ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು ತಮ್ಮ ಪಕ್ಷದ ಎಲ್ಲಾ ಪ್ರಮುಖ ಹುದ್ದೆಗಳಿಗೆ ಶನಿವಾರ ರಾಜೀನಾಮೆ ನೀಡಿದ್ದಾರೆ. ಅವರ ವೈಯಕ್ತಿಕ ಸಹಾಯಕ (ಪಿಎ) ಹಾಗೂ ಮಾಜಿ ವಿಶೇಷ ಕರ್ತವ್ಯಾಧಿಕಾರಿ (OSD) ಚಂದನ್ ಸಿಂಗ್ ಜೀನಾ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಬಳಿಕ ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದೆ. ಈ ಬೆನ್ನಲ್ಲೇ ರಾವತ್ ಈ ನಿರ್ಧಾರ ತಳೆದಿದ್ದಾರೆ.
2016ರ ಉತ್ತರಾಖಂಡ ಅಧೀನ ಸೇವೆಗಳ ಆಯ್ಕೆ ಆಯೋಗದ (UKSSSC) ನೇಮಕಾತಿ ಅಕ್ರಮ ಮತ್ತು ಹಣಕಾಸು ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಡೆಹರಾಡೂನ್‌ನಲ್ಲಿರುವ ಚಂದನ್ ಸಿಂಗ್ ಜೀನಾ ಅವರ ಮನೆ ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದರು.
ಇದನ್ನೂ ಓದಿ: ಕೋಲಾರ | ನೀಟ್ ಸೋರಿಕೆ ಪ್ರಕರಣ; ಕೇಂದ್ರ ಸಚಿವ ಪ್ರಧಾನ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಈ ವೇಳೆ ಅಧಿಕಾರಿಗಳು ₹32 ಲಕ್ಷ ನಗದು, 200.5 ಗ್ರಾಂ ತೂಕದ ಚಿನ್ನದ ನಾಣ್ಯ ಹಾಗೂ ಸರಗಳು, ರೋಲೆಕ್ಸ್ ಮತ್ತು ರಾಡೋದಂತಹ 12 ಐಷಾರಾಮಿ ಕೈಗಡಿಯಾರಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ, ಜೀನಾ ಮತ್ತು ಅವರ ಕುಟುಂಬಸ್ಥರ ಖಾತೆಯಲ್ಲಿದ್ದ ₹52.16 ಲಕ್ಷ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಘಟನೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡ ಹರೀಶ್ ರಾವತ್, “ಪಕ್ಷವು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವಾಗ, ನನ್ನಿಂದ ಅಥವಾ ನನ್ನ ಸಹವರ್ತಿಗಳ ಮೇಲಿನ ಆರೋಪದಿಂದಾಗಿ ಪಕ್ಷದ ಹೋರಾಟ ದುರ್ಬಲಗೊಳ್ಳಬಾರದು. ಆದ್ದರಿಂದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಕಾಯಂ ಆಹ್ವಾನಿತ ಸದಸ್ಯತ್ವ ಹಾಗೂ ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯತ್ವಕ್ಕೆ ಗೌರವಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ತಮ್ಮ ಮಾಜಿ ಸಹಾಯಕರ ಮೇಲಿನ ಆರೋಪಗಳನ್ನು ತಳ್ಳಿಹಾಕಿರುವ ರಾವತ್, “ಜೀನಾ ಅತ್ಯಂತ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಿ ವ್ಯಕ್ತಿ. ಅವರ ಮೇಲಿನ ಆರೋಪಗಳನ್ನು ನಾನು ನಂಬುವುದಿಲ್ಲ” ಎಂದು ಹೇಳಿದ್ದಾರೆ. ಆದರೆ, “ಒಂದು ವೇಳೆ ನೇಮಕಾತಿ ಪರೀಕ್ಷೆಯ ಒಎಂಆರ್ (OMR) ಶೀಟ್‌ಗಳಲ್ಲಿ ಅಕ್ರಮ ಎಸಗಿರುವುದು ಸಾಬೀತಾದರೆ, ಅಂತಹ ಕೃತ್ಯಕ್ಕೆ ನನಗೆ ನಾಚಿಕೆಯಾಗುತ್ತದೆ” ಎಂದೂ ಸೇರಿಸಿದ್ದಾರೆ. ಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಬೆಂಬಲಿಗರನ್ನು ಗುರಿಯಾಗಿಸಿ ರಾಜಕೀಯ ಷಡ್ಯಂತ್ರ ಹೆಣೆಯಲಾಗುತ್ತಿದೆ ಎಂದೂ ಆರೋಪಿಸಿದ್ದಾರೆ.





