ದಾವಣಗೆರೆ ಜಿಲ್ಲೆ | ಬಿಜೆಪಿ ಭದ್ರಕೋಟೆಯನ್ನು ಭೇದಿಸಲಿದ್ದಾರೆಯೇ ಕಾಂಗ್ರೆಸ್‌ ಕಲಿಗಳು?

Date:

ದಾವಣಗೆರೆ ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಎರಡು ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿತ್ತು. ಬಿಜೆಪಿ ಐದು ಸ್ಥಾನ ಗೆದ್ದು ಬೀಗಿತ್ತು. ಈ ಬಾರಿ ಮಾಡಾಳು ವಿರೂಪಾಕ್ಷಪ್ಪರ ಭ್ರಷ್ಟಾಚಾರ ಪ್ರಕಣ ಹಾಗೂ ಬಂಡಾಯ ಕಾಂಗ್ರೆಸ್‌ಗೆ ವರವಾಗಲಿದೆ ಎನ್ನಲಾಗುತ್ತಿದೆ.

ಬಿಜೆಪಿಯ ಭದ್ರಕೋಟೆಯಾಗಿರುವ ದಾವಣಗೆರೆ ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಈ ಜಿಲ್ಲೆಯಿಂದ ಆಯ್ಕೆಯಾಗಿ ಬರುವ ನಾಯಕರು ರಾಜ್ಯದ ಒಂದಲ್ಲ ಒಂದು ಉನ್ನತ ಸ್ಥಾನ ಪಡೆಯುತ್ತಾರೆ ಎಂಬ ಮಾತಿದೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಎರಡು ಸ್ಥಾನಗಳನ್ನು ಮಾತ್ರವೇ ಕಾಂಗ್ರೆಸ್‌ ಗೆದ್ದಿದ್ದು, ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ತನ್ನದಾಗಿಸಿಕೊಂಡಿತ್ತು.

ಆದರೆ, ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ ಪರವಾದ ಅಂತಹ ವಾತಾವರಣ ಇಲ್ಲ ಎಂದೇ ಹೇಳಲಾಗುತ್ತಿದೆ. ಕಾರಣ, ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು, ರಾಜ್ಯದಲ್ಲಿ ಬಿಜೆಪಿ ತಲೆತಗ್ಗಿಸುವಂತೆ ಮಾಡಿದೆ. ಸರ್ಕಾರದ ವಿರುದ್ಧ ಶೇ. 40 ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿಯೇ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಬಿಜೆಪಿಗೆ ಸಾಕಷ್ಟು ಹಿನ್ನಡೆ ಉಂಟುಮಾಡಿದೆ. ಇದು ಈ ಬಾರಿಯ ಚುನಾವಣೆ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.

ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಮಾಯಕೊಂಡ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು, ಜಗಳೂರು ಪರಿಶಿಷ್ಟ ವರ್ಗದ ಮೀಸಲು ಕ್ಷೇತ್ರವಾಗಿದೆ. ಉಳಿದಂತೆ ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಹರಿಹರ, ಚನ್ನಗಿರಿ ಹಾಗೂ ಹೊನ್ನಾಳಿ ವಿಧಾನಸಭೆ ಕ್ಷೇತ್ರಗಳು ಸಾಮಾನ್ಯ ಮೀಸಲು ಕ್ಷೇತ್ರಗಳಾಗಿವೆ.

ದಾವಣಗೆರೆ ಉತ್ತರ: ಬಿಜೆಪಿ- ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಾಮನೂರು ಶಿವಶಂಕರಪ್ಪ ಅವರ ಪುತ್ರ, ಮಾಜಿ ಸಚಿವ ಎಸ್‌ ಎಸ್ ಮಲ್ಲಿಕಾರ್ಜುನ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ನಾಗರಾಜ್‌ ಲೇಕಿಕೆರೆ ಹಾಗೂ ಜೆಡಿಎಸ್‌ ಅಭ್ಯರ್ಥಿಯಾಗಿ ಎಂ ಜಿ ಶಿವಶಂಕರ್‌ ಕಣದಲ್ಲಿದ್ದಾರೆ.

