್ತವೆ.
ಅನಿಲ ಉತ್ಪಾದನೆ ಇನ್ನಷ್ಟು ಸಂಕೀರ್ಣ
ನೈಸರ್ಗಿಕ ಅನಿಲ (LNG) ಮತ್ತು ಅಡುಗೆ ಅನಿಲದ (LPG) ಉತ್ಪಾದನೆಯು ತಾಂತ್ರಿಕವಾಗಿ ಅತ್ಯಂತ ದುಬಾರಿ ಪ್ರಕ್ರಿಯೆ. ಎಲ್‌ಎನ್‌ಜಿಯನ್ನು ಉತ್ಪಾದಿಸುವಾಗ ಅನಿಲವನ್ನು -162 ಡಿಗ್ರಿ ಸೆಲ್ಸಿಯಸ್‌ಗೆ ತಂಪುಗೊಳಿಸಿ ದ್ರವ ರೂಪಕ್ಕೆ ತರಬೇಕಾಗುತ್ತದೆ. ಈ ‘ಕ್ರಯೋಜೆನಿಕ್’ ತಂತ್ರಜ್ಞಾನದ ಘಟಕಗಳು ಅತ್ಯಂತ ಸೂಕ್ಷ್ಮವಾಗಿದ್ದು, ದಾಳಿಗೆ ತುತ್ತಾದಾಗ ಇಡೀ ಸಂಸ್ಕರಣಾ ಸರಪಳಿಯೇ ಸ್ಥಗಿತಗೊಳ್ಳುತ್ತದೆ. ಇವುಗಳ ಉತ್ಪಾದನಾ ವೆಚ್ಚ ಗಣಿಗಾರಿಕೆಯಿಂದ ಹಿಡಿದು ಸಾಗಾಣಿಕೆಯವರೆಗೂ ವಿಪರೀತವಾಗಿದ್ದು, ಸದ್ಯದ ಅಸ್ಥಿರತೆ ಸಮಯದಲ್ಲಿ ಈ ವೆಚ್ಚ ದುಪ್ಪಟ್ಟಾಗುತ್ತದೆ. ಅಂತಿಮವಾಗಿ ಇದರ ಹೊರೆ ಸಾಮಾನ್ಯ ಜನರ ಅಡುಗೆಮನೆಯ ತಿಂಗಳ ಬಜೆಟ್ ಮೇಲೆ ಬೀಳುತ್ತದೆ.
ʼಹಾರ್ಮುಜ್ʼ ಎಂಬ ಗೇಮ್ ಕಂಟ್ರೋಲರ್
ಜಗತ್ತಿನ ತೈಲ ಸಾಗಾಣಿಕೆಯ ಶೇ. 20ರಷ್ಟು ಭಾಗ ಸಾಗುವ ಹಾರ್ಮುಜ್ ಜಲಸಂಧಿ ಈಗ ಗೇಮ್ ಕಂಟ್ರೋಲರ್. ಇಲ್ಲಿ ಕೊಂಚ ಹೆಚ್ಚು ಕಡಿಮೆ ಆದರೂ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ದೊಡ್ಡ ಸವಾಲು. ಹಾರ್ಮುಜ್ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿರುವ ಇರಾನ್, ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳಿಗೆ ಟೋಲ್ ಶುಲ್ಕ ವಿಧಿಸಲು ಯೋಜಿಸಿದೆ. ಇರಾನ್ ಇಲ್ಲಿ ‘ಟೋಲ್’ ವಿಧಿಸುವುದು ಅಥವಾ ಟ್ಯಾಂಕರ್‌ಗಳನ್ನು ತಡೆಹಿಡಿಯುವುದು ಎಂದರೆ ಅದು ಜಾಗತಿಕ ಪೂರೈಕೆ ವ್ಯವಸ್ಥೆಗೆ ಬೀಗ ಜಡಿದಂತೆ. ಇದರೊಂದಿಗೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ನಡೆಸುತ್ತಿರುವ ದಾಳಿಗಳಿಂದಾಗಿ ಹಡಗುಗಳು ಸುಯೆಜ್ ಕಾಲುವೆಯನ್ನು ಬಿಟ್ಟು ಆಫ್ರಿಕಾವನ್ನು ಸುತ್ತುವರಿದು ಬರಬೇಕಾಗಿದೆ. ಈ 15 ದಿನಗಳ ಹೆಚ್ಚಿನ ಪ್ರಯಾಣ ಕೋಟ್ಯಂತರ ರೂಪಾಯಿಗಳ ಇಂಧನ ವ್ಯರ್ಥಕ್ಕೆ ಕಾರಣವಾಗುತ್ತಿದೆ. ಇದರ ಪರಿಣಾಮದ ಬಾಣ ಮತ್ತೆ ಸಾಮಾನ್ಯನ ಕಡೆಗೇ ತಿರುಗುತ್ತದೆ.

