ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿಯ ಮಸ್ತೇನಹಳ್ಳಿಯಲ್ಲಿರುವ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಮತ್ತು ಕಾಲೇಜಿಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು.ನಿಸಾರ್ ಅಹಮದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸುದೀರ್ಘವಾಗಿ ಸಂಭಾಷಿಸಿದ ಅಧ್ಯಕ್ಷರು,ಸರ್ಕಾರದಿಂದ ದೊರೆಯುತ್ತಿರುವ ಸವಲತ್ತುಗಳು ಸಮರ್ಪಕವಾಗಿ ತಲುಪುತ್ತಿವೆಯೇ ಎಂದು ಖಾತ್ರಿಪಡಿಸಿಕೊಂಡರು.ದ್ವಿತೀಯ ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಸೂಕ್ತ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿ ನೀಡುವಂತೆ ಅಧಿಕಾರಿಗಳು ಮತ್ತು ಪ್ರಾಂಶುಪಾಲರಿಗೆ ಸೂಚಿಸಿದರು.
ವಸತಿ ನಿಲಯದ ಅಡುಗೆ ಕೋಣೆ,ಡಾರ್ಮಿಟರಿ ಮತ್ತು ಶೌಚಾಲಯಗಳನ್ನು ವೀಕ್ಷಿಸಿದ ಅವರು,ಪರಿಶುದ್ಧತೆ ಹಾಗೂ ಸ್ವಚ್ಛತೆಯ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು.ನಂತರ ವಿದ್ಯಾರ್ಥಿಗಳು,ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಭೋಜನಾಲಯದಲ್ಲಿ ಸೌಹಾರ್ದಯುತವಾಗಿ ಆಹಾರ ಸೇವಿಸಿ,ಅಡುಗೆಯ ರುಚಿ ಹಾಗೂ ಸಿಬ್ಬಂದಿಯ ನೈರ್ಮಲ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಹಾಗೂ ಶಿಸ್ತನ್ನು ಬೆಳೆಸುವ ನಿಟ್ಟಿನಲ್ಲಿ ವಸತಿ ಶಾಲೆಯಲ್ಲಿ ಎನ್‌ಸಿಸಿ ಘಟಕವನ್ನು ತಕ್ಷಣವೇ ಪ್ರಾರಂಭಿಸಲು ಸಲಹೆ ನೀಡಿದರು.ಇದೇ ವೇಳೆ ಭೇಟಿಯ ನೆನಪಿಗಾಗಿ ಶಾಲಾ ಆವರಣದಲ್ಲಿ ಗಿಡ ನೆಟ್ಟು ನೀರುಣಿಸಿದರು.
ಶಾಲೆಯ ಪ್ರಾಂಶುಪಾಲೆ ಅರುಣಾ ಪಲ್ಲವಿ,ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಕುಮಾರಿ ಬಿಂದುಮಣಿ ಎಂ.ಎಲ್.ಅವರೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಕುರಿತು ಚರ್ಚಿಸಿ,ಮುಂದಿನ ಕಾರ್ಯಯೋಜನೆಗಳ ಬಗ್ಗೆ ನಿರ್ದೇಶನ ನೀಡಿದರು.ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಿ,ನೈತಿಕ ಸ್ಥೈರ್ಯ ತುಂಬಿದರು.
ಅತಿಥಿಗಳ ಸಂದರ್ಶನ ಪುಸ್ತಕದಲ್ಲಿ ತಮ್ಮ ಅನಿಸಿಕೆಗಳನ್ನು ದಾಖಲಿಸಿ,ಸಾಮೂಹಿಕ ಛಾಯಾಚಿತ್ರಕ್ಕೆ ಜೊತೆಯಾದರು.
ಇದನ್ನು ಓದಿದ್ದೀರಾ..?ಕೋಲಾರ | ರೈತರ ಹತ್ಯೆ ಆರೋಪ: ಅರಣ್ಯಾಧಿಕಾರಿಗಳ ಬಂಧನಕ್ಕೆ ರೈತ ಸಂಘ ಆಗ್ರಹ
ಈ ಸಂದರ್ಭದಲ್ಲಿ ನಿವೃತ್ತ ಮೇಜರ್ ಜನರಲ್ ಅಹಮದ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಾಷಾಕ್ ಸಾಬ್,ಬೋಧಕ ಸಿಬ್ಬಂದಿಯಾದ ಲೋಕೇಶ್ ಎಸ್.ಎಂ.ಲಕ್ಷ್ಮೀದೇವ ಎಲ್.ಲತೀಫ್,ನಾಗವೇಣಿ ಎಂ. ಪ್ರಕಾಶ್ ವಿ.ನಾಗಮಣಿ ಸಿ.ಜೆ.ದೇವರಾಜ್ ಕೆ.ಎಂ. ಮುಂಜರಿನ್ ಬೇಗಂ,ಶ್ವೇತಾ,ಬೋಧಕೇತರ ಸಿಬ್ಬಂದಿ,ಉಪಸ್ಥಿತರಿದ್ದರು.




