ಅರಸೀಕೆರೆ ಕ್ಷೇತ್ರ | ಶಿವಲಿಂಗೇಗೌಡ-ಸಂತೋಷ್ ನಡುವೆ ನೇರ ಕದನ

Date:

ಈ ಬಾರಿಯ ಚುನಾವಣೆಯಲ್ಲಿ ಅರಸೀಕೆರೆ ಹಲವು ಬದಲಾವಣೆಗಳನ್ನು ಕಂಡು ಕಂಗಾಲು ಕ್ಷೇತ್ರವಾಗಿದೆ. ಆ ಬದಲಾವಣೆ ಮತದಾರರಲ್ಲಿ, ಪಕ್ಷದ ಕಾರ್ಯಕರ್ತರಲ್ಲಿ ಭಾರೀ ಗೊಂದಲಕ್ಕೂ ಎಡೆಮಾಡಿಕೊಟ್ಟಿದೆ. ನಾಯಕರಾದವರು ಇಲ್ಲಿಂದ ಅಲ್ಲಿಗೆ ನೆಗೆಯುವುದು ಸಾಮಾನ್ಯ. ಆದರೆ ಅವರನ್ನೇ ನಂಬಿ ನಡೆಯುವ ಕಾರ್ಯಕರ್ತರಿಗೆ ಈ ನೆಗೆದಾಟ, ಸಹಿಸಿಕೊಳ್ಳಲಾಗದ ಸಂಕಟವನ್ನು ತಂದೊಡ್ಡುತ್ತದೆ. ಅದು ಈಗ ಅರಸೀಕೆರೆಯಲ್ಲಿ ದಿನ ಬೆಳಗಾದರೆ ದೊಂಬಿ, ಗಲಾಟೆ, ವಾಗ್ವಾದದ ರೂಪದಲ್ಲಿ ಕಣ್ಮುಂದೆಯೇ ಕಾಣುತ್ತಿದೆ.

ಜೆಡಿಎಸ್‌ನಿಂದ ಮೂರು ಬಾರಿ ಗೆದ್ದು ಹಿರಿಯ ನಾಯಕನೆನಿಸಿಕೊಂಡ ಕೆ.ಎಂ. ಶಿವಲಿಂಗೇಗೌಡ, ರೇವಣ್ಣರ ಕಾಕದೃಷ್ಟಿಗೆ ಬಲಿಯಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅಭ್ಯರ್ಥಿಯಾಗಿ ಮತದಾರರ ಮುಂದೆ ನಿಂತಿದ್ದಾರೆ. ಹಾಗೆಯೇ ಕಳೆದ ಮೂರು ವರ್ಷಗಳಿಂದ ಬಿಜೆಪಿಯಿಂದ ನಾನೇ ಅಭ್ಯರ್ಥಿ ಎಂದು ಕೋಟಿಗಟ್ಟಲೆ ಖರ್ಚು ಮಾಡಿ ನೆಲವನ್ನು ಹದ ಮಾಡಿಕೊಂಡಿದ್ದ ಎನ್.ಆರ್. ಸಂತೋಷ್, ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಬೇಸತ್ತು ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದಾರೆ. ಹಾಗೆಯೇ ಎರಡು ಪ್ರಬಲ ಪಕ್ಷಗಳ ಜಟಾಪಟಿಯ ನಡುವೆ ನಲುಗಿಹೋಗಿರುವ ಬಿಜೆಪಿಗೆ ಅಳಿದುಳಿದ ಜಿ.ವಿ. ಬಸವರಾಜು ಅಭ್ಯರ್ಥಿಯಾಗಿದ್ದಾರೆ.