ಭಾರತ ರಾಜತಾಂತ್ರಿಕ ಜಾಣ್ಮೆ ಎಲ್ಲಿ?
ಭಾರತವು ತನ್ನ ತೈಲದ ಸುಮಾರು ಶೇ. 85ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುವುದರಿಂದ, ಇಲ್ಲಿನ ಚೂರು ಪಾರು ಬದಲಾವಣೆಯೂ ರೂಪಾಯಿ ಮೌಲ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಭಾರತ ಇರಾನ್ ಜೊತೆಗಿನ ಹಳೆಯ ಬಾಂಧವ್ಯ ಮತ್ತು ಅಮೆರಿಕ-ಇಸ್ರೇಲ್ ಜೊತೆಗಿನ ಆರ್ಥಿಕ ಒಪ್ಪಂದಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಿದೆ. ಸುಮಾರು 60 ರಾಷ್ಟ್ರಗಳು ಶಾಂತಿ ಒಪ್ಪಂದಕ್ಕೆ ಮುಂದಾಗುತ್ತಿರುವ ಹೊತ್ತಿನಲ್ಲಿ ಇರಾನ್ ಅನ್ನು ಉದ್ದೇಶಪೂರ್ವಕವಾಗಿ ಸೈಡ್‌ಲೈನ್ ಮಾಡಿದರೆ ಅದು ಮತ್ತಷ್ಟು ಅಪಾಯಕಾರಿ. ಇರಾನ್ ಒಂಟಿಯಾದರೆ ಅದು ರಷ್ಯಾ ಅಥವಾ ಚೀನಾದಂತಹ ಬಣಗಳೊಂದಿಗೆ ಸೇರಿ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತಷ್ಟು ಅಸ್ಥಿರತೆ ಸೃಷ್ಟಿಸಬಹುದು. ಈ ದೇಶದ ಪ್ರಧಾನಿಗಳು ಅಸ್ಪಷ್ಟ ನಿಲುವಿನೊಂದಿಗೆ ಈಗ ಮಾಡುತ್ತಿರುವಂತೆ ಅತ್ತಲೂ-ಇತ್ತಲೂ ಎಂದುಕೊಂಡಿದ್ದರೆ, ಎತ್ತಲೂ ಇಲ್ಲದಂತಾಗುವುದು ನಿಶ್ಚಿತ.
