ಕರ್ನಾಟಕ ಏಕೀಕರಣವು ದಕ್ಷಿಣ ಕರ್ನಾಟಕಕ್ಕೆ ಅನುಕೂಲವಾಗಲಿಲ್ಲ. ಏಕೆಂದರೆ ದಕ್ಷಿಣ ಮತ್ತು ಉತ್ತರ ಕರ್ನಾಟಕ ಒಂದಾಗಬಾರದು ಎಂಬುದೇ ಅವರ ನಿಲುವಾಗಿತ್ತು. ಏಕೀಕರಣದಿಂದ ರಾಜಕೀಯ ಪ್ರಾಭಲ್ಯ ಕಳೆದುಕೊಳ್ಳುವ ಭಯದಿಂದ ದಕ್ಷಿಣ ಕರ್ನಾಟಕ ಏಕೀಕರಣವನ್ನು ಬಯಸಲಿಲ್ಲ ಎಂದು ಹೊಸತು ಪತ್ರಿಕೆ ಸಂಪಾದಕರು ಸಿದ್ದನಗೌಡ ಪಾಟೀಲ್ ಅಭಿಪ್ರಾಯಿಸಿದರು.
ಧಾರವಾಡ ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಘ ರಾ.ಹ ದೇಶಪಾಂಡೆ ಸಭಾ ಭವನದಲ್ಲಿ ಅಖಂಡ ಕರ್ನಾಟಕ; “ಪ್ರಾದೇಶಿಕ ಅಸಮತೋಲನ” ಸವಾಲುಗಳು-ಪರಿಹಾರಗಳು, ಚಿಂತನಾ ಸಮಾವೇಶದಲ್ಲಿ ಅವರು ಮಾತನಾಡಿದರು.
“ಏಕೀಕರಣದ ನಂತರವೂ ಉತ್ತರ ಕರ್ನಾಟಕದಲ್ಲಿ ಪ್ಯೂಡಲ್ ರಾಜಕಾರಣ ಮುಂದುವರಿದಿದೆ, ಶಾಲೆ, ಕುಡಿಯುವ ನೀರು, ಆಸ್ಪತ್ರೆ, ಆಹಾರ ಸೌಲಭ್ಯಗಳು ಉಳ್ಳವರಿಗೆ ಮಾತ್ರ ದೊರೆಯುತ್ತಿವೆ. ಹೈದರಾಬಾದ್ ಕರ್ನಾಟಕ ಪ್ರದೇಶದ ಜನರಿಗೆ ಇವು ಸಿಗುತ್ತಿಲ್ಲ. ಪ್ಯೂಡಲ್ ಮನಸ್ಥಿತಿ ದಲಿತರಿಂದ ಹಿಡಿದು ಮೇಲ್ವರ್ಗದವರವರೆಗೂ ಇದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಪ್ರೊ. ಎಂ. ಗೋವಿಂದರಾವ್ ಅವರ ವರದಿಯಲ್ಲಿ ಉತ್ತರ ಕರ್ನಾಟಕದಲ್ಲಿ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುತ್ತಿರುವುದು ಸ್ಪಷ್ಟವಾಗಿದೆ. ವಿದ್ಯುತ್ ಸರಬರಾಜನ್ನೂ ಖಾಸಗೀಕರಣಕ್ಕೆ ತಳ್ಳಲು ಹೊರಟಿದ್ದಾರೆ. ಏಕೀಕರಣದ ನಂತರ ಉತ್ತರ ಕರ್ನಾಟಕದಿಂದ ಅನೇಕರು ಮುಖ್ಯಮಂತ್ರಿಗಳಾದರೂ ಪ್ಯೂಡಲ್ ರಾಜಕಾರಣದಿಂದ ಅಭಿವೃದ್ಧಿ ಸಾಧ್ಯವಾಗಲಿಲ್ಲ” ಎಂದು ಆರೋಪಿಸಿದರು.
“ನೀರು, ವಿದ್ಯುತ್, ಶಿಕ್ಷಣ ಎಲ್ಲವೂ ಖಾಸಗೀಕರಣಗೊಳ್ಳುತ್ತಿದೆ. ಜಿಂದಾಲ್ ಕಾರ್ಖಾನೆಗೆ ನೀರು ಒದಗಿಸಲಾಗುತ್ತಿದೆ, ಆದರೆ ಅದೇ ಪ್ರದೇಶದ ಜನರಿಗೆ ಕುಡಿಯುವ ನೀರೂ ಸಿಗುತ್ತಿಲ್ಲ” ಎಂದರು.
“ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು. ಸಕ್ಕರೆ ಕಾರ್ಖಾನೆಗಳನ್ನು ಬಿಟ್ಟು ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು” ಎಂದು ಸಲಹೆ ನೀಡಿದರು.