ವಯಸ್ಸು ಮತ್ತು ಅನಾರೋಗ್ಯದ ಕಾರಣದಿಂದಾಗಿ ಹಾಲಿ ಶಾಸಕ ಎಸ್ ಎ ರವೀಂದ್ರನಾಥ್ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದರಿಂದ ಬಿಜೆಪಿ ಹೊಸ ಮುಖ ಲೋಕಿಕೆರೆ ನಾಗರಾಜ ಅವರನ್ನು ಅದೃಷ್ಠ ಪರೀಕ್ಷೆಗೆ ಇಳಿಸಿದೆ. ಹಾಗಾಗಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. 2004ರಿಂದ ಈವರೆಗೆ ನಡೆದ ನಾಲ್ಕು ಚುನಾವಣೆಗಳಲ್ಲಿ ಇಲ್ಲಿನ ಮತದಾರರು ಒಮ್ಮೆ ಕಾಂಗ್ರೆಸ್‌, ಒಮ್ಮೆ ಬಿಜೆಪಿಗೆ ಮಣೆ ಹಾಕುತ್ತಾ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದು, ಈ ಬಾರಿ ಯಾರು ಗೆಲ್ಲಲಿದ್ದಾರೆ ನೋಡಬೇಕಿದೆ.

ದಾವಣಗೆರೆ ದಕ್ಷಿಣ: ಶಾಮನೂರರನ್ನು ಕಟ್ಟಿ ಹಾಕುವರೆ ಮುಸ್ಲಿಂ ಅಭ್ಯರ್ಥಿ?

ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಬಿ ಜಿ ಅಜಯ್‌ಕುಮಾರ್‌ ಕಣಕ್ಕಿಳಿದಿದ್ದಾರೆ. ಕಳೆದ ನಾಲ್ಕು ಚುನಾವಣೆಗಳಿಂದ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿಕೊಂಡು ಬಂದಿರುವ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ ಮುಸ್ಲಿಂ ಸಮುದಾಯದ ಅಮಾನುಲ್ಲಾ ಖಾನ್‌ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಬಿಜೆಪಿ ಅಭ್ಯರ್ಥಿ ಮಾಜಿ ಮೇಯರ್ ಬಿ ಜಿ ಅಜಯಕುಮಾರ್ ಸ್ಪರ್ಧಿಸಿರುವ ಕ್ಷೇತ್ರ ದೊಡ್ಡ ಮಟ್ಟದ ನಾಯಕರ ಪ್ರಚಾರದಿಂದ ದೂರ ಉಳಿದಿದೆ. ಚಿತ್ರನಟ ಕಿಚ್ಚ ಸುದೀಪ್ ಕ್ಷೇತ್ರದಲ್ಲಿ ಸಂಚರಿಸಿದ್ದು ಬಿಟ್ಟರೆ, ಇಲ್ಲಿಗೆ ಮತಗಳನ್ನು ಸೆಳೆಯುವ ಯಾವುದೇ ಮುಖಂಡರು ಬಂದಿಲ್ಲ.

ಕ್ಷೇತ್ರದಲ್ಲಿ ಮುಸ್ಲಿಂ, ಲಿಂಗಾಯತ ಮತ್ತು ಕುರುಬ ಸಮುದಾಯದ  ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರ ಸುಲಭ ಗೆಲುವಿಗೆ ಬ್ರೇಕ್‌ ಹಾಕಲು ಜೆಡಿಎಸ್‌ ಈ ಬಾರಿ ಜೆ ಅಮಾನುಲ್ಲಾ ಖಾನ್ ಎಂಬುವವರನ್ನು ಕಣಕ್ಕಿಳಿಸಿ ಮುಸ್ಲಿಂ ಮತಗಳನ್ನು ಕಸಿಯುವ ತಂತ್ರ ರೂಪಿಸಿದೆ.

ಚನ್ನಗಿರಿ: ಬಂಡಾಯದ ಕ್ಷೇತ್ರದಲ್ಲಿ ಯಾರಿಗೆ ಒಲಿಯಲಿದೆ ಅದೃಷ್ಟ?

ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಿವಗಂಗಾ ಬಸವರಾಜ್‌, ಬಿಜೆಪಿ ಅಭ್ಯರ್ಥಿಯಾಗಿ ಎಚ್‌ ಎಸ್‌ ಶಿವಕುಮಾರ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಯಾಗಿ ತೇಜಸ್ವಿ ಪಟೇಲ್‌ ಚುನಾವಣಾ ಕಣದಲ್ಲಿದ್ದಾರೆ.

