SIR ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರೊಂದಿಗೆ ಚರ್ಚೆ ನಡೆಸುತ್ತಿದ್ದೇನೆ. ಮುಖ್ಯವಾಗಿ ರಾಹುಲ್ ಗಾಂಧಿಯವರು ಈ ವಿಚಾರವಾಗಿ ಕೆಲಸ ಮಾಡುತ್ತಿದ್ದಾರೆ. ಗ್ರಾಮ ಸಭೆಗಳಲ್ಲಿ ರೆಸಿಡೆನ್ಸಿಯಲ್ ಡಾಕ್ಯುಮೆಂಟ್ ನೀಡಬೇಕೆಂದು ಮುಖ್ಯಮಂತ್ರಿಗಳು ಈಗಾಗಲೇ ಸೂಚಿಸಿದ್ದಾರೆ. RSS-BJPಯ ಷಡ್ಯಂತ್ರ ಸೋಲಿಸಲು 2ನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ಮಾತನಾಡಿದ ಅವರು, “ನಾನು ರಾಜಕೀಯಕ್ಕೆ ಬಂದಿರುವುದೇ ಇಂತಹ ಭೇದಭಾವಗಳನ್ನು ತೊಡೆದುಹಾಕಲು. ವಿದ್ಯಾರ್ಥಿ ದೆಸೆಯಿಂದಲೂ ಅನ್ಯಾಯಗಳನ್ನು ಕಂಡಿದ್ದೇನೆ. ದಕ್ಷಿಣ ಭಾರತೀಯರನ್ನು ಮುಂಬೈನಿಂದ ಹೊರಗಿಟ್ಟಿದ್ದು, ನಂತರ ಗುಜರಾತಿಗಳನ್ನು, ಆಮೇಲೆ ಅಲ್ಪಸಂಖ್ಯಾತರನ್ನು ಬಾಂಗ್ಲಾದೇಶಿಗಳೆಂದು ಕರೆದು ಹೊರದೂಡಲು ಮುಂದಾಗಿದ್ದು.. ಇವೆಲ್ಲವೂ ವ್ಯವಸ್ಥಿತ ಹುನ್ನಾರಗಳು. ಚುನಾವಣಾ ಬೂತ್‌ಗಳಲ್ಲಿ ದಲಿತರು ಮತ್ತು ತಳಸಮುದಾಯದವರ ಮತಗಳನ್ನು ಅಳಿಸಿ ಹಾಕುತ್ತಿದ್ದ ದೃಶ್ಯಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ” ಎಂದರು ಹರಿಪ್ರಸಾದ್.
“ಸಂವಿಧಾನ ವಿರೋಧಿ ಶಕ್ತಿಗಳು ದೇಶದ ಏಕತೆಯನ್ನು ಒಡೆಯಲು ಹೊಂಚು ಹಾಕುತ್ತಿದ್ದಾರೆ. ಇವರೇ ದೇಶಪ್ರೇಮಿಗಳು ಎಂದು ಕಥೆಗಳನ್ನು ಹೆಣೆಯುತ್ತಾರೆ. ಅಂದಿನ ಕಾಲದ ರಾಜರು-ಮಂತ್ರಿಗಳು ಶ್ರಮಿಕರನ್ನು ನಿರ್ಲಕ್ಷಿಸಿದ್ದರಿಂದಲೇ ದೇಶ ಲೂಟಿಯಾಯಿತು. ಇಂದು ಅದೇ ತಪ್ಪು ಮರುಕಳಿಸುತ್ತಿದೆ. ಬಿಜೆಪಿಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ, ಇಂತಹ ಜನವಿರೋಧಿ ನೀತಿಗಳಿಂದಾಗಿ ನಾಳೆ ದೇಶವನ್ನು ರಕ್ಷಿಸಲು ಜನರೇ ಸಿಗುವುದಿಲ್ಲ. ಪ್ರಧಾನಿ ಮೋದಿಯವರ ಡಿಗ್ರಿ ಸರ್ಟಿಫಿಕೇಟ್ ಇನ್ನೂ ಸಿಕ್ಕಿಲ್ಲ, ಆದರೆ ದೇಶದ ಜನರಿಂದ ಮಾತ್ರ ಪ್ರತಿಯೊಂದು ದಾಖಲೆಯನ್ನು ಇವರು ಕೇಳುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ: ಹಿರಿಯ ಸಾಹಿತಿ ಲಲಿತಾ ನಾಯ್ಕ್
“ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳಲ್ಲಿ ಬಲಪಂಥೀಯರೇ ತುಂಬಿದ್ದಾರೆ. ಜ್ಞಾನ ಕುಮಾರ್ ಅಂತಹ ಅಧಿಕಾರಿಗಳು ಜನಪ್ರತಿನಿಧಿಗಳನ್ನೇ ಭೇಟಿಯಾಗುವುದಿಲ್ಲ ಎಂದರೆ ನ್ಯಾಯಯುತ ಮತದಾನವನ್ನು ಇವರಿಂದ ನಿರೀಕ್ಷಿಸಲು ಸಾಧ್ಯವೇ? ಆರ್‌ಎಸ್‌ಎಸ್ ಮಂದಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇರಲಿಲ್ಲ, ಇವತ್ತು ಸಂವಿಧಾನವನ್ನು ಮೊಟಕುಗೊಳಿಸಲು ಎಲ್ಲಾ ರೀತಿಯ ಷಡ್ಯಂತ್ರಗಳನ್ನು ಮಾಡುತ್ತಿದ್ದಾರೆ. ಈ ಹೋರಾಟ ಕೇವಲ ಮುಖ್ಯಮಂತ್ರಿಗಳೊಬ್ಬರಿಂದ ಸಾಧ್ಯವಿಲ್ಲ, ಇದಕ್ಕಾಗಿ ಎರಡನೇ ಸ್ವಾತಂತ್ರ್ಯ ಸಂಗ್ರಾಮವೇ ನಡೆಯಬೇಕಿದೆ” ಎಂದು ಅವರು ಕರೆ ನೀಡಿದರು.




