ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ₹65,855 ನಿವ್ವಳ ಲಾಭ ಗಳಿಸಿದ್ದು, ಸಂಘವನ್ನು ಮತ್ತಷ್ಟು ಆರ್ಥಿಕವಾಗಿ ಬಲವರ್ಧನೆಗೊಳಿಸುವ ಉದ್ದೇಶದಿಂದ ಮುಂದಿನ ವರ್ಷದಿಂದ ಹೊಸ ವ್ಯಾಪಾರ ವಹಿವಾಟು ಆರಂಭಿಸಲು ಅನುಮೋದನೆ ಪಡೆಯಲಾಗಿದೆ.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸಂಘದ 10ನೇ ಸರ್ವ ಸದಸ್ಯರ ಸಭೆ, ‘ಅಭ್ಯುದಯ ಸಹಕಾರಿ ರತ್ನ’ ಪ್ರಶಸ್ತಿ ಪ್ರದಾನ ಹಾಗೂ ವೈದ್ಯಕೀಯ ಉಪಕರಣ ವಿತರಣೆ ಸಮಾರಂಭವನ್ನು ಹಿರಿಯ ಸಹಕಾರಿ ಹಾಗೂ ಹುಣಸೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ. ಅಮರನಾಥ್ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳು ಆರ್ಥಿಕ ಸ್ವಾವಲಂಬನೆಯ ಹೆಬ್ಬಾಗಿಲುಗಳಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತಿದ್ದು, ಇದರಿಂದ ಅನೇಕ ಸಂಘಗಳು ನ್ಯಾಯಾಲಯದ ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸಹಕಾರ ತತ್ವಕ್ಕೆ ಧಕ್ಕೆ ಉಂಟುಮಾಡುತ್ತಿದೆ ಎಂದು ವಿಷಾದಿಸಿದರು. ಸಹಕಾರ ಸಂಘಗಳನ್ನು ಮುನ್ನಡೆಸುವುದು ಸವಾಲಿನ ಕೆಲಸ. ಇಂತಹ ಸಂದರ್ಭದಲ್ಲಿ ಹತ್ತು ವರ್ಷ ಪೂರೈಸುವ ಮುನ್ನವೇ ಪತ್ರಕರ್ತರ ಸಹಕಾರ ಸಂಘ ಲಾಭದ ಹಾದಿಯಲ್ಲಿ ಸಾಗುತ್ತಿರುವುದು ಸಂತೋಷದ ಸಂಗತಿ. ಇದಕ್ಕೆ ಅಧ್ಯಕ್ಷರ ಬದ್ಧತೆ ಹಾಗೂ ಸದಸ್ಯರ ಸಹಕಾರ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ಹಾಗೂ ನೇರಳೆಕುಪ್ಪೆ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಮಹದೇವ ಎನ್.ಕೆ. ಅವರಿಗೆ ಈ ಸಾಲಿನ ‘ಅಭ್ಯುದಯ ಸಹಕಾರಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹೆಚ್.ಎಸ್. ಪ್ರಶಾಂತ್ ತಾತಾಚಾರ್, ಹತ್ತು ವರ್ಷಗಳ ಅಂತರದಲ್ಲಿ ಪತ್ರಕರ್ತರ ಸಹಕಾರ ಸಂಘ ಲಾಭ ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಆರ್ಥಿಕ ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಸಂಘವನ್ನು ಮುನ್ನಡೆಸಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.

