ಬಿಜೆಪಿಯಲ್ಲಿನ ಆಪ್ತರ ಪರ ಸುದೀಪ್ ಪ್ರಚಾರ
ಟಿಕೆಟ್ ಲಾಬಿ ಮಾಡಿಲ್ಲ ಎಂದ ಕಿಚ್ಚ
ಸ್ಟಾರ್ ನಟ ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಪರ ವಿರೋಧ ಚರ್ಚೆಗಳನ್ನು ಹುಟ್ಟು ಹಾಕಿದೆ. ಈ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ನಾನು ಬಿಜೆಪಿ ಸೇರುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸುದೀಪ್, “ನಾನು ಬಿಜೆಪಿಯನ್ನು ಸೇರುತ್ತಿಲ್ಲ. ಹಾಗಂತ ನಾನು ಯಾವುದೇ ಒಂದು ಪಕ್ಷದ ಪರವಾಗಿಯೂ ಇಲ್ಲ. ನನ್ನ ಕಷ್ಟ ಕಾಲದಲ್ಲಿ ಕೆಲ ವ್ಯಕ್ತಿಗಳು ನೆರವು ನೀಡಿದ್ದಾರೆ. ಹೀಗಾಗಿ ಅವರ ಪರವಾಗಿ ನಿಲ್ಲುವ ನಿರ್ಧಾರ ಕೈಗೊಂಡಿದ್ದೇನೆ” ಎಂದಿದ್ದಾರೆ.
“ನಾನೊಬ್ಬ ಕಲಾವಿದ ನನಗೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ. ಇತ್ತೀಚೆಗಷ್ಟೇ ಮೂರು ಸಿನಿಮಾಗಳನ್ನು ಘೋಷಿಸಿದ್ದೇನೆ. ಆ ಕೆಲಸಗಳಲ್ಲೇ ಬ್ಯುಸಿಯಾಗಿದ್ದೇನೆ. ಸದ್ಯದ ಮಟ್ಟಿಗೆ ಕೆಲವಷ್ಟು ವಿಚಾಗಳನ್ನು ಬಹಿರಂಗ ಪಡಿಸುವ ಹಾಗಿಲ್ಲ. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಯೋಜಿಸಿರುವ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲು ತೆರಳುತ್ತಿದ್ದೇನೆ. ಸುದ್ದಿಗೋಷ್ಠಿಯಲ್ಲೇ ನನ್ನ ನಿಲುವನ್ನು ಹೇಳುತ್ತೇನೆ” ಎನ್ನುವ ಮೂಲಕ ರಾಜಕೀಯ ಪ್ರವೇಶದ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ; ಪ್ರಕಾಶ್ ರಾಜ್
ಇದೇ ವೇಳೆ ನಿಮ್ಮ ಆಪ್ತರೊಬ್ಬರು ಚಿಕ್ಕಪೇಟೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಕೇಳಿದ್ದೀರಂತೆ ಹೌದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಸುದೀಪ್, “ಈ ಸುದ್ದಿ ಖಂಡಿತ ಸುಳ್ಳು. ನಾನು ಸ್ನೇಹಿತರ ಪರವಾಗಿ ಟಿಕೆಟ್ ಕೇಳುವ ವ್ಯಕ್ತಿ ಅಲ್ಲ. ಈವರೆಗೆ ನಾನು ಅಂತಹ ಕೆಲಸ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ. ಪಕ್ಷದಿಂದ ಟಿಕೆಟ್ ಕೊಡಿಸುವ ಮಟ್ಟಕ್ಕೆ ನಾನಿಲ್ಲ. ಬೇಕಿದ್ದರೆ ಯಾವುದಾದರೂ ಸಿನಿಮಾ ಟಿಕೆಟ್ ಕೊಡಿಸಬಲ್ಲೆ ಎಂದು ವ್ಯಂಗ್ಯವಾಡಿದ್ದಾರೆ.