ವಿಧಾನಸಭಾ ಚುನಾವಣೆ ಘೋಷಣೆಗೆ ಮುಂಚಿನ ದಿನಗಳಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜೈಲಿಗೆ ಹೋಗಿ ಜಾಮೀನನ ಮೇಲೆ ಹೊರಗೆ ಬಂದಿದ್ದರು. ಈ ಪಕ್ಷರಣ ಬಿಜೆಪಿಯನ್ನು ಹಣಿಯಲು ವಿರೋಧ ಪಕ್ಷಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಕಾರಣದಿಂದಾಗಿ ಬಿಜೆಪಿ ಈ ಬಾರಿ ಹಾಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಟಿಕೆಟ್‌ ನೀಡಲು ನಿರಾಕರಿಸಿತ್ತು. ಆದ್ದರಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಪುತ್ರ ಮಲ್ಲಿಕಾರ್ಜುನ್‌ನನ್ನು ಕಣಕ್ಕಿಳಿಸಿದ್ದು, ಅವರು ಪ್ರಚಾರವನ್ನೂ ನಡೆಸುತ್ತಿದ್ದಾರೆ. ಇದು ಅಲ್ಲಿನ ಬಿಜೆಪಿ ಅಭ್ಯರ್ಥಿ ಎಚ್‌ ಎಸ್‌ ಶಿವಕುಮಾರ್‌ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಕ್ಷೇತ್ರದಲ್ಲಿ ಬಿಜೆಪಿಗೆ ಉಂಟಾಗಿರುವ ಹಿನ್ನಡೆಯಿಂದಾಗಿ ಪರಿಸ್ಥಿತಿಯ ಲಾಭ ಪಡೆಯಲು ಕಾಂಗ್ರೆಸ್‌ ಹುಮ್ಮಸ್ಸಿನಲ್ಲಿದೆ. ತೇಜಸ್ವಿ ಪಟೇಲ್‌ ಅವರು ಮಾಜಿ ಮುಖ್ಯಮಂತ್ರಿ ಜೆ ಎಚ್ ಪಟೇಲ್ ಅವರ ಸಹೋದರನ ಪುತ್ರ. ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ತೇಜಸ್ವಿ ಪಟೇಲ್‌ ಬಂಡಾಯವೆದ್ದು, ಜೆಡಿಎಸ್‌ನಿಂದ ಸ್ಪರ್ಧೆಗಿಳಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ಗೆ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಮೂರು ಚುನಾವಣೆಗಳನ್ನು ಗಮನಿಸಿದರೆ ಇಲ್ಲಿನ ಮತದಾರರು ಒಮ್ಮೆ ಬಿಜೆಪಿ, ಮತ್ತೊಮ್ಮೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ.

ಜಗಳೂರು: ತ್ರಿಕೋನ ಸ್ಪರ್ಧೆ ಸಾಧ್ಯತೆ

ಜಗಳೂರು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿದ್ದು, ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಸ್‌ ವಿ ರಾಮಚಂದ್ರಪ್ಪ ಗೆಲುವು ಸಾಧಿಸಿದ್ದರು. ಈ ಬಾರಿಯೂ ಬಿಜೆಪಿ ಪುನಃ ಅವರನ್ನೇ ಕಣಕ್ಕಿಳಿಸಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ದೇವೇಂದ್ರಪ್ಪ ಸ್ಪರ್ಧಿಸಿದ್ದು, ಜೆಡಿಎಸ್‌ನಿಂದ ದೇವರಾಜು ಚುನಾವಣಾ ಕಣದಲ್ಲಿದ್ದಾರೆ.

ಜಗಳೂರು ಕ್ಷೇತ್ರದಲ್ಲಿ ಉಪಚುನಾವಣೆ ಸೇರಿ ಒಟ್ಟು 15 ಬಾರಿ ವಿಧಾನಸಭೆ ಚುನಾವಣೆಗಳು ನಡೆದಿವೆ. ಈ ಪೈಕಿ ಕಾಂಗ್ರೆಸ್‌ ಎಂಟು ಬಾರಿ, ಬಿಜೆಪಿ ಮೂರು ಬಾರಿ, ಕೆಎಂಪಿ, ಕೆಸಿಪಿ, ಸ್ವತಂತ್ರ, ಕೆಜೆಪಿ ತಲಾ ಒಂದೊಂದು ಬಾರಿ ಗೆಲವು ಸಾಧಿಸಿವೆ.

