ರಾಮಮಂದಿರದಲ್ಲಿ ಬಿಜೆಪಿ, ಆರ್‌ಎಸ್‌ಎಸ್, ಸಂಘಪರಿವಾರದ ನಾಯಕರು ನಡೆಸಿರುವ ಲೂಟಿ ಸದ್ಯ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್, “ಬಾಯಿ ಬಿಟ್ಟರೆ ಮುಖವಾಡ ಕಳಚುವ ಭಯವೇ” ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, “ಬಿ.ಕೆ. ಹರಿಪ್ರಸಾದ್ ಅವರಿಗೆ ಸಾಮಾನ್ಯ ಜ್ಞಾನವಿಲ್ಲ” ಎಂದು ವ್ಯಂಗ್ಯವಾಡಿದ್ದರು. ಈ ಸಂಬಂಧ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಹರಿಪ್ರಸಾದ್, “ನಿಮ್ಮಿಂದ ಸಾಮಾನ್ಯ ಜ್ಞಾನ ಹೇಳಿಸಿಕೊಳ್ಳುವ ದುರ್ಗತಿ ನನಗಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ ರಾಮಮಂದಿರ ವಿಚಾರದಲ್ಲಿ ಮಾತನಾಡದ ಜೋಶಿ ಅವರನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಗೋಧ್ರಾ ರೀತಿ ದುರಂತ ಸಂಭವಿಸಬಹುದು: ಬಿ ಕೆ ಹರಿಪ್ರಸಾದ್ ಎಚ್ಚರಿಕೆ
“ಭಾಷಾ ಪ್ರಖಂಡ ಪಂಡಿತ”, “ಜ್ಞಾನ ಭಂಡಾರದ ಶಿಖರ”, “ಸಾರ್ವಜನಿಕ ಜೀವನದ ಸಾಕಾರಮೂರ್ತಿಯೇ” ಆಗಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಯಿಂದ ಸಾಮಾನ್ಯ ಜ್ಞಾನ ಹೇಳಿಸಿಕೊಳ್ಳುವ ದುರ್ಗತಿ ನನಗಂತೂ ಬಂದಿಲ್ಲ, ಬರುವುದೂ ಇಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ.
“ಯಡಿಯೂರಪ್ಪನವರು ಪಕ್ಷ ತೊರೆದು, ಹೊಸ ಪಕ್ಷ ಕಟ್ಟಿದಾಗ ಇದೇ ಜೋಶಿ, ಸಾರ್ವಜನಿಕವಾಗಿ ಆಡಿರುವ ಮಾತುಗಳು ಒಂದೊಂದು ಆಣಿಮುತ್ತುಗಳು ಎಂಬುದನ್ನು ಮರೆತಿದ್ದಾರೆ” ಎಂದು ಜೋಶಿ ಕಾಲೆಳೆದಿದ್ದಾರೆ.
“ಯಾರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ ಮಾಡಿದ್ದಿರೋ, ಇಂದು ಅವರೇ ನಿಮ್ಮ ರಾಜಕೀಯದ ಪರಮ ಪೂಜ್ಯರು! ಹಿಂದೆ ಯಾರನ್ನು ರಾಜಕೀಯವಾಗಿ ನೆಲಸಮ ಮಾಡಿದ್ದೀರೋ, ಇಂದು ಅವರ ಪಾದಪೂಜೆ ಮಾಡುತ್ತಿರುವುದು ನಿಮ್ಮ ‘ಸಾಮಾನ್ಯ ಜ್ಞಾನದ’ ಪರಮಾವಧಿಯೇ” ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
“ಅಯೋಧ್ಯೆ ಶ್ರೀರಾಮನ ಹೆಸರಿನಲ್ಲಿ ನಿರ್ಮಾಣವಾದ ದೇವಸ್ಥಾನದ ಕಾಮಗಾರಿ ವೆಚ್ಚ ಹಾಗೂ ನಿರ್ವಹಣೆಯಲ್ಲಿ ನಡೆದಿರುವ ಕೋಟ್ಯಾಂತರ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ಬಿಜೆಪಿ ನಾಯಕರಿಗೆ ಯೋಗ್ಯತೆ ಇದೆಯೇ” ಎಂದೂ ಕೇಳಿದ್ದಾರೆ.
“ನಾ ಖಾವೂಂಗಾ, ನಾ ಖಾನೇ ದೂಂಗಾ” ಎಂದು ಬೊಬ್ಬೆ ಹೊಡೆದಿದ್ದವರು ಈಗ ಬಾಯ್ತೆರೆದು ಮಾತಾಡುವುದು ಬಿಡಿ, ಮುಖ ಕೂಡ ತೋರಿಸುತ್ತಿಲ್ಲ ಯಾಕೆ? ಬಾಯಿ ಬಿಟ್ಟರೆ ಮುಖವಾಡ ಕಳಚುವ ಭಯವೇ” ಎಂದು ಪ್ರಶ್ನಿಸಿದ್ದಾರೆ.
“ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು ಮತಗಳನ್ನು ಕೇಳಿ ಪಡೆದವರು, ಅದೇ ಶ್ರೀರಾಮನಿಗೆ ಜನ ಸಾಮಾನ್ಯರು ನೀಡಿದ ದೇಣಿಗೆಯ ಒಂದೊಂದು ರೂಪಾಯಿಯ ಲೆಕ್ಕಕೊಡಲು ಬಿಜೆಪಿ ನಾಯಕರಿಗೆ ಧೈರ್ಯ ಇಲ್ಲವೇ?” ಎಂದು ಫೇಸ್‌ಬುಕ್‌ನಲ್ಲಿ ಹರಿಪ್ರಸಾದ್ ಪೋಸ್ಟ್ ಮಾಡಿದ್ದಾರೆ.
“ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರ ಕೊಡದೆ ಇರುವುದು ಸಾರ್ವಜನಿಕ ಭಾಷಾ ಪಂಡಿತರ ಸಾಮಾನ್ಯ ಜ್ಞಾನದ ಪರಿಮಿತಿಗೆ ಬರುವುದಿಲ್ಲವೇ? ರಾಮನ ಹೆಸರನ್ನು ರಾಜಕೀಯಕ್ಕೆ ಬಳಸಬಹುದು; ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.