ಪತ್ರಕರ್ತರ ಸಹಕಾರ ಸಂಘ ಹತ್ತನೇ ವರ್ಷಕ್ಕೆ ಕಾಲಿರಿಸಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಹೊಸ ವ್ಯಾಪಾರ ವಹಿವಾಟು ಆರಂಭಿಸಿ ಸಂಘವನ್ನು ಆರ್ಥಿಕವಾಗಿ ಬಲವರ್ಧನೆಗೊಳಿಸಲು ಅನುಮೋದನೆ ಪಡೆಯಲಾಗಿದೆ ಎಂದು ಅಧ್ಯಕ್ಷ ಕೆ. ದೀಪಕ್ ತಿಳಿಸಿದರು. ಸದಸ್ಯರಿಗೆ ದಿನಬಳಕೆಯ ವಸ್ತುಗಳನ್ನು ಜನತಾ ಬಜಾರ್ ಮಾದರಿಯಲ್ಲಿ ಮಾರಾಟ ಮಾಡುವುದರ ಜತೆಗೆ ಖಾದಿ ಉತ್ಪನ್ನಗಳ ಮಾರಾಟ ಆರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದರು. ಒಂಬತ್ತು ವರ್ಷಗಳ ಸತತ ಪ್ರಯತ್ನದ ಫಲವಾಗಿ ಸಂಘವು 2025-26ನೇ ಸಾಲಿನಲ್ಲಿ ₹65,855 ನಿವ್ವಳ ಲಾಭ ಗಳಿಸಿದೆ. ಇದುವರೆಗೆ 150ಕ್ಕೂ ಹೆಚ್ಚು ಸದಸ್ಯರಿಗೆ ಸುಮಾರು ₹40 ಲಕ್ಷ ಸಾಲ ಸೌಲಭ್ಯ ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸಾಲ ವಸೂಲಾತಿಯಲ್ಲಿ ಪ್ರಗತಿ ಸಾಧಿಸಿ, ಆರ್ಥಿಕ ಶಿಸ್ತು ಕಾಪಾಡಿರುವ ಪರಿಣಾಮ ಸಂಘ ಲಾಭದ ದಿಕ್ಕಿನಲ್ಲಿ ಸಾಗಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
This video cannot be played in your browser. Open the video directly
ಈ ವಿಶೇಷ ವರದಿ ಓದಿದ್ದೀರಾ? ಗ್ರೌಂಡ್ ರಿಪೋರ್ಟ್ | ‘ಕಟ್ ಅಂಡ್ ಪೇಸ್ಟ್’ ವೀಡಿಯೊಗಳ ಹಿಂದೆ ಸಮಾಜದ ನೆಮ್ಮದಿ ಕಳೆದುಕೊಳ್ಳಬಾರದು
ಇದೇ ಸಂದರ್ಭದಲ್ಲಿ ರಾಜ್ಯ ಪತ್ರ ಬರಹಗಾರರ ಸಂಘದ ಉಪಾಧ್ಯಕ್ಷ ಎಂ.ಎಸ್. ಧನಂಜಯ ಅವರು ಆರೋಗ್ಯ ತಪಾಸಣಾ ಉಪಕರಣಗಳನ್ನು ವಿತರಿಸಿ ಸಂಘಕ್ಕೆ ಶುಭ ಹಾರೈಸಿದರು.

ಈ ವಿಶೇಷ ವರದಿ ಓದಿದ್ದೀರಾ? ಗ್ರೌಂಡ್ ರಿಪೋರ್ಟ್ | ಪೊಲೀಸ್ ಸೂಚನೆ ಸುತ್ತ ವಿವಾದ: ಶಾಂತಿ ಕಾಪಾಡುವ ಕರ್ತವ್ಯಕ್ಕೆ ರಾಜಕೀಯ ಬಣ್ಣ ಬೇಡವೆಂದ ಸ್ಥಳೀಯರು
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಹನಗೋಡು ನಟರಾಜ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ನಿರ್ದೇಶಕ ಧರ್ಮಾಪುರ ನಾರಾಯಣ್, ನಿರ್ದೇಶಕರಾದ ಹೆಚ್.ಎಸ್. ದಿನೇಶ್ ಕುಮಾರ್, ಮುಕುಂದ, ಕೆಂಪೇಗೌಡ, ಪ್ರಗತಿ ಗೋಪಾಲಕೃಷ್ಣ, ಯಶವಂತ ಸಾಲಿಗ್ರಾಮ, ಕಬಿನಿ ಮಂಜು, ನಂಜುಂಡಯ್ಯ, ಜಯಶಂಕರಮೂರ್ತಿ, ಅಫ್ಸರ್ ಪಾಷ, ಜ್ಯೋತಿ ಜಯಸೇನಾ, ಶಿಲ್ಪ ಹಾಗೂ ಕಾರ್ಯದರ್ಶಿ ವನಿತಾಶ್ರೀ ಎನ್.ಕೆ. ಇದ್ದರು.