ಬಿಜೆಪಿ ಶಾಸಕ ಎಸ್ ವಿ ರಾಮಚಂದ್ರ ಮತ್ತು ಕಾಂಗ್ರೆಸ್‌ ಮಾಜಿ ಶಾಸಕ ಎಚ್‌ ಪಿ ರಾಜೇಶ್‌ ಕಳೆದ ನಾಲ್ಕು ಚುನಾವಣೆಗಳಿಂದಲೂ ಸಾಂಪ್ರದಾಯಿಕ ಎದುರಾಳಿಗಳಾಗಿದ್ದಾರೆ. ನಾಲ್ಕು ಚುನಾವಣೆಗಳಲ್ಲಿ ಮೂರು ಬಾರಿ ಬಿಜೆಪಿ, ಒಂದು ಬಾರಿ ಮಾತ್ರವೇ ಕಾಂಗ್ರೆಸ್ ಗೆಲುವು ಸಾಧಿಸಿದೆ. ಸತತ ಮೂರು ಬಾರಿ ಸೋಲು ಅನುಭವಿಸಿದ್ದರಿಂದ ಕಾಂಗ್ರೆಸ್‌ ಈ ಬಾರಿ ದೇವೇಂದ್ರಪ್ಪ ಅವರನ್ನು ಕಣಕ್ಕಿಳಿಸಿದೆ. ಇದರಿಂದಾಗಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಚ್ ಪಿ ರಾಜೇಶ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಈ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಾಬಲ್ಯ ಹೊಂದಿಲ್ಲ.

ಮಾಯಕೊಂಡ: ಕಾಂಗ್ರೆಸ್‌ಗೆ ತಟ್ಟಲಿದೆಯೇ ಬಂಡಾಯದ ಬಿಸಿ?

ಮಾಯಕೊಂಡ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದೇ ಹೇಳಬಹುದು. ಆದರೆ, ಈ ಬಾರಿ ಮಾಯಕೊಂಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಎನ್‌ ಲಿಂಗಣ್ಣ ಅವರಿಗೆ ಟಿಕೆಟ್‌ ಕೈತಪ್ಪಿದ್ದು, ಬಸವರಾಜ್‌ ನಾಯಕ್‌ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆ ಎಸ್‌ ಬಸವರಾಜ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಯಾಗಿ ಎಚ್‌ ಆನಂದಪ್ಪ ಚುನಾವಣಾ ಕಣದಲ್ಲಿದ್ದಾರೆ.

ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿರುವ ಮಾಯಕೊಂಡದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ ಇದೆ. 1994ರಿಂದಲೂ ಸತತವಾಗಿ ಗೆದ್ದಿರುವ ಬಿಜೆಪಿ, 2013ರಲ್ಲಿ ಕೆಜೆಪಿ ಸ್ಥಾಪನೆಯಾದ ಕಾಣಕ್ಕೆ ಕಾಂಗ್ರೆಸ್‌ ಅಭ್ಯ್ರರ್ಥಿ ಗೆಲ್ಲಲು ಹಾದಿ ಮಾಡಿಕೊಟ್ಟಿತ್ತು. ಆದರೆ, 2018ರ ಚುನಾವಣೆಯಲ್ಲಿ ಬಿಜೆಪಿಯು ಕ್ಷೇತ್ರವನ್ನು ಮತ್ತೆ ತನ್ನ ವಶಕ್ಕೆ ಪಡೆದುಕೊಂಡಿತು.

ವೀರಶೈವ ಲಿಂಗಾಯತ ಮತಗಳೇ ನಿರ್ಣಾಯಕವಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿಯೂ ಹಾಲಿ ಶಾಸಕರಿಗೆ ಟಿಕೆಟ್‌ ನೀಡದೆ 2008ರಲ್ಲಿ ಶಾಸಕರಾಗಿದ್ದ ಎಂ ಬಸವರಾಜ ನಾಯ್ಕ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಟಿಕೆಟ್‌ ತಪ್ಪಿದ್ದರಿಂದ ಎಚ್‌ ಆನಂದಪ್ಪ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಟಿಕೆಟ್‌ ಪಡೆದು ಸ್ಪರ್ಧೆಗಿಳಿದಿದ್ದಾರೆ. ಈ ಕಾರಣದಿಂದಾಗಿ ಕಾಂಗ್ರೆಸ್‌ಗೆ ಮತಗಳು ಹಂಚಿಕೆಯಾಗುವ ಆತಂಕ ಎದುರಾಗಿದೆ. ಜೊತೆಗೆ ಲಂಬಾಣಿ ಸಮುದಾಯದ ಸವಿತಾಬಾಯಿ ಮಲ್ಲೇಶ್ ನಾಯ್ಕ ಕೂಡ ಕಾಂಗ್ರೆಸ್‌ನಿಂದ ಬಂಡಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಹೊನ್ನಾಳಿ: ಕಾಂಗ್ರೆಸ್‌ – ಬಿಜೆಪಿ ನಡುವೇ ಹಣಾಹಣಿ

ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಕ್ಷೇತ್ರ ಎಂ ಪಿ ರೇಣುಕಾಚಾರ್ಯ ಪ್ರತಿನಿಧಿಸುವ ಹೊನ್ನಾಳಿ. ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು 2004ರಲ್ಲಿ ಭೇದಿಸಿದ ಬಿಜೆಪಿ, 2018ರವರೆಗೂ ನಿರಂತರವಾಗಿ ಗೆಲುವು ಸಾಧಿಸುತ್ತ ಬಂದಿದೆ. 2013ರಲ್ಲಿ ಕೆಜೆಪಿ ಸ್ಥಾಪನೆಯ ಕಾರಣಕ್ಕೆ ಇಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಆದರೆ 2018ರಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧಿಸಿತು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂ ಪಿ ರೇಣುಕಾಚಾರ್ಯ ಸ್ಪರ್ಧಿಸಿದ್ದಾರೆ. ಇವರಿಗೆ ಸಾಂಪ್ರದಾಯಿಕ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಡಿ ಜಿ ಶಾಂತನಗೌಡ ಕಣಕ್ಕಿಳಿದಿದ್ದಾರೆ. ಜೆಡಿಎಸ್ ಟಿಕೆಟ್ ಪಡೆದಿದ್ದ ಬಿ ಜಿ ಶಿವಮೂರ್ತಿಗೌಡ ಅಂತಿಮ ಕ್ಷಣದಲ್ಲಿ ನಾಮಪತ್ರ ಹಿಂಪಡೆದಿದ್ದರು.

2018ರಲ್ಲಿ ಎಂ ಪಿ ರೇಣುಕಾಚಾರ್ಯ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಕೇವಲ 4,233 ಮತಗಳ ಅಂತರದಲ್ಲಿ ಪ್ರಯಾಸದ ಗೆಲವು ಸಾಧಿಸಿದ್ದರು. ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿರುವ ರೇಣುಕಾಚಾರ್ಯ ಈ ಬಾರಿಯೂ ಗೆಲ್ಲಿಸಿದರೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯವುದಾಗಿ ಭರವಸೆ ನೀಡುತ್ತ ಪ್ರಚಾರದಲ್ಲಿ ತೊಡಗಿದ್ದಾರೆ. ಒಳಮೀಸಲಾತಿ ಕಾರಣದಿಂದಾಗಿ ಈ ಬಾರಿ ಅವರಿಗೆ ಲಂಬಾಣಿ ಮತಗಳು ಕೈತಪ್ಪುವ ಸಾಧ್ಯತೆ ಇದೆ. ಕಾಂಗ್ರೆಸ್‌ನ ಶಾಂತನಗೌಡ ಸಹ ಲಿಂಗಾಯತ ಸಮುದಾಯದವರಾಗಿದ್ದು, ಮತಗಳು ಹಂಚಿಹೋಗಲಿವೆ.

ಹೊನ್ನಾಳಿ ಕ್ಷೇತ್ರದಲ್ಲಿ ಲಿಂಗಾಯತ ಮತದಾರರೆ ಹೆಚ್ಚಿದ್ದು, ರಾಜ್ಯದಲ್ಲಿರುವ ಲಿಂಗಾಯತರ ಬಿಜೆಪಿ ವಿರುದ್ಧದ ಅಲೆಯಿಂದಾಗಿ ರೇಣುಕಾಚಾರ್ಯ ಅವರಿಗೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚಿದೆ. ಕುರುಬ ಸಮುದಾಯದ ಪ್ರಾಬಲ್ಯವು ಕ್ಷೇತ್ರದಲ್ಲಿದ್ದು, ಪರಿಶಿಷ್ಟರು, ಹಿಂದುಳಿದವರು ಹಾಗೂ ಕುಂಚಿಟಿಗ ಮತಗಳು ಕಾಂಗ್ರೆಸ್‌ಗೆ ವರದಾನವಾಗಲಿದೆಯೇ ಕಾದು ನೋಡಬೇಕಿದೆ.