ತೈಲ ಮತ್ತು ಅನಿಲ ದರ ಏರಿಕೆ ‘ಚೈನ್ ರಿಯಾಕ್ಷನ್’ (ಒಂದು ಕ್ರಿಯೆಯು ಮುಂದಿನ ಕ್ರಿಯೆಗಳಿಗೆ ಕಾರಣವಾಗುವ ಪ್ರಕ್ರಿಯೆ) ಸೃಷ್ಟಿಸುತ್ತದೆ. ಯುರೋಪ್‌ನಲ್ಲಿ ಈಗಾಗಲೇ ಅನಿಲ ದರ ಶೇ. 70ರಷ್ಟು ಏರಿಕೆಯಾಗಿದೆ. ಇದು ಭಾರತದಂತಹ ದೇಶಗಳ ಮೇಲೂ ಪರಿಣಾಮ ಬೀರಲಿದ್ದು, ಅಡುಗೆ ಅನಿಲ (LPG) ಮತ್ತು ವಿದ್ಯುತ್ ದರಗಳು ದುಬಾರಿಯಾಗುತ್ತವೆ. ತರಕಾರಿ, ಹಾಲು ಮತ್ತು ದಿನಸಿ ಪದಾರ್ಥಗಳ ಸಾಗಾಣಿಕೆ ವೆಚ್ಚ ಹೆಚ್ಚಾಗುವುದರಿಂದ ಸಾಮಾನ್ಯ ಕುಟುಂಬಗಳ ಮಾಸಿಕ ಉಳಿತಾಯ ಶೂನ್ಯವಾಗುತ್ತದೆ. ಯುದ್ಧ ಆರಂಭವಾದಾಗಿನಿಂದ ಕೇವಲ ಆಮದು ಬಿಲ್‌ನಲ್ಲಿ ಉಂಟಾಗಿರುವ ಬಿಲಿಯನ್ ಗಟ್ಟಲೆ ಯುರೋಗಳ ಏರಿಕೆಯು ದೇಶದ ಸಂಪತ್ತನ್ನು ಹೊರಹರಿಸುತ್ತಿದೆ. ಈ ಹಣವು ಮೂಲಸೌಕರ್ಯಕ್ಕೆ ಬಳಕೆಯಾಗಬೇಕಿತ್ತು.
ಜೋರ್ಗೆನ್ಸನ್ ಹೇಳುವಂತೆ, ರಷ್ಯಾದಂತಹ ರಾಷ್ಟ್ರಗಳು ಇಂಧನವನ್ನೇ ಅಸ್ತ್ರವನ್ನಾಗಿ ಬಳಸಿ ದೇಶಗಳನ್ನು ‘ಬ್ಲ್ಯಾಕ್‌ಮೇಲ್’ ಮಾಡುವ ತಂತ್ರ ಅನುಸರಿಸುತ್ತಿವೆ. ಇದು ಜಾಗತಿಕ ರಾಜಕೀಯದಲ್ಲಿ ಅಸ್ಥಿರತೆ ಸೃಷ್ಟಿಸುತ್ತದೆ. ಇದರಿಂದಾಗಿ ದೇಶಗಳು ಮಿಲಿಟರಿ ಕಡೆಗೆ ಹೆಚ್ಚು ವಾಲಬೇಕಾಗುತ್ತದೆ. ತಮ್ಮ ರಕ್ಷಣಾ ಬಜೆಟ್ ಅನ್ನು ಹೆಚ್ಚಿಸಬೇಕಾಗುತ್ತದೆ. ಇದು ಶಿಕ್ಷಣ ಮತ್ತು ಆರೋಗ್ಯಕ್ಕೆ ಸಿಗಬೇಕಾದ ಅನುದಾನವನ್ನು ಕಡಿತಗೊಳಿಸುತ್ತದೆ. ಪರಿಣಾಮ ಮುಂದಿನ ದಿನಗಳಲ್ಲಿ ದೇಶ 20 ವರ್ಷಗಳ ಹಿಂದಕ್ಕೆ ಚಲಿಸಿ ಮತ್ತೆ ಮೊದಲಿನಿಂದ ಶುರು ಮಾಡಬೇಕಾಗುತ್ತದೆ.
ಪರ್ಯಾಯ ಮಾರ್ಗ ಅಥವಾ ಪರಿಹಾರಗಳೇನು?