2018ರ ಚುನಾವಣೆಯ ಫಲಿತಾಂಶದ ನಂತರ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದಾಗ, ಮೂರು ಸಲ ಗೆದ್ದು ಸೀನಿಯರ್ ಎನಿಸಿಕೊಂಡಿದ್ದ ಶಿವಲಿಂಗೇಗೌಡ, ಸಹಜವಾಗಿಯೇ ಹಾಸನ ಜಿಲ್ಲೆಯಿಂದ ಮಂತ್ರಿಯಾಗುವ ಹಕ್ಕು ಚಲಾಯಿಸಿದ್ದರು. ಅವರ ಬೇಡಿಕೆಯಲ್ಲಿ ಯಾವ ತಪ್ಪೂ ಇರಲಿಲ್ಲ. ಆದರೆ ತಪ್ಪಾಗಿ ಕಂಡಿದ್ದು ದೇವೇಗೌಡರ ಕುಟುಂಬಕ್ಕೆ ಮತ್ತು ಹಾಸನ ಎಂದರೆ ಎಚ್.ಡಿ. ರೇವಣ್ಣ ಎಂದುಕೊಂಡಿರುವ ರೇವಣ್ಣರಿಗೆ. ಆ ಕ್ಷಣದಿಂದಲೇ ಶಿವಲಿಂಗೇಗೌಡರನ್ನು ಮೂದಲಿಸುತ್ತಾ, ಕಡೆಗಣಿಸುತ್ತಾ ಬಂದ ರೇವಣ್ಣ, ಪಕ್ಷ ತೊರೆದು ಹೋಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.
ರಾಜಕಾರಣದಲ್ಲಿ ಪಳಗಿದ ಶಿವಲಿಂಗೇಗೌಡ, ರೇವಣ್ಣರ ರಾಜಕೀಯಕ್ಕೆ ಸಡ್ಡು ಹೊಡೆದು, ಸಿದ್ದರಾಮಯ್ಯನವರ ಕಡೆಯಿಂದ ಕಾಂಗ್ರೆಸ್ ಸೇರಿದರು. ಅವರ ಲೆಕ್ಕಾಚಾರದಂತೆ ಒಕ್ಕಲಿಗರು, ಕುರುಬರು, ಮುಸ್ಲಿಮರು, ದಲಿತರ ಜೊತೆಗೆ ಲಿಂಗಾಯತರೂ ಕೈ ಜೋಡಿಸಿದರೆ, 25 ವರ್ಷಗಳ ನಂತರ, ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಿವಲಿಂಗೇಗೌಡರ ಮೂಲಕ ಕಾಂಗ್ರೆಸ್ ಗೆದ್ದು ಬೀಗಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ ಶಿವಲಿಂಗೇಗೌಡ ಪಕ್ಷ ತೊರೆದು ಹೋಗಿರುವ ಕಾರಣಕ್ಕೆ, ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ಗೌಡರ ಕುಟುಂಬ, ಪಕ್ಷಕ್ಕಾಗಿ ದುಡಿದ ಎರಡನೇ ಸಾಲಿನ ನಾಯಕರನ್ನು ಬದಿಗೊತ್ತಿ ಹಣದ ಥೈಲಿ ಹಿಡಿದು ಬಂದ ಎನ್.ಆರ್. ಸಂತೋಷ್‌ಗೆ ಟಿಕೆಟ್ ನೀಡಿದೆ. ಜೆಡಿಎಸ್‌ನ ಸಾಂಪ್ರದಾಯಿಕ ಮತಗಳ ಜೊತೆಗೆ ಕ್ಷೇತ್ರದಲ್ಲಿ ಬಹುಸಂಖ್ಯಾತರಾದ ಲಿಂಗಾಯತ ಸಮುದಾಯ ಸಂತೋಷ್ ಪರ ನಿಂತರೆ, ಶಿವಲಿಂಗೇಗೌಡರಿಗೆ ಮಣ್ಣು ಮುಕ್ಕಿಸಬಹುದು ಎಂಬ ಲೆಕ್ಕಾಚಾರದಲ್ಲಿದೆ.

ಕುತೂಹಲಕರ ಸಂಗತಿ ಎಂದರೆ, 2018ರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸುವ ನಿಟ್ಟಿನಲ್ಲಿ 17 ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋದ, ಅವರ ಬೇಕು-ಬೇಡಗಳನ್ನು ಪೂರೈಸಿದ ವ್ಯಕ್ತಿಯೇ ಎನ್.ಆರ್. ಸಂತೋಷ್. ಈತ ಬಿ.ಎಸ್. ಯಡಿಯೂರಪ್ಪನವರ ಸಂಬಂಧಿಕ. ಈತನ ಬಿರುಸಿನ ಓಡಾಟದ ಫಲವಾಗಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಅಧಿಕಾರ ಕಳೆದುಕೊಳ್ಳಬೇಕಾಯಿತು. ವಿಚಿತ್ರವೆಂದರೆ, ಈಗ ಅದೇ ವ್ಯಕ್ತಿಯನ್ನು ಕುಮಾರಸ್ವಾಮಿ ಅಪ್ಪಿಕೊಂಡಿದ್ದಾರೆ, ಅಭ್ಯರ್ಥಿಯನ್ನಾಗಿಸಿದ್ದಾರೆ. ಈತನ ಹಣಬಲ ಮತ್ತು ಜಾತಿಬಲ ಬಳಸಿ ಶಿವಲಿಂಗೇಗೌಡರನ್ನು ಮುಗಿಸಲು ಮುಂದಾಗಿದ್ದಾರೆ.

