ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ವಿಸ್ತೃತ ಸಚಿವ ಸಂಪುಟ ರಚನೆಯಾಗಿದೆ. ಆದರೆ, ಸಂಪುಟದಲ್ಲಿ ಒಬ್ಬರೂ ಮಹಿಳೆಯರಿಲ್ಲ. ಜೊತೆಗೆ, ಸುಮಾರು 8 ಜಿಲ್ಲೆಗಳಿಗೆ ಯಾವುದೇ ಪ್ರಾತಿನಿಧ್ಯವೂ ದೊರೆತಿಲ್ಲ. ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ದೊರೆಯದೇ ಇರುವುದು ಮತ್ತು ಕೆಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಡದೇ ಇರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಅರ್ಧದಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಮಹಿಳೆಯರಿಗೆ ಸಂಪುಟದಲ್ಲಿ ಯಾವುದೇ ಸ್ಥಾನ ನೀಡಲಾಗಿಲ್ಲ. ಇದು ನೂತನ ಸಂಪುಟದ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಲು ಪ್ರಮುಖ ಕಾರಣವಾಗಿದೆ.
ಸೋಮವಾರ ಬೆಳಗ್ಗೆ ಪ್ರಕಟವಾದ ಪಟ್ಟಿಯಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರಿತ್ತು. ಆದರೆ, ಪ್ರಮಾಣವಚನ ಸ್ವೀಕರಿಸುವ ವೇಳೆಗೆ, ಅವರ ಹೆಸರನ್ನು ತಡೆಹಿಡಿಯಲಾಗಿದೆ. ಸೋಮವಾರ ಸಂಜೆ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಲಿಲ್ಲ. ಹೀಗಾಗಿ, ಇಡೀ ಸಂಪುಟದಲ್ಲಿ ಮಹಿಳೆಯರ ಪಾಲುದಾರಿಕೆಯೇ ಇಲ್ಲದಂತಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಸಂಪುಟದಲ್ಲಿ ಮಹಿಳೆಯರನ್ನು ಕಡೆಗಣಿಸಿರುವುದು ಕಾಂಗ್ರೆಸ್‌ನ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಮಹಿಳಾ ಪ್ರಾತಿನಿಧ್ಯದ ಕುರಿತು ನಿರಂತರವಾಗಿ ಮಾತನಾಡುತ್ತಾರೆ. ಆದರೆ, ತಮ್ಮ ಪಕ್ಷದ ಸರ್ಕಾರದಲ್ಲಿ ಮಹಿಳೆಯರಿಗೆ ಅವಕಾಶ ನೀಡದೇ ಇರುವುದರ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.
ಇನ್ನು, ಪ್ರಾದೇಶಿಕ ಪ್ರಾತಿನಿಧ್ಯದಲ್ಲೇ ಅಸಮಾನತೆ ಎದ್ದು ಕಾಣುತ್ತಿದೆ. ಸಂಪುಟದಲ್ಲಿ ರಾಜಧಾನಿ ಬೆಂಗಳೂರು ನಗರ ಜಿಲ್ಲೆಗೆ ಸಿಂಹಪಾಲು ಲಭಿಸಿದ್ದು, ಬೆಂಗಳೂರಿಗೆ ಒಟ್ಟು ಆರು ಸಚಿವ ಸ್ಥಾನಗಳು ಲಭಿಸಿವೆ. ಇನ್ನು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆಯಾದ ಕಲಬುರಗಿಗೆ ಮೂರು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಬೆಳಗಾವಿ, ಕೊಪ್ಪಳ, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳು ತಲಾ ಎರಡು ಸಚಿವ ಸ್ಥಾನಗಳನ್ನು ಪಡೆದುಕೊಂಡಿವೆ.
ಅಂತೆಯೇ, ಬಾಗಲಕೋಟೆ, ಹಾಸನ, ಬಳ್ಳಾರಿ, ಬೀದರ್, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಹಾವೇರಿ, ಮೈಸೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಹಾಗೂ ವಿಜಯಪುರ ಸೇರಿದಂತೆ ಒಟ್ಟು 17 ಜಿಲ್ಲೆಗಳಿಗೆ ತಲಾ ಒಂದು ಸಚಿವ ಸ್ಥಾನ ಹಂಚಿಕೆಯಾಗಿದೆ.
ಆದರೆ, ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಪ್ರಾದೇಶಿಕ ಸಮತೋಲನದ ದೃಷ್ಟಿಯಿಂದ ಅತ್ಯಂತ ಪ್ರಮುಖವೆನಿಸಿದ ಯಾದಗಿರಿ, ರಾಯಚೂರು, ಗದಗ, ವಿಜಯನಗರ, ಕೊಡಗು, ಕೋಲಾರ, ಉಡುಪಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಂಪುಟದಲ್ಲಿ ಯಾವುದೇ ರೀತಿಯ ಪ್ರಾತಿನಿಧ್ಯ ಸಿಕ್ಕಿಲ್ಲ.
ಈ ಜಿಲ್ಲೆಗಳ ಶಾಸಕರಿಗೆ ಮತ್ತು ನಾಯಕರಿಗೆ ಅವಕಾಶ ಕೈತಪ್ಪಿರುವುದು ಸಾರ್ವಜನಿಕರಲ್ಲಿ ಭಾರೀ ಅಸಮಾಧಾನ ಮೂಡಿಸಿದೆ.



