ಹಳ್ಳಿ ಹೈದನ ಪಾತ್ರದಲ್ಲಿ ಮಿಂಚಿದ ರಿಷಿ
ಗಮನ ಸೆಳೆಯುತ್ತಿದೆ ಚಿತ್ರದ ಟೀಸರ್
ʼಆಪರೇಶನ್ ಅಲಮೇಲಮ್ಮʼ ಖ್ಯಾತಿಯ ನಟ ರಿಷಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ʼರಾಮನ ಅವತಾರʼ ಚಿತ್ರದ ಟೀಸರ್ ಸೋಮವಾರ ಬಿಡುಗಡೆಯಾಗಿದೆ. ಪ್ರತಿ ಚಿತ್ರಗಳಲ್ಲೂ ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ರಿಷಿ ಈ ಬಾರಿ ಹಳ್ಳಿ ಹೈದನ ವೇಷ ತೊಟ್ಟಿದ್ದಾರೆ.
ʼರಾಮನ ಅವತಾರʼ ಚಿತ್ರ ಹಾಸ್ಯಪ್ರಧಾನ ಕಥಾಹಂದರವನ್ನು ಹೊಂದಿದೆ ಎಂಬುದನ್ನು ಟೀಸರ್‌ನಲ್ಲಿ ಸೂಚ್ಯವಾಗಿ ತೋರಿಸಲಾಗಿದೆ. ಪ್ರೇಮ ಕಥೆ ಮತ್ತು ತೆಳು ಹಾಸ್ಯವನ್ನು ಒಳಗೊಂಡಿರುವ ಎರಡೂವರೆ ನಿಮಿಷಗಳ ಈ ಟೀಸರ್ ಸದ್ಯ ಸಿನಿ ರಸಿಕರ ಗಮನ ಸೆಳೆಯುತ್ತಿದೆ.
ವಿಕಾಸ್ ಪಂಪಾಪತಿ ನಿರ್ದೇಶನದಲ್ಲಿ ಮೂಡಿಬಂದಿರುವ ʼರಾಮನ ಅವತಾರʼ ಚಿತ್ರದಲ್ಲಿ ಪ್ರಣಿತಾ ಸುಭಾಷ್ ಮತ್ತು ಶುಭ್ರ ಅಯ್ಯಪ್ಪ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅರುಣ್ ಸಾಗರ್, ಅನಿರುದ್ಧ್ ಆಚಾರ್ಯ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಮ್ರೇಜ್ ಸೂರ್ಯವಂಶಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಜುಡಾ ಸ್ಯಾಂಡಿ ಸಂಗೀತ ಸಂಯೋಜನೆಯ ಹೊಣೆ ಹೊತ್ತುಕೊಂಡಿದ್ದಾರೆ.
ʼಆಪರೇಶನ್ ಅಲಮೇಲಮ್ಮʼ ಮತ್ತು ʼಕವಲುದಾರಿʼ ಚಿತ್ರಗಳ ಬಳಿಕ ರಿಷಿ ನಟನೆಯ ʼಸಾರ್ವಜನಿಕರಿಗೆ ಸುವರ್ಣಾವಕಾಶʼ, ʼನೋಡಿ ಸ್ವಾಮಿ ಇವನು ಇರೋದು ಹೀಗೆʼ ಚಿತ್ರಗಳು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಹೀಗಾಗಿ ʼರಾಮನ ಅವತಾರʼ ಚಿತ್ರ ರಿಷಿ ಪಾಲಿಗೆ ಮಹತ್ವ ಎನ್ನಿಸಿದೆ.