ಎನ್.ಆರ್. ಸಂತೋಷ್‌ಗೆ ಬಿಜೆಪಿ ಟಿಕೆಟ್ ತಪ್ಪಲು ಯಡಿಯೂರಪ್ಪನವರೇ ಕಾರಣ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎನ್.ಆರ್. ಸಂತೋಷ್, ಮಾಡಬಾರದ ಕೆಲಸಗಳನ್ನೆಲ್ಲ ಮಾಡಿ ಹೆಸರು ಕೆಡಿಸಿಕೊಂಡಿದ್ದರು. ಆ ಕ್ಷಣದಿಂದಲೇ ಸಂತೋಷರನ್ನು ದೂರ ಇಟ್ಟಿದ್ದ ಯಡಿಯೂರಪ್ಪನವರು, ಯಾವುದೇ ಕಾರಣಕ್ಕೂ ಸಂತೋಷ್ ಗೆ ಟಿಕೆಟ್ ಕೊಡಬಾರದೆಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಟಿಕೆಟ್ ತಪ್ಪಿದ ದಿನ ಅರಸೀಕೆರೆಯಲ್ಲಿ ಸಂತೋಷ್ ಬೆಂಬಲಿಗರಿಂದ ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿ, ಯಡಿಯೂರಪ್ಪನವರಿಗೆ ಧಿಕ್ಕಾರ ಕೂಗಿಸಲಾಗಿತ್ತು.

ಈ ಸುದ್ದಿ ಓದಿದ್ದೀರಾ?: ಚನ್ನಪಟ್ಟಣ ಕ್ಷೇತ್ರ | ಸೈನಿಕನ ಮಣಿಸಿ ಮರಳಿ ಕಿಂಗ್ ಆಗುವರೇ ಕುಮಾರಸ್ವಾಮಿ?

ಒಟ್ಟಿನಲ್ಲಿ ಎನ್.ಆರ್. ಸಂತೋಷ್ ಬಳಿ ಕೋಟಿಗಟ್ಟಳೆ ಹಣವಿದೆ. ಅದು ಈ ಚುನಾವಣೆಯಲ್ಲಿ ನೀರಿನಂತೆ ಹರಿಯುತ್ತಿದೆ. ಅರಸೀಕೆರೆ ಕ್ಷೇತ್ರ ನೆಮ್ಮದಿ ಕಳೆದುಕೊಂಡು ದಿನಕ್ಕೊಂದು ಗಲಾಟೆಗೆ ತುತ್ತಾಗುತ್ತಿದೆ. ಬಹುಸಂಖ್ಯಾತರಾದ ಲಿಂಗಾಯತರನ್ನು ನಂಬಿ ಕಣಕ್ಕಿಳಿದಿರುವ ಸಂತೋಷ್, ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಕಂಗಾಲಾಗಿದ್ದರೂ, ಗೌಡರ ಕುಟುಂಬಕ್ಕೆ ಹತ್ತಿರವಾಗಿ ಜೆಡಿಎಸ್ ಅಭ್ಯರ್ಥಿಯಾಗಿ, ಒಕ್ಕಲಿಗ-ಲಿಂಗಾಯತ ಮತಗಳನ್ನು ಕ್ರೋಡೀಕರಿಸಿ ಗೆಲ್ಲುವ ಹವಣಿಕೆಯಲ್ಲಿದ್ದಾರೆ. ಆದರೆ ಮತ್ತೊಬ್ಬ ಲಿಂಗಾಯತ ನಾಯಕ ಬಿಜೆಪಿಯ ಜಿ.ಬಿ. ಬಸವರಾಜು ಕೂಡ ಕಣದಲ್ಲಿದ್ದು, ಲಿಂಗಾಯತ ಮತಗಳು ಹರಿದು ಹಂಚಿಹೋಗಲಿವೆ ಎನ್ನಲಾಗುತ್ತಿದೆ.