1. ಇಂಧನ ಮೂಲಗಳ ವೈವಿಧ್ಯೀಕರಣ (Diversification): ಐರೋಪ್ಯ ಒಕ್ಕೂಟವು ರಷ್ಯಾದ ಅವಲಂಬನೆಯನ್ನು ಶೇ. 45ರಿಂದ ಶೇ. 10ಕ್ಕೆ ಇಳಿಸಿ ಅಜರ್ಬೈಜಾನ್, ಕೆನಡಾ ಮತ್ತು ಅಮೆರಿಕದತ್ತ ಮುಖ ಮಾಡಿದಂತೆ, ಭಾರತವೂ ಸಹ ತನ್ನ ಆಮದು ಮೂಲಗಳನ್ನು ವಿಸ್ತರಿಸಬೇಕು.
2. ಸ್ಥಳೀಯ ಉತ್ಪಾದನೆ: ದೇಶದೊಳಗಿನ ತೈಲ ಬಾವಿಗಳ ಶೋಧನೆ ಮತ್ತು ನೈಸರ್ಗಿಕ ಅನಿಲದ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು.
3. ನವೀಕರಿಸಬಹುದಾದ ಇಂಧನದತ್ತ ತುರ್ತು ಬದಲಾವಣೆ (Green Energy Transition): ಮನೆ ಮತ್ತು ಕೈಗಾರಿಕೆಗಳಲ್ಲಿ ಸೌರ ಫಲಕಗಳ ಅಳವಡಿಕೆಗೆ ಸರ್ಕಾರ ಭಾರೀ ಸಬ್ಸಿಡಿ ನೀಡಬೇಕು. ಇದು ವಿದ್ಯುತ್‌ಗಾಗಿ ಅನಿಲದ ಮೇಲಿನ ಅವಲಂಬನೆಯನ್ನು ತಪ್ಪಿಸುತ್ತದೆ.
4. ಹಸಿರು ಹೈಡ್ರೋಜನ್ (Green Hydrogen): ಭವಿಷ್ಯದ ಇಂಧನವೆಂದೇ ಕರೆಯಲ್ಪಡುವ ಹಸಿರು ಹೈಡ್ರೋಜನ್ ಉತ್ಪಾದನೆಯಲ್ಲಿ ಹೂಡಿಕೆ ಮಾಡುವುದರಿಂದ ಭಾರಿ ಪ್ರಮಾಣದ ತೈಲ ಆಮದು ಉಳಿಸಬಹುದು.
5. ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆ: ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡುವುದು.
6. ಎಥೆನಾಲ್ ಮಿಶ್ರಣ: ಭಾರತವು ಈಗಾಗಲೇ ಪೆಟ್ರೋಲ್‌ನಲ್ಲಿ ಎಥೆನಾಲ್ ಬೆರೆಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮಾಡುತ್ತಿದೆ. ಇದನ್ನು ಶೇ. 20ಕ್ಕಿಂತ ಹೆಚ್ಚಿಸುವುದರಿಂದ ಸಾವಿರಾರು ಕೋಟಿ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ.

7. ಐಇಎ (IEA) ಸೂಚಿಸಿದ 10 ಅಂಶಗಳ ಜೀವನಶೈಲಿ: ಸಾಧ್ಯವಿರುವ ಕಡೆ ವಾರದಲ್ಲಿ 3 ದಿನ ಮನೆಯಿಂದಲೇ ಕೆಲಸ ಮಾಡುವುದರಿಂದ ಇಂಧನದ ಬೇಡಿಕೆ ಗಣನೀಯವಾಗಿ ಕುಸಿಯುತ್ತದೆ. ಹೆದ್ದಾರಿಗಳಲ್ಲಿ ವಾಹನಗಳ ವೇಗವನ್ನು ಗಂಟೆಗೆ 10-20 ಕಿ.ಮೀ ನಷ್ಟು ಕಡಿಮೆ ಮಾಡುವುದರಿಂದ ಇಂಧನ ದಕ್ಷತೆ ಹೆಚ್ಚುತ್ತದೆ. ಒಬ್ಬೊಬ್ಬರೇ ಕಾರಿನಲ್ಲಿ ಹೋಗುವ ಬದಲು ಮೆಟ್ರೋ, ಬಸ್ ಬಳಸುವುದು ಅಥವಾ ಸಹೋದ್ಯೋಗಿಗಳೊಂದಿಗೆ ಕಾರನ್ನು ಹಂಚಿಕೊಳ್ಳುವುದು (Car-sharing) ಒಳ್ಳೆಯ ಉಪಾಯ.