ಹರಿಹರ: ಮತ್ತೊಮ್ಮೆ ಕೈ ವಶ?

ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಹರಿಹರ ವಿಧಾನಸಭಾ ಕ್ಷೇತ್ರದಿಂದ ಈವರೆಗೆ ಬಿಜೆಪಿ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಕಳೆದ ನಾಲ್ಕು ಚುನಾವಣೆಗಳನ್ನು ಗಮನಿಸಿದರೆ ಇಲ್ಲಿನ ಮತದಾರರು ಒಮ್ಮೆ ಗೆಲ್ಲಿಸಿದವರನ್ನು ಮತ್ತೆ ಗೆಲ್ಲಿಸಿಲ್ಲ.

ಹರಿಹರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಿ ಪಿ ಹರೀಶ್‌, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎನ್‌ ಎಚ್‌ ಶ್ರೀನಿವಾಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಯಾಗಿ ಎಚ್‌ ಎಸ್‌ ಶಿವಶಂಕರ್‌ ಚುನಾವಣಾ ಕಣದಲ್ಲಿದ್ದಾರೆ.

ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದರಿಂದ ಹಾಲಿ ಶಾಸಕ ಎಸ್ ರಾಮಪ್ಪ ಅವರಿಗೆ ಟಿಕೆಟ್‌ ಕೈತಪ್ಪಿತ್ತು. ಆದರೆ, ಉದ್ಯಮಿ ಎನ್ ಎಚ್ ಶ್ರೀನಿವಾಸ್‌ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಟಿಕೆಟ್‌ ಕೈತಪ್ಪಿದ್ದರಿಂದ ಹಾಲಿ ಶಾಸಕ ರಾಮಪ್ಪ ಬಂಡಾಯವೇಳದೆ ಹೈಕಮಾಂಡ್‌ ನಿರ್ಧಾರವನ್ನು ಗೌರವಿಸಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌ ಎಸ್‌ ಶಿವಶಂಕರ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಹರಿಹರ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಕುರುಬ ಸಮುದಾಯದ ಮತದಾರರದ್ದೇ ಪ್ರಾಬಲ್ಯವಿದ್ದು, ಈ ಬಾರಿ ಯಾರ ಕೈಹಿಡಿಯಲಿದ್ದಾರೆ ಕಾದು ನೋಡಬೇಕಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಲಿಪ್‌ಸ್ಟಿಕ್‌ ಹಾಕಿದ ಮಹಿಳೆಯರು ಮುಂದೆ ಬರುತ್ತಾರೆ’; ಮಹಿಳಾ ಮೀಸಲಾತಿ ಬಗ್ಗೆ ಆರ್‌ಜೆಡಿ ನಾಯಕ ಸೆಕ್ಸಿಸ್ಟ್ ಹೇಳಿಕೆ

ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರದಿಂದ ‘ಲಿಪ್‌ಸ್ಟಿಕ್‌ ಮತ್ತು ಬಾಬ್-ಕಟ್ ಹೇರ್ ಸ್ಟೈಲ್’...

ಮುಂಗಾರು ಅಂತ್ಯ; 236 ತಾಲೂಕುಗಳ ಪೈಕಿ 4 ತಾಲೂಕುಗಳಲ್ಲಷ್ಟೇ ಅತ್ಯಧಿಕ ಮಳೆ

ರಾಜ್ಯದಲ್ಲಿ ನೈರುತ್ಯ ಮುಂಗಾರು ಮಳೆಯ ಅವಧಿ ಇಂದಿಗೆ ಮುಗಿದಿದೆ. ಸಾಮಾನ್ಯವಾಗಿ ಜೂನ್...

ʼಗಾಂಧಿ ಗ್ರಾಮ ಪುರಸ್ಕಾರʼಕ್ಕೆ 233 ಗ್ರಾಮ ಪಂಚಾಯಿತಿ ಆಯ್ಕೆ: ಪ್ರಿಯಾಂಕ್‌ ಖರ್ಗೆ

ಅ.2ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪ್ರದಾನ 4 ಗ್ರಾಮ...

ನಿತೀಶ್ ಪ್ರಯಾಣಕ್ಕೆ ಸಂಚಾರ ತಡೆ; ಟ್ರಾಫಿಕ್‌ನಲ್ಲಿ ಸಿಲುಕಿದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಯಾಣಕ್ಕಾಗಿ ಪೊಲೀಸರು ರಸ್ತೆಯಲ್ಲಿ ಇತರ ವಾಹನ...