ಇದೇ ರೀತಿ ಒಕ್ಕಲಿಗ ಮತಗಳು ಈ ಬಾರಿ ಸಾಲಿಡ್ಡಾಗಿ ಶಿವಲಿಂಗೇಗೌಡರಿಗೂ ಬೀಳುವ ಸಾಧ್ಯತೆಗಳಿಲ್ಲ. ಆದರೆ ಮೂರು ಬಾರಿ ಶಾಸಕನಾಗಿ ಮಾಡಿರುವ ಕೆಲಸಗಳನ್ನು ಮುಂದಿಟ್ಟು ಮತದಾರರನ್ನು ಮುಟ್ಟಿ ತಟ್ಟಿ ಮಾತನಾಡಿಸುತ್ತಿರುವ ಶಿವಲಿಂಗೇಗೌಡ, ಮುಸ್ಲಿಮರು ಮತ್ತು ದಲಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ, ಗೆಲುವನ್ನು ತಮ್ಮದಾಗಿಸಿಕೊಳ್ಳಬಹುದು ಎಂಬ ವಿಶ್ವಾಸದಲ್ಲಿದ್ದಾರೆ.

ಒಟ್ಟಿನಲ್ಲಿ ಅರಸೀಕೆರೆ ಕ್ಷೇತ್ರ ಈ ಬಾರಿ ಕುತೂಹಲದ ಕಣವಾಗಿ ಮಾರ್ಪಟ್ಟಿದೆ. ವ್ಯಕ್ತಿ ಮುಖ್ಯವೋ, ಪಕ್ಷ ಮುಖ್ಯವೋ ಎಂದು ನಿರ್ಧರಿಸುವುದು ಕೊಂಚ ಕಷ್ಟವಾಗಿದೆ. ಸದ್ಯಕ್ಕಂತೂ ಕಾಂಗ್ರೆಸ್-ಜೆಡಿಎಸ್ ನಡುವಿನ ನೇರ ಹಣಾಹಣಿ ಏರ್ಪಟ್ಟು, ಯಾರೇ ಗೆದ್ದರೂ ಅತ್ಯಲ್ಪ ಮತಗಳ ಅಂತರ ಎನ್ನುವುದು ಮತದಾರರ ಮಾತಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ‘ಸೊಳ್ಳೆ ಉತ್ಪಾದನಾ ಕೇಂದ್ರ’ವಾದ ವೈದ್ಯಕೀಯ ಕಾಲೇಜು; ಕಣ್ಮುಚ್ಚಿ ಕುಳಿತ ಅಧಿಕಾರಿಗಳು!

ಇಡೀ ರಾಜ್ಯದಲ್ಲಿ ಡೆಂಘೀ ಜ್ವರ ಹರಡುತ್ತಾ ಇರುವಾಗ ನೈರ್ಮಲ್ಯ ಕಾಪಾಡಿ, ನೀರು...

ವಿಜಯಪುರ | ಎನ್‌ಎಸ್‌ಎಸ್ ಸ್ವಯಂ ಸೇವಕರಲ್ಲಿ ತಾಳ್ಮೆ, ಶಿಸ್ತಿನ ಜೊತೆಗೆ ಧೈರ್ಯ ತುಂಬುತ್ತದೆ: ಡಾ.ಪ್ರತಾಪ್ ಲಿಂಗಯ್ಯ

"ಎನ್‌ಎಸ್‌ಎಸ್ ಎಂಬುದು ಮನುಷ್ಯನಲ್ಲಿ ಸಹನೆ, ತಾಳ್ಮೆ ಹಾಗೂ ಶಿಸ್ತಿನ ಜೊತೆಗೆ ಧೈರ್ಯವನ್ನು...

ವಿಜಯಪುರ | ನೂತನ ವಸತಿ ನಿಲಯ ಮಂಜೂರು ಮಾಡುವಂತೆ ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹ

ವಿಜಯಪುರ ನಗರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಹಿಂದುಳಿದ ವರ್ಗಗಳ ಮತ್ತು...

ಚಿಕ್ಕಬಳ್ಳಾಪುರ | ಶಾಶ್ವತ ನೀರಾವರಿ ಯೋಜನೆಗಾಗಿ ಪ್ರಧಾನಿ ಭೇಟಿ : ಶಾಸಕ ಸಮೃದ್ಧಿ ಮಂಜುನಾಥ್‌ ವಾಗ್ದಾನ

"ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ತರುವ ಕುರಿತು ಪ್ರಧಾನಿ ಮೋದಿ ಭೇಟಿಗೆ...