8. ತಾಂತ್ರಿಕ ನಾವೀನ್ಯತೆ ಮತ್ತು ದಕ್ಷತೆ: ವಿದ್ಯುತ್ ವ್ಯರ್ಥವಾಗುವುದನ್ನು ತಡೆಯಲು ಸ್ಮಾರ್ಟ್ ಗ್ರಿಡ್ (ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ವಿದ್ಯುತ್ ಉತ್ಪಾದನೆ, ವಿತರಣೆ ಮತ್ತು ಬಳಕೆಯನ್ನು ನೈಜ ಸಮಯದಲ್ಲಿ (real-time) ನಿರ್ವಹಿಸುವ ಆಧುನಿಕ ವಿದ್ಯುತ್ ಜಾಲ) ತಂತ್ರಜ್ಞಾನ ಬಳಸುವುದು.
ಇದನ್ನೂ ಓದಿ: ಶೇ.85ರಷ್ಟು ಕಂಪನಿಗಳಲ್ಲಿ AI ಪಾರುಪತ್ಯ; ಸ್ಕಿಲ್ ಇಲ್ಲದಿದ್ದರೆ ನಿಮ್ಮ ಕೆಲಸಕ್ಕೂ ಕುತ್ತು!
ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆಯ ಇಂದಿನ ಅತಂತ್ರ ಸ್ಥಿತಿ ಮಾನವಕುಲದ ಇಂಧನ ಅವಲಂಬನೆಯನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ರಾಜತಾಂತ್ರಿಕ ದಾಳಿ. ಇಂಧನಗಳ ಮೇಲಿನ ಅತಿಯಾದ ಅವಲಂಬನೆಯೇ ಜಗತ್ತನ್ನು ಈ ‘ಬ್ಲ್ಯಾಕ್‌ಮೇಲ್’ ತಂತ್ರಕ್ಕೆ ಬಲಿಯಾಗುವಂತೆ ಮಾಡಿದೆ. ಭಾರತದಂತಹ ರಾಷ್ಟ್ರಗಳಿಗೆ ಇದು ಎಚ್ಚರಿಕೆಯ ಗಂಟೆ. ಈ ಬಿಕ್ಕಟ್ಟನ್ನು ಗೆಲ್ಲಲು ‘ಇಂಧನ ಸ್ವಾವಲಂಬನೆ’ (Energy Independence) ಹೊರತುಪಡಿಸಿ ನಮಗೆ ಬೇರೆ ಆಯ್ಕೆಗಳಿಲ್ಲ. ನವೀಕರಿಸಬಹುದಾದ ಇಂಧನಗಳತ್ತ ತುರ್ತು ಬದಲಾವಣೆ ಈಗ ಆಯ್ಕೆಯಲ್ಲ ಅನಿವಾರ್ಯ. ಯುದ್ಧದ ಕಿಚ್ಚಿನಿಂದ ಅರೆಬರೆ ಸುಟ್ಟಿರುವ ಜಾಗತಿಕ ಇಂಧನ ಮಾರುಕಟ್ಟೆಯ ಗಾಯಕ್ಕೆ ಹಸಿರು ಇಂಧನದ ಮದ್ದು ಅರೆಯಲೇಬೇಕಿದೆ. ಇಲ್ಲದಿದ್ದರೆ, ನಿರಂತರ ಬಿಕ್ಕಟ್ಟುಗಳ ನಡುವೆ ಜನಸಾಮಾನ್ಯರ ಬದುಕು ಅತಂತ್ರವಾಗಿಯೇ ಉಳಿಯಬೇಕಾದೀತು.




